ಕೊಲೆಗಾರ ನಾನು..
ಲೇಖನಿಯೆಂಬಾಯುಧವ ಹಿಡಿದು,
ಬಿಳಿ ಹಾಳೆಯೆಂಬ ರಣರಂಗದಲ್ಲಿ,
ನೀಲಿ ನೆತ್ತರನ್ನು ಹರಿಸುತ್ತಲೇ..,
ಹೋರಾಡುತ್ತಿರುವೆ ನಾನಿಂದು..
ಸಮುದಾಯದೊಳಗೆ ನಡೆಯುತಿರುವ,
ಅನ್ಯಾಯ, ಅಕ್ರಮ, ಅನೀತಿಗಳನ್ನೆಲ್ಲ,
ಇದೇ ಖಡ್ಗವನ್ನೇ ಬಳಸಿ ನಾನು,
ಚಿಂದಿ ಮಾಡುವೆನು ಕೊಚ್ಚಿ ಕೊಂದು..
ಕಾಗದದ ಪರದೆಯ ಮೇಲೆಯಿಡೀ,
ಸಾರಿ ಸಾರಿ ಸಾರಿ ಬರೆಯುವೆನು,
ಸಮಾಜದ್ರೋಹವ ಕೊಲೆಗೈಯ್ಯಲಿರುವ,
ನಾನು ಮಹಾ ಕೊಲೆಗಾರನೆಂದು..
ತಿಳಿಯಪಡಿಸಬೇಕೆನಗೆ,
ಪ್ರಬುದ್ಧ ಬದುಕಿಗೆ ಬರೆಯನ್ನೆಳೆದು,
ಪ್ರಸಕ್ತ ಮನಸ್ಸಿಗೆ ಗಾಯವ ತರಿಸಿ,
ಸಮಾಜದೊಳಗೆ ವಿಕಾರಿಯಾಗುವ,
ದುಷ್ಟ ಶಕ್ತಿಯೇನೂ ನಾನಲ್ಲವೆಂದು..
ದೇಶ ಮುನ್ನಡೆಯಲು,
ನಾವೆಲ್ಲರೂ ಪಾತಕಿಗಳಾಗಬೇಕು..
ಭ್ರಷ್ಟ, ದುಷ್ಟ, ಅನಿಷ್ಟ ರಾಜಕಾರಣವನ್ನು,
ಭಯೋತ್ಪಾದನೆಯ ಹುಟ್ಟಡಗಿಸುವ,
ಕೊಲೆಗಾರ ನಾವಾಗಬೇಕಿದೆ ಇಂದು..
ನೀನಲ್ಲ ಧೈರ್ಯವಂತ..!!
ಮುಂದೆ ನೋಡಿ ನಡೆಯುವವನ,
ಬೆನ್ನ ಹಿಂದೆ ಬಂದು ಚೂರಿಯಿಟ್ಟು,
ನಾ ಧೈರ್ಯಶಾಲಿಯೆಂದು ಹಿಗ್ಗಿದರೆ,
ಜನರೆಲ್ಲಾ ಹೇಳಲಿರುವರು ನೀನು,
ಬರೀ ಹೆದರುಪುಕ್ಕಳ ಎಂದು..
ನಾವೇ ಶಕ್ತಿವಂತರು..!!!
ಖಡ್ಗ-ಕೋವಿಯಿಲ್ಲ, ಗುಂಡು-ಬಾಂಬುಗಳಿಲ್ಲ..
ಕೈಯ್ಯಲೊಂದು ಪೆನ್ನೆಂಬ ಹತಾರ..
ಮೇಜಿನ ಮೇಲೊಂದು ಕಾಗದದ ತುಂಡು..
ಇದೇ ನಮ್ಮೆಲ್ಲರ ಶಕ್ತಿ ತುಂಬಿದ ಆಯುಧ..!
ತಿಳಿಯಬೇಕು ನೀನು, ಇದೇ ಧೈರ್ಯವೆಂದು..
ಹೌದವ್ವಾ...!:
ಸಮುದಾಯವನ್ನು ಮುನ್ನಡೆಸಲು,
ಸಮಾಜವನ್ನು ಕೆಡಿಸುವುದೇತಕೆ..!?
ರಕ್ತದ ಹರಿವಿಲ್ಲದೆ, ರುಂಡವ ಛೇದಿಸದೇ,
ನೀಲಿ ಶಾಯಿಯ ತ್ಯಾಗದಿಂದಲೇ,
ದೇಶವ ಪ್ರಶಸ್ತಗೊಳಿಸುವೆವು ನಾವು..
ಬರಹವೇ ನಮ್ಮ ಹೋರಾಟದ ಬಿಂದು..
ಖಂಡಿತವಾಗಿಯೂ...!!
ಕಿರುಚಿ ಹೇಳುವೆನು 'ನಾನು ಕೊಲೆಗಾರ..'
ಬರಹಾಸ್ತ್ರದಿಂದಲೇ ನೀಚರನ್ನು ನಾನು,
ಕೊಂದು ಹಾಕುವೆನು, ಹೃದಯ ಸೀಳುವೆನು..
ಅದರಿಂದಲೇ ಅವನ ಮನಸ್ಸಿಗೆ ಚುಚ್ಚಿ,
ಕಲ್ಮಶಗಳ ತೊಳೆಯಿಸಿ, ಉದಾತ್ತನನ್ನು,
ಹುಟ್ಟಿಸಬಯಸುವ ಕೊಲೆಗಾರ ನಾನಿಂದು..
🔰 http://suwichaar.blogspot.in 🔰
✍ ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou