ಗೆಲುವು ನಮ್ಮೊಂದಿಗೇ..

ಭಾಗ-೧
------
ನಮ್ಮ ನಿರ್ಧಾರ ಹೇಗಿರಬೇಕು..?

          ಯಾವುದೇ ಒಂದು ಸಾಧನೆಯನ್ನು ಸಾಧಿಸಲು ನಾವು ಹೊರಡುವಾಗ ಮೊದಲು ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕು. ಅದಕ್ಕೂ ಮುನ್ನ ಸಾಧ್ಯವಾಗುವಷ್ಟು ನಾವು ಪಯಣಿಸಲಿರುವ ದಾರಿಯ ಬಗ್ಗೆ ಅಭ್ಯಸಿಸಿ, ಹಲವು ಬಾರಿ ಯೋಚಿಸಿ, ನಂತರ ನಮ್ಮ ಆತ್ಮವಿಶ್ವಾಸವನ್ನು ಪ್ರಬಲಗೊಳಿಸಿಕೊಳ್ಳಬೇಕು..
'ಅವಸರವೇ ಅಪಘಾತಕ್ಕೆ ಕಾರಣ' ಎಂಬಂತೆ, ಯಾವುದೇ ಪೂರ್ವತಯಾರಿ ಹಾಗೂ ಯೋಚಿಸದೇ ತೆಗೆದುಕೊಳ್ಳುವ ನಿರ್ಧಾರಗಳು ಯಶಸ್ಸನ್ನು ತಲುಪಲು ಬಹಳಷ್ಟು ಕಷ್ಟಕರ. ಅಸಾಧ್ಯ ಅಂದರೂ ತಪ್ಪಿಲ್ಲ. ನಾವು ನಮ್ಮ ಗುರಿಯನ್ನು ಯಶಸ್ವಿಯಾಗಿ ತಲುಪಬೇಕಿದ್ದರೆ, ಹಲವು ಬಾರಿ ಯೋಚಿಸಬೇಕು. ಯಾವ ದಾರಿ ನನಗೆ ಅನುಕೂಲಕರ.. ಯಾವುದನ್ನು ನಾನು ಸಾಧಿಸಬೇಕು ..? ಎಂಬಿತ್ಯಾದಿಗಳ ಬಗ್ಗೆ ಒಂದು ನಿರ್ಧಾರ ಕೈಗೊಳ್ಳುವ ಮೊದಲು ಇದು ನನಗೆ ಸಾಧ್ಯವೇ..? ಎಂಬುದನ್ನು ಮನಗಾಣಬೇಕು. 

ನಾವು ಸಾಧಕನಾಗುವ ಕನಸು ಕಾಣುವಾಗ ನಮ್ಮ ಗುರಿ ನಮಗೆ ಆಸಕ್ತಿದಾಯಕವಾದ ವಿಷಯದಲ್ಲೇ ಇರಬೇಕು. ನಮ್ಮ ನಿರ್ಧಾರವು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ, ಮರವನ್ನೇರಿದ ಮರ್ಕಟ (ಕೋತಿ)ನಂತೆ ಮನಸ್ಸು ಚಂಚಲವಾಗಿದ್ದರೆ, ಏಕಭಾವ ಇಲ್ಲದೇ ಇದ್ದರೆ ನಮ್ಮ ಸಾಧನೆ ಕನಸಾಗಿಯೇ ಉಳಿಯುತ್ತದೆ..
ನಮ್ಮ ನಿರ್ಧಾರವು ದೃಢವಾಗಿರಬೇಕು. ಎಷ್ಟೇ ಬೃಹತ್ ಪ್ರಮಾಣದ ಬಿರುಗಾಳಿ ಬಂದರೂ ಒಂದಿಂಚೂ ಅಲುಗಾಡದೇ ಇರುವಂತಹ ಮನಸ್ಸು ನಮ್ಮದಾದರೆ ನಮ್ಮ ಸಾಧನೆ ಸಲೀಸಾಗಿ ನೆರವೇರುವುದು...

*************************************

ಭಾಗ-೨
------
ನಮ್ಮ ದಾರಿಯನ್ನು ನಾವೇ ಕಂಡುಕೊಳ್ಳಬೇಕು..

           ಸಾಧಿಸಿದವರು ಹಲವಾರು ಮಂದಿ ಇದ್ದಾರೆ. ಎಲ್ಲರೂ ತಮ್ಮದೇ ಆಸಕ್ತಿಯ ದಾರಿಯಲ್ಲಿ ಸಾಗಿ ಯಶಸ್ವಿಯಾದವರು.. ನಮಗೆ ದಾರಿ ತೋರಲು ಹಲವಾರು ಮಂದಿ ಇರುತ್ತಾರೆ. ಕೆಲವರು ದಾರಿ ತೋರುವುದು ಮಾತ್ರವಾದರೆ, ಇನ್ನು ಕೆಲವರು ಅದೇ ದಾರಿಯಲ್ಲಿ ನಡೆಯಬೇಕೆಂಬ ಒತ್ತಡವನ್ನೂ ಹೇರುತ್ತಾರೆ. ಆದರೆ, ನಾವು ಇತರರು ತೋರುವ ದಾರಿಯಲ್ಲಿ ಸಾಗಬಾರದು. ಅವರು ತೋರಿದ ದಾರಿ, ಹಿಂದೆ ಯಾರಾದರೂ ಯಶಸ್ವಿಯಾಗಿದ್ದೂ ಆಗಿರಬಹುದು. ಆದರೆ, ಎಲ್ಲರಿಗೂ ಒಂದೇ ರೀತಿಯ ಸಾಮರ್ಥ್ಯ ಇರುವುದಿಲ್ಲ. ಒಬ್ಬನಿಗೆ ಸಾಧ್ಯವಾದುದೆಲ್ಲ ಇನ್ನೊಬ್ಬನಿಗೆ ಸಾಧ್ಯವಾಗಬೇಕೆಂದಿಲ್ಲ.
ಇತರರು/ಹಿತೈಷಿಗಳು ನಮಗೆ ತೋರಿಸುವ ದಾರಿಗಳು ಯಶಸ್ಸು ಸಾಧ್ಯವಾಗುವಂತಹದ್ದೇ ಆಗಿರಬಹುದು. ಆದರೂ, ನಾವು ಈ ಬಗ್ಗೆ ಯೋಚಿಸಿಯೇ ಮುನ್ನಡೆಯಬೇಕು. ಎಲ್ಲರ ಮನೋಸ್ಥಿತಿಯೂ ಒಂದೇ ಆಗಿರಲಾರದು. ಕೆಲವೊಮ್ಮೆ ಅವರು ತೋರಿಸಿದ ದಾರಿಯಲ್ಲಿ ಈ ಹಿಂದೆ ಯಶಸ್ವಿಯಾದವನು ಹೆಚ್ಚು ತಾಳ್ಮೆಯುಳ್ಳವನಾಗಿದ್ದು, ಹಲವು ಕಷ್ಟಗಳನ್ನು ಸಹಿಸಿದ್ದರೆ, ಅದೆಲ್ಲವೂ ಇನ್ನೊಬ್ಬನಿಗೆ ಸಾಧ್ಯವಾಗಲೇಬೇಕೆಂದಿಲ್ಲ..

ಏನಿದ್ದರೂ ನಾವು ನಮ್ಮದೇ ದಾರಿಯಲ್ಲಿ ಚಲಿಸಬೇಕು.  ನಮಗೆ ಒಳಿತು ಎನಿಸಿದ ದಾರಿಯನ್ನು ಆರಿಸಿಕೊಳ್ಳಬೇಕು. ಆದರೆ, ಅದು ಕೆಟ್ಟ ದಾರಿಯಾಗಿರದಂತೆ ನೋಡಿಕೊಳ್ಳಬೇಕಾದುದು ಸಾಧನೆ ಅರಸಿ ಹೊರಟವನೇ..
ನಮ್ಮ ದಾರಿಯನ್ನು ನಾವೇ ಆರಿಸಬೇಕು. ನಮ್ಮ ಸಾಮರ್ಥ್ಯ ಹಾಗೂ ನಮ್ಮ ಆತ್ಮಸ್ಥೈರ್ಯ ಇತರರಿಗಿಂತ ನಮಗೇ ಹೆಚ್ಚು ತಿಳಿದಿತುವ ಕಾರಣ ನಮ್ಮ ಸಾಧನೆಗೆ ನಮಗೆ ಆಸಕ್ತಿ, ಅಭಿರುಚಿಯ ವಿಚಾರವನ್ನೇ ಆರಿಸಿ, ಹಿಂದೆ ತಿರುಗದೇ ಮುನ್ನುಗ್ಗಿದರೆ ಗೆಲವು ಖಂಡಿತಾ...

***********************************

ಭಾಗ-೩
------
ಆತ್ಮವಿಶ್ವಾಸ ಬಹಳಷ್ಟಿರಲಿ..

          'ಸಾಧ್ಯವಿಲ್ಲ' ಎಂಬ ಪದವನ್ನು ನಮ್ಮ ದಿನಚರಿಯಿಂದ ಕಿತ್ತೆಸೆಯಬೇಕು. ಆಗ ಮಾತ್ರ ನಮ್ಮ ಸಾಧನೆಗೆ ಹೊಸ ಹುರುಪು ಬರುವುದು. 'ನನಗೆ ಇದು ಸಾಧ್ಯವಾಗುತ್ತೋ.. ಏನೋ..', ' ನನಗೆ ಕಷ್ಟ ಆಗ್ತಾ ಇದೆ..', 'ಖಂಡಿತ ನಾನು ಸೋಲ್ತೇನೆ..' ' ನನ್ನಿಂದ ಇದು ಆಗಲ್ಲ..' ಎಂಬಿತ್ಯಾದಿ ಭಾವನೆಗಳು ನಮ್ಮಿಂದ ದೂರವಾಗಬೇಕು. ಮುಂದೆ ಒದಗಿ ಬಂದ ಸಣ್ಣದಾದ ಹಾಗೂ ಎದುರಿಸಲು ಸಾಧ್ಯವಿರುವ ಸೋಲನ್ನೇ ದೊಡ್ಡ ಸವಾಲಂತೆ ಕಂಡು 'ನಾನು ಮುಂದೆ ಹೋಗುವುದಿಲ್ಲ.' ಎಂಬ ನಿರ್ಧಾರದೊಂದಿಗೆ ಹಿಂದೆ ಸರಿಯುವುದು ಹೇಡಿತನ. ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ನಾವು ಸೋಲನ್ನು ಎದುರಿಸಬೇಕು. ಸಾಧ್ಯವಾಗದೇ ಇರುವ ಪರಿಸ್ಥಿತಿಯಲ್ಲೂ ಮತ್ತೂ ಪ್ರಯತ್ನಿಸಬೇಕು. ಹೀಗಿದ್ದೂ ಮುಂದೆ ಇದು ಎಷ್ಟೇ ಪ್ರಯತ್ನಿಸಿದರೂ ನಿಷ್ಪ್ರಯೋಜಕ ಅಂತ ಮನವರಿಕೆಯಾದರೆ ಮಾತ್ರ ನಾವು ಹಿಂದೆ ಸರಿಯಬೇಕು.  ಇಲ್ಲವಾದಲ್ಲಿ ಸಾಧ್ಯವಾಗದಷ್ಟು ಪ್ರಯತ್ನ ಮುಂದುವರಿಸಲೇಬೇಕು. ಆಗ ನಮ್ಮ ಸಾಧನೆಯ ಕನಸು ನನಸಾಗುವುದು.

ಅದು ಬಿಟ್ಟು ಸಣ್ಣದಾಗಿ ಎಡವಿದಾಗಲೇ ಬೆವರಿ ಹಿಂದೆ ಓಡುವುದು ಮೂರ್ಖತನವನ್ನು ಎತ್ತಿ ತೋರಿಸುತ್ತದೆ.
'' ಸಣ್ಣ ಮಗುವೊಂದು ನಡೆದಾಡಬೇಕಾದರೆ, ಅದು ಹಲವು ಬಾರಿ ಬೀಳುತ್ತದೆ. ಆದರೆ ಆ ಬೀಳುಗಳೇ ಆ ಮಗುವಿಗೆ ಎದ್ದು ನಿಲ್ಲಲು ಹುರಿದುಂಬಿಸುತ್ತದೆ. ಒಂದು ವೇಳೆ ಅದು ಎಡವಿ ಬೀಳುವೆನು ಎಂಬ ಭಯದಿಂದ ಎದ್ದು ನಿಲ್ಲದೇ ಇದ್ದಲ್ಲಿ ಜೀವನಪರ್ಯಂತ ನೆಲದಲ್ಲೇ ಹೊರಲಾಡಬೇಕಾದೀತು..''
ಇದೇ ರೀತಿ ನಮಗೂ ಆಸಕ್ತಿ ಹಾಗೂ ಹುಮ್ಮಸ್ಸು ಇರಬೇಕು. ಕೇವಲ ಸಾಧನೆಯ ಕನಸು ಕಾಣುತ್ತಾ ಸೊಲು ಬರಲೇಬಾರದು ಅನ್ನುವಂತಿದ್ದರೆ, ಆ ಸಾಧನೆ ಕನಸು ಮಾತ್ರ. ಸೋಲು ಗೆಲುವಿನೆಡೆಗೆ ಇರುವ ಮೊದಲ ಕದ. ಅದನ್ನು ದಾಟದೇ ಗೆಲುವು ಸಾಧಿಸುವುದು ಬಹಳ ಕಷ್ಟದ ವಿಚಾರ.

ಹಾಗಾಗಿ, ನಾವು ಸಾಧಿಸಲು ಹೊರಡುವುದಕ್ಕಿಂತ ಮುಂಚೆಯೇ ನಮ್ಮ ಆತ್ಮವಿಶ್ವಾಸವನ್ನು ದೃಢಪಡಿಸಬೇಕು. ಆಗ ನಮ್ಮ ದಾರಿಯು ಸುಗಮವಾಗಿ ಸಾಗುತ್ತದೆ..

************************************

ಭಾಗ-೪
------
ಸಹಪಾಠಿಗಳು ಸಮಾನ ಮನಸ್ಕರಾಗಿರಲಿ..

          ಒಬ್ಬ ವ್ಯಕ್ತಿಯು ತನಗೆ ಯಾವುದೂ ಸಾಧ್ಯವಿಲ್ಲ; ನಾನೊಬ್ಬ ಬಲಹೀನ ಎಂಬ ಭಾವನೆಯೊಂದಿಗೆ ಮೂಲೆ ಸೇರಿದ್ದರೆ,  ಆತನನ್ನುಸಾಧನೆಯ ಶಿಕರಕ್ಕೇರಿಸುವ ಹಾಗೂ ಸಾಧನೆ ಬಯಸಿ ಮುನ್ನಡೆಯುತ್ತಿರುವವನನ್ನು ಪಾತಾಳಕ್ಕೆ ಇಳಿಸುವ ಅನನ್ಯ ಸಾಮರ್ಥ್ಯ ಆತನ ನಿಕಟವರ್ತಿಯಾಗಿರುವ ನೆಚ್ಚಿನ ಗೆಳೆಯನಿಗೆ ಇದೆ.
ತನ್ನ ಎಲ್ಮಾ ಕಷ್ಟ-ಸುಖಗಳನ್ನು ಹಂಚುತ್ತಾ, ಬಾಳ ಜೊತೆಗಾರನಾಗಿರುವ ಗೆಳೆಯನು ಸಾಧಕನ ಪ್ರೋತ್ಸಾಹಕನಾಗಿರಬೇಕು. ಅದಕ್ಕಾಗಿ ನಾವು ನಮ್ಮದೇ ರೀತಿಯ ಮನಸ್ಸು ಹೊಂದಿರುವವನನ್ನೇ ಗೆಳೆಯನಾಗಿ ಆರಿಸಬೇಕು.
( ಉದಾಹರಣೆಗೆ: ಒಬ್ಬ ಕ್ರೀಡೆಯಲ್ಲಿ ಸಾಧಿಸಲು ಬಯಸಿದ್ದರೆ; ಆತನ ಗೆಳೆಯ ಕ್ರೀಡೆಯಲ್ಲಿ ಅನಾಸಕ್ತಿ ಹೊಂದಿದ್ದರೆ ಆತನು ಸಾಧಿಸಲು ಹೊರಟಿರುವ ಗೆಳೆಯನನ್ನು ಅಭ್ಯಾಸ ಕ್ಷೇತ್ರದಿಂದ ದೂರ ಉಳಿಯುವಂತೆ ಮಾಡಲೂಬಹುದು.)
ನೀವು ಸಾಧಕನಾಗಬಾರದೆಂಬ ದುರುದ್ದೇಶವೂ, ಸಾಧಕನಾಗಬೇಕೆಂಬ ಸದುದ್ದೇಶವೂ ಗೆಳೆಯನಲ್ಲಿ ಇಲ್ಲದೇ ಇದ್ದರೂ, ತನ್ನ ಏಕಾಂಗಿತನವನ್ನು ದೂರ ಮಾಡಲು ಈತನನ್ನೇ ಜೊತೆಗೂಡಿಸುತ್ತಾನೆ. ಆಗ ಸಾಧನೆ ಬಯಸಿ ನಡೆಯುತ್ತಿರುವವನಿಗೆ ಗೆಳೆಯನೇ ಅಡ್ಡಿಯಾಗುತ್ತಾನೆ. ಇದರಿಂದಲೂ ಸಾಧನೆ ಕನಸಾಗಿಯೇ ಉಳಿಯಬಹುದು.

ಹಾಗಾಗಿ ನಾವು ನಮ್ಮದೇ ರೀತಿಯ ಮನಸ್ಸು ಯಾ ನಿರ್ಧಾರ ಹೊಂದಿರುವ ನಮ್ಮ ಪ್ರಯತ್ನಗಳಿಗೆ ಸದಾ ಬೆನ್ನೆಲುಬಾಗಿ, ತೊಡಕುಗಳನ್ನು ನಿವಾರಿಸಲೂ ಸಿದ್ಧನಾಗಿರುವ ಹಾಗೂ.ನಮಗೆ ಧೈರ್ಯ ತುಂಬಿ ಸಾಧನೆಯ ಕಿರೀಟ ಧರಿಸಲು ಸಹಾಯಕನಾಗುವ ಉತ್ತಮ ಗೆಳೆಯನನ್ನು ಆರಿಸಿದ್ದೇ ಆದಲ್ಲಿ ಆತನ ಕಾರಣದಿಂದಾದಲೂ ನಮ್ಮ ಗುರಿ ತಲುಪಬಹುದು ..

********************************

ಭಾಗ-೫
------
ಕೆಟ್ಟ ಮಾರ್ಗ ಸಾಧನೆಗೆ ಸೂಚ್ಯವಲ್ಲ..

          ಸಾಧಿಸಲು ಹೊರಟು ನಿಂತ ಸಾಧಕನೊಬ್ಬನ ಮುಂದೆ ನೂರಾರು ಬಾಗಿಲುಗಳು ತೆರೆದಿರುತ್ತದೆ. ಯಾವ ದ್ವಾರದ ಮೂಲಕ ಚಲಿಸಬೇಕು ಎಂಬ ಗೊಂದಲದಲ್ಲಿ ಆತ ಮುಳುಗಿರುತ್ತಾನೆ. ಆಗ ಆತನಿಗೆ ಅತೀ ಸುಲಭವಾದ ದಾರಿಗಳೇ ಕಣ್ಣಿಗೆ ಸ್ಪಷ್ಟವಾಗುತ್ತದೆ. ಕಷ್ಟಗಳನ್ನು ಸಹಿಸದೇ ಅತೀ ವೇಗವಾಗಿ, ಅತ್ಯಂತ ಸುಲಭವಾಗಿ ಗುರಿ ತಲುಪಲಾಗುವಂತಹ ದಾರಿಗಳನ್ನೇ ಹೆಚ್ಚಿನವರು ಆರಿಸುತ್ತಾರೆ. ಆದರೆ, ನಾವು ಆರಿಸಿಕೊಂಡ ದಾರಿಯು ನ್ಯಾಯಯುತವೋ, ಮೋಸದಾಟವೋ ಎಂಬುದರ ಬಗ್ಗೆ ಚಿಂತಿಸಿಕೊಳ್ಳಲು ಯಾರೂ ಸಮಯ ವ್ಯಯಿಸದಿರುವುದು ವಿಪರ್ಯಾಸ..

ಇಂದಿನ ಕಾಲದಲ್ಲಿ ನಮ್ಮ ಜೀವನ ಸಾಧನೆಗೆ ಪದವಿಗಳು ಪ್ರಮುಖ ಪಾತ್ರ ವಹಿಸುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಪದವಿಗಳು, ಮೌಲ್ಯಗಳನ್ನು ಪಡೆದವನಿಗೆ ಉತ್ತಮ ಹುದ್ದೆಯಲ್ಲಿದ್ದು ಜೀವನ ಸಾಧನೆ ನಡೆಸಬಹುದು. ಆದರೆ, ಇಂದು ಹೆಚ್ಚಿನವರು ಹಣ ನೀಡುವ ಮುಖಾಂತರ (ಲಂಚ) ಪದವಿಗಳನ್ನು ಯಾ ಗೌರವಗಳನ್ನು ಖರೀದಿಸುತ್ತಿದ್ದಾರೆ. ಇದು ನಾವು ಸಮಾಜಕ್ಕೆ ಮಾಡುವ ದೊಡ್ಡ ಅಪರಾಧ.
ಕೆಟ್ಟ ದಾರಿಯ ಮೂಲಕ ನಾವು ಅತಿ ಸುಲಭವಾಗಿ ಸಾಧಿಸಿಕೊಳ್ಳಬಹುದಾದರೂ ಅದು ಶಾಶ್ವತವಾಗಿರುವುದಿಲ್ಲ. ಆ ಗೆಲುವು ಕೊನೆಗೆ ಸೋಲಿನೊಂದಿಗೆ ಪಾತಾಳಕ್ಕೆ ಇಳಿಸುತ್ತದೆ.

ಆದುದರಿಂದ ನಾವು ಸಾಧನೆಗೆ ಒಂದು ಉತ್ತಮ ದಾರಿಯನ್ನೇ ಆರಿಸಿಕೊಳ್ಳಬೇಕು. ಸುಲಭವಾಗುತ್ತದೆ ಎಂಬ ಕಾರಣಕ್ಕೆ ಕೆಟ್ಟದರಲ್ಲಿ ಸಂಚರಿಸಿ ಜೀವನವನ್ನು ಕಲುಷಿತ ಮಾಡುವುದು ಸಮಂಜಸವಲ್ಲ..

************************************

ಭಾಗ-೬
------
ಅಭ್ಯಾಸ (PRACTICE) ಹೆಚ್ಚಾಗಿ ನಡೆಸಿರಿ..

          ನಾವು ಶಾಲಾ-ಕಾಲೇಜುಗಳಲ್ಲಿ ಹಲವಾರು ಪರೀಕ್ಷೆಗಳನ್ನು ಎದುರಿಸುತ್ತೇವೆ. ಇವೆಲ್ಲವನ್ನೂ ಸುಗಮವಾಗಿ ದಾಟಿ ಬರಲು ನಾವು ಮಾಡಿದ ಅಭ್ಯಾಸಗಳು ಸಹಕಾರಿಯಾಗುತ್ತದೆ. ಒಂದುವೇಳೆ ಅಲ್ಲಿ ನಮ್ಮ ಕಲಿಯುವಿಕೆ, ಪ್ರಯತ್ನ ಹಾಗೂ ಅಭ್ಯಾಸದಲ್ಲಿ ಕೊರತೆ ಕಂಡರೆ ಪರೀಕ್ಷೆಯಲ್ಲಿ ಅಂಕಗಳಿಗೂ ಕೊರತೆಯುಂಟಾಗುತ್ತದೆ.

ಅದೇರೀತಿ ನಮ್ಮ ಜೀವನವೂ ಒಂದು ಪರೀಕ್ಷೆಯಾಗಿರುವ ಕಾರಣ, ನಮ್ಮ ಸಾಧನೆಯನ್ನು ಸಾಧನೆಯಂತೆ ಸಾಧಿಸಿ ತೋರಿಸಲು ಸಾಧಕನಾಗ ಬಯಸುವವನು ಸಾಧ್ಯವಾದಷ್ಟು ಅಭ್ಯಾಸಗಳನ್ನು ನಡೆಸಿಕೊಂಡಿರಬೇಕು.
( ಉದಾಹರಣೆಗೆ; ಒಬ್ಬ ಕ್ರಿಕೆಟ್ ಆಟಗಾರ ಆಟಕ್ಕೆ ಮೊದಲು ಹಲವು ಬಾರಿ ಅಭ್ಯಾಸ ನಡೆಸುತ್ತಾನೆ. ಪಂದ್ಯಾಟ ಆರಂಭವಾಗುವ ಮೊದಲು ಅಭ್ಯಾಸ ಪಂದ್ಯವನ್ನೂ ಆಡುತ್ತಾನೆ. ಒಂದುವೇಳೆ ಆತ ಯಾವುದೇ ಅಭ್ಯಾಸ ಯಾ ಪೂರ್ವತಯಾರಿಯಿಲ್ಲದೇ ಏಕಾಏಕಿ ಮೈದಾನಕ್ಕಿಳಿದರೆ, ಸಾಧಿಸಿ ತೋರಿಕೊಡಲು ಸಾಧ್ಯವೇ ಇಲ್ಲ..)

ಹಾಗಾಗಿ ನಾವು ನಮ್ಮ ಸಾಧನೆಯನ್ನು ಸಾಧಿಸಿ ಕನಸನ್ನು ನನಸಾಗಿಸಲು ನಿದ್ದೆ ಬಿಟ್ಟು ಪ್ರಯತ್ನದಲ್ಲಿರಬೇಕು. ಅಭ್ಯಾಸಗಳು ಅಗಾಧವಾಗಿರಿಸಬೇಕು. ಹಾಗಾಗಿ ನಾವು ಅಭ್ಯಾಸ ವೃದ್ದಿಸಿದಂತೆಯೇ ನಮ್‍ಮ ಗುರಿ ಅತ್ಯಂತ ವೇಗವಾಗಿ ತಲುಪಿಕೊಳ್ಳಬಹುದು..

PRACTICE MAKES MAN PERFECT ಎಂಬ ಆಂಗ್ಲಪದವು ಉತ್ತಮವಾದ ಸಾಧಬೆಗೆ ಅಭ್ಯಾಸ ಮುಖ್ಯ ಎಂಬುದನ್ನು ವಿವರಿಸುತ್ತದೆ..

************************************
ಭಾಗ-೭
------
ಪ್ರತಿಭೆ (TALENT) ಯನ್ನೇ ಗುರಿಯಾಗಿಸಿ..

          ಸಾಧಕನಾಗಬೇಕೆಂಬ ಕನಸು ಹೊತ್ತು ನಡೆಯುವ ಹೆಚ್ಚಿನವರ ಬಯಕೆ, ನಾನೊಬ್ಬ ಸಾಧಕನಾಗುವುದರ ಜೊತೆಗೆ ಹಣ/ ಸಂಪತ್ತು ಸಾಧಕನೂ ಆಗಬೇಕೆಂದು. ಇಂಥವರೆಲ್ಲರು ಭಾವಿಸಿರುವುದು ಹಣ ಯಾ ಸೊತ್ತು-ಸಂಪತ್ತುಗಳೇ ಜೀವನ ಎಂದು. ಹಣವೆಂಬುದು ಜೀವನ ಸಾಗಾಣಿಕೆಯ ವಸ್ತು ಅಷ್ಟೇ. ಹಣದಿಂದಲೇ ಜೀವನ ಅಲ್ಲ. ಹಾಗಿರುವಾಗ ನಾವೊಬ್ಬ ಕೋಟ್ಯಾಧಿಪತಿಯಾಗಬೇಕು ಅಥವಾ ದೊಡ್ಡ ಶ್ರೀಮಂತನಾಗಬೇಕು, ಹಲವಾರು ಆಳುಗಳ ಒಡೆಯನಾಗಬೇಕು, ಹಲವು ಕಟ್ಟಡಗಳ ಮಾಲಿಕನಾಗಬೇಕು ಎಂಬಿತ್ಯಾದಿ ಕನಸುಗಳನ್ನು ಕಟ್ಟಿಕೊಳ್ಳುವುದು ಮೂರ್ಖತನ.

ನಾವು ನಮ್ಮ ಸಾಧನಾ ಮಾರ್ಗವಾಗಿ ನಮಗಿರುವ ಪ್ರತಿಭೆ ಅಥವಾ ಆಸಕ್ತಿಯನ್ನೇ ಆರಿಸಬೇಕು. ಪ್ರತಿಯೊಬ್ಬನಿಗೂ ಏನಾದರೊಂದು ಪ್ರತಿಭೆ ಇದ್ದೇ ಇರುತ್ತದೆ. ಕೆಲವರು ಅದನ್ನು ಸಮಾಜದ ಮುಂದೆ ತೆರೆದಿಡುತ್ತಾರೆ. ಇನ್ನು ಕೆಲವರು ತಮ್ಮೊಳಗೇ ಬಚ್ಚಿಡುತ್ತಾರೆ. ಆದರೆ, ನಾವು ನಮ್ಮ ಪ್ರತಿಭೆಯನ್ನು ಬೆಳಗಿಸಲು ಸಿಗುವ ಅವಕಾಶಗಳನ್ನೆಲ್ಲ ಬಳಸಿಕೊಳ್ಳುತ್ತಾ ಅದರೊಂದಿಗೇ ಒಂದು ಹೊಸ ಜೀವನದ ಕನಸನ್ನು ಕಟ್ಟಿಕೊಳ್ಳಬೇಕು. ಆಗ ತನ್ನಿಂತಾನೇ ನಾವು ಹಣವಂತರಾಗುತ್ತೇವೆ. ಅದರ ಜೊತೆಜೊತೆಗೇ ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನೂ ಪಡೆದುಕೊಳ್ಳುತ್ತೇವೆ.

ಹಣ ಮಾಡಲು ಹಲವಾರು ದಾರಿಗಳಿವೆ. ಕೆಟ್ಟದ್ದು ಹಾಗೂ ಒಳಿತಿನ ಹೀಗೆ ಎರಡು ರೀತಿಯ ದಾರಿಗಳಿವೆ. ಆದರೆ,  ನಮ್ಮ ಪ್ರತಿಭೆಯನ್ನು ಸಮಾಜದ ಮುಂದೆ ಬೆಳಗಿಸಲು ಅದಕ್ಕೆ ಒಂದೇ ಒಂದು ದಾರಿ.
ಅದುವೇ, ನಮ್ಮ ಜೀವನವನ್ನು ರೂಪಿಸಿಕೊಳ್ಳುತ್ತದೆ. ಅಲ್ಲಿಯೇ ನಮ್ಮ ಶ್ರಮಗಳಿಗೆ ಹೊಸ ರೂಪ ತುಂಬಿಕೊಳ್ಳುತ್ತದೆ..

**************************************

ಭಾಗ-೮
------
ಅನುಭವಸ್ಥರ ಸಲಹೆ, ನಿರ್ದೇಶನ ಪಡೆದುಕೊಳ್ಳಿ..

          ಮಾನವ ಸಂಘಜೀವಿ. ಒಬ್ಬಂಟಿಯಾಗಿ ಏನನ್ನು ಮಾಡಲೂ ಈ ಮಾನವ ಅಸಮರ್ಥ. ಏನಿದ್ದರೂ ಜಂಟಿಯಾಗಿಯೇ ಮಾಡಬೇಕು. ಆದರೆ, ನಾವು ಸಾಧನೆ ಮಾಡಲು ಹೊರಟಾಗ ನಮ್ಮೊಂದಿಗೆ ಯಾರೂ ಬರಲಾರರು. ನಮ್ಮ ಪಥದಲ್ಲಿ ನಾವೇ ಸಂಚರಿಸಬೇಕು; ಯಶಸ್ಸು ಗಳಿಸಬೇಕು; ಸಮಾಜದಲ್ಲಿ ಗುರುತಿಸಲ್ಪಡಬೇಕು. ಈ ಹಿಂದಿನ ಅಂಕಣದಲ್ಲಿ ತಿಳಿಸಿರುವಂತೆ ನಾವು ನಮ್ಮದೇ ದಾರಿಯಲ್ಲಿ ಅಂದರೆ, ನಾವೇ ಕಂಡುಕೊಂಡ ದಾರಿಯಲ್ಲೇ ಚಲಿಸಬೇಕು. ಇನ್ನೊಬ್ಬನ ಮಾತಿಗೆ ಮರುಳಾಗಿ ನಾವು ಅತ್ತ ಕಡೆ ಗುರಿ ಬದಲಾಯಿಸುವುದು ಸಲ್ಲದು.

ಹಾಗಿದ್ದರೂ, ನಾವು ಸಲಹೆ-ಸೂಚನೆಗಳಿಗಳಿಗಾಗಿ ಇನ್ನೊಬ್ಬನನ್ನು ಆಶ್ರಯಿಸಲೇ ಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ನಾವು ಹೇಗೆ ಅಧ್ಯಾಪಕರ ಮೊರೆ ಹೋಗುತ್ತೇವೆಯೋ ಅದೇ ರೀತಿ ನಮ್ಮ ಸಾಧನೆಯ ಗುರಿ ಯಾವುದೇ ಆಗಿದ್ದರೂ ಆ ಬಗ್ಗೆ ಹೆಚ್ಚಿನ ತಿಳಿವಳಿಕೆಯಿರುವ ಹಾಗೂ ಅನುಭವವಿರುವವರೊಂದಿಗೆ ಮಾಹಿತಿಗಳನ್ನು ಕ್ರೋಢೀಕರಿಸಿಕೊಳ್ಳಬೇಕು. ಯಾವ ರೀತಿಯಲ್ಲಿ ಮುಂದುವರಿದರೆ ನಮ್ಮ ಗುರಿ ಸಾಧಿಸಲ್ಪಡುವುದು ಎಂಬುದರ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು.

ನಾವು ಕೇಳುವುದು ಏನನ್ನು ಸಾಧಿಸಬೇಕು ಎಂಬುದಾಗಿರಕೂಡದು. ಹೇಗೆ ಸಾಧಿಸಬೇಕು ಎಂಬುದಬ್ನು ಇತರರೊಂದಿಗೆ ಕೇಳಿಕೊಳ್ಳಬೇಕು. ಏನನ್ನು ಸಾಧಿಸಬೇಕು ಎಂಬ ಪ್ರಶ್ನೆಗೆ ಸ್ವತಃ ನಾವೇ ಯೋಚಿಸಿ ತೀರ್ಮಾನ ಕೈಗೊಳ್ಳುವುದು ಹಾಗೂ ಸಲಹೆ-ಸೂಚನೆ-ಮಾರ್ಗದರ್ಶನ-ನಿರ್ದೇಶನಗಳಿಗಾಗಿ ಮಾತ್ರ ನಾವು ಇತರರನ್ನು ಆಶ್ರಯಿಸಿಕೊಂಡರೆ ನಮ್ಮ ಸಾಧನೆ ಕಾಲಬುಡಕ್ಕೇ ಬಂದು ನಿಲ್ಲುತ್ತದೆ.

************************************

ಭಾಗ-೯
------
ಏಕಾಗ್ರತೆ ಸಾಕಷ್ಟು ಇರಲಿ..

          ಒಂದು ವಾಹನ ಚಲಾಯಿಸುವಾಗ ಅಥವಾ ನಡೆದುಕೊಂಡು ಯಾ ಓಡಿಕೊಂಡು ಹೋಗುವಾಗ ನಮ್ಮ ಮನಸ್ಸು ಎತ್ತಲೋ ಇದ್ದರೆ ಅಪಘಾತ ಕಟ್ಟಿಟ್ಟ ಬುತ್ತಿ. ಅದೇರೀತಿ ನಾವು ಶಾಲಾ-ಕಾಲೇಜುಗಳಲ್ಲಿ ಅಧ್ಯಾಪಕರು ಪಾಠ ಮಾಡುತ್ತಿರಬೇಕಾದರೆ ನಾವು ಬಾಹ್ಯವಾಗಿ ತರಗತಿಯೊಳಗೆ ಇದ್ದರೂ, ನಮ್ಮ ಅಂತರಂಗ (ಮನಸ್ಸು) ಎಲ್ಲೋ, ಏನನ್ನೋ ಯೋಚಿಸುತ್ತಿರುತ್ತದೆ. ಆಗ ನಮಗೆ ಅಧ್ಯಾಪಕರು ಹೇಳಿಕೊಡುವ ವಿಚಾರಗಳು ಮೆದುಳಿನ ವರೆಗೆ ತಲುಪದೇ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆಯುವಂತೆ ಮಾಡುತ್ತದೆ.

ಇದೇ ರೀತಿಯಲ್ಲಿ ನಾವು ಸಾಧನೆ ಅರಸಿ ಹೋಗುವ ದಾರಿಯಲ್ಲಿ ಅದೆಷ್ಟೋ ನಾವರಿಯದ, ಕೇಳದ ರೀತಿಯ ಅಡೆತಡೆಗಳು ನಮಗೆ ಸವಾಲಾಗಬಹುದು. ಆ ಸಂದರ್ಭದಲ್ಲಿ ನಾಮಗೆ ಏಕಾಗ್ರತೆಯಿಲ್ಲದೇ ಹೋದರೆ, ಆ ಸವಾಲನ್ನು ಎದುರಿಸುವುದು ಅಸಾಧ್ಯದ ಮಾತು.
ಉದಾಹರಣೆಗೆ ; ನಾವು ನಡೆಯುತ್ತಾ ಹೋಗುತ್ತಿರಬೇಕಾದರೆ, ನಮ್ಮಲ್ಲಿ ಏಕಾಗ್ರತೆಯಿಲ್ಲದೇ ನಮ್ಮ ಗಮನ ಎಲ್ಲೋ ಇದ್ದರೆ, ಎದ್ದು ನಿಂತಿದ್ದ ಕಲ್ಲೊಂದು ನಮ್ಮ ಗಮನಕ್ಕೆ ಬಾರದೇ ಎಡವಿ ಬೀಳುವ ಸ್ಥಿತಿ ಬರಬಹುದು.
ಹಾಗಾಗಿ ನಾವು ಎಚ್ಚರಿಕೆಯಿಂದಲೇ ನಡೆಯಬೇಕು. ಮುಂದೆ ಸಾಗಬೇಕು.

ನಾವು ಎಚ್ಚರಿಕೆಯಿಂದ ಸಾಗಿದರೆ ಅಪಘಾತ / ಸೋಲು ಸವಾಲಾಗುವುದಿಲ್ಲ ಎಂದು ಅರ್ಥವಲ್ಲ. ಸಾಧ್ಯವಾದಷ್ಟು ನಮಗೆ ಸೋಲನ್ನು ಎದುರಿಸಲು ಸಾಧ್ಯವಾಗುತ್ತದೆ. ನಾವು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ.ಇದ್ದರೆ ಅಪಘಾತ ಆಗದೇ ಇರಲಾರದು. ಅನಿರೀಕ್ಷಿತವಾಗಿ ಕೆಲವೊಮ್ಮೆ ಎಚ್ಚರಿಕೆಯನ್ನು ಮೀರಿಯೂ ಸವಾಲುಗಳು ನಮ್ಮ ಮುಂದೆ ಬಂದುನಿಲ್ಲುತ್ತದೆ. ಆದರೆ, ಅವೆಲ್ಲವನ್ನೂ ಎದುರಿಸುವ ಮನೋಶಕ್ತಿ ನಮ್ಮಲ್ಲಿ ಬೆಳೆಯುವುದರೊಂದಿಗೆ, ಏಕಾಗ್ರತೆಯೂ ವೃದ್ಧಿಸಿದರೆ, ನಮ್ಮ ಸಾಧನೆಯೆಡೆಗೆ ಒಂದು ಹೆಜ್ಜೆ ಹತ್ತಿರವಾದಂತೆ..

***********************************

ಭಾಗ-೧೦
-------
ಗುರಿ ತಲುಪದೇ ಮರಳದಿರು..

          'ಏಳಿ ಎದ್ದೇಳಿ; ಗುರಿ ಮುಟ್ಟುವವರೆಗೆ ಎಚ್ಚರವಾಗಿರಿ' ಸ್ವಾಮಿ ವಿವೇಕಾನಂದರ ಈ ಮಾತು ಸಾಧಕನಿಗೆ ಧೈರ್ಯ ತುಂಬುತ್ತದೆ. 'ಗುರಿಯು ನಮ್ಮನ್ನು ಅರಸಿ ಬರಬೇಕಾದರೆ, ನಾವು ಗುರಿಯನ್ನು ಅರಸಿ ನಡೆಯಬೇಕು'. ಸೋಲು ಸವಾಲಾದಾಗ ಎದುರಿಸಲು ನಾನು ಅಶಕ್ತ ಎಂಬ ಮೂರ್ಖ ಭಾವನೆಯೊಂದಿಗೆ ಹೇಡಿಯಾಗಿ ಮರಳಕೂಡದು. ಸಾಧಿಸಲು ಹೊರಟವನಿಗೆ ಸೋಲನ್ನು, ಸವಾಲುಗಳನ್ನು, ಕಷ್ಟಗಳನ್ನು, ನಷ್ಟಗಳನ್ನು, ಸಮಸ್ಯೆಗಳನ್ನು ಎಲ್ಲವನ್ನೂ ಎದುರಿಸಿ, ಪರಿಹರಿಸುವ/ಪರಿಹರಿಸಲು ಸಾಧ್ಯ ಎಂಬ ಮನೋಧೈರ್ಯ ಇರಲೇಬೇಕು. ಇಲ್ಲವಾದಲ್ಲಿ ಆತನ ಪ್ರಯತ್ನ ವ್ಯರ್ಥವಾಗುವುದು.

ಸಾಧನೆಗೆ ಹೊರಟು ನಿಂತು, ಸ್ವಲ್ಪ ಮುಂದೆ ಸಾಗಿ, ಅಲ್ಲಿ ಸೋಲು ಸವಾಲಾದಾಗ ಜವಾಬು ನೀಡಲು ಮನವೊಪ್ಪದೇ ಮರಳಿ ಬಂದು ಇನ್ನೊಂದು ಗುರಿಯನ್ನಿಟ್ಟುಕೊಂಡು ಅದರಲ್ಲಿ ಚಲಿಸುವುದಾದರೆ, ಅಷ್ಟು ಸುಲಭದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಯಾಕಂದರೆ, ಈ ಮೊದಲೇ ಒಂದು ಸೋಲಿಗೆ ಸೋತು ಮನಸ್ಸು ಭಯಭೀತವಾಗಿರುವುದರಿಂದ, ಈ ದಾರಿಯಲ್ಲಿ ಚಲಿಸುವಾಗಲೂ ಆತ್ಮಸಾಕ್ಷಿ ಕೈ ಕೊಡಬಹುದು.

ಆದರೆ, ನಮಗೆ ಒಂದು ಸಾಧ್ಯವೇ ಇಲ್ಲ; ಮುಂದಿನ ಪ್ರಯತ್ನಗಳೆಲ್ಲ ವ್ಯರ್ಥ ಎಂಬ ದೃಢ ನಂಬಿಕೆ ಇದ್ದಲ್ಲಿ ಅದನ್ನು ತ್ಯಜಿಸಿ ಬರಲೇಬೇಕು.
( ಉದಾಹರಣೆಗೆ: ಒಂದು ಬಾವಿ/ಕೊಳವೆಬಾವಿ ತೋಡಿ ಅದರಲ್ಲಿ ನೀರು ಸಿಗದೇ ಹೋದರೆ, ಮತ್ತೆ ಆ ತೋಡುವಿಕೆ ಮುಂದುವರಿಸುವುದರಲ್ಲಿ ಅರ್ಥವಿಲ್ಲ.)
ಅದೇರೀತಿ ನಮ್ಮ ಗುರಿಯು ಈ ದಾರಿಯಲ್ಲಾಗಿ ತಲುಪಲು ಸಾಧ್ಯವಿಲ್ಲ ಎಂದು ಸತ್ಯ ಮನವರಿಕೆಯಾದಲ್ಲಿ ಅದನ್ನು ಮುಂದುವರಿಸಕೂಡದು. ಆದರೆ, ಸಣ್ಣ ಸೋಲೇ ದೊಡ್ಡ ಸವಾಲೆಂದು ಭಾವಿಸಿ ಹಿಂದೆ ಸರಿಯುವುದು ಹೇಡಿಯ ಗುಣ ಎಂಬುದರಲ್ಲಿ ಸಂದೇಹವಿಲ್ಲ.

************************************

ಭಾಗ-೧೧
-------
ಸಮಾಜಕ್ಕೆ ಉಪಕಾರವಾದುದನ್ನೇ ಸಾಧಿಸಿ..

          ವಿಶ್ವದ ಪ್ರತಿಯೊಬ್ಬ ವ್ಯಕ್ತಿಯೂ ಸಾಧಕನಾಗಬೇಕು. ತನಗೆ ಆಸಕ್ತಿ, ಅಭಿರುಚಿ ಹೊಂದಿರುವ ವಿಷಯದಲ್ಲೇ ಆತ ಸಾಧಿಸಬೇಕು. ಸಮಾಜದಲ್ಲಿ ನಾಲ್ಕು ಜನರ ಮುಂದೆ ಉತ್ತಮ ಸ್ಥಾನವನ್ನು ಪ್ರತಿಯೊಬ್ಬನೂ ಪಡೆಯಬೇಕು. ಏನಿಲ್ಲದಿದ್ದರೂ ಕನಿಷ್ಠ ದುಡಿಮೆಯನ್ನು ಮಾಡಿಯಾದರೂ ಜೀವನವನ್ನಾದರೂ ಸಾಧಿಸಬೇಕು, ಸಾಗಿಸಬೇಕು. ಯಾರಿಗೂ ಇನ್ನೊಬ್ಬನ ಮುಂದೆ ಕೈಚಾಚಿ ಬೇಡಿ ಉಣ್ಣುವ ದುಸ್ಥಿತಿ ಬಂದೊರಗಕೂಡದು. ಹಾಗಾಗಿ ಪ್ರತಿಯೊಬ್ಬನೂ ಜೀವನದಲ್ಲಿ ಯಶಸ್ವಿಯಾಗುವತ್ತವೇ ಚಲಿಸಬೇಕು.

ನಮ್ಮ ಸಾಧನೆಯಲ್ಲಿ ನಾವು ಮಾತ್ರ ಉತ್ತುಂಗಕ್ಕೇರುವುದು ಪರಿಪೂರ್ಣವಲ್ಲ. ಸಮಾಜ ಬದಲಾಗಬೇಕು. ಅನ್ಯಾಯ, ಅಸ್ಪೃಶ್ಯತೆ, ಅಕ್ರಮ, ಅನೀತಿ, ಅನೈತಿಕತೆ, ಅಶ್ಲೀಲಗಳಿಂದ ಸಮಾಜ ಕಲುಷಿತಗೊಂಡಿದೆ. ಇವೆಲ್ಲವನ್ನೂ ತೊಳೆದು ಶುಚಿಗೊಳಿಸಲು ನಮ್ಮ ಸಾಧನೆಯಿಂದ ಸಾಧ್ಯವಾಗಬೇಕು. ನಮ್ಮ ಸಾಧನೆಯ ಫಲವಾಗಿ ದೇಶ ಕನಿಷ್ಟ ಒಂದು ಅಂಗುಲದಷ್ಟಾದರೂ ಅಭಿವೃದ್ಧಿ ಹೊಂದಬೇಕು. ಎಲ್ಲಿ ಅನ್ಯಾಯ, ಅಕ್ರಮಗಳು ನಡೆದವೋ ತತ್ ಕ್ಷಣ ಅದರ ವಿರುದ್ಧ ಧ್ವನಿಯೆತ್ತಲು ನಾವು ಮುಂದೆ ಬರಬೇಕು.

ಸಮಾಜ ಬದಲಾಗುವ ಮೊದಲು ನಾವು ಬದಲಾಗಬೇಕು. ಛಲ ಮತ್ತು ಹುಮ್ಮಸ್ಸಿನಿಂದ ಸಾಧನೆಯ ಗುರಿ ತಲುಪಿ ವಿಶಿಷ್ಟನಾಗಬೇಕು ಹಾಗೂ ಸಮಾಜೋದ್ಧಾರಕನಾಗಿ ಗುರುತಿಸಲ್ಪಡಬೇಕು. ಹಾಗಾಗಿ ನಾವು ನಮ್ಮ ಸಾಧನೆಯ ಗುರಿಯನ್ನು ನೆಡುವಾಗಲೇ ಸಮಾಜಕ್ಕೆ ಉಪಕಾರವಾದುದನ್ನೇ ಮಾಡಬೇಕು. ಆಗ ಸಮಾಜ/ದೇಶ/ವಿಶ್ವ ಬಲಿಷ್ಟವಾಗುತ್ತದೆ, ಸ್ವಚ್ಛವಾಗುತ್ತದೆ, ಸ್ವತಂತ್ರವಾಗುತ್ತದೆ ಹಾಗೂ ಪ್ರಶಾಂತವಾಗುತ್ತದೆ. ಇದು ಯಾವೊಬ್ಬನಿಂದ ಸಾಧ್ಯವಿಲ್ಲ. ಪ್ರತಿಯೊಬ್ಬನೂ ಈ ರೀತಿಯ ಚಿಂತನೆ ಬೆಳೆಸಿದರೆ ಸಮಾಜ ಉತ್ತಮವಾಗುವುದು. ಆದರೆ, ನನ್ನೊಬ್ಬನಿಂದ ಅಸಾಧ್ಯ ಅಂತ ಸುಮ್ಮನಿರಕೂಡದು. ಪ್ರತಿಯೊಬ್ಬರೂ ಇದು ನನ್ನಿಂದ  ಸಾಧ್ಯ. ಎಂಬ ಭಾವನೆ ಹಾಗೂ ಛಲದೊಂದಿಗೆ ಮುನ್ನಢೆದು ಯಶಸ್ಸನ್ನು ಕೈಯಲ್ಲಿ ಹಿಡಿದುಕೊಳ್ಳಬೇಕು. ಆಗ ನಮ್ಮ ಸಾಧನೆ ಸಾರ್ಥಕ ಹಾಗೂ ಪರಿಪೂರ್ಣತೆ ಪಡೆಯುತ್ತದೆ.

                   ★ಸಮಾಪ್ತಿಗೊಂಡಿದೆ★

++++++++++++++++++++++++++++++++++++++++

ಇಲ್ಲಿ ನಾನು ಒಟ್ಟು ೧೧ ಅಂಕಣದಲ್ಲಿ ಬರೆದ ಈ ಬರಹವು ಬಾಹ್ಯನೋಟಕ್ಕೆ ನಾನು ನಿಮಗೆ ಸಲಹೆ ನೀಡಿರುವಂತೆ ತೋರಿದರೂ, ವಾಸ್ತವದಲ್ಲಿ ಇದು ನಾನು ನನಗೆ ಮನಸ್ಸಿಗೆ ಹೇಳಿದ ವಿಚಾರವಾಗಿದೆ. ಅದನ್ನು ಇತರರಿಗೂ ಹಂಚುವ ಉದ್ದೇಶದಿಂದ ಬರಹರೂಪದಲ್ಲಿ ನಿಮ್ಮ ಮುಂದಿಟ್ಟಿರುವೆನು. ಯಾವುದೋ ಗುರಿಯನ್ನಿಟ್ಟುಕೊಂಡು ಇನ್ಯಾವುದೋ ದಾರಿಯಲ್ಲಿ ಚಲಿಸುತ್ತಿರುವ ನಾನು, ನನ್ನ ಲಕ್ಷ್ಯ ಸಾಧಿಸಲು ಚಿಂತನೆ ನಡೆಸಿದಾಗ ದೊರೆತ ವಿಚಾರಗಳಿವೆಲ್ಲವೂ.. ಸಾಧಿಸಲು ಇವಿಷ್ಟು ಬೇಕೇ ಬೇಕು.. ಹಾಗಾಗಿ ಅದನ್ನು ನಾನು ನಿಮಗೂ ತಿಳಿಯಪಡಿಸಿರುವೆ.
ಇದನ್ನು ಓದಿ, ಅರ್ಥೈಸುವುದರೊಂದಿಗೆ ನನಗೆ ಪ್ರೋತ್ಸಾಹ ನೀಡಿರುವ ನನ್ನ ಗೆಳೆಯರಾದ ತಮಗೆಲ್ಲರಿಗೂ ನಾನು ಧನ್ಯನಾಗಿರುವೆ..
ಮುಂದೆಯೂ ನನ್ನ ಪ್ರೋತ್ಸಾಹ, ಸಲಹೆಗಳ ನಿರೀಕ್ಷೆಯಲ್ಲಿ..,

ನಿಮ್ಮ ಪ್ರೀತಿಯ,
#ಹಕೀಂ ಪದಡ್ಕ..

suwichaar.blogspot.in

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!