ಮೊದಲು ನೀ ಮಾನವನಾಗು..!

ಓಯ್.. ಅಲ್ಯಾರೋ ಗೋಹತ್ಯೆ ಮಾಡಿದನಂತೆ..
ಬನ್ನಿರೋ.. ನಾವು ಹಿಂದೂಗಳು..
ಅವನ ಬೆನ್ನು ಮೂಳೆ ಮುರಿಯೋ ತನಕ,
ಹೊಡೆದು, ಬಡಿದು ಪಾಠ ಕಲಿಸೋಣ..
ನಮ್ಮ ಗೋತಾಯಿಯ ಕೊಂದವನನ್ನು,
ಸುಮ್ಮಗೆ ಬಿಡಲೇಬಾರದು ನಾವು..

ಅಗೋ.. ಅಲ್ಯಾರು ಬುರ್ಖಾ ಬೇಡ ಅಂದಿದ್ದು..?
ಓಡಿ ಬನ್ನಿ ಎಲ್ರೂ.. ನಾವು ಮುಸ್ಲಿಮರಲ್ವಾ..!
ಹೊಡೆದು ಕೊಲ್ಲಿರಿ ಅವನನ್ನು..
ಮುಸ್ಲಿಂ ಹೆಣ್ಮಕ್ಕಳಿಗೆ ಬುರ್ಖಾ ಬೇಡ ಅಂದವನು,
ಪಾಪಿ..! ಧೈರ್ಯ ಎಷ್ಟಿರಬೇಡ ಅವನಿಗೆ..?
ಸುಮ್ಮಗೆ ಬಿಡಲಾರೆವು ನಾವವನನ್ನ..

ಹೇಯ್.. ಯಾರವನು..? ಅಲ್ಲಿ..!!
ಏಸುವನ್ನು ಏನೇನೋ ಹೇಳಿದ್ದು..?
ಕ್ರೈಸ್ತರೆಲ್ಲರೂ ಈಕಡೆ ಬನ್ನಿ.. ಅವನನ್ನು,
ಶಿಲುಬೆಗೇರಿಸೋಣ ನಾವೆಲ್ಲಾ ಸೇರಿ..
ನಮ್ಮ ದೇವರನ್ನು ಅವಹೇಳಿಸುವ ತಾಕತ್ತು,
ಅವನಿಗೆಲ್ಲಿಂದ ಬಂತು..? ನೋಡೋಣ..

ಓಹೋ.. ಅಲ್ಲೊಬ್ಬ ಭಿಕ್ಷುಕನಿದ್ದಾನಂತೆ..
ಕೈ ಚಾಚಿ ಬೇಡುವುದೇ ಅವನ ಧರ್ಮವಂತೆ..
ನಾಕಾಣೆ ಕೊಟ್ಟವರೆಲ್ಲಾ ಅವನ ದೇವರಂತೆ..
ಆತ, ಮಂದಿರ-ಮಸೀದಿ-ಚರ್ಚ್ ಎಲ್ಲವನ್ನೂ,
ಸುತ್ತಾಕಿ ಬಂದಿರುವನು.. ಆದರೆ ಅವನಿಗೆ,
ಇಲ್ಲಿ ಕಂಡ ಯಾರೂ ಅಲ್ಲಿರಲಿಲ್ಲವಂತೆ..!!

ಹಿಂದೂ ಅಂತ ಬೊಗಳಿ ಬಂದವ ಅವನು,
ಈವರೆಗೂ ದೇಗುಲ ಬಾಗಿಲ ನೋಡೇ ಇಲ್ಲ..!
ಮುಸ್ಲಿಂ ಎನ್ನುತ್ತಾ ಉಬ್ಬಿ ನಿಂತವನು,
ಮಸೀದಿ ಕಡೆಗೆ ಮುಖ ಮಾಡಲೇ ಇಲ್ಲ..!!
ಕ್ರೈಸ್ತ ಎಂದು ಗಟ್ಟಿ ನುಡಿದವನೀವರೆಗೆ,
ಚರ್ಚಿನ ಬಳಿ ಸುಳಿಯಲೇ ಇಲ್ಲ..!!!

ನಾಮದಲ್ಲಿ ಮಾತ್ರ ಇವರಿಗೆ ಧರ್ಮ-ನಿಯತ್ತು..!
ಉಣ್ಣೋಕೆ ಮಾತ್ರ ಇವರು ಮೂರು ಹೊತ್ತು..!!
'ನಾನು ಇಂತವ' ಎನ್ನುತ್ತಲೇ ಇವನ ಈ ಗತ್ತು..!!!
ಕಂಡೇ ಇಲ್ಲ ಇವ ಈತನಕ ವಿಶಾಲ ಜಗತ್ತು..!!!!
ಹೆಚ್ಚುತ್ತಲೇ ಇದೆ ಅವನ ಈ ಕಸರತ್ತು..!!!!!
ಆತ ಮೊದಲು ಮನುಷ್ಯನಾಗಿದ್ದರೆ ಸಾಕಿತ್ತು..!!!!!!

ಓ ಗೆಳೆಯಾ.........
ಧರ್ಮ-ಪಂಥ-ಪಂಗಡ ಇರಲಿ ನಿನ್ನೊಳಗೇ..
ಜನರೊಡನೇ ನೀ ಇರು ಮನುಜನ ಹಾಗೇ..
ಬೇಧ ಮರೆತು ಹೋಗು ನೀನು ಗುಡಿಗೆ..
ಸೌಹಾರ್ಧ ಉಕ್ಕಿಬರಲಿ ನಿನ್ನ ಮಡಿಲಿಗೆ..

★ http://suwichaar.blogspot.in

~ ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!