ಕೇಸರಿ ಮತ್ತು ಹಸಿರು..

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಎಂಬಲ್ಲಿ ಇವತ್ತು (28-01-2017) ನಡೆದ ದ.ರಾ ಬೇಂದ್ರೆ ಜನ್ಮ ದಿನದ ನಿಮಿತ್ಯದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ನನ್ನ ಕೇಸರಿ ಮತ್ತು ಹಸಿರು ಎಂಬ ಕವನಕ್ಕೆ ಪ್ರಥಮ ಬಹುಮಾನ ದಕ್ಕಿದೆ ಎಂದು ತಿಳಿಸುವುದಕ್ಕೆ ಹರ್ಷಿತನಾಗಿರುವೆ..

ನಿಮ್ಮ ಹಾರೈಕೆ ಮತ್ತು ಪ್ರೋತ್ಸಾ ಸದಾ ಇರಲೆಂದು ಆಶಿಸುತ್ತಾ.., ನನ್ನ ಈ ಕವನವನ್ನು ನಿಮ್ಮ ಮುಂದಿಡುತ್ತಿರುವೆ.. ಓದಿ ಅಭಿಪ್ರಾಯಿಸಿರಿ..

--------------------

ಕೇಸರಿ ಮತ್ತು ಹಸಿರು

ನಾನು ತಿಂದೆಸೆದ,
ಮಾಂಸದ ಎಲುಬುಗಳನ್ನು,
ಅವನ ಮನೆಯ ನಾಯಿ,
ಅವನದ್ದೇ ಮನೆಯಂಗಳಕ್ಕೆ,
ಕೊಂಡೊಯ್ದರೆ, ಅವನು,
ನನ್ನೆಡೆಗೆ ಮುಗುಳ್ನಗೆ ಬೀರುತ್ತಿದ್ದ..

ಬಾಲ್ಯದಲ್ಲಿ ನಾವಿಬ್ಬರೂ ಗೆಳೆಯರು..

ಶಾಲೆಗೆ ಹೊರಡಲು,
ಹೆಗಲಿಗೆ ಬ್ಯಾಗೇರಿಸಿ,
ನನ್ನ ಕರೆಯಲು ಬಂದರೆ,
ಅಮ್ಮ ಕೈಯಾರೆ ತಿನ್ನಿಸುವ,
ರೊಟ್ಟಿಯ ಮೇಲೆ ಅವನಿಗಿನ್ನಿಲ್ಲದ ಪ್ರೀತಿ..

ಹಬ್ಬದ ದಿನದಲ್ಲಿ,
ನಮ್ಮನೆಯಲ್ಲಿ ಮಾಡಿದ,
ಇಡ್ಲಿ, ಕೋಳಿ ಸಾರನ್ನು,
ಮೊದಲು ಉಣ್ಣುವುದೇ ಅವನು..
ಅವನು ಉಂಡರಷ್ಟೇ ನನಗೆ ಹಸಿವು..

ಅವನ ಮನೆಯ ಪೂಜೆಗೆ,
ಬೆಲ್ಲದ ಪಾಯಸ ಮಾಡಿದಾಗ,
ಅವನ ತಾಯಿ ನನಗೆ ಕುಡಿಸದೇ,
ಯಾರಿಗೂ ಕೊಡುತ್ತಿರಲಿಲ್ಲ..
ಅವನೂ, ಕುಡಿಯದೇ ಬಿಡುತ್ತಿರಲಿಲ್ಲ..

ಮನೆಯ ಹಿಂಬದಿಯ,
ಗುಡ್ಡ-ಕಾಡುಗಳಲ್ಲಿ ನಾವು,
ಗಿರಿಗೀಟು ತಿರುಗಿಸುತ್ತಾ ಓಡಿ,
ಬಿದ್ದು ಗಾಯ ಮಾಡಿಕೊಂಡಾಗ,
ಇಬ್ಬರ ಕಾಲಿಂದ ಸುರಿದ ನೆತ್ತರು ಕೆಂಪಾಗಿತ್ತು..

ಈಗ ನಾವು ಬೆಳೆದಿದ್ದೇವೆ..
ಅವನ ನಾಯಿ ಈಗಲೂ
ಎಲುಬುಗಳನ್ನು ಕೊಂಡೊಯ್ಯುತಿದೆ..
ಆದರೆ, ಅವನ ಅವತ್ತಿನ ಮುಗುಳ್ನಗೆ,
ಇವತ್ತು ಮಾಯವಾಗಿ ಕಣ್ಣು ಕೆಂಪಾಗುತ್ತಿದೆ..

ಅಮ್ಮನ ರೊಟ್ಟಿಯ ಮೇಲೂ,
ಅವನು ಕೋಪಿಸಿಕೊಂಡಿದ್ದಾನೆ..
ಅವನ ಪೂಜೆಯ ಪಾಯಸದ ಸಿಹಿ,
ನನ್ನ ನಾಲಗೆಗೀಗ ಕಹಿಯಾಗುತ್ತಿದೆ..
ನಮ್ಮೆಡೆಯ ಒಡನಾಟ ಇಲ್ಲವಾಗಿದೆ..

ಇವತ್ತು,
ನನ್ನಲ್ಲಿ ಹಸಿರು ರಕ್ತ ಹರಿಯುತಿದೆ..
ಅವನಲ್ಲಿ ಕೇಸರಿ ರಕ್ತ..
ಧರ್ಮ ಬೇಧದಲ್ಲಿ ಈಗ,
ಸ್ನೇಹವೂ ದ್ವೇಷವಾಗಿದೆ..
ನಾವೀಗ ಬೇರೆಯಾಗಿದ್ದೇವೆ..

✍ ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!