ಮರಣ..
ಮರದೆಲೆಗಳು ಹಣ್ಣಾಗಿ ಉದುರುವಂತೇ
ಮರಣವು ನಮ್ಮೆಡೆಗೂ ಕ್ರಮಿಸುವುದು..
ಮರಿಮಕ್ಕಳು ಜನಿಸಿ ಹೊರಬಂದಾಗಲೇ
ಮರಣದಿನ ಹಣೆಯಲ್ಲಿ ಬರೆಯಲ್ಪಡುವುದು..
ದಾರ ಎಳೆದಾಗ ಕುದುರೆಯು ಓಡುವಂತೇ
ದೂರವೆಷ್ಟಿದ್ದರೂ ಮರಣ ಓಡಿ ಬರುವುದು..
ದುರಾಲೋಚನೆಯಲ್ಲೇ ಕಾಲ ಕಳೆದಾಗಲೇ
ದಾರಿಯು ಮರಣವನ್ನು ಸಮೀಪಿಸುವುದು..
ಸರಿಪ್ಪುಗಳನ್ನು ಗುರುತಿಸಲಸಾಧ್ಯವಾದಾಗ
ಸರಿದಾರಿ ನಮ್ಮಿಂದ ಮುಚ್ಚಿ ಹೋಗುವುದು..
ಸರಸ ಸಲ್ಲಾಪದಲೇ ನಾವು ಬದುಕಿದರೆ
ಸೇರುವುದು ಮರಣವು ಓಡೋಡಿ ಬಂದು..
ಪರಮಾತ್ಮನನ್ನು ನಾವು ದಿನವೂ ನೆನೆದರೆ
ಪರಿಣಾಮ ಜೀವನವು ಸರಳವಾಗುವುದು..
ಪರಸ್ಪರ ದ್ವೇಷವನ್ನು ಬಿಟ್ಟು ಬಾಳಿದಾಗ
ಪರಿಶುದ್ಧ ಸ್ವರ್ಗವು ಅಂಗೈಗೆ ಸೇರುವುದು..
ಕರವೆತ್ತಿ ಪ್ರಾರ್ಥಿಸುವೆವು ನಾವು ಯಾ ಖುದಾ..
ಕರುಣಿಸು ನಮಗೆಲ್ಲರಿಗೂ ಸ್ವರ್ಗ ಲೋಕವ..
ಕರಿಹೃದಯದ ಕಲ್ಮಶಗಳೆಲ್ಲವನ್ನೂ ತೊಳೆದು
ಕುರುಡು ಬುದ್ಧಿಯನ್ನು ನಮ್ಮಿಂದ ತೊಳಗಿಸು..
ಬರಿಯ ಸುಖವನ್ನೇ ಬಯಸುತ್ತಿರುವ ನಾವು
ಬರಡು ಬದುಕಿನಲ್ಲಿ ಬೆಂದು ಹೋಗಿರುವೆವು..
ಭಾರದ ಹೆಜ್ಜೆಗಳನ್ನು ಮುಂದಕ್ಕೆ ಇಡುತ್ತಲೇ
ಬೇರೊಂದು ಲೋಕವನ್ನು ತಲುಪುವೆವು..
ನರಕದಲ್ಲಿ ಬೇಯುತ್ತಿರುವ ಬೆಂಕಿಯಲಿ ಬಿದ್ದು
ನರಳುವಂತೆ ಮಾಡಬೇಡ ನಮ್ಮನ್ನೆಲ್ಲಾ..
ನರನಾಡಿಗಳಲ್ಲೂ ನಿನ್ನ ನಾಮವ ಜಪಿಸಲು
ನೆರವು ನೀಡು ಓ ನಮ್ಮ ಸೃಷ್ಟಿಕರ್ತನೇ..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou