ಯಾರಿಗೆ ಹೊಸವರ್ಷ..!?

ನನ್ನ ಹೃದಯದಲ್ಲಿ,
ಅದೇ ಹಳೆಯ,
ಕೊಳೆತ ರಕ್ತಗಳೇ ಹರಿಯುತಿದೆ..
ಹೊಸ ವರ್ಷ ಬಂದುದರ,
ಪರಿವೆಯೇ ಇಲ್ಲದಂತೆ...

ಮನೆಮುಂದೆ ಅರಳಿ ನಿಂತ,
ಮಲ್ಲಿಗೆಯ ಬಣ್ಣವಿನ್ನೂ,
ಬೆಳ್ಳಗೇ ಇದೆ..
ಹೊಸ ವರ್ಷದಲ್ಲಿ ನಾನದು,
ಬಣ್ಣ ಬದಲಾಯಿಸಬಹುದೆಂದು ಕಾದಿದ್ದೆ..

ಅಂಗಳದಲ್ಲಿನ ಆಲದ ಮರದಲ್ಲಿ,
ಬೀಡು ಕಟ್ಟಿರುವ ಕೋಗಿಲೆಯೂ,
ಕುಹು.. ಕುಹೂ ಹಾಡುತ್ತಿದೆ..
ಸಂಗೀತದ ಆ ಧ್ವನಿಯಲ್ಲಿ,
ಎಳ್ಳಷ್ಟೂ ವ್ಯತ್ಯಾಸವಿರಲಿಲ್ಲ..

ಮುಗಿಲಿನ ಚಂದಿರನೂ,
ಹೊಸ ವರ್ಷಕ್ಕೆ ಅಂಜಿದ್ದಾನೆ..
ಮೋಡಗಳ ಮರೆಯಲ್ಲಿ,
ಅಡಗಿ ಕುಳಿತುಕೊಂಡೇ,
ಮಾಮನು ಬದುಕುತ್ತಿದ್ದಾನೆ..

ಗಡಿಯಾರದ ಮುಳ್ಳುಗಳೂ,
ಬಲಕ್ಕೇ ತಿರುಗುತ್ತಿದೆ..
ಹೊಸ ವರ್ಷದಲ್ಲಾದರೂ,
ದಿಕ್ಕು ಬದಲಾಗಬಹುದೆಂದು,
ನಾನು ಭಾವಿಸಿದ್ದೆ..

ಹೊಸ ವರ್ಷ ಬಂದಿದೆಯಂತೆ..
ಯಾರಿಗೆ.. ನನಗೋ..?
ಬದುಕು ಮುಗಿಯುವ ತನಕ,
ಪ್ರತಿದಿನವೂ ನನಗೆ ಹೊಸತು..
ನನಗಿಲ್ಲ ಯಾವುದೂ ಹಳತು..

#ತೂತು ಬಿದ್ದ ಜೋಪಡಿಯಲ್ಲಿ..

-> ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!