ಬೆಂಕಿ ಹಚ್ಚಬೇಕಿರುವುದು ಜಿಲ್ಲೆಗಲ್ಲ; ಕೆಲವು ಉದ್ರಿಕ್ತ ಮನಸ್ಸುಗಳಿಗೆ..!

'ನ್ಯಾಯ ಸಿಗದಿದ್ದರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವೆ..' ಇದು ನಮ್ಮ ಸಂಸದರೊಬ್ಬರು ಆಕ್ರೋಶದಿಂದ ನುಡಿದ ಮಾತು. ಈ ಮಾತು ಇಂದು ಇಡೀ ಚರ್ಚೆಯಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಕೊಲೆಗೈಯಲ್ಪಟ್ಟ ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಅವರ ಕೊಲೆಯ ಆರೋಪಗಳನ್ನು ಬಂಧಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಈ ರೀತಿ ನುಡಿದು ಆತಂಕ ಹುಟ್ಟಿಸಿದ್ದಾರೆ. ಜನಪ್ರತಿನಿಧಿಯೊಬ್ಬನ ಬಾಯಲ್ಲಿ ಉದುರಬೇಕಾದಂತಹ ಮಾತು ಇದಾಗಿದೆಯಾ ಎಂದು ಸಾಮಾನ್ಯ ಜನರು ಪ್ರಶ್ನಾತೀತವಾಗಿ ನೋಡುತ್ತಿದ್ದಾರೆ.

ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ರ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬವಾದ ಕಾರಣ ನಡೆದ ಪ್ರತಿಭಟನೆಯಲ್ಲಿ ಮಾತಿನ ಆಕ್ರೋಶದಿಂದ ಅರಿಯದೇ ಈ ಮಾತು ಬಂದಿದ್ದು, ಉದ್ದೇಶಪೂರ್ವಕವಾಗಿ ಹೇಳಲಾಗಿಲ್ಲ, ಜನರು ಹಚ್ಚುತ್ತಾರೆ ಎಂದು ಹೇಳುವವನಿದ್ದೆ ಎಂದೆಲ್ಲಾ ತಿರುಚುವಿಕೆ ನೀಡಿ, ಕ್ಷಮೆಯಾಚನೆಯ ನಾಟಕವಾಡಿದ್ದರೂ ಜನರು ಈ ಕುರಿತುಳ್ಳ ಚರ್ಚೆಯನ್ನು ಮುಕ್ತಾಯಗೊಳಿಸಲಿಲ್ಲ.
ನಿಜಕ್ಕೂ ಇದು ಚರ್ಚೆಯಾಗಬೇಕಾದಂತದ್ದೇ.. ಕಾರಣ, ಸಂಸದರಾಗಿದ್ದುಕೊಂಡು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಏಳಿಗೆಯ ಕುರಿತು ಚಿಂತಿಸಬೇಕೇ ಹೊರತು ಈ ರೀತಿಯಲ್ಲಿ ಪ್ರಚೋದನಕಾರಿ ಮಾತುಗಳನ್ನಾಡುವುದು ಸಮಂಜಸವೇ..?

ಕೊಲೆಯಾಗುವುದು ನಮ್ಮ ಈ ಜಿಲ್ಲೆಯಲ್ಲಿ ಇದೇ ಮೊದಲಲ್ಲ. ಹಲವಾರು ಕಾರಣಗಳನ್ನಿಟ್ಟುಕೊಂಡು ಹಲವು ಅಮಾಯಕರನ್ನು ಕೊಲೆಗೈಯ್ಯಲಾಗಿದೆ ಇಲ್ಲಿ. ಆದರೆ, ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಇವರು ತನ್ನ ಪಕ್ಷದ, ತನ್ನ ಸಂಘಟನೆಯ ಕಾರ್ಯಕರ್ತನೊಬ್ಬನ ಕೊಲೆಯಲ್ಲಿ ಇಷ್ಟೊಂದು ರೋಷಭರಿತರಾಗಬೇಕಿದ್ದರೆ ಅದಕ್ಕೆ ಕಾರಣವೇ ಬೇರೆ ಇರಬಹುದು. ಇದಕ್ಕೂ ಮೊದಲು ಬಂಟ್ವಾಳದಲ್ಲಿ ಕೊಲೆಯಾದ ಇದೇ ಪಕ್ಷದ ಕಾರ್ಯಕರ್ತ ಹರೀಶ್ ಎಂಬಾತನ ಮನೆಯ ಮುಂದೆಯೂ ಸಂಸದರು ಇದೇ ರೀತಿಯ ಉದ್ರಿಕ್ತ ಹೇಳಿಕೆಯನ್ನು ಕೊಟ್ಟಿದ್ದಾದರೂ, ಆ ಘಟನೆಯ ಆರೋಪಿಗಳು ತನ್ನದೇ ಪಕ್ಷಕ್ಕೆ ಸೇರಿದವರಾಗಿದ್ದರಿಂದ ಕೈ ತೊಳೆಯಬೇಕಾಗಿ ಬಂದಂತಹ ಪರಿಸ್ಥಿತಿಯ ಸಾಕ್ಷ್ಯಾಧಾರಗಳೂ ನಮ್ಮ ಕಣ್ಣ ಮುಂದಿದೆ. ಗೋ ರಾಜಕೀಯದೊಡನೆ ಇದೀಗ ಶವ ರಾಜಕೀಯ ಮಾಡಲೂ ಹಿಂಜರಿಯದೇ ಇದ್ದುದು ಚುನಾವಣೆಯಲ್ಲಿ ಗಮನ ಸೆಳೆಯಲು ಮಾಡುತ್ತಿರುವ ನಾಟಕ ಇದು ಎಂಬುವುದು ಈ ಮೂಲಕ ಸ್ಪಷ್ಟವಾಗಿದೆ.

ಸಂಸದರ ಈ ಬೆಂಕಿ ಹಚ್ಚುವ ಮಾತಿನ ನಂತರ ಸಾಮಾನ್ಯರಾದ ನಮ್ಮಲ್ಲಿ ಕೆಲವೊಂದು ಪ್ರಶ್ನೆಗಳು ಉದ್ಭವಿಸಿದ್ದು, ಅದಕ್ಕೆ ಉತ್ತರವನ್ನು ಸ್ವತಃ ಅವರೇ ಕೊಡುವರೆಂದು ನಿರೀಕ್ಷೆ ಹೊತ್ತಿದ್ದೇವೆ. ಕೆಲವು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಸೌಜನ್ಯಾ ಎಂಬ ಹಿಂದೂ ಯುವತಿಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈಯಲ್ಪಟ್ಟಾಗ ಯಾಕೆ ತುಟಿ ಬಿಚ್ಚದೇ ಮೌನಿಯಾಗಿದ್ದುದು..? ಅನ್ಯಾಯದ ವಿರುದ್ಧ ಇವರು ಪ್ರಶ್ನಿಸುವುದೇ ಆಗಿದ್ದಲ್ಲಿ ಇಂದು ಅದೆಷ್ಟೋ ಅಮಾಯಕರು ಕೊಲೆಯಾದರೂ, ಜೈಲು ಸೇರಿದರೂ ಯಾವುದೇ ಮಾತು ಆಡುವುದಿಲ್ಲವೇಕೆ..? ನೋಟು ಅಮಾನ್ಯದ ಬಿಸಿಯೇರಿರುವ ಜನರ ಚಿಂತನೆಯನ್ನು ಬೇರೆಡೆ ಸೆಳೆಸಲೆಂದು ಇವರು ಈ ರೀತಿ ನುಡಿದಿದ್ದಾರೆಯೇ..? ಭಾರತ್ ಮಾತಾ ಕೀ ಜೈ' ಅನ್ನದವರು ದೇಶದ್ರೋಹಿಗಳು ಅನ್ನುತ್ತಿರುವ ಇವರು ಮತ್ತು ಇವರ ಅನುಯಾಯಿಗಳು ಇದೀಗ ಅದೇ ಭಾರತ ಮಾತೆಯ ಒಂದು ಬಿಂದುವಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವುದಾದರೆ, ಅದು ದೇಶದ್ರೋಹವಲ್ಲವೇ..? ಪ್ರತಿಯೊಂದು ವಿಚಾರದಲ್ಲೂ 'ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿ' ಎಂದು ಆದೇಶವಿಡುವ ಸಂಘ ಪರಿವಾರವು ಈ ವಿಷಯದಲ್ಲಿ ಯಾಕೆ ಸುಮ್ಮಗಿದೆ..? ‌ನೂರಾರು ಪ್ರಶ್ನೆಗಳು ಜನರನ್ನು ಕಾಡುತ್ತಿದೆ.

ದಿನೇದಿನೇ ವಿವಿಧ ಆಯಾಮಗಳಲ್ಲಿ ಇವರು ಜನರಿಂದ ತುಳಿತಕ್ಕೊಳಗಾಗುತ್ತಿದ್ದು, ಇತ್ತೀಚೆಗೆ ಎತ್ತಿನಹೊಳೆ ಯೋಜನೆ ವಿರುದ್ಧ ಚಳವಳಿ ನಡೆಸಿದಾಗಲೂ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ತಬ್ಬಿಬ್ಬಾಗಿದ್ದರು. 'ಬಿಜೆಪಿ ಸರ್ಕಾರ ಇರುವಾಗಲೇ ಎತ್ತಿನಹೊಳೆ ಯೋಜನೆಗೆ ಟೆಂಡರ್ ಕರೆಯಲಾಗಿತ್ತು, ಆಗ ಯಾಕೆ ಅದನ್ನು ಪ್ರಶ್ನಿಸಲಿಲ್ಲ, ಎಂಬ ಪ್ರಶ್ನೆಗೆ ಉತ್ತರವಿಲ್ಲದೆ ಅಲೆದಾಡುತ್ತಿದ್ದಾರೆ.  ಓಟ್ ಬ್ಯಾಂಕ್ ರಾಜಕಾರಣದಲ್ಲಿ ಒಂದು ಧರ್ಮದ ಜನರನ್ನು ತನೆಡೆಗೆ ಸೆಳೆದುಕೊಳ್ಳಲು ನಡೆಸುವ ಕುತಂತ್ರ ಇದು ಎಂಬುದು ಸಾಮಾನ್ಯನಿಗೂ ಖಾತ್ರಿಯಾಗಿರುವ ಸಂಗತಿ. ದಿನನಿತ್ಯ ವಿವಿಧ ರೀತಿಯ ಪ್ರಚೋದನಕಾರಿ, ಅವಹೇಳನಕಾರಿ, ಉದ್ರೇಕಕಾರಿ ಹೇಳಿಕೆಗಳ ಮೂಲಕ ಜನರಲ್ಲಿ ರೋಷ, ಆಕ್ರೋಶ ಮತ್ತು ಆತಂಕವನ್ನು ಈ ರಾಜಕಾರಣಿಗಳು ಹೆಚ್ಚಿಸುತ್ತಲೇ ಇದ್ದಾರೆ.

ನ್ಯಾಯಕ್ಕಾಗಿ ಹೋರಾಡುವುದು ತಪ್ಪು ಎನ್ನಲಾಗುವುದಿಲ್ಲ. ಆದರೆ, ಇಂತಹ ಹೋರಾಟಗಳಲ್ಲಿ ತನ್ನನ್ನು ತಾನು ಅರಿತುಕೊಂಡು ಮಾತುಗಳನ್ನಾಡಬೇಕು. ಅದು ಬಿಟ್ಟು ಮನಸ್ಸಿಗೆ ತೋಚಿದ್ದನ್ನಲ್ಲ ಭಾಷಣದ ಮೂಲಕ ಅಭಿವ್ಯಕ್ತಿಪಡಿಸುವುದಾದರೆ, ಜನರಲ್ಲಿ ಆತಂಕ ಸೃಷ್ಟಿಸಿ, ಕೊನೆಗೆ ಅದು ಚರ್ಚಾಗತವಾದರೆ ಕ್ಷಮೆ ಕೇಳಿ ಜಾರಿಕೊಳ್ಳುವುದಾದರೆ, ಇದಕ್ಕೆಲ್ಲ ನಮ್ಮ ದೇಶದಲ್ಲಿ ಅವಕಾಶ ದಕ್ಕುವುದಾಗಿದ್ದರೆ ಇಂದು ಇಡೀ ಭಾರತದ ಹೊತ್ತಿ ಉರಿಯುತ್ತಿತ್ತು. ಹಾಗಿದ್ದರೂ ಇಂತಹ ಪ್ರಚೋದಕ ಹೇಳಿಕೆಗಳು ಇವತ್ತು ನಮ್ಮ ದೇಶದಲ್ಲಿ ಕಾನೂನುಬಾಹಿರವಾಗುವುದಿಲ್ಲ. ಇಂತಹ ಮಾತುಗಳನ್ನಾಡಿದವರು ದೇಶದ್ರೋಹಿಗಳಾಗುವುದಿಲ್ಲ. ಇವರನ್ನು 'ಪಾಕಿಸ್ತಾನಕ್ಕೆ ಹೋಗಿ' ಅಂತಾನೂ ಸೂಚಿಸಲಾಗುವುದಿಲ್ಲ.

ಯೋಚಿಸಿ ನೋಡಿ. ಇದೇ ಮಾತನ್ನು ಒಬ್ಬ ಮುಸ್ಲಿಂ ನಾಯಕ ಅಥವಾ ಒಬ್ಬ ಸಾಮಾನ್ಯ ಮುಸ್ಲಿಂ ಹೇಳಿದ್ದರೆ ಇಂದು ಈ ಜಿಲ್ಲೆಯಲ್ಲಿ ಏನೆಲ್ಲಾ ನಡೆಯುತ್ತಿದ್ದವು..? ಶಾಂತಿ, ಸ್ನೇಹ, ಸಮಾಧಾನ ಕಲಿಸಿಕೊಡುವ ಮದ್ರಸಾಗಳಲ್ಲಿ, ಮಸೀದಿಗಳಲ್ಲಿ ಭಯೋತ್ಪಾದನೆಯನ್ನು ಸಾರಲಾಗುತ್ತದೆ, ಹಿಂಸೆಗೆ ಪ್ರಚೋದನೆ ನೀಡಲಾಗುತ್ತದೆ ಎಂದೆಲ್ಲಾ ಅಪಪ್ರಚಾರ ಮಾಡಿ ದೇಶದಿಂದ ಮುಸ್ಲಿಮರನ್ನು ಮಟ್ಟ ಹಾಕಲು ಸಂಚು ಹೂಡುತ್ತಿರುವ ಸಂಘ ಪರಿವಾರವು ಒಂದು ವೇಳೆ ಮುಸ್ಲಿಮನೊಬ್ಬ ' ಇಡೀ ಜಿಲ್ಲೆಗೆ ಬೆಂಕಿ ಹಚ್ಚುವೆ' ಎಂದು ಹೇಳಿದ್ದರೆ ಸುಮ್ಮನಿರುತ್ತಿತ್ತೇ..? ಭಾರತ್ ಮಾತಾ ಕೀ ಜೈ ಅನ್ನದಿದ್ದರೆ, ಗೋ ಮಾತೆಯನ್ನು ಕೊಂದರೆ, ಸಂಘ ಪರಿವಾರದ ವಿರುದ್ಧ ಬಾಣ ಬಿಟ್ಟರೆ ಆತ ದೇಶದ್ರೋಹಿಯಾಗುತ್ತಾನೆ, ಪಾಕಿಸ್ತಾನ ಮೋಹಿಯಾಗುತ್ತಾನೆ. ಮುಸ್ಲಿಂ ಅಲ್ಲದವರು ಏನಂದರೂ ಅದು ದೇಶಪ್ರೇಮವೇ..
 
ಇಲ್ಲಿ ಅಗತ್ಯವೆನಿಸಿದ್ದರೆ ಮುಸ್ಲಿಮರೂ ಜಿಲ್ಲೆಗೆ ಮಾತ್ರವಲ್ಲ ಇಡೀ ದೇಶಕ್ಕೆ ಬೆಂಕಿ ಕೊಡಲು ಮುಂದಾಗಬಹುದಿತ್ತು. ತನ್ನ ಪಕ್ಷದ ಒಬ್ಬ ಕಾರ್ಯಕರ್ತ ಕೊಲೆಯಾದ ಕಾರಣಕ್ಕೆ ಇಷ್ಟೊಂದು ರೋಷ ಉಕ್ಕಿ ಬರುವುದಾದರೆ, ನಮಗೆ ನಮ್ಮದೇ ಆದ ಕಾರಣಗಳಿವೆ. ಫ್ರಿಡ್ಜಲ್ಲಿ ಮಾಂಸದ ತುಂಡು ಇಟ್ಟಿದ್ದ ಎಂಬ ವದಂತಿಗೆ ಮರುಳಾಗಿ ಇದೇ ಸಂಘಪರಿವಾರವು ದಾದ್ರಿಯಲ್ಲಿ ಅಖ್ಲಾಕ್ ಎಂಬುವನನ್ನು ಬಡಿದು ಕೊಂದರು. ಇತ್ತೀಚೆಗೆ ಕಾರಾಗೃಹವೊಂದರಲ್ಲಿ ಮಾಡದ ತಪ್ಪಿಗೆ ಶಿಕ್ಷೆಯುಣ್ಣುತ್ತಿದ್ದ ಮುಸ್ತಫಾ ಕಾವೂರು ಎಂಬವರನ್ನು ಜೈಲಿನೊಳಗೇ ಇರಿದು ಕೊಲ್ಲಲಾಯಿತು. ಇಲ್ಲಿ ಪೋಲೀಸರೂ ಪರಿವಾರದೊಡನೆ ಹಸ್ತ ಜೋಡಿಸಿದ್ದು ಇನ್ನಷ್ಟು ಸರಳವಾಗಿಸಿಕೊಂಡಿತು. ಅದೇ ರೀತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಇಸ್ಲಾಂ ಧರ್ಮಕ್ಕೆ ಪರಿವರ್ತನೆ ಹೊಂದಿ, ಊರಿಗೆ ಮರಳಿದ ಫೈಸಲ್ ಎಂಬವರನ್ನೂ ಇದೇ ಕಾರಣಕ್ಕಾಗಿ ಕೊಲ್ಲಲಾಯಿತು. ಇವಿಷ್ಟೇ ಅಲ್ಲ; ಬಹಳಷ್ಟು ಇವೆ. ಇವೆಲ್ಲವನ್ನು ಕಾರಣವಾಗಿಟ್ಟುಕೊಂಡು ಮುಸಲ್ಮಾನರೆಲ್ಲರೂ ಸಮರಕ್ಕಿಳಿದರೆ ಇಡೀ ಜಗತ್ತೇ ಹೊತ್ತಿ ಉರಿಯಲೂಬಹುದು. ಆದರೆ, ದೇಶದ, ರಾಜ್ಯದ, ನಾಡಿನ ಸ್ವಾಸ್ಥ್ಯ ಕಳೆದುಕೊಳ್ಳುವಂತಹ ಕುಕೃತ್ಯಗಳಿಗೆ ಮುಸ್ಲಿಮರು ಅಡಿಯಿಡುವುದಿಲ್ಲ. ಏನಿದ್ದರೂ ಶಾಂತಿಯಿಂದ, ಸಹನೆಯಿಂದಿದ್ದು ಹೋರಾಡಬಯಸುವವರು.
ಹಾಗಾಗಿ ಜನಪ್ರತಿನಿಧಿಯಾಗಿದ್ದುಕೊಂಡು ಜನರ ಕಷ್ಟ-ನಷ್ಟಗಳ ಬಗ್ಗೆ ಅವಲೋಕಿಸಬೇಕಾದವರು, ಜಿಲ್ಲೆಗೆ ಬೆಂಕಿ ಹಚ್ಚುವ ಕುರಿತು ಬಹಿರಂಗವಾಗಿ ಮಾತನಾಡುವಾಗ ಅಲ್ಲಿ ಯಾಕೆ ಕಾನೂನು ಕೆಲಸ ಮಾಡುವುದಿಲ್ಲ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ದಿನನಿತ್ಯ ಪ್ರಚೋದನಕಾರಿ, ಉದ್ರೇಕಕಾರಿ ಭಾಷಣಗಳ ಮೂಲಕ ಜನತೆಯನ್ನು ಹಿಂಸೆಯೆಡೆಗೆ ತಳ್ಳುವವರ ಮೇಲೆ ಕಾನೂನಿನ ಕ್ರಮವು ಕೈಗೊಳ್ಳುವಂತಾಗಬೇಕು. ಆ ಮೂಲಕ ದೇಶದ ಕಲ್ಮಶಗಳನ್ನು ನೀಗಿಸಿಕೊಂಡು, ಸ್ವಾಸ್ಥ್ಯ, ಶುದ್ಧ, ಪವಿತ್ರ, ಪ್ರಶೋಭಿತ ಭಾರತ ನಿರ್ಮಾಣವಾಗಬೇಕು.

ಕೊನೆಯದಾಗಿ ಒಂದು ಮಾತು, ' ನಾವು ಬೆಂಕಿ ಹಚ್ಚಬೇಕೆರುವುದು ಜಿಲ್ಲೆಗಲ್ಲ; ಭಾರತದೊಳಗೆ ಸಲೀಸಾಗಿ ಅಡ್ಡಾಡಿಕೊಂಡು ಬೊಗಳುತ್ತಿರುವ ಕೆಲವು ಉದ್ರಿಕ್ತ ಮನಸ್ಸುಗಳಿಗೆ..'

( ಲೇಖನ 'ಜಯಕಿರಣ' ಪತ್ರಿಕೆಯ 'ಚಾವಡಿ'ಯಲ್ಲಿ ಪ್ರಕಟಗೊಂಡಿದೆ..)

-->
#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!