ಪ್ರೇಮಿಗಳ ದಿನ ಮತ್ತು ಇಸ್ಲಾಂ..

ಇಂದು ಫೆಬ್ರವರಿ 14. ಪ್ರೀತಿಸುತ್ತಿದ್ದವರಿಗೆ, ಪ್ರೀತಿಸಿದವರಿಗೆ, ಪ್ರೀತಿ ಬಯಸುವವರಿಗೆ, ಪ್ರೀತಿ ನಷ್ಟಗೊಂಡವರಿಗೆ ಇದೊಂದು ವಿಶೇಷ ದಿನ.  ಜಗತ್ತಿನಾಂದ್ಯಂತ ಈ ದಿನ ಅದೇನೋ ಪ್ರೇಮಿಗಳ ದಿನ ಅಂತ ಆಚರಿಸುತ್ತಿದ್ದಾರೆ. ಪ್ರಣಯದಲ್ಲಿ ತೊಡಗಿಕೊಂಡಿರುವ ಪ್ರಿಯತಮ/ಮೆ ಯರು ಪರಸ್ಪರ ಗಿಫ್ಟ್ ಗಳನ್ನು ಹಸ್ತಕ್ಷೇಪ ಮಾಡುವುದು, ವಿಶೇಷ ಪಾರ್ಟಿಗಳನ್ನು ನಡೆಸುವುದು, ಹೊಸದಾಗಿ ಪ್ರಪೋಸ್ ಮಾಡುವುದು, ಬೀಚ್-ಪಾರ್ಕ್ ಗಳಲ್ಲಿ ಮಜಾ ಉಡಾಯಿಸುವುದು ಎಲ್ಲವೂ ಈ ದಿನದ ಆಚರಣೆಯಲ್ಲಿ ಕಾಣಲ್ಪಡುತ್ತದೆ.

ಈ ಒಂದು ದಿನವನ್ನು ಪ್ರೇಮಿಗಳ ದಿನ ಅಥವಾ ವ್ಯಾಲೆಂಟೈನ್ ಡೇ ಎಂಬ ಹೆಸರಲ್ಲಿ ಆಚರಿಸುವುದರ ಹಿನ್ನೆಲೆಯನ್ನು ಅನ್ವೇಷಿಸಿದಾಗ ಕೆಲವು ಮೂಲಗಳಿಂದ ತಿಳಿದು ಬಂದಿದ್ದು,
ಮೂರನೇ ಶತಮಾನದ ಕಾಲದಲ್ಲಿ ರೋಮ್ ರಾಷ್ಟ್ರದಲ್ಲಿ ಕಿಂಗ್ ಕ್ಲಾಡಿಕ್ಸ್-II ಎಂಬ ರಾಜನ ಸಾಮ್ರಾಜ್ಯದಲ್ಲಿದ್ದ ಸೈಂಟ್ ವ್ಯಾಲೆಂಟೈನ್ ಎಂಬ ಪಾದ್ರಿಯು ರಾಷ್ಟ್ರದ ಕಾನೂನಿಗೆ ವಿರುದ್ಧವಾಗಿ ಜನರ ವಿವಾಹವನ್ನು ನಡೆಸುತ್ತಿದ್ದ ಕಾರಣಕ್ಕೆ ರಾಜನು ಆತನನ್ನು ಕಾರಾಗೃಹ ಬಂಧನದಲ್ಲಿರಿಸುತ್ತಾನೆ. ಆದರೆ, ಆತ ಅಲ್ಲೂ ತನ್ನ ಚಾಳಿಯನ್ನು ಬಿಡದ ವ್ಯಾಲೆಂಟೈನ್ ಜೈಲಲ್ಲಿದ್ದುಕೊಂಡೇ ಜೈಲರನ ಮಗಳೊಂದಿಗೆ ಅನೈತಿಕ ಸಂಬಂಧ ಬೆಳೆಸುತ್ತಾನೆ.ಅವಳೂ ಕೂಡ ಅವನನ್ನು ತುಂಬಾನೇ ಪ್ರೀತಿಸುತ್ತಿದ್ದಳು. ಇದರ ಸಂಕೇತವಾಗಿ ಆಕೆ ಪ್ರತಿನಿತ್ಯ ವ್ಯಾಲೆಂಟೈನ್ ನ್ನು ಭೇಟಿಯಾಗಿ ಗುಲಾಬಿಯನ್ನೂ ಕೊಡುತ್ತಿದ್ದಳಂತೆ. ಇದನ್ನು ಅರಿತ ರಾಜನು ಕೋಪಗೊಂಡು ಸೈಂಟ್ ವ್ಯಾಲೆಂಟೈನಿಗೆ ಮರಣದಂಡನೆ ವಿಧಿಸುತ್ತಾನೆ. ಇದರಿಂದ ದುಃಖಿತಳಾಗಿ ಆಕೆ ರೋಧಿಸುತ್ತಿದ್ದಾಗ ವ್ಯಾಲೆಂಟೈನ್ ಕಾಗದವೊಂದರಲ್ಲಿ ''ನಿನ್ನ ವ್ಯಾಲೆಂಟೈನ್'' ಎಂದು ಬರೆದು ಕಳುಹಿಸುತ್ತಾನೆ ಹಾಗೂ  ಫೆಬ್ರವರಿ 14 ರಂದು ಆತನನು ನೇಣುಗಂಬಕ್ಕೇರುತ್ತಾನೆ.

ಈ ಒಂದು ಕೃತ್ಯವು 3 ನೇ ಶತಮಾನದಿಂದ 12ನೇ ಶತಮಾನದವರೆಗೆ ಒಂದು ದುಷ್ಕೃತ್ಯದ ಪ್ರತೀಕವಾಗಿ ಗುರುತಿಸಲ್ಪಡುತ್ತಿತ್ತಾದರೂ, 12ನೇ ಶತಮಾನದ ಬಳಿಕ ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ ಎಂಬ ಹೆಸರಲ್ಲಿ ನೆನೆಯಲ್ಪಡುತ್ತದೆ. ಕ್ರಮೇಣ ವ್ಯಾಲೆಂಟೈನ್ಸ್ ಡೇ ಎಂಬುದು ವ್ಯಾಲೆಂಟೈನ್ ಡೇ ಎಂದು ಗುರುತಿಸಲ್ಪಟ್ಟು ಪ್ರೇಮಿಗಳ ದಿನ ಎಂಬ ಹೆಸರಿನಲ್ಲಿ ವಿಶಿಷ್ಟ ಶೈಲಿಯಲ್ಲಿ ಆಚರಣೆಯಾಗಿ ಮಾರ್ಪಾಡುಗೊಂಡಿತು. ಇದು ಕೆಲವು ಮೂಲಗಳಿಂದ ತಿಳಿದು ಬಂದ ವಿಚಾರವಾಗಿದ್ದು ಪೂರ್ಣ ಸತ್ಯವನ್ನು ತಿಳಿಯಲಾಗಿಲ್ಲ.

ಆದರೆ, ಯಾರೋ ಒಬ್ಬ ದೇಶದ್ರೋಹಿ ಮರಣದ ದಿನವನ್ನು ಪ್ರೇಮಿಗಳ ದಿನವಾಗಿ ಆಚರಿಸುವುದು ಮೂರ್ಖತನ. ದೇಶದ ಕಾನೂನಿಗೆ ವಿರುದ್ಧವಾಗಿ ವರ್ತಿಸಿದ ಪಾದ್ರಿಯೊಬ್ಬನಿಗೆ ಮರಣದಂಡನೆ ವಿಧಿಸಲ್ಪಟ್ಟ ದಿನವು ಇಂದು ಜಗತ್ತಿನಲ್ಲಿ ಒಂದು ಮಹತ್ವದ ದಿನವಾಗಿ ಪರಿಗಣಿಸಲ್ಪಡುತ್ತಿರುವುದು ವಿಪರ್ಯಾಸ.

ಮೂರು ದಿನದ ಜೀವನದಲ್ಲಿ ಅನ್ಯಾಯವಾಗಿ ಪ್ರೀತಿ-ಪ್ರೇಮ ಎಂಬ ಹೆಸರಿನಲ್ಲಿ ಪರಸ್ಪರ ಅನೈತಿಕವಾದ ಸಂಬಂಧ ಬೆಳೆಸಿಕೊಂಡು, ಸುಖ-ದುಃಖಗಳನ್ನು ವಿನಿಮಯಗೊಳಿಸಿ, ಹೃದಯಗಳನ್ನು ಹಂಚಿಕೊಂಡು ಅದುವೇ ಜೀವನ ಎಂಬ ಸುಳ್ಳು ಭಾವನೆಯೊಂದಿಗೆ, ಹೆತ್ತ ತಾಯಿಯನ್ನೂ, ತುತ್ತು ನೀಡಿದ ತಂದೆಯನ್ನೂ, ಸೃಷ್ಟಿಕರ್ತನನ್ನೂ ಮರೆತು ಕೇವಲ ಪ್ರೇಮದ ನಾಟಕಕ್ಕೆ ಮರುಳಾಗಿ ಪ್ರೇಯಸಿ/ಪ್ರಿಯತಮನಿಗಾಗಿ ಪ್ರಾಣವನ್ನರ್ಪಿಸಲೂ ಸಿದ್ಧರಾಗುತ್ತಿರುವುದು ವಿಪರ್ಯಾಸವೇ ಸರಿ. ಎಳೆ ವಯಸ್ಸಿನಲ್ಲಿಯೇ ಈ ಪ್ರಣಯದಾಟಕ್ಕೆ ಬಲಿಯಾಗಿ ಜೀವ ಯಾ ಬದುಕಿಗೆ ಕುತ್ತು ತಂದ ಘಟನೆಗಳು ನಮ್ಮ ಕಣ್ಣ ಮುಂದಿದೆ. ಹಾಗಿದ್ದರೂ ಕ್ಷಣಿಕ ಸುಖಕ್ಕಾಗಿ ನಾವು ಈ ಒಂದು ಆಟದಲ್ಲಿ ಮರುಳಾಗಿ ಬಿಡುತ್ತಿದ್ದೇವೆ. ಆದರೆ, ಇದರ ಹಿಂದಿರುವ ಭಯಾನಕ ದೃಶ್ಯವನ್ನು ಯಾರು ಯೋಚಿಸುವುದೂ ಇಲ್ಲ. ಸದಾ ಸುಖ-ಸಂತೋಷ ಬಯಸಿ ನಡೆಯುವ ಮಾನವ ಇದೂ ಒಂದು ಸುಖವಾಗಿ ಕಾಣುತ್ತಿರುವುದು ಸಮಂಜಸವಾದುದಲ್ಲ.

ದುರಂತವೆಂದರೆ, ನಿಖಾಹ್ ನಡೆಸದೇ ಯಾವುದೇ ಒಬ್ಬ ಅನ್ಯ ಸ್ತ್ರೀ /ಪುರುಷನೊಂದಿಗೆ ಮಾತನಾಡುವುದು ಬಿಡಿ, ಪರಸ್ಪರ ನೋಡಲೂ ಬಾರದು ಎಂದು ಕಲಿಸುವ ಪರಿಶುದ್ಧ ಇಸ್ಲಾಮಿನ ಆಶಯಗಳನ್ನು ಅನುಸರಿಸುತ್ತಿದ್ದೇವೆ ಅನ್ನುವ ಕೆಲವು ಮುಸ್ಲಿಂ ಜನರೂ ಈ ಪ್ರೀತಿಯ ಚೆಲ್ಲಾಟದಲ್ಲಿ ತೊಡಗಿರುವುದು. ಅಲ್ಲದೇ ಈಗೀಗ ಹೆಚ್ಚಾಗಿ ಮುಸ್ಲಿಂ ಪ್ರೇಮಿಗಳೂ ಫೆಬ್ರವರಿ ೧೪ ನ್ನು ತಮ್ಮ ದಿನವಾಗಿ ಆಚರಿಸುತ್ತಿದ್ದಾರೆ. ಅನ್ಯರೊಂದಿಗಿರುವ ಸಂಬಂಧವನ್ನು ಇಸ್ಲಾಂ ಸಂಪೂರ್ಣವಾಗಿ ನಿಷೇಧಿಸಿರುವುದು ಮಾತ್ರವಲ್ಲದೆ, ಇದಕ್ಕೆ ನರಕದಲ್ಲಿ ಭಯಾನಕ ಶಿಕ್ಷೆ ನೀಡಲಾಗುತ್ತದೆ ಎಂದೂ ಎಚ್ಚರಿಸಲಾಗಿದೆ. ಅಲ್ಲದೇ, 'ಹೆತ್ತ ತಾಯಿಗಿಂತ, ಸಾಕಿದ ತಂದೆಗಿಂತ, ಜೊತೆಗಾರ್ತಿ ಮಡದಿಗಿಂತ, ಮಕ್ಕಳು-ಸಹೋದರರಿಗಿಂತ, ಹುಟ್ಟಿದ ನೆಲಕ್ಕಿತ, ಜೀವಿಸುತ್ತಿರುವ ಜಗಕ್ಕಿಂತ, ಅಲ್ಲಾಹನ ಎಲ್ಲಾ ಸೃಷ್ಟಿಗಳಿಗಿಂತಲೂ ಹೆಚ್ಚಾಗಿ ಅಲ್ಲಾಹನ ರಸೂಲರಾದ ಅಂತ್ಯ ಪ್ರವಾದಿಯೂ, ವಿಶ್ವದ ನೇತಾರರೂ ಆಗಿರುವ ಮುಹಮ್ಮದ್ ಮುಸ್ತಫಾ(ಸ.ಅ)ರನ್ನು ಪ್ರೀತಿಸಬೇಕು ಎಂದೂ, ಪ್ರೀತಿಸದವನು ನಮ್ಮವನಲ್ಲವೆಂದೂ ಕಲಿಸಿದ ಪರಿಶುದ್ಧ ಇಸ್ಲಾಮಿನ ಈ ನಿಯಮ ಉಲ್ಲಂಘಿಸಿ, ಕೈ ಹಿಡಿದು ಬಂದ ಪ್ರೇಯಸಿಯನ್ನು ಜೀವಕ್ಕಿಂತಲೂ  ಹೆಚ್ಚಾಗಿ ಪ್ರೀತಿಸುವುದು ಯಾವ ಇಸ್ಲಾಂ ..?

'' ವಿಶ್ವಾಸಿಗಳ ನಡುವೆ ಅನೈತಿಕತೆ ಹರಡಬಯಸುವವನಿಗೆ ಖಂಡಿತವಾಗಿಯೂ ಈ ಲೋಕದಲ್ಲೂ, ಪರಲೋಕದಲ್ಲೂ ಯಾತನಾಮಯ ಶಿಕ್ಷೆ ಇದೆ. ಅಲ್ಲಾಹನು ಬಲ್ಲನು, ನೀವು ಬಲ್ಲವರಲ್ಲ'' (24:19)
ಎಂದು ಅಲ್ಲಾಹನು ಪವಿತ್ರ ಖುರ್ ಆನಿನಲ್ಲಿ ವಿವರಿಸುತ್ತಾನೆ. ಪ್ರೀತಿ-ಪ್ರೇಮದ ಹೆಸರಲ್ಲಿ ದೀನ್ ಮರೆತು ಕ್ಷಣಿಕ ಸುಖ ಪಡೆಯುವ ದೀನ್ ದ್ರೋಹಿಗಳಿಗೆ ಇರುಲೋಕದಲ್ಲೂ ಭಯಾನಕ ಶಿಕ್ಷೆಯಿದೆ ಎಂದು ಖುರ್-ಆನ್ ತಿಳಿಸುತ್ತಿದೆ.

ಮದುವೆ (ನಿಖಾಹ್) ನಡೆದ ಬಳಿಕ ಮಡದಿಯನ್ನು ಪ್ರೀತಿಸಬೇಕೆಂದು ಇಸ್ಲಾಂ ಹೇಳುತ್ತದೆ. ಅಲ್ಲದೇ ಮಡದಿಯನ್ನು ಪ್ರೀತಿಸದವನಿಗೂ ಶಿಕ್ಷೆ ಕಾದಿದೆ ಎಂದೂ ಇಸ್ಲಾಂ ಎಚ್ಚರಿಸುತ್ತದೆ. ಆದರೆ, ನಿಖಾಹಿಗೆ ಮುಂಚಿತವಾಗಿ ಯಾವುದೇ ಅನ್ಯ ಪುರುಷ / ಸ್ತ್ರೀಯೊಂದಿಗೆ ಅನೈತಿಕ ಸಂಬಂಧವನ್ನು ಇಸ್ಲಾಂ ಖಂಡಿಸುತ್ತದೆ. ಹಾಗಿದ್ದೂ ಜನರನ್ನು ಪರಲೋಕದ ಚಿಂತೆ ಬಿಟ್ಟು ಕ್ಷಣಿಕ ಸುಖಕ್ಕಾಗಿಯೇ ಜೀವನ ವ್ಯಯಿಸುತ್ತಿರುವುದು ಖೇದಕರ.

ಅದೇರೀತಿ ಅನ್ಯಸಮುದಾಯವೊಂದರ ಆಚರಣೆ ಅಥವಾ ಆಚಾರ-ಅನಾಚಾರಗಳನ್ನು ನಡೆಸುವ ಮುಸ್ಲಿಮರಿಗೆ ಪ್ರವಾದಿ (ಸ.ಅ)ರು ಈ ರೀತಿ ಹೇಳುತ್ತಾರೆ.
''ಯಾರು ಇನ್ನೊಂದು ಸಮುದಾಯದ ಆಚಾರ-ವಿಚಾರಗಳನ್ನು ಅನುಗಮಿಸುತ್ತಾರೋ ಅವರು ಅದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.'' ( ಅಬೂದಾವೂದ್-3512.)

ಹಾಗಾಗಿ, ವ್ಯಾಲೆಂಟೈನ್ ಡೇ ಅಥವಾ ಪ್ರೇಮಿಗಳ ದಿನವೆಂಬುದು ಮೂಲತಃ ಕ್ರೈಸ್ತ ಧರ್ಮದ ಆಚರಣೆಯಾಗಿದ್ದು, ಕ್ರಮೇಣ ಇತರ ಧರ್ಮಗಳಲ್ಲೂ ಕಾಣಿಸಿಕೊಂಡಿದೆ. ಆದರೆ ,ಇಸ್ಲಾಂ ಇಂತಹ ಆಚರಣೆಗಳನ್ನು, ಪ್ರೀತಿ-ಪ್ರೇಮದ ಜಂಜಾಟವನ್ನು ನಿರೋಧಿಸಿದ ಕಾರಣವಾಗಿ ಈ ರೀತಿಯ ಆಚರಣೆಗಳು ಹಾಗೂ ಅನೈತಿಕ ಸಂಬಂಧಗಳು ಮುಸ್ಲಿಮನಿಗೆ ಹೇಳಿದ್ದಲ್ಲ. ಹಾಗಾಗಿ ಈ ತರಹದ ಅಶ್ಲೀಲ ಕಾರ್ಯಗಳನ್ನು ಮಾಡಿ ನರಕದಲ್ಲಿ ಅಲ್ಲಾಹನ ಶಿಕ್ಷೆಗೆ ಗುರಿಯಾಗಿದಿರೋಣ.

ಅಲ್ಲಾಹನು ಇಂಥವರಿಗೆ ಹಿದಾಯತ್ ನೀಡಿ ಕರುಣಿಸಲಿ..
ನಮ್ಮೆಲ್ಲರನ್ನೂ ನರಕದ ಭಯಾನಕ ಶಿಕ್ಷೆಯಿಂದ ಪಾರು ಮಾಡಲಿ.. ಆಮೀನ್.. ಯಾ ರಬ್ಬಲ್ ಆಲಮೀನ್..

suwichaar.blogspot.in

#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!