ಭಾರತ ಸ್ವತಂತ್ರಗೊಂಡಿದೆಯೇ...?

ಭಾರತ ಸ್ವತಂತ್ರ ರಾಷ್ಟ್ರವಂತೆ. 68 ವರ್ಷಗಳ ಹಿಂದೆ ಭಾರತ ಸ್ವತಂತ್ರಗೊಳ್ಳಲ್ಪಟ್ಟಿದೆಯಂತೆ. ಇಂದು ದೇಶ ಅಭಿವೃದ್ಧಿಯತ್ತ ಸಾಗುತ್ತಿದೆಯಂತೆ. ದೇಶದಲ್ಲಿ ಹಲವಾರು ಜಾತಿ-ಧರ್ಮ-ಲಿಂಗ-ವರ್ಣಗಳ ಜನರು ಸೌಹಾರ್ದತೆಯಿಂದ ಬಾಳುತ್ತಿದ್ದಾರಂತೆ. ಇಲ್ಲಿ ಪ್ರಜಾಪ್ರಭುತ್ವ ಆಡಳಿತ ನಡೆಯುತ್ತಿದೆಯಂತೆ. ದೇಶ ಇಂದು ಜಗತ್ತಿಗೇ ಮಾದರಿಯಾಗಿದೆಯಂತೆ.. ನನಗಿವೆಲ್ಲವೂ ಅಂತೆಗಳು ಮಾತ್ರ. ಇಲ್ಲಿ ನಡೆದ ಯಾವುದೇ ಒಳ್ಳೆಯ ಕರ್ಮಗಳನ್ನು ನನ್ನ ಕಣ್ಣು ಪತ್ತೆಹಚ್ಚುತ್ತಿಲ್ಲ. ದೇಶ ವಿಶ್ವಕ್ಕೇ ಮಾದರಿಯಾಗಿದೆ. ಅದು ಹೇಗಂದರೆ,
ಸ್ವಾತಂತ್ರ್ಯ ಲಭಿಸಿ 68 ವರ್ಷಗಳು ಕಳೆದರೂ ಕೀಳು ವರ್ಗದವರು, ಅಲ್ಪಸಂಖ್ಯಾತರು ಇಂದು ಸ್ವಾತಂತ್ರ್ಯ ಕಳೆದಯಕೊಂಡಿದ್ದಾರೆ. ಅಮಾಯಕ ನಿರಪರಾಧಿಗಳು ನೈಜ ಅಪರಾಧಿಗಳಿಗೆ ಬದಲಾಗಿ ಶಿಕ್ಷೆ ಅನುಭವಿಸುತ್ತಾ ಸ್ವತಂತ್ರತೆಯ ನಷ್ಟದಲ್ಲಿದ್ದಾರೆ..
ಹಲವು ಜಾತಿ-ಮತ-ಪಂಗಡಗಳಿದ್ದು, ಭಾರತ ಸೌಹಾರ್ದತೆಯ ಸಂಕಲ್ಪವನ್ನು ಪಠಿಸುತ್ತಲೇ ಜಾತಿ-ಧರ್ಮದ ನಡುವೆ ತಾರತಮ್ಯ, ಮೇಲು-ಕೀಳು ವಿಂಗಡನೆ ನಡೆಸಲಾಗುತ್ತಿದೆ.
ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಕೀರ್ತಿಯಿದ್ದರೂ, ಅಧಿಕಾರಿಗಳ ಹಾಗೂ ರಾಜಕಾರಣಿಗಳ ಮುಂದೆ ಸಾಮಾನ್ಯ ಪ್ರಜೆಗಳಾದ ನಮ್ಮ-ನಿಮ್ಮ ಪ್ರಾರ್ಥನೆಗಳು ಶೂನ್ಯವಾಗುತ್ತಿದೆ..
ಈ ಎಲ್ಲಾ ದೃಷ್ಟಿಯಲ್ಲಿ ಭಾರತ ಜಗತ್ತಿಗೆ ಮಾದರಿಯೇ ಸರಿ..

ದೇಶ ಸ್ವತಂತ್ರಗೊಂಡಿರಬಹುದು. ಆದರೆ ದೇಶದ ಎಲ್ಲಾ ಜನರು ಸ್ವತಂತ್ರಗೊಂಡಿಲ್ಲ. ಹಣವಂತರು, ಬಹುಸಂಖ್ಯಾತರು ಹಾಗೂ ಮೇಲ್ವರ್ಗದವರಿಗೆ ಮಾತ್ರ ಗಾಂಧೀಜಿಯವರು ಸ್ವಾತಂತ್ರ್ಯ ತಂದು ಕೊಟ್ಟಿರುವುದು..! ದಲಿತರು, ಕೀಳು ಜನಾಂಗದವರು ಹಾಗೂ ಅಲ್ಪಸಂಖ್ಯಾತರು ಇಂದಿಗೂ ಬಂಧನದ ನರಕದಲ್ಲೇ ಒದ್ದಾಡುತ್ತಿದ್ದಾರೆ. ದೇಶದ ವಿಶೇಷಣಗಳನ್ನು ಬಿಚ್ಚಿ ನೋಡಿದರೆ, ಅಲ್ಲಿ ಭಾರತ ಸೌಹಾರ್ಧ ರಾಷ್ಟ್ರ ಎಂಬ ಸಂಕಲ್ಪ ಅಚ್ಚೊತ್ತಿರುತ್ತದೆ. ಆದರೆ, ಆ ಒಂದು ಮಹಾ ಸುಳ್ಳನ್ನು ಹುಟ್ಟು ಹಾಕಿದ ಮಹಾ ಬುದ್ಧಿವಂತ ಯಾರು ಅನ್ನೋದು ಉತ್ತರಕ್ಕೆ ನಿಲುಕದ ಪ್ರಶ್ನೆ ..? ದೇಶ ಯಾಕೆ ಹೀಗಾಗುತ್ತಿದೆ ಅನ್ನುವ ಪ್ರಶ್ನೆಗೆ ಇಂದಿನ ಆಡಳಿತ ಪದ್ಧತಿಯೇ ಉತ್ತರ. ಕೇವಲ ಹಣ ಹಾಗೂ ಅಧಿಕಾರದ ವ್ಯಾಮೋಹದಿಂದ ದೇಶ ಮಾರಲೂ ತುದಿಗಾಲಲ್ಲಿ ನಿಂತಿರುವ
ರಾಜಕಾರಣಿಗಳಿಂದಾಗಿ ದೇಶವಿಂದು ಅಧೋಗತಿಯಲ್ಲಿದೆ. ಕೇವಲ ಆಶ್ವಾಸನೆಗಳ ಮೂಲಕ ಜನರ ಮನವೊಳಿಸಿ, ಅಧಿಕಾರ ಕಸಿದುಕೊಂಡ ಬಳಿಕ, ದೇಶದಲ್ಲಿ ಜನರೇ ಇಲ್ಲ ಎಂಬ ರೀತಿಯಲ್ಲಿ ವರ್ತಿಸುವ ರಾಜಕಾರಣಿಗಳಿಗೆ ಧಿಕ್ಕಾರ..!!!

ಹೌದು,  ದೇಶ ಸ್ವತಂತ್ರಗೊಳ್ಳಲಿಲ್ಲ. ಇನ್ನೂ ಇಲ್ಲಿ ಹೋರಾಟಗಳು ನಿರಂತರವಾಗಬೇಕು. ಅಂದು ಬ್ರಿಟಿಷರನ್ನು ಪಲಾಯನಗೊಳಿಸಿದ ಅದೇ ರೀತಿಯಲ್ಲಿ ದೇಶದ್ರೋಹಿಗಳಾಗಿರುವವರನ್ನು ಪಲಾಯನಗೊಳಿಸಬೇಕು. ಹೈದರಾಬಾದಿನ ಕಡೆಗೊಮ್ಮೆ ದೃಷ್ಟಿ ಹಾಯಿಸಿ. ದಲಿತ ಎಂಬ ಏಕೈಕ ಕಾರಣಕ್ಕೆ ಪ್ರತಿಭಾವಂತ ವಿದ್ಯಾರ್ಥಿಯೊಬ್ಬನ ಕೊಲೆ ಅಲ್ಲಿ ನಡೆಯಿತು.
ಅರೆ..!! ಕೊಲೆ ಅಲ್ಲ ಆತ್ಮಹತ್ಯೆಯಂತೆ. ಆತ ಮಾಡಿದ್ದು ಆತ್ಮಹತ್ಯೆಯಾಗಿರಬಹುದು. ಆದರೆ ಅಲ್ಲಿ ನಡೆದದ್ದು ಕೊಲೆ.. ದಲಿತ ಎಂಬ ಕಾರಣವೊಡ್ಡಿ ನಿರಂತರ ಅವಮಾನ, ಶೋಷನೆ, ದೌರ್ಜನ್ಯ ನಡೆದು ಬಂದರೆ..... ಅದೂ ತಾನು ಕಲಿಯುತ್ತಿರುವ ಕಾಲೇಜಿನ ಪ್ರಾಂಶುಪಾಲರ ಕಡೆಯಿಂದ.....ಹೇಗೆ ಸಹಿಸಿಯಾನು..? ಆತನ ಆ ನಿರ್ಧಾರದ ಹಿಂದಿನ ನೋವನ್ನು ಯಾರಾದರೂ ಅರ್ಥಮಾಡಿಕೊಂಡಿದ್ದೀರಾ..? ಆತನ ಮನೋಸ್ಥಿತಿಯನ್ನು ಅರಿಯಬಯಸಿದ್ದೀರಾ..? ಕೈಯಲ್ಲಿ ಪೆನ್ನು ಹಿಡಿದು ಏನಾದರೂ ಬರೆಯಬೇಕೆಂದು ಹಂಬಲಿಸುವುದು ತಪ್ಪಾ..? ದಲಿತನೊಬ್ಬ ಪ್ರತಿಭಾವಂತನಾಗುವುದು ಸರಿಯಲ್ಲವೇ? ದಲಿತನೂ ಉತ್ತಮ ಹುದ್ದೆ ಪಡೆಯಬಾರದೇ..? ಎಲ್ಲದ್ದಕ್ಕೂ ಉತ್ತರ ..0..

ಈ ದೇಶದಲ್ಲಿ ಇದು ಮೊದಲ ಘಟನೆಯಲ್ಲ.. ದಲಿತನು ದೇವಾಲಯ ಪ್ರವೇಶಿಸಿದ ಕಾರಣಕ್ಕೆ ಸುಟ್ಟು ಕೊಂದ ಹೃದಯ ವಿದ್ರಾವಕ ಘಟನೆ ನಮ್ಮ ಮುಂದಿದೆ. ಊಟದ ತಟ್ಟೆ ಮುಟ್ಟಿದ್ದಕ್ಕೆ ದಲಿತ ವಿದ್ಯಾರ್ಥಿಗೆ ಸಿಕ್ಕಾಪಟ್ಟೆ ಥಳಿಸಿದ ಚಿತ್ರಣ ಕಣ್ಣಂಚಿನಲ್ಲೇ ಇದೆ. ಒಂದು ಕಾಲೇಜಿನ ದಲಿತ ಪ್ರಾಂಶುಪಾಲೆಯೊಬ್ಬಳನ್ನು ಕಾಲೇಜು ಆಡಳಿತ ಮಂಡಳಿ ನಿರಂತರ ದೌರ್ಜನ್ಯವೆಸಗಿ, ಸಹಿಸಲಾರದೆ ಜೀವನಕ್ಕೆ ಪೂರ್ಣವಿರಾಮ ಎಳೆದ ಘಟನೆ ಇಲ್ಲಿ ನಡೆದಿದೆ. ಆದರೆ, ಇದಾವುದೂ ಸರಕಾರದ ಕಣ್ಣಿಗೆ ಕಾಣುತ್ತಿಲ್ಲ. ದೇಶದ ಪ್ರಧಾನಿಗಳು ತಮ್ಮದೇ ಲೋಕದಲ್ಲಿ ಸುತ್ತಾಡುತ್ತೊದ್ದಾರೆ. ದೇಶದ ಬಗ್ಗೆ ಅವರಿಗೆ ಒಂದಿಂಚೂ ಕಾಳಜಿ ಇಲ್ಲ ಎಂಬುದು ಇತ್ತೀಚೆಗೆ ಅರ್ಥವಾಯಿತು. ಹೈದರಾಬಾದಿನ ರೋಹಿತ್ ವೆಮುಲಾನ ಆತ್ಮಹತ್ಯೆ ವಿಚಾರ ದೇಶದ ಪ್ರಧಾನಿಗೆ ತಲುಪಲು ಒಂದು ವಾರಗಳ ಕಾಲಾವಧಿ ಪಡೆದುಕೊಂಡಿರುವುದೇ ವಿಚಿತ್ರ..!! ದೇಶದ ಹಳ್ಳಿಗಳು ಹಳ್ಳಿಗಳಾಗಿಯೇ ಇದೆ. ದಲಿತರು ದಲಿತರಾಗಿಯೇ ಇದ್ದಾರೆ,  ಬಡವರು ಬಡವರಾಗಿಯೇ....
ಆದರೆ, ದೇಶದ ಶ್ರೀಮಂತರು ಇನ್ನೂ ದೊಡ್ಡವರಾಗುತ್ತಾ ಹೋಗುತ್ತಿದ್ದಾರೆ. ನಗರಗಳು ಮಹಾನಗರಗಳಾಗಿ ಮುಂದುವರಿಯುತ್ತಿದೆ. ಆದರೆ, ದೇಶದ ಪ್ರಜೆಗಳ (ದುರ್)ಗತಿ  ಇದು.
ಅಮಾಯಕರ ಮೇಲೆ ಕೇಸು ತಾನಾಗಿಯೇ ದಾಖಲಾಗುತ್ತಿದೆ. ಅವರನ್ನು ಬಂಧಿಸಲು ಕ್ಷಣಮಾತ್ರದಲ್ಲಿ ಪೋಲೀಸರು ತಲುಪುತ್ತಾರೆ. ಆದರೆ,ನೈಜ ಆರೋಪಿಯ ಸಂಪೂರ್ಣ ಸುಳಿವು ಕೊಟ್ಟರೂ ಅವರನ್ನು ಬಂಧಿಸಲು ಪೋಲೀಸರಿಗೆ ಮುಜುಗರ. ಒಂದುವೇಳೆ ಬಂಧಿಸಿದರೂ ಒಂದೇ ವಾರದಲ್ಲಿ ಜಾಮೀನು. ಇವೆಲ್ಲಾ ಭಾರತದ ವೈಶಿಷ್ಟ್ಯತೆ..!

ಇಂದು ದೇಶ ಸ್ವೀಕರಿಸಿರುವ ಸಂವಿಧಾನವು ಓರ್ವ ದಲಿತನಾಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರರು ರಚಿಸಿದ್ದಲ್ಲವೇ..? ಅವರು ದೇಶಕ್ಕಾಗಿ ಏನನ್ನೆಲ್ಲಾ ತ್ಯಜಿಸಿದ್ದರು..? ದೇಶ ಇಂದು ಈ ರೀತಿಯಲ್ಲಾದರೂ ಉಳಿದಿರಲು ಅಂಬೇಡ್ಕರರೇ ಕಾರಣ ಅಂತಲೂ ಸೂಚಿಸಬಹುದು. ಆದರೆ, ದಲಿತನೆಂಬ ಕಾರಣಕ್ಕೆ ಅಂದು ಅವರನ್ನು ದೂರ ಇಡುತ್ತಿದ್ದರೆ. ? ಇಂದು ದೇಶದ ಸಂವಿಧಾನವು ಎಷ್ಟೊಂದು ಕೊಳಕಾಗಿದ್ದಿತು..? ಜಾತಿ-ಧರ್ಮದ ಹೆಸರಲ್ಲಿ ಮಾನವನ ಸಾಮರ್ಥ್ಯ ಅಳೆಯುವುದಿದ್ದರೆ,  ಜಗತ್ತಿನಲ್ಲಿ ಯಾರೂ ಸಮರ್ಥರಿಲ್ಲ. ಜಾತಿ-ಧರ್ಮ ಎಲ್ಲವೂ ನಮ್ಮ ಆಚಾರ-ವಿಚಾರಗಳಿಗೆ ಮಾತ್ರ ಸೀಮಿತ ಹೊರತು ರಾಜಕೀಯ ಲಾಭಕ್ಕಲ್ಲ; ದೇಶದ ಉದ್ಧಾರಕ್ಕಲ್ಲ..

ಇಲ್ಲ..!!! ಇನ್ನು ಒಬ್ಬ ದಲಿತನೂ ಕೊಲ್ಲಲ್ಪಡಬಾರದು.. ಯಾವನೇ ನಿರಪರಾಧಿಯು ಬಂಧಿಸಲ್ಪಡಕೂಡದು.. ಮೇಲು-ಕೀಳು ತಾರತಮ್ಯ ದೇಶದೊಳಗಿರಬಾರದು.. ನಾವೆಲ್ಲರೂ ಸಹೋದರರಾಗಬೇಕು. ಅನಗತ್ಯ ಗಲಭೆಗಳು ಇಲ್ಲವಾಗಬೇಕು.. ಸರ್ಕಾರದ ವೈಷಮ್ಯ ನಾಶಗೊಳ್ಳಬೇಕು.. ಪ್ರಾಮಾಣಿಕ ಆಡಳಿತ ನಿರ್ಮಿತಗೊಳ್ಳಬೇಕು.. ಇದಕ್ಕಾಗಿ ನಿರಂತರ ಹೋರಾಟ ಮುಂದುವರಿಯಬೇಕು.. ದೇಶ ಮತ್ತೊಮ್ಮೆ ಸ್ವತಂತ್ರಗೊಳ್ಳುವವರೆಗೆ......

suwichaar.blogspot.in

✍ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!