ಸುವಿಚಾರ ವೇದಿಕೆಯ ಬೆಳವಣಿಗೆ..

     ಕನ್ನಡ ಸಾಹಿತ್ಯ ಲೋಕದಲ್ಲಿ ನವ ಚೈತನ್ಯ ಮೂಡಿಸುತ್ತಿರುವ ಸುವಿಚಾರ ವೇದಿಕೆಯ ವಾಟ್ಸಪ್ ಬಳಗ ಮೊದಲ ವರ್ಷದ ಸಂಭ್ರಮಾಚರಣೆಗೆ ತುದಿಗಾಲಲ್ಲಿ ನಿಂತಿದೆ. "ವಿಚಾರಗಳಿಂದ ವಿಚಿತ್ರಗೊಂಡು.." ಎಂಬ ಸನ್ನುಡಿಯೊಂದಿಗೆ ಸಾಹಿತ್ಯ ಬೆಳವಣಿಗೆಯಲ್ಲಿ ಸಾಮಾಜಿಕ ತಾಣದಾದ್ಯಂತ ತಲ್ಲಣ ಸೃಷ್ಟಿಸುತ್ತಾ, ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸಲು ಅವಕಾಶ ಮಾಡಿಕೊಟ್ಟಂತಹ ಸಾಹಿತ್ಯಪ್ರೇಮಿಗಳೆಲ್ಲರಿಗೂ ಮೊದಲನೆಯದಾಗಿ ಅಭಿನಂದನೆಗಳು..
ಇದರೊಂದಿಗೆ, ಈ ವೇದಿಕೆಯ ಒಂದು ವರ್ಷದ ಚಿತ್ರಣವನ್ನು ಸರಳವಾಗಿ ನಿಮ್ಮ ಮುಂದಿಡಲು ಬಯಸುತ್ತಿದ್ದೇನೆ..

ಉದ್ದೇಶ;
     ಕಾಲಕ್ರಮೇಣ ಕ್ಷೀಣಿಸಿ ಹೋಗುತ್ತಿರುವ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ, ಸಾಮಾಜಿಕ ತಾಣಗಳಾದ ವಾಟ್ಸಪ್, ಫೇಸ್ಬುಕ್ ಸೇರಿದಂತೆ ಇತರ ಮೂಲಗಳಲ್ಲಿ ಸಾಹಿತ್ಯದ ಹೊಳೆ ಹರಿಸುತ್ತಿರುವ ನವ ಬರಹಗಾರರು ಯಾ ಕವಿಮಿತ್ರರಿಗೆ ಪ್ರೋತ್ಸಾಹದೊಡನೆಯೇ, ತನ್ನ ಕಲ್ಪನಾ ಲೋಕಕ್ಕೆ ಇನ್ನಷ್ಟು ಮೆರುಗು ನೀಡಿ, ಸಾಹಿತ್ಯ ರಚಿಸಲು ವಿವಿಧ ವೇದಿಕೆಗಳನ್ನು ಸೃಷ್ಟಿ ಮಾಡಿಕೊಡುವ ಸಲುವಾಗಿ ಈ ಒಂದು ಬಳಗ ಹುಟ್ಟಿಕೊಂಡಿರುತ್ತದೆ.

ಸುವಿಚಾರದ ಸಾಧನೆ;
     ಪ್ರತಿ ದಿನ, ಪ್ರತ್ಯೇಕ ಪ್ರತ್ಯೇಕ ಅವಕಾಶ ವೇದಿಕೆಗಳನ್ನು ಕಟ್ಟುತ್ತಾ, ಯುವ ಬರಹಗಾರರಿಗೆ ಆಶಾಕೇಂದ್ರವಾಗಿ ಬದಲಾವಣೆಗೊಳ್ಳುತ್ತಿರುವ ಸುವಿಚಾರ ವೇದಿಕೆ ಪ್ರತೀ ವಾರ ವಿವಿಧ ಸಾಹಿತ್ಯ ಸ್ಪರ್ಧೆಯ ಮೂಲಕ ಬರಹಲೋಕಕ್ಕೆ ಮತ್ತಷ್ಟು ಸಾಹಿತಿಗಳನ್ನು ಆಹ್ವಾನ ನೀಡುತ್ತಾ ಬಂದಿದೆ. ಈಗಾಗಲೇ ಕಥೆ, ಕವನ, ಪ್ರಬಂಧ, ಚುಟುಕು ಕವನ, ಕಲ್ಪನಾ ಕಾವ್ಯ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಈ ವೇದಿಕೆ ನಡೆಸಿ ಬಂದಿದ್ದು, ಉತ್ತಮರನ್ನು ಆಯ್ಕೆ ಮಾಡಿ, ಅವರಿಗೆ ಕಿರುಕಾಣಿಕೆ ನೀಡುವಲ್ಲಿ ಸುವಿಚಾರ ವೇದಿಕೆ ಪ್ರಯತ್ನಿಸುತ್ತಿದೆ. ಅಲ್ಲದೇ ಸಾಮಾಜಿಕ ಕಾರ್ಯಗಳಲ್ಲೂ ಈ ಒಕ್ಕೂಟ ದಾಪುಗಾಲಿಡುವ ಯೋಚನೆಯಲ್ಲಿರುವುದಲ್ಲದೆ, ಅದಕ್ಕೆ ಸಂಪೂರ್ಣ ಸಹಕಾರ, ಪ್ರೋತ್ಸಾಹ ಹಾಗೂ ಸಹಾಯವನ್ನು ಯುವ ಸಾಹಿತ್ಯಪ್ರೇಮಿಗಳಿಂದ ನಿರೀಕ್ಷಿಸುತ್ತಿದ್ದೇವೆ. ಈಗಾಗಲೇ ಸುವಿಚಾರ ವೇದಿಕೆಯು ಸ್ಪರ್ಧೆಗಳ ಮೂಲಕ ಯುವಕರಿಂದ ಕ್ರಾಂತಿಕಾರಿ, ಪರಿಣಾಮಕಾರಿ ಕವನ, ಲೇಖನ, ಕಥೆಗಳನ್ನು ಬರೆಸುತ್ತಿದ್ದು, ಮುಂದಿನ ದಿನಗಳಲ್ಲಿ ಅದೇ ಬರಹಗಳು ಸಮಾಜದ ಉನ್ನತಿಗೆ ಸಹಕಾರಿಯಾಗಬಹುದೆಂದೂ ಅಲ್ಲದೆ, ಅಂತಹ ಬರಹಗಾರರೆಲ್ಲ ಸಮಾಜದಲ್ಲಿ ಗುರುತಿಸಲ್ಪಡುವ ಉತ್ತಮ ಬರಹಗಾರರಾಗಿ ಗುರುತಿಸಲ್ಪಡುತ್ತಾರೆ ಎಂಬ ಭರವಸೆಯಲ್ಲಿ ಈ ಬಳಗ ಮುನ್ನಡೆಯುತ್ತಿದೆ.

ಸುವಿಚಾರ ಎಲ್ಲೆಲ್ಲಿ ವೇದಿಕೆ ನಿರ್ಮಿಸಿದೆ..?
     ಹವ್ಯಾಸವಾಗಿ ನಾನು ಬರೆದ ಸಣ್ಣಪುಟ್ಟ ಬರಹಗಳನ್ನು ಪ್ರಕಟಿಸುವ ಸಲುವಾಗಿ ಮೊದಲು suwichaar.blogspot.in ಎಂಬ ಬ್ಲಾಗನ್ನು ತೆರದುಕೊಂಡು, ಅದರ ಮೂಲಕ ನನ್ನ ಚಿಕ್ಕಪುಟ್ಟ ಬರಹಗಳನ್ನು ಪ್ರದರ್ಶಿಸುತ್ತಾ ಬಂದಿದ್ದೆ. ಆ ಬಳಿಕ ಒಂದಷ್ಟು ಬರಹಗಾರರನ್ನು ಒಟ್ಟು ಸೇರಿಸಿ, ಸಾಹಿತ್ಯರುಚಿ ಸವಿಯಲು ದಿನಾಂಕ 1/10/2015 ರಂದು ಸುವಿಚಾರ ಎಂಬ ವಾಟ್ಸಪ್ ಗುಂಪನ್ನು ತೆರದುಕೊಂಡೆ. ಸಾಹಿತ್ಯದ ಸದಭಿರುಚಿಯನ್ನು ಸವಿಯಬಯಸುವ ಯುವ ಸಾಹಿತ್ಯಪ್ರೇಮಿಗಳು ಹಾಗೂ ಉದಯೋನ್ಮುಖ ನವ ಬರಹಗಾರರನ್ನು ಸಮ್ಮೇಳಿಸಿಕೊಂಡ ಈ ವಾಟ್ಸಪ್ ಗುಂಪು ಸದಾ ಸಾಹಿತ್ಯದ ಸವಿಯೂಟವನ್ನು ಬಡಿಸುತ್ತಾ ಬರುತ್ತಿದ್ದು ಈಗ ಒಂದನೇ ವರ್ಷದ ಹುಟ್ಟುಹಬ್ಬದ ಸುದಿನದಲ್ಲಿದೆ. ವಾಟ್ಸಪ್ ಗುಂಪು ಹುಟ್ಟಿಕೊಂಡದ್ದರ ಬೆನ್ನಲ್ಲೇ, ಮುಖಪುಸ್ತಕ(ಫೇಸ್ಬುಕ್)ದಲ್ಲೂ ಒಂದು ಗುಂಪನ್ನು ತೆರೆದುಕೊಂಡಿದ್ದು, ಅಲ್ಲೂ ಯುವ ಬರಹಕರ್ತೃರಿಗೆ ಅವಕಾಶ ಮಾಡಿಕೊಟ್ಟಿದೆ. ತದನಂತರ ಇದೇ ಫೇಸ್ಬುಕ್ಕಿನಲ್ಲಿ ಸುವಿಚಾರ ವೇದಿಕೆ ಎಂಬ ಪೇಜ್ ತೆರೆದುಕೊಂಡಿದ್ದು, ದುರಾದೃಷ್ಟವಶಾತ್ ಇಲ್ಲಿ ನೀರಸ ಪ್ರತಿಕ್ರಿಯೆಯನ್ನು ಸವಾಲಾಗಿಸಿಕೊಂಡಿರುತ್ತದೆ. ಅದಲ್ಲದೆ, ಕಳೆದ ವಾರದಲ್ಲಿ ಸಾಹಿತ್ಯದ ಮೃಷ್ಟಾನ್ನ ಬಡಿಸಲು ಹೊಸ ಫೇಸ್ಬುಕ್ ಖಾತೆಯನ್ನೂ ನಿರ್ಮಿಸಿಕೊಂಡಿದ್ದು, ಕನಿಷ್ಟ ಅವಧಿಯಲ್ಲೇ ಉತ್ತಮ ಸಹಕಾರ ಕಾಣುತ್ತಿದ್ದೇವೆ. ಅದರೊಂದಿಗೆ, hike, wordpressನಲ್ಲೂ ಖಾತೆ ತೆರದುಕೊಂಡಿದ್ದರೂ, ಸದಸ್ಯರ ಸಂಖ್ಯೆಯಲ್ಲಿ ಕ್ಷಾಮವಿದ್ದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅಂತರ್ಜಾಲ ತಾಣಗಳ ಜೊತೆಜೊತೆಗೇ ಹೊರಜಗತ್ತಿನಲ್ಲೂ ಪರಿಚಯಗೊಳ್ಳುವ ಮೂಲ ಉದ್ದೇಶವನ್ನಿಟ್ಟುಕೊಂಡು ಒಂದು ಪತ್ರಿಕೆಯಾಗಿ ಸುವಿಚಾರ ವೇದಿಕೆ ಇನ್ನೊಂದು ಹೆಜ್ಜೆ ಮುಂದಕ್ಕಿಡುವ ಯೋಜನೆ ಹಾಗೂ ತಯಾರಿಯಲ್ಲಿದೆ. ಇದಕ್ಕೂ ನಿಮ್ಮಿಂದ ಸಹಕಾರವನ್ನು ಬಯಸುತ್ತದೆ.

ಮುಂದಿನ ಯೋಜನೆ;
     ಈಗ ಕೇವಲ ನನ್ನೊಬ್ಬನ ನಿಯಂತ್ರಣ ಹಾಗೂ ನಿಮ್ಮಂತವರ ಸಹಕಾರದಿಂದ ಮುನ್ನಡೆಯುತ್ತಲಿರುವ ಈ ಸುವಿಚಾರ ವೇದಿಕೆಯನ್ನು ಇನ್ನೂ ಪ್ರಬಲಗೊಳಿಸಲು ಮುಂದೆ ಸೀಮಿತ ಸದಸ್ಯರ ಸಮಿತಿಯೊಂದನ್ನು ರಚಿಸುವ ಬಗ್ಗೆ ಸುವಿಚಾರ ಯೋಚಿಸುತ್ತಿದೆ. ಈ ಪೂರ್ವಯೋಜಿತ ಸಮಿತಿಯ ಮೂಲಕ ಮತ್ತೂ ಶಕ್ತವಾಗಿ, ಸಾಹಿತ್ಯ ಮಾತ್ರವಲ್ಲದೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಾಧನೆಗೈಯ್ಯುವ ಪೂರ್ವತಯ್ಯಾರಿ ಈ ವೇದಿಕೆಯಿಂದ ನಡೆಯುತ್ತಿದೆ. ಅದು ಮಾತ್ರವಲ್ಲದೆ ಎರಡು-ಮೂರು ತಿಂಗಳೊಳಗೆ ಕರಾವಳಿಯ ಕರಿಮಣ್ಣಿನ ಮೇಲೆ ಕರುನಾಡಿನ ಯುವ ಹಾಗೂ ಹಿರಿಯ ಸಾಹಿತಿಗಳನ್ನು ಸಮ್ಮಿಳನಗೊಳಿಸುವ ಬಗ್ಗೆಯೂ, ಅಲ್ಲಿಂದ ಹೊಸ ಪ್ರಯತ್ನವನ್ನು ಮುಂದುವರಿಸುವ ಕುರಿತಾಗಿಯೂ ಸುವಿಚಾರ ಚಿಂತಿಸುತ್ತಿದೆ. ಅದರೊಡನೆಯೇ, ಮೇಲೆ ತಿಳಿಸಿರುವಂತೆ ಸುವಿಚಾರ ವೇದಿಕೆಯನ್ನು ಒಂದು ಪತ್ರಿಕಾ ವಿನ್ಯಾಸದಲ್ಲಿ ಜಗತ್ತಿಗೆ ಪರಿಚಯಿಸುವ ಹಾಗೂ ಸಾಹಿತ್ಯಕ್ಷೇತ್ರಕ್ಕೆ ಈ ಮೂಲಕ ಕೊಡುಗೆಯರ್ಪಿಸುವ ಚಿಂತನೆಯನ್ನೂ ಈ ವೇದಿಕೆ ನಡೆಸುತ್ತಿದೆ.
ಈವರೆಗಿನ ಯಶಸ್ವಿಯಲ್ಲಿ ಬೆನ್ನೆಲುಬಾಗಿ ನಮ್ಮೊಂದಿಗಿದ್ದ ಯುವ ಸಾಹಿತಿಗಳು ಹಾಗೂ ಸಾಹಿತ್ಯಪ್ರೇಮಿಗಳಾದ ತಾವೆಲ್ಲರೂ, ನಮ್ಮ ಮುಂದಿನ ಯೋಜನೆಯಲ್ಲೂ ಇದಕ್ಕಿಂತ ಮಿಗಿಲಾಗಿ ಕೈಜೋಡಿಸುವ ನಿರೀಕ್ಷೆಯನ್ನೂ ಸುವಿಚಾರ ವೇದಿಕೆ ತಮ್ಮ ಮೇಲೆ ಇಟ್ಟುಕೊಂಡಿದೆ ಹಾಗೂ ಈ ನಿರೀಕ್ಷೆ ಹುಸಿಯಾಗದು ಎಂಬ ಭರವಸೆಯೂ ನಮ್ನಲ್ಲಿದೆ..

     ಈಗ ಒಂದು ವರ್ಷದ ಸಂಭ್ರಮಾಚರಣೆಯಲ್ಲಿರುವ ಈ ಸಾಹಿತ್ಯ ಮಂಟಪವನ್ನು ಬಾನಿಗೇರಿಸಲು ಹಾಗೂ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವಲ್ಲಿ ಇನ್ನಷ್ಟು ಜನರನ್ನು ಪ್ರೇರೇಪಿಸಲು ನಿಮ್ಮ ಈ ಸುವಿಚಾರ ವೇದಿಕೆ ಮುಂದೇನು ಮಾಡಬೇಕು ಎಂಬುದರ ಕುರಿತುಳ್ಳ ಅಭಿಪ್ರಾಯವನ್ನು ತಮ್ಮಿಂದ ಆಹ್ವಾನಿಸುತ್ತಿದ್ದೇವೆ. ಅದರ ಜೊತೆಗೆ ಕಳೆದ ಒಂದು ವರ್ಷದಲ್ಲಿ ಸುವಿಚಾರ ವೇದಿಕೆಯಿಂದ ನಿಮಗಾದ ಅನುಭವಗಳನ್ನೂ ಬಿಚ್ಚಿಡಬಹುದಾಗಿದೆ..
     ತಮ್ಮ ಅಭಿಪ್ರಾಯಗಳನ್ನು ನಮ್ಮ ಈ ಗುಂಪಿನಲ್ಲಿ ಪ್ರಚುರಪಡಿಸಬಹುದು ಅಥವಾ +918971046427 ಈ ವಾಟ್ಸಪ್ ನಂಬರಿಗೂ ಸಂಪರ್ಕಿಸಿ ತಿಳಿಸಬಹುದು.. ಹಾಗೂ ಉತ್ತಮವಾದ ಅಭಿಪ್ರಾಯ ಯಾ ಪ್ರತಿಕ್ರಿಯೆಗಳಿಗೆ ಬಹುಮಾನ ನೀಡಲಾಗುತ್ತದೆ..

ಇತೀ.., ನಿಮ್ಮ ಪ್ರೀತಿಯ,
ಹಕೀಂ ಪದಡ್ಕ,
ಸುವಿಚಾರ ವೇದಿಕೆ ಅಡ್ಮಿನ್..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!