ರಾಜ್ಯದಲ್ಲಿ ಯಾಕೆ ಹೀಗಾಗುತ್ತಾ ಇದೆ?
ಭಾರತ ಶಾಂತಿ-ಸಹಬಾಳ್ವೆಯ ನಾಡು. ಅದರಲ್ಲೂ ಕರುನಾಡು ಹಿಂದಿನಿಂದಲೂ ಶಾಂತಿಯನ್ನೇ ಮಂತ್ರವಾಗಿಸಿಕೊಂಡು ಬಂದು ದೇಶಕ್ಕೇ ನೆರಳಾಗಿ ನಿಂತಿತ್ತು. ರಾಜ್ಯದ ಸೌಮ್ಯತೆಯನ್ನು ಕಂಡು ನೆರೆರಾಜ್ಯಗಳು ಪ್ರಶಂಸಿದ್ದೂ ಇದೆ. ದೇಶದ ಇತರ ರಾಜ್ಯಗಳಲ್ಲಿ ಗಲಭೆಗಳು, ಕಲಹಗಳು ನಡೆಯುತ್ತಿದ್ದರೆ ಕರ್ನಾಟಕವು ಪ್ರಶಾಂತವಾದ ನದಿಯಂತೆ ಹರಿಯುತ್ತಿತ್ತು. ಕನ್ನಡ ಭಾಷೆಯು ಆಡುನುಡಿಯಾಗಿದ್ದರೂ ಮಲಯಾಳಂ, ತುಳು, ಮರಾಠಿ, ಕೊಂಕಣಿ, ಬ್ಯಾರಿ ಸೇರಿದಂತೆ ಹಲವು ಭಾಷೆಗಳಿಂದ ಹಾಗೂ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಸೇರಿದಂತೆ ನಾನಾ ಧರ್ಮಗಳಿದ್ದರೂ ಪರಸ್ಪರ ಪ್ರೀತಿ ಹಂಚುತ್ತಾ ಬದುಕುವಲ್ಲಿ ಒಂದು ಕಾಲಕ್ಕೆ ಕರ್ನಾಟಕ ಹೆಸರಾಗಿತ್ತು.
ಆದರೆ ಈಗ ಆ ಒಂದು ಇತಿಹಾಸ ಅಳಿದು ಹೋಗಿದೆ. ಶಾಂತಿ-ಸಮಾಧಾನದಿಂದ ಹೆಸರು ಪಡೆದಿದ್ದ ಕರುನಾಡಲ್ಲೇ ಅಶಾಂತಿ ಹತ್ತಿಕೊಂಡಿದೆ. ಧರ್ಮ-ಧರ್ಮಗಳ ನಡುವಿನ ಕಚ್ಚಾಟ, ಮೇಳು-ಕೀಳು ಎಂಬ ತಾರತಮ್ಯ ಇವೆಲ್ಲವೂ ಅಶಾಂತಿಗೆ ಸ್ಪೂರ್ತಿ ತುಂಬಿದೆ.
ಇಂದು ನಿನ್ನೆಯಲ್ಲಿ ಕರ್ನಾಟಕವು ಕ್ರೂರ ಕೋಮುಶಕ್ತಿಗಳಿಂದ ಹೊತ್ತಿ ಉರಿಯುತ್ತಾ ಇದೆ. ರಾಜ್ಯ ಸರ್ಕಾರವು ಟಿಪ್ಪು ಜಯಂತಿ ಆಚರಣೆಯನ್ನು ಘೋಷಿಸಿದ್ದೇ ತಡ, ಎಲ್ಲೋ ಮಣ್ಣೊಲಗೆ ಹೂತು ಹೋಗಿದ್ದ ಇರುವೆಗಳೆಲ್ಲ ಎದ್ದೇಳಲು ತೊಡಗಿತು ರಾಜ್ಯದೆಲ್ಲೆಡೆ ಕೋಮುದ್ವೇಷ ಬಿತ್ತುವ ಮೂಲಕ ಕೊಳಕನ್ನು ತುಂಬಿದ್ದಾರೆ. ಈ ರೀತಿ ಇವರು ಟಿಪ್ಪುವಿನ ವಿರುದ್ಧವಾಗಿ, ಟಿಪ್ಪು ಜಯಂತಿಯ ವಿರುದ್ಧವಾಗಿ ಎದ್ದು ನಿಲ್ಲಲು ದೇಶಪ್ರೇಮಿ ಟಿಪ್ಪು ಸುಲ್ತಾನ ಇವರಿಗೇನು ಮಾಡಿದ್ದಾರೆ? ಟಿಪ್ಪುವಿನ ಕಾಲದಲ್ಲಿ ಈಗ ಗಲಭೆ ಎಬ್ಬಿಸುತ್ತಿರುವ ಯಾವುದೇ ಕೋಮುವಾದಿಗಳು ಹುಟ್ಟಿರಲೇ ಇಲ್ಲ. ದೇಶಕ್ಕಾಗಿ ತನ್ನೆರಡು ಕರುಳಕುಡಿಯನ್ನು ಅರ್ಪಿಸುವ ಮೂಲಕ ಪ್ರಸಿದ್ಧಿಗೊಂಡ ಮಹಾನ್ ಸ್ವತಂತ್ರ ಸೇನಾನಿ, ಪಂಡಿತರೂ ಆಗಿದ್ದ ಮೈಸೂರ ಹುಲಿಯೆಂದೇ ಖ್ಯಾತಿಯ ಫತಹ್ ಅಲೀ ಖಾನ್ ಟಿಪ್ಪು ಸುಲ್ತಾನ್ (ನ.ಮ) ರವರ ಬಗ್ಗೆ 'ದೇಶದ್ರೋಹಿ, ಹಿಂದೂ ವಿರೋಧಿ, ಮತಾಂಧ, ಬ್ರಿಟಿಷರ ಸಹಾಯಿ' ಎಂಬಿತ್ಯಾದಿ ಪಟ್ಟಗಳನ್ನು ಕಟ್ಟುವ ಮೂಲಕ ಇತಿಹಾಸಕ್ಕೆ ಹೊಸ ರೂಪವೊಂದನ್ನು ನೀಡಲು ಕೆಲವು ಬುದ್ಧಿವಂತರು ತೊಡಗಿದ್ದಾರೆ. ಮೊದಲೇ ಇತಿಹಾಸದಲ್ಲಿ ಅಚ್ಚಾಗಿದ್ದ ಮುಸ್ಲಿಂ ವೀರರ ನಾಮವನ್ನು ಕ್ರಮೇಣವಾಗಿ ಅಳಿಸುತ್ತಾ ಬಂದಿರುವ ಇವರು ಈ ಸಾರಿ ಟಿಪ್ಪುವಿನ ಹೆಗಲಿಗೆ ಕೈಯಿಟ್ಟಿದ್ದಾರೆ.
ನನಗೆ ಅರ್ಥವಾಗದ ವಿಚಾರವೆಂದರೆ, ದೇಶಕ್ಕಾಗಿ ಪ್ರಾಣ ಅರ್ಪಿಸಿದ ಟಿಪ್ಪು ದೇಶದ್ರೋಹಿಯೂ, ದೇಶದ್ರೋಹದಲ್ಲಿ ತೊಡಗಿ ಪ್ರಾಣ ಕಳೆದುಕೊಂಡ ಸಂಘಿ ಜೀವಿಗಳು ದೇಶಪ್ರೇಮಿಗಳಾಗಲು(ಆಗಿಸಲು) ಈ ಕೋಮು ಪ್ರಚೋಧಕರ ಬುದ್ಧಿವಂತಿಕೆಗೆ ನಾವೆಷ್ಟು ಅಭಾರಿಯಾಗಬೇಕು? ಈ ಹಿಂದೆ ದನವನ್ನು ಮುಂದಿಟ್ಟು ಕೆಣಕಲು ಬಂದಾಗ ಮುಂದಿದ್ದ ದನವೇ ಹಿಂಗಾಲಲ್ಲಿ ಮೆಟ್ಟಿದಾಗ ಚದುರಿಹೋದ ಈ ಗುಂಪು ಮತ್ತೆ ಲವ್ ಜಿಹಾದ್ ವಿಷಯದಲ್ಲಿ ತಲೆ ತುರುಕಿಸಿತು. ಕೋಬ್ರಾಪೋಸ್ಟ್ ರಹಸ್ಯ ಬಯಲುಪಡಿಸಿದಾಗ ಅಲ್ಲೂ ಅವರಿಗೆ ಸೋಲಾಯಿತು. ಈ ಟಿಪ್ಪು ವಿಚಾರದಲ್ಲಿ ಹೆಡೆ ಎತ್ತಿದ್ದಾರೆ. ನಕಲಿ ಇತಿಹಾಸ ನಿರ್ಮಿಸಿ, ದೇಶವನ್ನು ಉಳಿಸಿಕೊಟ್ಟ ವೀರನನ್ನೇ ದೇಶದ್ರೋಹಿಯಾಗಿಸುತ್ತಿದ್ದಾರೆ. ಆದರೆ ಇಲ್ಲೂ ಅವರಿಗೆ ಸೋಲು ಕಂಡರೂ ಒಪ್ಪಿಕೊಳ್ಳಲು ಸಿದ್ಧರಾಗದಿರುವುದು ಮೂರ್ಖತನ.
ನವಂಬರ್ 10ನ್ನು ಟಿಪ್ಪು ಜಯಂತಿಯೆಂದು ಆಚರಿಸಲು ಸರ್ಕಾರ ಯೋಚಿಸಿದಾಗ ಇವರು ತುರಿಸಿಕೊಂಡರು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಆ ದಿನ ವಿಜೃಂಭನೆಯಿಂದ ನಡೆಯಿತು. ಸ್ವಲ್ಪ ದುಃಖವೂ ಇತ್ತು. ಕೊಡಗಿನಲ್ಲಿ ಆ ದಿನ ಕಿಡಿಯೊಂದು ಹೊತ್ತಿತು. ಒಂದು ಭಾಗದಲ್ಲಿ ಟಿಪ್ಪು ಜಯಂತಿ ಆಚರಣೆಯಾಗುತ್ತಿದ್ದರೆ, ಇನ್ನೊಂದು ಭಾಗದಲ್ಲಿ ಅದರ ವಿರುದ್ಧವಾಗಿ ಪ್ರತಿಭಟನೆಗಳು ನಡೆಯಿತ್ತಿತ್ತು. ಮೊದಮೊದಲು ಅವೆರಡೂ ಬಹು ಅಂತರದಲಿದ್ದರೂ ಬಹುಬೇಗ ಹತ್ತಿರವಾಯಿತು. ಪರಸ್ಪರ ಸಂಘರ್ಷಗಳು, ಹಲ್ಲೆಗಳು, ಕಲ್ಲೆಸೆತಗಳು ಭರ್ಜರಿಯಾಗಿ ನಡೆದಿತ್ತು. ಆದರೆ ಅವುಗಳ ಮಧ್ಯೆ ಸಿಕ್ಕಿಹಾಕಿಕೊಂಡ ಎರಡು ಜೀವಗಳು ಬಲಿಯಾದವು. ಗಲಭೆಗೆ ಪ್ರೇರಣೆ ನೀಡಿದವರು, ಗಲಭೆ ನಡೆಸಿದವರು ಈಗಲೂ ಮನೆಯೊಳಗೆ ಆರಾಮವಾಗಿದ್ದಾರೆ. ಇದರ ನಡುವೆ ಅರಿವಿಲ್ಲದೆ ಸಿಲುಕಿಕೊಂಡ ಕಿಟ್ಟಪ್ಪ ಮತ್ತು ಶಾಹುಲ್ ಹಮೀದ್ ವಿಧಿಯ ಕ್ರೂರತೆಗೆ ತಲೆಯೊಡ್ಡಿದರು. ತಂದೆ-ತಾಯಿಯರಿಗೆ ಮಗು ನಷ್ಟವಾಯಿತು. ಸ್ನೇಹಿತರಿಗೆ ಸ್ನೇಹಿತನೊಬ್ಬನ ಅಗಲುವಿಕೆಯಾಯಿತು. ಆದರೆ ಇದಕ್ಕೆ ಕಾರಣರಾದವರು ಮತ್ತೆ ಅದೇ ಕ್ರೂರತೆ ಮುಂದುವರೆಸಿದರು. ಆದರೆ ಕಾರಣದಲ್ಲಿ ಮಾತ್ರ ಸಣ್ಣ ಬದಲಾವಣೆಯಿತ್ತು.
ಕೊಡಗಿನ ಬೆಂಕಿ ನಮ್ಮೂರು ನಮ್ಮೂರು ಮಂಗಳೂರಿಗೂ ತಲುಪಿತ್ತು. ಇಲ್ಲೂ ಹೊತ್ತಿಕೊಂಡಿತು. ಕೋಮುವಾದಿಗಳ ಅಟ್ಟಹಾಸ ಇಲ್ಲೂ ಮುಂದುವರೆಯಿತು. ಆಡಿ ಬರುತ್ತಿದ್ದ ಇಬ್ಬರು ಯುವಕರನ್ನು(ಹಿಂದೂ&ಮುಸ್ಲಿಂ) ಮುಸ್ಲಿಮನೆಂದು ಭಾವಿಸಿ ಇರಿಯಿತು. ಬಾಣದ ಗುರಿ ತಪ್ಪಿತ್ತು. ಯಾವುದೇ ಜಾತಿ-ಧರ್ಮದ ಬಗ್ಗೆ ತಾರತಮ್ಯವಿಲ್ಲದೆ ಆಟವಾಡಿ ಒಂದೇ ಬೈಕಿನಲ್ಲಿದ್ದ ಇಬ್ಬರು ಅನ್ಯಕೋಮಿನ ಯುವಕರ ನಡುವೆ ಧರ್ಮಪ್ರೇಮಿಗಳು ಗೆರೆಯೆಳೆದರು. ತಾವೇ ಕೊಲೆಗೈದು ಅಪರಾಧಿಗಳು ಇನ್ನೊಂದು ಕೋಮಿನವರೆಂದು ಬಿಂಬಿಸಲು ಬಂದ್ ನಡೆಸಿದರು. ಮತ್ತೂ ಕಿರುಚಿದರು. ಒಟ್ಟರೆಯಾಗಿ ರಾಜ್ಯದ, ಜಿಲ್ಲೆಯ ಶಾಂತ ಪರಿಸರದಲ್ಲಿ ವಿಷಗಾಳಿ ತುಂಬಿದರು. ಇದರಿಂದ ಶಾಂತಿಪ್ರಿಯ ಮಂದಿಯನ್ನು ಉಸಿರುಗಟ್ಟುವಂತೆ ಮಾಡಿದರು.
ಇಷ್ಟೆಲ್ಲಾ ನಡೆದದ್ದಾದರೂ ಯಾತಕ್ಕೆ? ಟಿಪ್ಪೂ ಜಯಂತಿಯ ಹೆಸರಲ್ಲಿ ಅಲ್ಲವೇ? ಅನಗತ್ಯವಾಗಿ ಕಲಹ ಮಾಡುವುದಾದರೂ ಯಾಕೆ? ಸಾಮರಸ್ಯದ ಬದುಕಿಗೆ ಬರೆ ಎಳೆಯುವುದಾದರೂ ಯಾತಕ್ಕೆ? ಇತ್ಯಾದಿ ಪ್ರಶ್ನೆಗಳಿದ್ದರೂ ಉತ್ತರವಿಲ್ಲದೆ ಪ್ರಶ್ನೆಯಾಗಿಯೇ ಇದೆ. ಈಗ ನಿಷೇಧಾಜ್ಞೆ ಜಾರಿಯಲ್ಲಿದೆ. ಸೆಕ್ಷನ್ ೧೪೪ ಜಾರಿಗೊಳಿಸಲಾಗಿದೆ. ಆದರೂ ಜಿಲ್ಲೆಯ/ ರಾಜ್ಯದ ಪರಿಸ್ಥಿತಿ ಹೀನಾಯವಾಗಿದೆ.
ಇನ್ನು ಇದು ಮುಂದುವರೆಯಕೂಡದು. ದೇಶ ಇಬ್ಬಾಗವಾಗುವ ಮೊದಲು ನಾವೆಲ್ಲ ಎಚ್ಚೆತ್ತುಕೊಳ್ಳಬೇಕು. ಕೋಮುವಾದವನ್ನೇ ಹುಚ್ಚಾಗಿ ಮೈಗೆ ಮೆತ್ತಿಕೊಂಡಿರುವ ಕಲಹ ಪ್ರಿಯರಿಂದ, ಅವರ ಸಹವಾಸದಿಂದ ನಾವು ದೂರವಾಗುವುದೇ ಒಳಿತು. ಅವರ ತಪ್ಪಿಗೆ ಪ್ರತೀಕಾರದ ಹೆಸರಲ್ಲಿ ನಾವು ಮುನ್ನುಗ್ಗಬಾರದು. ಎರಡು ಕೈಗಳು ಸೇರಿದರೆ ತಾನೇ ಚಪ್ಪಾಳೆಯಾಗುವುದು? ಒಂದೇ ಕೈಯಿಂದ ಚಪ್ಪಾಳೆ ಹೊಡೆಯಲು ಯಾರಿಂದಾದಲೂ ಸಾಧ್ಯವಿದೆಯೇ? ಖಂಡಿತಾ ಇಲ್ಲ. ಆದುದರಿಂದ ನಾವು ಸುಮ್ಮನಿರೋಣ. ಯುದ್ಧ ಮಾಡಿ ಮಡಿಯುವವರು, ದ್ವೇಷ ಉಗುಳುವವರು ಮಾಡುತ್ತಲೇ ಇರಲಿ. ನಾವು ಶಾಂತಿ ಪ್ರಿಯರು. ನಾವು ಗಲಭೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ಆಗುವುದಾದರೆ ರಣರಂಗದಲ್ಲಿ ಯುದ್ದವೊಂದು ನಡೆಯಲಿ. ನಾವಿದ್ದೇವೆ ಹೋರಾಡಲು. ಅಲ್ಲದೇ ಅಮಾಯಕರ ನೆತ್ತರು ಉಣ್ಣಲು ನನಗಿಷ್ಟವಿಲ್ಲ. ತಮ್ಮ ಆಶೆ ಮುಗಿಯುವವರೆಗೂ ಗಲಾಟೆ, ಬಂದ್, ಹಲ್ಲೆ, ಕೊಲೆ ನಡೆಸಲಿ. ನಾವು ಅಲ್ಲಾಹನ ಮೇಲೆ ಭರವಸೆಯಿಡೋಣ. ಅವಸಾನ ವಿಜಯ ನಮ್ಮೆಡೆಗೇ ಆಗಿದೆ ಎಂಬುದು ಸತ್ಯವಲ್ಲವೇ?
ಅಲ್ಲಾಹು ನಮ್ಮೆಲ್ಲರನ್ನು ಕೋಮುವಾದಿಗಳ, ಭಯೋತ್ಪಾದಕರ ಅಟ್ಟಹಾಸದಿಂದ ಸಂರಕ್ಷಿಸಲಿ. ದೇಶದಲ್ಲಿ ಅಶಾಂತಿ ಹಬ್ಬುವ ಸರ್ವರಿಗೂ ಅಲ್ಲಾಹನು ತಕ್ಕುದಾದ ಪ್ರತಿಫಲವನ್ನು ನೀಡಲಿ.. ಆಮೀನ್..
suwichaar.blogspot.in
#ಹಕೀಂ.ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou