ಇತಿಹಾಸದ ಪುಟಗಳಿಂದ ಅಳಿದು ಹೋಗುತ್ತಿರುವ ಭಾರತೀಯ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರ ಗುರುತುಗಳು..
ಆಗಸ್ಟ್ 15 ನೇ 1947 ರಂದು ಬ್ರಿಟಿಷರ ದಬ್ಬಾಳಿಕೆಯಿಂದ, ಆಂಗ್ಲರ ಹಿಡಿತದಿಂದ ಭಾರತವು ತಪ್ಪಿಸಿಕೊಂಡು ಸ್ವತಂತ್ರವಾಯಿತು. ಭಾರತವು ಸ್ವತಂತ್ರಗೊಂಡು ಇದೀಗ 69 ವರ್ಷಗಳು ತುಂಬುತ್ತಿದೆ. ವ್ಯಾಪಾರದ ನೆಪದಲ್ಲಿ ಭಾರತದೊಳಗೆ ನುಸುಳಿದ ಬ್ರಿಟಿಷನ್ನರು, ಭಾರತದ ಪ್ರಾಂತೀಯ ರಾಜರುಗಳ ಮಧ್ಯೆ ಪರಸ್ಪರ ಇದ್ದಂತಹ ಅಂತರ ಯಾ ಧ್ವೇಷಭಾವವನ್ನು ಬಳಸಿಕೊಂಡು, ದೇಶವನ್ನು ತನ್ನ ಅಂಗೈಯೊಳಗೆ ತಂದಿರಿಸಲು ಪ್ರಯತ್ನಿಸಿದರು ಹಾಗೂ ಬೇಗನೇ ಯಶಸ್ಸನ್ನೂ ಗಳಿಸಿದರು. ಆ ಬಳಿಕ ಭಾರತ ಆಂಗ್ಲರ ಮನೆಯಾಯಿತು. ಇಲ್ಲಿ ಅವರ ಅನುಮತಿಯಿಲ್ಲದೆ ಏನನ್ನೂ ಮಾಡಲಾಗುತ್ತಿರಲಿಲ್ಲ. ಇಲ್ಲಿ ಭಾರತೀಯ ಮೂಲ ನಿವಾಸಿಗಳಿಗೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿರಲಿಲ್ಲ. ತನ್ನ ಜಮೀನಿನಲ್ಲಿ ಭಾರತೀಯ ಕಾರ್ಮಿಕರನ್ನು ಚೆನ್ನಾಗಿ ದುಡಿಸಿ, ಉತ್ತಮ ಫಲಪಡೆದು, ತನ್ನ ಸೆರಗಿಗೆ ಕಟ್ಟಿಕೊಳ್ಳುವ ಹವ್ಯಾಸವನ್ನು ಬ್ರಿಟಿಷರು ಬೆಳೆಸಿಕೊಂಡರು. ಭಾರತೀಯರಿಗೆ ನಿರಂತರ ದಾಳಿ, ಆಕ್ತಮಣಗಳು ಎದುರಾದವು. ಯುದ್ಧ, ಗದ್ದಲಗಳು ಎದ್ದು ಬಂದವು. ಶಾಂತವಾಗಿದ್ದ ಭಾರತವು ಅಂದಿನಿಂದ ಕೋಲಾಹಲಯುಕ್ತ ರಾಷ್ಟ್ರವಾಯಿತು..
ಮೊದಲು ಇದ್ದಂತಹ ಭಾರತವನ್ನು ಮರಳಿ ಪಡೆಯಬೇಕು. ನಮ್ಮ ಭಾರತದಲ್ಲಿ ನಮ್ಮವರಲ್ಲರ ಆಳ್ವಿಕೆ ಇರಕೂಡದು.. ಅದಕ್ಕಾಗಿ ಹೋರಾಟಗಳು ಆರಂಭಗೊಂಡವು. ದಂಗೆಗಳು ಏಳತೊಡಗಿದವು. ಸತ್ಯಾಗ್ರಹಗಳು ಉದಿಸತೊಡಗಿದವು. ಬ್ರಿಟಿಷರನ್ನು ಭಾರತದಿಂದ ಓಡಿಸಲು ಸರ್ವ ಭಾರತೀಯ ನಾಗರಿಕರು ಸಜ್ಜುಗೊಂಡರು. ಮಹಾತ್ಮಾ ಗಾಂಧೀಜಿ, ಬಾಲ ಗಂಗಾದರ ತಿಲಕ್, ಬಿಪಿನ್ ಚಂದ್ರಪಾಲ್, ರಾಣಿ ಅಬ್ಬಕ್ಕ, ಮೌಲಾನಾ ಅಝಾದ್, ಟಿಪ್ಪು ಸುಲ್ತಾನ್, ಸೇರಿದಂತೆ ಹಲವಾರು ಮಂದಿ ದೇಶಪ್ರೇಮಿಗಳ ತ್ಯಾಗಮಯೀ ಹೋರಾಟದ ಫಲವೇ ಇಂದು ಕಾಣಲ್ಪಡುತ್ತಿರುವ ಸ್ವತಂತ್ರ ಭಾರತ.. ಇಂದು ನಾವು ಈ ನಮ್ಮ ಭಾರತದಲ್ಲಿ ಸ್ವಚ್ಛಂಧವಾಗಿ ಓಡಾಡುತ್ತಿದ್ದರೆ, ಅದಕ್ಕೆ ಅಂದಿನ ಹೋರಾಟವೇ ಕಾರಣ. ಭಾರತೀಯರನ್ನರೆಲ್ಲ ತನ್ನ ಗುಲಾಮನಾಗಿಸಿಕೊಂಡಿದ್ದ ಬ್ರಿಟಿಷ್ ಸರ್ಕಾರ ಭಾರತದ ಸರ್ವವನ್ನೂ ಲೂಟಿಮಾಡಿತ್ತು. ಒಂದು ಕಾಲದಲ್ಲಿ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದ್ದ ಭಾರತ ಬ್ರಿಟಿಷರ ಆಳ್ವಿಕೆಯ ಬಳಿಕ ಕಡುಬಡ ದೇಶವಾಗಿ ಬದಲಾಯಿತು. ಬ್ರಿಟಿಷ್ ಆಡಳಿತದ ಆ ಅವಧಿಯಲ್ಲಿ, ಭಾರತವು ಅದೆಷ್ಟೋ ನಷ್ಟ-ಸಂಕಷ್ಟಗಳನ್ನು ಎದುರಿಸಿದ್ದರೂ, ವೀರರಾದ, ಧೀರರಾದ ಭಾರತೀಯ ಹೋರಾಟಗಾರರ ಹೋರಾಟದ ಫಲವಾಗಿ ಭಾರತವು ಮೆಲ್ಲಮೆಲ್ಲನೇ ಯಥಾಸ್ಥಿತಿಗೆ ಬಂದು ತಲುಪುತ್ತಲಿವೆ..
ಇಷ್ಟೆಲ್ಲಾ ಆಗಿಯೂ ದೇಶೀಯರಿಗೆ ಬೇಸರದ ಸಂಗತಿಯೇನೆಂದರೆ,
ಭಾರತವು ಇಂದು ಪ್ರಜಾಪ್ರಭುತ್ವ ಆಡಳಿತ ನೀತಿಯನ್ನು ಅನುಸರಿಸುತ್ತಿದೆ. ಪ್ರಜೆಗಳಿಂದ ಪ್ರಜೆಗಳಿಗಾಗಿರುವ ಪ್ರಜೆಗಳದ್ದೇ ಸರ್ಕಾರದಲ್ಲಿ ಇಂದು ಏಕಪಕ್ಷೀಯ ಆಡಳಿತ ಎದ್ದು ಕಾಣುತ್ತಿವೆ. ಧರ್ಮ-ಜಾತಿ-ಪಂಗಡದ ಹೆಸರಿನಲ್ಲಿ ಭಾರತವು ಬಹುಭಾಗಗಳಾಗಿ ವಿಂಗಡನೆಗೊಂಡಿದೆ. ಸ್ವಾತಂತ್ರ್ಯ ಪಡೆದ ಕ್ಷಣದಲ್ಲಿ ಭಾರತ-ಪಾಕಿಸ್ತಾನ ಇಬ್ಬಾಗವಾದಾಗಲೇ ಈ ಧರ್ಮಾಧರಿತ ವಿಭಾಗಕ್ಕೆ ಕೊಣೆಪಟ್ಟಿಯಿಡಬೇಕಿತ್ತು.
ಆದರೆ, ಭಾರತದಲ್ಲಿ ಮತ್ತೆ ಮುಂದುವರಿದ ಪರಿಯೇ ವಿಭಿನ್ನ. ಆಧುನಿಕ ಯುಗವು ಅಂಬೆಗಾಲಿಡುತ್ತಿದ್ದಂತೆಯೇ, ಜಾತಿ-ಧರ್ಮ-ಪಂಗಡ-ಪಕ್ಷ-ಗೋತ್ರ ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡ ಕಲಹಗಳು ನಡೆಯತೊಡಗಿದವು. ಕೊಲೆ-ಹಲ್ಲೆ-ಧರೋಡೆ ಸೇರಿದಂತೆ ವಿಭಿನ್ನಾಭಿನ್ನ ಶೈಲಿಗಳಲ್ಲಿ ಭಯೋತ್ಪಾದನೆಯೊಂದಿಗೆ, ಕೋಮುವಾದದ ವಿಷಬೀಜವನ್ನು ಭಾರತದ ಫಲವತ್ತಾದ ಮಣ್ಣಿಗೆ ಬಿತ್ತಲಾಯ್ತು. ಅಲ್ಲಿಂದ ಆರಂಭವಾಯಿತು, ಜಾತಿ-ಧರ್ಮದ ಪರಿವೆಯಿಲ್ಲದೇ, 'ತಾನೊಂದೇ ಕುಲಂ' ಎಂಬ ದಿಗ್ವಾಕ್ಯದ ಸಾರವನ್ನರಿತು ಸೌಹಾರ್ಧದಿಂದ ಬಾಳುತ್ತಿದ್ದ ಮಾನವ ಕುಲದಲ್ಲಿ 'ನಾನು ಹಿಂದು; ನೀನು ಮುಸ್ಲಿಂ; ಅವನ್ನು ಕ್ರೈಸ್ತ' ಎಂಬ ಕೈಬೆರಲಾಟ.
ವಿಷಾಧನೀಯ ವಿಚಾರ ಇನ್ನೊಂದಿದೆ. ಬ್ರಿಟಿಷರ ದಬ್ಬಾಳಿಕೆಯನ್ನು ತಡೆಯಲು ಕೇವಲ ಒಂದು ಧರ್ಮದ ಮಂದಿಯಿಂದ ಸಾಧ್ಯವಾಗಲಿಲ್ಲ. ಕೇವಲ ಒಂದು ಪಕ್ಷದಿಂದ ಅದು ನಡೆಯಲಿಲ್ಲ. ಒಬ್ಬನಿಂದ ಅದು ನೆರವೇರಲಿಲ್ಲ. ಅಲ್ಲಿ ಹೋರಾಟಕ್ಕೂ ಹೆಚ್ಚು ಬಲನೀಡಿದ್ದು ಸೌಹಾರ್ಧವೆಂದರೆ ತಪ್ಪಿಲ್ಲ. ಇಂದಿನಂತೆ ಆ 69 ವರ್ಷಗಳ ಮೊದಲೂ ಸೌಹಾರ್ಧದ ಬಳ್ಳಿ ಕಳಚಿ ಬಿದ್ದಿದ್ದರೆ, ಭಾರತ ಇಂದಿಗೂ ಬ್ರಿಟಿಷರ ಕೈಯಲ್ಲಿರುತ್ತಿತ್ತು. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ, ಸಿಖ್, ಪಾರ್ಸಿ ಸೇರಿದಂತೆ ಭಾರತದಲ್ಲಿನ ಎಲ್ಲಾ ಧರ್ಮದ ಅನುಯಾಯಿಗಳು, ಹೋರಾಟಗಾರರು ಅಂದಿನ ಚಳುವಳಿಗಳಲ್ಲಿ ಸ್ಥಾನವರ್ಪಿಸಿದ್ದರು. ಅವರೊಳಗೆ ಪರಸ್ಪರ 'ನಮ್ಮದು ಮಾನವ ಧರ್ಮ; ನಾವು ಭಾರತೀಯರು; ನಾವೆಲ್ಲರೂ ಒಂದೇ' ಎಂಬ ಸಾರಗಳೇ ಮನಸ್ಸನ್ನು ಆಕ್ರಮಿಸಿಕೊಂಡಿತ್ತು. ಇವುಗಳ ಪ್ರಾಬಲ್ಯದ ಮುಂದೆ, ಬೇಧ-ಭಾವಗಳು ಒಳ ಪ್ರವೇಶಿಸಲಾಗದೇ ಒಗ್ಗಿಕೊಂಡಿದ್ದವು. ಹಾಗಾಗಿ 1947 ರ ಆಗಸ್ಟ್ 15 ರಂದು ಭಾರತದಲ್ಲೆಡೆ ತ್ರಿವರ್ಣ ಪತಾಕೆ ಹಾರಾಡಿಕೊಂಡಿತು. 'ವಂದೇ ಮಾತರಂ', 'ಜನಗಣಮನ' ಗೀತೆಗಳು ಶಬ್ಧಮಾಧುರ್ಯದೊಂದಿಗೆ ಶ್ರವಿಸಲ್ಪಟ್ಟಿತು.
ಇಷ್ಟೆಲ್ಲಾ ತ್ಯಾಗಮಯೀ ಹೋರಾಟದ ಪರಿಹಾರ ಇಂದು ಭಾರತದಲ್ಲಿ ಕಾಣುತ್ತಿದೆ(?). ಇತಿಹಾಸದ ಪುಟಗಳೆಲ್ಲ ಆಧುನೀಕರಣಗೊಳ್ಳುತ್ತಿದೆ. ಅಂದರೆ, ಆಧುನಿಕ ಭಾರತದಲ್ಲಿ ಅಥವಾ ಜಗತ್ತಿನಲ್ಲಿ ಇಂದು ಏನು ನಡೆಯುತ್ತಿದೆಯೋ, ಅದೇ ಇತಿಹಾಸದ ಪುಟಗಳಲ್ಲಿ ಪ್ರಶೋಭಿತವಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಹಲವರ ನಾಮಗಳು ಅಳಿದು ಹೋಗಿದೆ, ಅಲ್ಲಲ್ಲ ಅಳಿಸಲಾಗಿದೆ. ದೇಶಕ್ಕಾಗಿ ತನ್ನೆರಡು ಮಕ್ಕಳನ್ನೂ ಒತ್ತೆಯಿಟ್ಟ ಟಿಪ್ಪು ಸುಲ್ತಾನ್ ಇಂದು ದೇಶಪ್ರೇಮಿ(?)ಗಳ ಪಾಲಿಗೆ ದೇಶದ್ರೋಹಿಯಾಗಿದ್ದಾನೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ವೀರಮರಣವನ್ನಪ್ಪಿದ, ವೀರ ಸೇನಾನಿಗಳಾದ ಮುಸ್ಲಿಂ ರಾಜರುಗಳ, ಸೈನಿಕರ ಹೆಸರು ಇತಿಹಾಸದ ಪುಟಗಳಲ್ಲಿಲ್ಲ. ''ಮುಸ್ಲಿಮರೆಲ್ಲರೂ ದೇಶದ್ರೋಹಿಗಳು; ಭಯೋತ್ಪಾದಕರು; ಕೋಮುವಾದಿಗಳು..'' ಎಲ್ಲವೂ ಮುಸ್ಲಿಮರೇ. ನಿಜ ಹೇಳುತ್ತಿದ್ದೇನೆ. ಒಂದು ವೇಳೆ ಇಂದಿನ ಜನರಲ್ಲಿರುವ ಅದೇ ಕೋಮುಭಾವನೆ ಅಂದಿನ ಹೋರಾಟಗಾರರ ಹೃದಯದೊಳಗೆ ಅಚ್ಚಾಗಿದ್ದಿದ್ದರೆ, ಇಂದೂ ಭಾರತ ಸ್ವತಂತ್ರವಾಗುತ್ತಿರಲಿಲ್ಲ. ಅಥವಾ ಅವರಿಗೆ ಬ್ರಿಟಿಷರ ವಿರುದ್ಧ ಹೋರಾಡಲು ಸಮಯವಿರುತ್ತಿರಲಿಲ್ಲ; ಪರಸ್ಪರ ಧರ್ಮಗಳ ಹೆಸರಲ್ಲೇ ಹೋರಾಡಿ ಮಣ್ಣಾಗುತ್ತಿದ್ದರು. ಆದರೆ ಅದು ಅಂದು ನಡೆಯಲಿಲ್ಲ. ಒಗ್ಗಟ್ಟು ಅಂದಿನ ಹೋರಾಟಕ್ಕೆ ಔಷಧವಾಗಿತ್ತು. ಸೌಹಾರ್ಧವೇ ಆಯುಧವಾಗಿತ್ತು. ಹಾಗಾಗಿಯೇ ಅಂದು ವಿಜಯ ಸಾಧ್ಯವಾಯಿತು. ಆದರೆ ಇಂದು..??
ಜಾತಿ-ಧರ್ಮಕ್ಕಾಗಿ ಭಾರತವನ್ನು ಮಾರಾಟ ಮಾಡುತ್ತಿದ್ದಾರೆ, ಅಂದರೆ ಭಾರತೀಯ ಇತಿಹಾಸವನ್ನು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅದೆಷ್ಟು ಮುಸ್ಲಿಮರು ಭಾಗವಹಿಸಿದ್ದರು..? ಪಾಕಿಸ್ತಾನದ ರಾಷ್ಟ್ರಪಿತ ಮಹಮ್ಮದಲಿ ಜಿನ್ನಾ ಅವರನ್ನು ದೇಶ ಮರೆಯುವುದು ಹೇಗೆ..? ಖಿಲಾಫತ್ ಚಳುವಳಿಯನ್ನು ಭಾರತ ಯಾಕೆ ದೂರವಿರಿಸಿದೆ..? ಹೈದರಾಲಿ, ಟಿಪ್ಪು ಸುಲ್ತಾನರ ಧೀರಮರಣ ದೇಶದ ಕಣ್ಣಿಗೆ ಯಾಕೆ ಗೋಚರಿಸುವುದಿಲ್ಲ..? ಅಬುಲ್ ಕಲಾಂ ಆಜ್ಹಾದ್ ರವರಂತಹ ವೀರ ಹೋರಾಟಗಾರರ ಹೆಸರು ಯಾಕೆ ದೇಶದಲ್ಲಿ ಕೇಳಿ ಬರುತ್ತಿಲ್ಲ..? ಎಲ್ಲವನ್ನು ಧರ್ಮವೆಂಬ ವಿಷಸರ್ಪ ನುಂಗಿಬಿಟ್ಟಿದೆ. ಇದೇ ಸರ್ಪದಿಂದ ದೇಶದ ಯಾ ಜಗದ ಅಧಃಪತನ ನಡೆಯಲಿದೆ. ಅದಕ್ಕೂ ಮುನ್ನ ತಿರುಚಲ್ಪಟ್ಟ ಇತಿಹಾಸ ಮತ್ತೊಮ್ಮೆ ತಿರುವಿ ಸರಿಪಡಿಸಬೇಕು. ಇತಿಹಾಸವು ಇತಿಹಾಸದಂತೆಯೇ ಇರಬೇಕು. ಧರ್ಮ, ಜಾತಿ, ಕಾಲಗಳಿಗೆ ತಕ್ಕಂತೆ ತಿರುವಿ ಬರೆಯಲು ಇರುವುದಲ್ಲ ಇತಿಹಾಸ. ಅಲ್ಲಿಂದ ಒಂದಕ್ಷರವೂ ಅಳಿಸಿ ಹೋಗಕೂಡದು. ಈಗಾಗಲೇ ಸ್ವಾತಂತ್ರ್ಯ ಸೇನಾನಿಗಳ ಪಟ್ಟಿಯಿಂದ ಅಳಿಸಲಾಗಿರುವ ಮುಸ್ಲಿಂ ಹೋರಾಟಗಾರರ ಹೆಸರು ಮತ್ತೆ ಸೇರ್ಪಡೆಗೊಳ್ಳಬೇಕು. ಭಾರತದಲ್ಲಿಂದು ಇತರ ಹೋರಾಟಗಾರರಿಗೆ ಸಿಗುವ ಅದೇ ಗೌರವ, ಪ್ರಾಶಸ್ತ್ಯ ಇವರಿಗೂ ಸಿಗಬೇಕು. ಅಲ್ಲಿಯವರೆಗೆ ನಮ್ಮದೊಂದು ಹೋರಾಟ ಮುಂದುವರಿಯಬೇಕು. ನ್ಯಾಯಕ್ಕಾಗಿ, ನೈಜ ಇತಿಹಾಸಕ್ಕಾಗಿ.. ಯಶಸ್ಸು ಸಾಧಿಸುವ ತನಕವಿರುವ ಹೋರಾಟ.. ಕದಲದೇ ಮುನ್ನುಗ್ಗಬೇಕು.. ಅಂದು ಭಾರತದೊಳಗೆ ನುಸುಳಿದ ಬ್ರಿಟಿಷರನ್ನು ಹೊಡೆದೋಡಿಸಲು ಅಂದಿನ ಭಾರತೀಯರಿಗೆ ಸಾಧ್ಯವಾಗಿದ್ದರೆ, ಇಂದು ಭಾರತದಲ್ಲಿಯೇ ಜನಿಸಿರುವ ದೇಶದ್ರೋಹಿಗಳನ್ನು, ಸೌಹಾರ್ಧವಿರೋಧಿಗಳನ್ನು ಪಲಾಯನಗೊಳಿಸಲು ಇಂದಿರುವ ಭಾರತೀಯ ತರುಣರಿಂದ ಸಾಧ್ಯ..
★ suwichaar.blogspot.in ★
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou