ಭಯೋತ್ಪಾದನೆ; ಮುಸ್ಲಿಮರ ಅತಂತ್ರ ಸ್ಥಿತಿ..
ನಮ್ಮದು ಜಾತ್ಯಾತೀತ ರಾಷ್ಟ್ರ. ಆದರೂ, ನಮಗೆ ಸ್ವಾತಂತ್ರ್ಯ ಲಭಿಸಿದ ಬಳಿಕವೂ ಹಲವಾರು ಸಮಸ್ಯೆಗಳು ಸವಾಲಾಗಿದೆ. ದೇಶದ ಅಭಿವೃದ್ಧಿಗೆ ತೊಡಕಾಗುವ ಹಾಗೂ ಹಿತಾಸಕ್ತಿಗೆ ಮಾರಕವಾಗುವಂತ ಅನಂತ ಸಮಸ್ಯೆಗಳು ನಮ್ಮ ಮುಂದಿದೆ. ಅದರಲ್ಲೊಂದಾಗಿದೆ ಭಯೋತ್ಪಾದನೆ.
ಜನರನ್ನು ಸದಾ ಭಯಭೀತಗೊಳಿಸಲು, ವಿವಿಧ ರೀತಿಯಲ್ಲಿ ವಿವಿಧ ಮೂಲಗಳೊಂದಿಗೆ ಭಯೋತ್ಪಾದಕರೆಂದು ಕರೆಯಲ್ಪಡುವ ಸಮಾಜದ್ರೋಹಿಗಳು ತಮ್ಮ ಕುತಂತ್ರ, ಕುಕೃತ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ. ಅಲ್ಲಲ್ಲಿ ಬಾಂಬ್ ಸ್ಫೋಟಗಳು, ಗುಂಡಿನ ದಾಳಿಗಳು, ಗಲಭೆಗಳು, ಹಲ್ಲೆ-ಕೊಲೆಗಳು ಇತ್ಯಾದಿ ಅನೈತಿಕ ಕೃತ್ಯಗಳಿಂದ ಜನರು ಕಂಗಾಲಾಗಿದ್ದಾರೆ. ಇದಕ್ಕೆ ಪರಿಹಾರ ಕಾಣುವಲ್ಲಿ ಹಾಗೂ ಈ ರೀತಿಯ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವಲ್ಲಿ ಜಗತ್ತೇ ಸಂಪೂರ್ಣ ವಿಫಲವಾಗಿರುವುದು ದುರಂತ.
ದೇಶ ಅಥವಾ ಜಗತ್ತು ಎಷ್ಟೊಂದು ಹೀನಾಯ ಸ್ಥಿತಿಗೆ ತಲುಪಿದೆಯೆಂದರೆ, ಯಾವುದೇ ಧರ್ಮ ಯಾ ಜನಾಂಗದವರು ಇಂತಹ ಕೃತ್ಯವೆಸಗಿದರೂ ಇಂದು ಎಲ್ಲವೂ ನಿರಪರಾಧಿ ಮುಸ್ಲಿಮರನ್ನೇ ಆರೋಪಿಗಳಾಗಿ ಬಿಂಬಿಸುತ್ತಿದ್ದಾರೆ. ಇಂದು ಜಾತ್ಯಾತೀತ ರಾಷ್ಟ್ರವೆಂದು ಕರೆಯಲ್ಪಡುವ ಪುಣ್ಯ ಭೂಮಿ ಭಾರತದಲ್ಲಿ 'ಮುಸ್ಲಿಮರೆಲ್ಲರೂ ಭಯೋತ್ಪಾದಕರು' ಎಂಬ ವ್ಯಾಖ್ಯಾನ ಕೇಳಿ ಬರುತ್ತಿದ್ದು, ಇದನ್ನು ಪುರಾವೆಗೊಳಿಸಲು ನಕಲಿ ದಾಖಲೆಗಳ ಮೂಲಕ ನಕಲಿ ಕೇಸ್ ದಾಖಲಿಸಿ, ಅಮಾಯಕ ಮುಸ್ಲಿಂ ಯುವಕರನ್ನು ಜೈಲಿಗಟ್ಟುತ್ತಿರುವ ಕೆಲಸ ಭರಪೂರದಿಂದ ನಡೆಯುತ್ತಿದೆ. ವಿಪರ್ಯಾಸವೆಂದರೆ, ಇಂದು ಇಲ್ಲಿ ಮುಸ್ಲಿಮರಾದ ನಾವು ಯಾವುದೇ ಕಾರಣಕ್ಕೂ ಅನ್ಯಾಯದ ವಿರುದ್ಧ ಧ್ವನಿ ಎತ್ತಬಾರದು. ಒಂದು ವೇಳೆ ಶಬ್ದವೆತ್ತಿದರೆ ನಾವೂ ಭಯೋತ್ಪಾದಕರಾಗುತ್ತೇವೆ, ದೇಶದ್ರೋಹಿಗಳಾಗುತ್ತೇವೆ. ಆದರೆ, ಅನ್ಯ ಜನಾಂಗದವರು ಎಷ್ಟೇ ಅನ್ಯಾಯ, ಅಕ್ರಮಗಳನ್ನು ನಡೆಸಿದರೂ ಅವರೆಲ್ಲರೂ ದೇಶದ್ರೋಹಿಗಳಾಗಿಯೇ ಇರುವುದು ಆಶ್ಚರ್ಯಕರ.
ಜನರಿಗೆ ಅನ್ಯಾಯ, ಅಕ್ರಮ ಉಂಟುಮಾಡುವವರಿಗೆ ಇಸ್ಲಾಮಿನಲ್ಲಿ ಸ್ಥಾನವಿಲ್ಲ ಎಂಬ ಸತ್ಯ ವಿಶ್ವವೇ ಅರಿತಿದ್ದರೂ ಇಂದು ಭಯೋತ್ಪಾದಕರೆಲ್ಲರೂ ಮುಸ್ಲಿಮರು. ಇದಕ್ಕೆಲ್ಲಾ ಕಾರಣ ಐಸಿಸ್ ಎಂಬ ಭಯೋತ್ಪಾದಕ ಸಂಘಟನೆ. ಮುಸ್ಲಿಂ ನಾಮಧಾರಿಯಾಗಿದ್ದುಕೊಂಡು, ಭಯೋತ್ಪಾದಕ ಕೃತ್ಯಗಳಲ್ಲಿ ಹೆಸರು ಪಡೆದಿರುವ ಐಸಿಸ್ ಮುಸ್ಲಿಂ ಸಂಘಟನೆ ಎಂಬ ಭಾವನೆಯೇ ಮುಸ್ಲಿಮರಿಗೆ ಭಯೋತ್ಪಾದಕ ಪಟ್ಟವನ್ನು ಕಟ್ಟಿಕೊಡುತ್ತಿದೆ. ಸತ್ಯವನ್ನು ಅರಿಯುವಷ್ಟು ತಾಳ್ಮೆ ಜನರಿಗೆ ಇಲ್ಲವಾದ ಕಾರಣಕ್ಕೆ ಇಷ್ಟೆಲ್ಲಾ ದುರಂತಗಳು ನಡೆಯುತ್ತಲೇ ಬಂದಿದೆ.
ಕೇವಲ ಮುಸ್ಲಿಂ ಹೆಸರು ಇದ್ದ ಮಾತ್ರಕ್ಕೆ ಯಾರೂ ನೈಜ ಮುಸ್ಲಿಂ ಆಗಲಾರ. ಅನ್ಯಾಯವಾಗಿ ಒಬ್ಬನನ್ನು ಕೊಲ್ಲುವ ಅಥವಾ ಭಯ ಹುಟ್ಟಿಸುವ ಅಥವಾ ಅಕ್ರಮಗಳನ್ನು ನಡೆಸುವ ಯಾವೊಬ್ಬನೂ ಮುಸ್ಲಿಮನಲ್ಲ ಎಂಬುದನ್ನು ಇಸ್ಲಾಂ ಹೇಳುತ್ತದೆ. ಹಾಗಿದ್ದೂ ಭಯೋತ್ಪಾದಕರೆಲ್ಲರೂ ಮುಸ್ಲಿಮರು ಹಾಗೂ ಮುಸ್ಲಿಮರೆಲ್ಲರೂ ಭಯೋತ್ಪಾದಕರಾಗಿ ಬಿಂಬಿಸಲ್ಪಡುತ್ತಿರುವುದು ಅಚ್ಚರಿಯೊಂದಿಗೆ ಉತ್ತರಕ್ಕೆ ನಿಲುಕದ ಪ್ರಶ್ನೆಯಾಗಿ ಉಳಿದಿದೆ.
ಬೇಸರ ಹಾಗೂ ಖೇದವಿದೆ. ಇಂದು ಮಾಡದ ತಪ್ಪಿಗಾಗಿ ಅನ್ಯಾಯವಾಗಿ ಅದೆಷ್ಟೋ ಮುಸ್ಲಿಂ ಯುವಕರು ಭಯೋತ್ಪಾದಕ ಎಂದು ಸುಳ್ಳು ಚಿತ್ರಣಕ್ಕೆ ಬಲಿಯಾಗಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಕೆಲವರಜ ನೇಣುಗಂಬಕ್ಕೂ ಏರಿದ್ದಾರೆ. ವಾಸ್ತವದಲ್ಲಿ ಭಯೋತ್ಪಾದಕರೆಲ್ಲರೂ ನಿರ್ಭಯದಿಂದ ಅತ್ತಿತ್ತ ಸುತ್ತಾಡುತ್ತಿದ್ದು, ಸಾಮಾನ್ಯ ಜನರುಗಳಿಗೆ ಎದುರಿಸಲಾಗದ ಸವಾಲಿದು. ಮುಸ್ಲಿಮ್ ನಾಯಕನೊಬ್ಬ ವೇದಿಕೆಯೇರಿ ಒಂದೆರಡು ಹಿತವಚನ ನೀಡಿದಾಗ, ಅವನು ಕೋಮು ಪ್ರಚೋದನಾ ಭಾಷಣಕಾರನಾಗುತ್ತಾನೆ. ಆದರೆ, ಇತರ ಧರ್ಮೀಯ ನಾಯಕ ಎಷ್ಟೇ ಪ್ರಚೋದನಕಾರಿಯಗಿ ಭಾಷಣ ಮಾಡಿದರೂ ಅದು ಹಿತನುಡಿ. ಅದೇರೀತಿ ಮುಸ್ಲಿಮರು ಯಾವುದೇ ಒಳ್ಳೆಯ ಕಾರ್ಯ ಮಾಡಿದರೂ ಅದು ಕೋಮು ಪ್ರಚೋದಿತ, ಭಯೋತ್ಪಾದಕ ಕೃತ್ಯ. ಆದರೆ, ಅನ್ಯ ಧರ್ಮೀಯರು ಯಾವುದೇ ಭಯೋತ್ಪಾದಕ ಕೃತ್ಯವೆಸಗಿದರೂ ಅವೆಲ್ಲವೂ ಜನಹಿತವಾಗಿ ಪ್ರತಿಬಿಂಬಿಸಲ್ಪಡುತ್ತಿದೆ.
ಹಾಗೆಯೇ ಇಂದು ಮದ್ರಸಾಗಳಲ್ಲೂ ಭಯೋತ್ಪಾದನೆ ಕಲಿಸಲಾಗುತ್ತದೆ ಎಂಬ ವಿಷಯವು ಚರ್ಚೆಗಿಳಿದಿದ್ದು, ಭೀಕರ ರೂಪವನ್ನೂ ತಾಳಿದೆ. ಅಲ್ಲಾಹನ ಹಾಗೂ ಪವಿತ್ರ ಇಸ್ಲಾಮಿನ ಬಗ್ಗೆ ಕಲಿಯುವ ಮದ್ರಸಾಗಳನ್ನೇ ಭಯೋತ್ಪನಾ ಕೇಂದ್ರ ಎಂದು ಕೈ ತೋರಿಸಿ ಹೇಳುವಾಗ ದೇಶದಲ್ಲಿ ಇಂದು ನಡೆಯುತ್ತಿರುವ ಕುತಂತ್ರಗಳು ಅರಿವಿಗೆ ಬರುತ್ತದೆ.
ಭಾರತವನ್ನು ಹಿಂದೂ ರಾಷ್ಟ್ರವಾಗಿಸುವ ಏಕೈಕ ನಿಟ್ಟಿನಲ್ಲಿ ಸ್ವತಃ ತಾವೇ ದೇಶಕ್ಕೆ ಅಕ್ರಮಗೈದು ಮುಸ್ಲಿಮರನ್ನು ಅಪರಾಧಿಗಳಾಗಿ ಕಾಣುವ ಈ ನೀಚ ಕುತಂತ್ರವನ್ನು ನನಾವೆಲ್ಲರೂ ಒಗ್ಗಟ್ಟಾಗಿ ನಿಂತು ವಿಫಲಗೊಳಿಸಬೇಕಿದೆ. ಜಾತ್ಯಾತೀತ ರಾಷ್ಟ್ರವೆಂದು ಕರೆಯಲ್ಪಡುವ ಭಾರತದಲ್ಲಿ ಜಾತ್ಯಾತೀತತೆ ಉಳಿಸಿಕೊಳ್ಳಲು ಪ್ರತಿಯೊಬ್ಬ ಮುಸಲ್ಮಾನನೂ ದಾರಿಗಿಳಿಯಬೇಕು. ದೇಶವನ್ನು ಕೋಮುವಾದಿಗಳಿಂದ, ಭಯೋತ್ಪಾದಕರಿಂದ ರಕ್ಷಿಸಿಕೊಳ್ಳಬೇಕು. ಗ್ರೂಪಿಸಂ ವಿಚಾರವಾಗಿ ನಮ್ಮೊಳಗೇ ಕಚ್ಚಾಟ ನಿಲ್ಲಿಸಿ ದೇಶದ ಹಾಗೂ ಸಮಾಜದ ಹಿತಕ್ಕಾಗಿ ವೀರಾವೇಶದಿಂದ ಹೋರಾಡೋಣ... ಅಲ್ಲಾಹನು ತೌಫೀಕ್ ನೀಡಲಿ.. ಆಮೀನ್.. ಯಾ ರಬ್ಬಲ್ ಆಲಮೀನ್..
suwichaar.blogspot.in
✍ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou