ಅರ್ಥವಿಲ್ಲದ ನ್ಯಾಯ ವ್ಯವಸ್ಥೆಯಿಂದಾಗಿ ನಷ್ಟಗೊಂಡ 24 ವರ್ಷಗಳು..
ಯಾಕೋ ಏನೋ, ಭಾರತ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಅವಲೋಕಿಸುವಾಗ ನಾಚಿಕೆಯಾಗುತ್ತಿದೆ. 'ನಾನೊಬ್ಬ ಭಾರತೀಯ' ಎಂದು ಹೆಮ್ಮೆಯಿಂದ ಹೇಳಬೇಕಾದವರು ಇಂದು ತಲೆತಗ್ಗಿಸಿ ನಡೆಯುತ್ತಿದ್ದಾರೆ. ಇದಕ್ಕೆ ನಾವು ಭಾರತವನ್ನು ವಿಶ್ಲೇಷಿಸಿ ಗುಣವಿಲ್ಲ. ಭಾರತದ ಪ್ರಸ್ತುತ ಸ್ಥಿತಿಯನ್ನು ವಿಮರ್ಶಿಸಬೇಕಿದೆ. ಭಾರತ ಹೀಗಾಗಿರಲು ಕಾರಣವೇನು..? ಭಾರತವನ್ನು ಯಾವ ರೀತಿ ಉನ್ನತಿಗೇರಿಸಬಹುದು..? ಎಂಬುದರ ಕುರಿತುಳ್ಳ ಚರ್ಚೆ ನಡೆಯಬೇಕಿದೆ.. ಚರ್ಚೆ ಮಾತ್ರ ನಡೆದರೆ ಸಾಲದು; ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಬೇಕು. ಆಗ ಮಾತ್ರ ಅದಕ್ಕೊಂದು ನೈಜಾರ್ಥ ಬರುವುದು..
ಇದನ್ನು ಹೇಳಲು ಕಾರಣವಿದೆ.. ಭಾರತದ ನ್ಯಾಯವ್ಯವಸ್ಥೆಯ ಬಗ್ಗೆ ವಿಮರ್ಶಿಸುವಾಗ, ಪ್ರಸಕ್ತ ದೇಶದಲ್ಲಿ ನ್ಯಾಯ ವ್ಯವಸ್ಥೆ ಎಷ್ಟೊಂದು ಕಳಂಕಗೊಂಡಿದೆ ಎಂಬುದು ಬೆತ್ತಲಾಗಿ ಕಾಣಿಸುತ್ತಿದೆ. ಕಳೆದ 24 ವರ್ಷಗಳಿಂದ ಮಾಡದ ತಪ್ಪಿಗೆ ಸೆರೆಮನೆವಾಸ ಅನುಭವಿಸಿ, ಇದೀಗ ನಿರಪರಾಧಿ ಎಂದು ಸಾಬೀತಿಗೊಳಪಟ್ಟ ನಾಸರ್ ಮಅದನಿಯವರ ವಿಚಾರವನ್ನೇ ಗಮನಿಸಿದರೆ ಸಾಕು.. ಒಂದು ನಿರಪರಾಧಿತ್ವವನ್ನು ಸಾಬೀತುಪಡಿಸಲು ಭಾರತದ ನ್ಯಾಯದೇವತೆ 24 ವರ್ಷಗಳ ಕಾಲಾವಧಿ ಪಡೆದುಕೊಂಡಿದೆ ಎನ್ನುವಾಗ ಭಾರತದ ಪ್ರಸ್ತುತ ಸನ್ನಿವೇಶ ಯಾವ ರೀತಿಯಲ್ಲಿದೆ ಎಂಬುವುದು ಅರ್ಥವಾಗದಿರದು. ಅಷ್ಟಕ್ಕೂ ಯಾಕೆ ಇಲ್ಲಿ ನ್ಯಾಯ ಮಣ್ಣುಪಾಲಾಗಿದೆ..? ಇದು ಇನ್ನೂ ನಿಗೂಢವಷ್ಟೇ.. ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಇನ್ನೆಷ್ಟು ವರ್ಷಗಳು ಬೇಕಾಗಬಹುದು..!!
'ಸತ್ಯಕ್ಕೆ ಜಯವಿದೆ' ಎಂಬ ಮಾತು ಇಂದು ಸತ್ಯವಾಗಿದೆ. ನಿಜಕ್ಕೂ ಎಷ್ಟೇ ಕ್ಲಿಷ್ಟಕರ ಸಂದರ್ಭದಲ್ಲೂ ಸತ್ಯವೇ ಜಯಿಸುತ್ತದೆ. ಸುಳ್ಳಿನಿಂದ ಒಂದು ನಿಮಿಷವನ್ನು ಜಯಿಸಬಹುದು; ಆದರೆ, ಸತ್ಯದಿಂದಾಗಿ ಇಡೀ ಬದುಕನ್ನು ಜಯಿಸಬಹುದು.. ಈ ಒಂದು ಪರಿಕಲ್ಪನೆ ಮಅದನಿಯ ನಿರಪರಾಧಿತ್ವದೊಂದಿಗೆ ಸತ್ಯಗೊಂಡಿದೆ. ಆದರೆ, ನಮ್ಮ ನ್ಯಾಯ ವ್ಯವಸ್ಥೆ ಯಾಕಿಷ್ಟು ವಿಳಂಬವಾಗಿದೆ..? ಎಂಬುವುದೇ ನಮ್ಮ ಮುಂದಿರುವ ಪ್ರಶ್ನೆ. ತಾನು ತಪ್ಪು ಮಾಡಿಲ್ಲ ಅಂತ ನಾಸರ್ ಮಅದನಿಯವರು ಸಾರಿ ಸಾರಿ ಹೇಳಿದರು. ನಿಜಕ್ಕೂ ಅವರ ಅಪರಾಧಿತ್ವಕ್ಕೆ ಯಾವುದೇ ಅಸಲಿ ಪುರಾವೆ ಇಲ್ಲದಿದ್ದರೂ, ಅವರನ್ನು ಜೈಲಿಗಟ್ಟಲಾಗಿತ್ತು. 24 ವರ್ಷಗಳ ಕಾಲ ಹೊರ ಜಗತ್ತಿನಿಂದ ದೂರವಿರಬೇಕಾಯಿತು. ಅದೂ ಕೂಡ ತನ್ನದಲ್ಲದ ಅಪರಾಧಿ ಪಟ್ಟವನ್ನು ಹೊತ್ತುಕೊಂಡು.. ಯಾರೋ ಮಾಡಿದ ತಪ್ಪಿಗೆ ತನ್ನ ಮೌಲ್ಯವೇರಿದ ಎರಡೂವರೆ ದಶಕಗಳನ್ನು ನೀರಲ್ಲಿ ಬಿಟ್ಟರು. ಈಗ ನಿರಪರಾಧಿಯೆಂದು ಸಾಬೀತಾಯಿತಂತೆ..! ಇಲ್ಲಿನ ನ್ಯಾಯ ವ್ಯವಸ್ಥೆಯು ಕುಶಲವಾಗಿದ್ದಿದ್ದರೆ, ಒಂದು ನಿರಪರಾಧಿತ್ವವನ್ನು ಪರಿಶೀಲಿಸಲು ಎರಡು ದಶಕಗಳ ಅಗತ್ಯವಿರುತ್ತಿರಲಿಲ್ಲ.
ಕಣ್ಣು ತುಂಬಿ ಬರುತ್ತಿದೆ. ಯಾವುದೋ ಒಂದು ವಿಡೀಯೋ ಕ್ಲಿಪ್ ನಲ್ಲಿ ಅವರಾಡಿದ ಮಾತುಗಳು ಇಂದಿಗೂ ಮನದೊಳಗೆ ಮಾರ್ಧ್ವನಿಸುತ್ತಿದೆ.. ''ಗಡ್ಡ ಬಿಟ್ಟು ಟೊಪ್ಪಿ ಹಾಕಿದ ನಾನು ಭಯೋತ್ಪಾದಕನಾದೆ; ಬುರ್ಖಾ ಧರಿಸಿ ಸ್ಕಾರ್ಫ್ ಉಟ್ಟಿರುವ, ಮನೆಯಿಂದ ಹೊರಗಡೆ ಹೋದೇ ಇಲ್ಲದ, ತಸ್ಬೀಹ್, ಕುರ್ ಆನ್ ಕೈಯಿಂದ ಬಿಡದ, ನನಗೆ ಊಟ ಬಡಿಸುತ್ತಿದ್ದ ನನ್ನ ಮಡದಿಯನ್ನೂ ಅವರು ಕೋರ್ಟಿನ ಮೆಟ್ಟಿಲೇರಿಸಿದರು.' ಎಂದು ಬಹಳ ನಿಶ್ಶಾಂತವಾಗಿ ಅವರು ಆ ಪ್ರಭಾಷಣದಲ್ಲಿ ಕನವರಿಸಿ ಹೇಳಿದಾಗ ನಾನರಿಯದೇ ನನ್ನ ಕಣ್ಣುಗಳು ಒದ್ದೆಯಾಗಿತ್ತು. ''ಬಾಂಬ್ ಎಸೆದು ತನ್ನ ಕಾಲನ್ನೂ ಕಳೆದುಕೊಳ್ಳುವಂತೆ ಮಾಡಿದವನ ವಿರುದ್ಧ ಕೇಸ್ ಕೊಡದೇ, ಅವನಿಗೆ ಶಿಕ್ಷಿಸದರೇನೂ ನನ್ನ ಕಳೆದುಹೋದ ಕಾಲು ಮತ್ತೆ ಪಡೆಯಲಾಗದು; ಹಾಗಾಗಿ ನಾನು ಅವನನ್ನು ಕ್ಷಮಿಸಿರುವೆ; ಬಹುಮಾನ್ಯ ನ್ಯಾಯಾಲಯವೂ ಅವನನ್ನು ಕ್ಷಮಿಸಿ ಬಿಡಿ'' ಎಂದು ನ್ಯಾಯಾಲಯದ ಪೀಠದಲ್ಲಿ ನಿಂತು ಪರಿಪರಿಯಾಗಿ ಬೇಡಿದ ನಾಸರ್ ಮಅದನಿಯವರು ನಿನ್ನೆಯವರೆಗೆ ಭಾರತದ ನ್ಯಾಯ ದೇವತೆಗೆ ಅಪರಾಧಿಯಾಗಿ ಕಂಡಿತ್ತು ಎಂದು ಯೋಚಿಸುವಾಗಲೇ ನಾಚಿಕೆಯಾಗುತ್ತಿದೆ. ಭಾರತ ಯಾವಾಗ ಉನ್ನತಿಗೇರುವುದು..? ಅಪರಾಧಿ ಯಾರು ನಿರಪರಾಧಿ ಯಾರು ಎಂಬುದನ್ನು ಸ್ಪಷ್ಟಪಡಿಸಲು ಈ ಭಾರತಕ್ಕೆ ವರ್ಷಗಳನೇಕದ ಅವಶ್ಯಕತೆ ಇರುವುದಾದರೆ, ಭಾರತ ಅಭಿವೃದ್ದಿಯಾಗಲು ಇನ್ನೆಷ್ಟು ತಲೆಮಾರುಗಳ ಕಾಲ ಮುಗಿಯಬೇಕು..?
ಹೌದು.. ಮಅದನಿಯವರ ಅಭಿಪ್ರಾಯದಲ್ಲಿ ಸತ್ಯಾಂಶವಿದೆ. ಇಂದಿನ ಪ್ರಸಕ್ತ ಸನ್ನಿವೇಶಗಳಲ್ಲಿ ಗಡ್ಡ ಬಿಟ್ಟು ಟೋಪಿ ಹಾಕಿದವರೆಲ್ಲರನ್ನೂ ಇಂದು ಭಯೋತ್ಪಾದಕರೆಂದು ಕರೆಯಲಾಗುತ್ತದೆ. ಮುಸ್ಲಿಮರ ಮಸೀದಿ-ಮದ್ರಸಗಳನ್ನು ಭಯೋತ್ಪಾದನಾ ತಾಣಗಳೆಂದು ಗುರುತಿಸಲಾಗುತ್ತಿದೆ. ಮುಸ್ಲಿಂ ನಾಮವಿರುವವರೆಲ್ಲರೂ ದೇಶದ್ರೋಹಿ ಪಟ್ಟವನ್ನು ಅಲಂಕರಿಸಬೇಕಾಗಿದೆ. ಹಾಗಿದೆ ನಮ್ಮ ಇಂದು ದುಸ್ಥಿತಿ. ಮಅದನಿಯೊಬ್ಬರು ನಿರಪರಾಧಿಯಾದರು. ಅಷ್ಟಕ್ಕೇ ನ್ಯಾಯ ಹಿತವಾಗಿದೆ ಎಂದು ಕೈತೊಳೆಯಬೇಕಿಲ್ಲ. ಇಲ್ಲಿ ಮಅದನಿಯವರ 24 ವರ್ಷಗಳನ್ನು ಸುಟ್ಟು ಹಾಕಿ ಈಗಲಾದರೂ ಮುಕ್ತ ಜೀವನಕ್ಕೆ ಅವಕಾಶ ಮಾಡಿ ಕೊಟ್ಟಿರಬಹುದು.. ಆದರೆ, ಇಂದು ಭಾರತದ ಅದೆಷ್ಟು ಜೈಲುಗಳಲ್ಲಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ..? ಹಲವಾರು ಮುಸ್ಲಿಂ ಯುವಕರು ತನ್ನದಲ್ಲದ ತಪ್ಪನ್ನು ತಲೆಮೇಲೆ ಹೊತ್ತು, ಸೆರೆಮನೆಯೊಳಗೆ ನರಕ ಜೀವನ ಅನುಭವಿಸುತ್ತಿದ್ದಾರೆ. ಇನ್ನು ಕೆಲವರು ಅಪರಾಧಿ ಪಟ್ಟದೊಂದಿಗೇ ಲೋಕಕ್ಕೆ ವಿದಾಯ ಹೇಳಿದ್ದಾರೆ. ಆದರೆ, ಸತ್ಯ ಏನು ಎಂಬುದನ್ನು ನ್ಯಾಯಾಲಯವು ಅರಿಯುವಲ್ಲಿ ಆಸಕ್ತಿ ತೋರುವುದಿಲ್ಲ. ಬಡ ಜನರಿಗೆ ನ್ಯಾಯಯುತ ನ್ಯಾಯ ದೊರಕಿಸಿ ಕೊಡಬೇಕಾದ ನ್ಯಾಯಾಲಯಗಳು ಹಾಗೂ ನ್ಯಾಯವಾದಿಗಳು ಇಂದು ಹಣದ ಮೊರೆ ಹೋಗಿದ್ದಾರೆ. ಆ ಕಾರಣಕ್ಕಾಗಿ ಇವತ್ತು ನ್ಯಾಯ ಮಾರುಕಟ್ಟೆಯ ಸರಕಾಗಿದೆ. ಹಣವಿದ್ದವನಿಗೆ ಮಾತ್ರ ನ್ಯಾಯವನ್ನು ಖರೀದಿಸಬಹುದು. ಇಲ್ಲದವನ್ನು ಅನುಭವಿಸಬೇಕು. ಅಂತಾಗಿದೆ ಪ್ರಸ್ತುತ ದೇಶದ ಸ್ಥಿತಿ..! ಸರ್ಕಾರವೂ ಇಂದು ಹಣ ಮತ್ತು ಅಧಿಕಾರದ ಹಿಂದೆಯೇ ಬಿದ್ದಿರುವುದರಿಂದ, ನಿಷ್ಠಾವಂತ ಆಡಳಿತದಿಂದ ಭಾರತವು ವಂಚಿತವಾಗಿದೆ. ಹಾಗಾಗಿಯೇ ನಮ್ಮ ನ್ಯಾಯ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿದೆ. ತಪ್ಪು ಮಾಡಿದವನಿಗಿಂದು ಶಿಕ್ಷೆ ದೊರೆಯುತ್ತಿಲ್ಲ. ಅತ್ಯಾಚಾರ, ಕೊಲೆ, ಹಲ್ಲೆ, ದರೋಡೆ, ಕಳ್ಳತನ ಇತ್ಯಾದಿ ಕುಕೃತ್ಯಗಳಲ್ಲಿ ಭಾಗಿಯಾದವನು ಇಂದಿಗೂ ತನ್ನ ಚಾಳಿಯಲ್ಲೇ ಮುಂದುವರಿದು, ಸುಖಜೀವನ ನಡೆಸುತ್ತಿದ್ದಾನೆ. ಬದುಕುವುದಕ್ಕಾಗಿ ಶ್ರಮಪಟ್ಟು ದುಡಿದು ಸಂಪಾದನೆಗೈಯ್ಯುತ್ತಿದ್ದ ಬಡ ಮುಸಲ್ಮಾನರು ಇಂದಿಗೂ ಜೈಲಿನೊಳಗೆ ನರಕ ಜೀವನ ಅನುಭವಿಸುತ್ತಿದ್ದಾರೆ.
ಭಾರತ ದೇಶ ಅಭಿವೃದ್ಧಿಯಾಗಬೇಕೆಂದಾದರೆ, ಮೊದಲು ಕಾನೂನು ಬಲಗೊಳ್ಳಬೇಕು. ತಪ್ಪಿದವನಿಗೆ ಶಿಕ್ಷೆ ದೊರಕಲೇ ಬೇಕು. ತಪ್ಪಿತಸ್ಥನಲ್ಲದವನಿಗೆ ಬದುಕುವ ಹಕ್ಕನ್ನೂ ನೀಡಬೇಕು. ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವುದು ಈ ಭಾರತ ದೇಶದಲ್ಲಿ ಕೊನೆಯಾಗಬೇಕು. ಯಾರು ತಪ್ಪು ಮಾಡಿದನೋ, ಅವನಿಗೇ ಶಿಕ್ಷೆ; ಅದರಿಂದಲೇ ಪ್ರಾಮಾಣಿಕರಿಗೆ ರಕ್ಷೆ ಲಭಿಸಬೇಕಿದೆ. ಆಗ ಮಾತ್ರ ಭಾರತವು ಅಭಿವೃದ್ಧಿಯತ್ತ ಸಾಗಲು ಸಾಧ್ಯ.
ನಿರಪರಾಧಿ ನಾಸರ್ ಮಅದನಿಯವರ 24 ವರ್ಷಗಳನ್ನು ಕತ್ತಲೆಯಲ್ಲಿ ಬೆತ್ತಲೆಯಾಗಿಸಿದ ನ್ಯಾಯವ್ಯವಸ್ಥೆಯು ಇಂದು ಅವರಲ್ಲಿ ಕ್ಷಮೆ ಕೇಳಬೇಕು. ತನ್ನಿಂದಾದ ತಪ್ಪನ್ನು ತಿದ್ದಿಕೊಳ್ಳಬೇಕು. ದೇಶದಲ್ಲಿ ಯಾರೆಲ್ಲಾ ನಿರಪರಾಧಿಗಳು ಶಿಕ್ಷೆಯಲ್ಲಿದ್ದಾರೋ, ಅವರೆಲ್ಲರ ಬಿಡುಗಡೆ ನಡೆಯಬೇಕು. ಯತಾರ್ಥ ಅಪರಾಧಿಗೆ ಶಿಕ್ಷೆ ದೊರಕಬೇಕು. ಅದರೊಂದಿಗೇ ನ್ಯಾಯ ದೇವತೆ ಕಣ್ಣು ತೆರೆಯಬೇಕು..
★ http://suwichaar.blogspot.in ★
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou