ಒಡಿಸ್ಸಾದಲ್ಲಿ ಕಳಚಿಕೊಂಡ ಮಾನವೀಯತೆ ಮತ್ತು ಪ್ರಧಾನಿಯ ಮೌನ ಪ್ರತಿಕ್ರಿಯೆ..!

ನಾವು ಭಾಷಣ, ಬರಹಗಳಲ್ಲಿ ಕೇಳುತ್ತಾ ಓದುತ್ತಾ ಬಂದಿರುವ ವಿಚಾರಗಳ ಪೈಕಿ ಒಂದಾಗಿದೆ, 'ಭಾರತ ವಿಭಿನ್ನವಾದ ರಾಷ್ಟ್ರ'. ಇತಿಹಾಸದ ಪುಟಗಳನ್ನು ಮೆಲುಕು ಹಾಕುವಾಗ, ಭಾರತದ ಸಂವಿಧಾನದ ಸಂಧಿಯನ್ನು ಸಂಧಿಸುವಾಗ ಭಾರತವು ಜಗತ್ತಿನ ಇತರ ರಾಷ್ಟ್ರಗಳಿಗಿಂತ ಭಿನ್ನವಾಗಿರುವುದಕ್ಕೆ ಒಂದು ಕಾರಣವನ್ನು ತಿಳಿಸುವಾಗ, ಪ್ರಸ್ತುತ ದೇಶೀಯ ಚಟುವಟಿಕೆಗಳನ್ನು ಗಣನೆಗೆ ತೆಗೆದುಕೊಂಡಾಗ ಮುಂದೆ ಕಾಣಲ್ಪಡುವ ವಿಚಾರಗಳೇ ಬೇರೆ. ವಾಸ್ತವತೆಯನ್ನು ಅರ್ಥ ಮಾಡಿಕೊಂಡಾಗ ನಿಜಕ್ಕೂ ಪ್ರಸ್ತುತ ಭಾರತ ವಿಶ್ವದ ಇತರೆ ದೇಶಗಳಿಗಿಂತ, ಸಂಸ್ಥಾನಗಳಿಗಿಂತ ಭಿನ್ನಗೊಂಡಿದೆ. 'ವಿವಿಧತೆಯಲ್ಲಿ ಏಕತೆ' ಎಂಬ ಧರ್ಮವಾಕ್ಯವನ್ನು ಭಾರತ ಹೊಂದಿದ್ದಾದರೂ, ಇಂದು ಆ ಪದದ ಮೌಲ್ಯವು ಭಾರತೀಯರಾದ ನಮ್ಮ ಕಸರತ್ತಿನಿಂದಲೇ ಕಳಚಿಕೊಂಡಿದೆ. ಇಂದು ಭಾರತದೊಳಗೆ ಏಕತೆಯು ಕಾಣುವುದು ಕೊಂಚ ಕ್ಲಿಷ್ಟಕರವಾಗಿದೆ. ಜಾತ್ಯಾತೀತ ರಾಷ್ಟ್ರ ಎಂಬ ಪದವಿ ಭಾರತದ ಕೊರಳಿಗಿಟ್ಟಿದ್ದರೂ, ಭಾರತ ಇಂದು ಜಾತ್ಯಾಧಾರಿತ ರಾಷ್ಟ್ರ ಎಂಬ ನಾಮದಡಿ ಬಿಂಬಿಸಲ್ಪಡುತ್ತಿದೆ.

ಭಾರತದೊಳಗೆ ಹಿಂದೆ ಇದ್ದಂತಹ ಎಲ್ಲವೂ ನಾಶವಾಗಿದೆ. ೭೦ ವರ್ಷಗಳ ಹಿಂದೆ ಬ್ರಿಟಿಷರು ಭಾರತಕ್ಕೆ ದಾಳಿಯಿಟ್ಟು, ಇಲ್ಲಿನ ಸಂಪತ್ತನ್ನೆಲ್ಲಾ ಕೊಳ್ಳೆ ಹೊಡೆದರಾದರೂ, ಭಾರತಕ್ಕಿದ್ದಂತಹ ಮೌಲ್ಯಯುತ ಸಂಪತ್ತುಗಳಾದ ಸ್ನೇಹಭಾವ, ಸೌಹಾರ್ಧ, ಮಾನವೀಯತೆ ಇವೆಲ್ಲವುಗಳು ನಮ್ಮೊಳಗಿನ ಸಂಘರ್ಷದಿಂದಾಗಿ ಕರಗಿಹೋಯಿತು. ೧೯೪೭ರಲ್ಲಿ ಭಾರತ ಸ್ವತಂತ್ರಗೊಂಡರೂ ಭಾರತೀಯರು ಇಂದಿಗೂ ಸ್ವತಂತ್ರಗೊಂಡಿಲ್ಲ; ಭಾರತದ ಸ್ನೇಹ ಇಲ್ಲಿನ ಪ್ರಜೆಗಳಿಗೆ ದೊರೆತಿಲ್ಲ ಎಂಬುವುದಕ್ಕೆ ಈ ವಾರಾಂತ್ಯಕ್ಕೆ ಇಡೀ ಜಗತ್ತಿನ ಮನಕಲಕಿದ ಒಡಿಸ್ಸಾ ಘಟನೆಯೇ ಸಾಕ್ಷಿ. ಸತ್ತ ತನ್ನ ಹೆಂಡತಿಯ ಶವವನ್ನು ಸುಮಾರು ಹತ್ತು-ಹನ್ನೆರಡು ಕಿಲೋಮೀಟರ್ ವರೆಗೆ ಹೊತ್ತು ನಡೆದ ಆ ಪುಣ್ಯಪುರುಷನ ಅಧೋಸ್ಥಿತಿಯನ್ನು ಭಾರತವನ್ನಾಳುವ ರಾಜಪುರೋಹಿತ(?)ರಿಗೆ ಕಾಣಲಾಗಲಿಲ್ಲ ಎಂಬುವುದೇ ಭಾರತದ ದುರಂತ..! 'ಭಾರತ ನರಕವಾಗಿದೆ' ಎಂದು ನುಡಿದ ಕಾರಣಕ್ಕಾಗಿ ಒಬ್ಬಳು ಭಾರತೀಯ ಪ್ರಜೆಗೆ ದೇಶದ್ರೋಹಿ ಪಟ್ಟ ಕಟ್ಟುವುದಾದರೆ, ಈ ಒಡಿಸ್ಸಾದ ನರಕಯಾತನೆಗೆ ಭಾರತ ಏನು ಮರುಉತ್ತರ ನೀಡುತ್ತದೆ. ನಟಿ ರಮ್ಯಾಳ ಕಾರಿನ ಮೇಲೆ ಮೊಟ್ಟೆ ಎಸೆದಾಯಿತು. ಅವಳನ್ನು ಪಾಕಿಸ್ತಾನಕ್ಕೆ ತೆರಳುವಂತೆ ಆದೇಶ(?) ನೀಡಿಯೂ ಆಯಿತು. ಆಕೆ ದೇಶದ್ರೋಹಿಯಾಗಿಯೂ ಬಿಂಬನೆಯಾಯಿತು. ಹಾಗಾದರೆ, ಈ ಪಾಕಿಸ್ತಾನ ಎಂಬುವುದೇನು ಭಾರತದ ದೇಶದ್ರೋಹಿಗಳಿಗಾಗಿ ಇರುವ ಒಂದು ತಾಣವೇ..? ದೇಶದ ಪ್ರಸ್ತುತ ಸ್ಥಿತಿಯನ್ನು ಜನರ ಮುಂದೆ ಬಿಚ್ಚಿಡುವವರೆಲ್ಲರೂ ದೇಶದ್ರೋಹಿಗಳಾಗುತ್ತಿದ್ದಾರೆ. 'ಭಾರತವು ನರಕದಂತಿದೆ' ಎಂದು ಹೇಳಿದಾಗಲೇ ಸಿಡಿದೇಳುವ ಬುದ್ಧಿವಂತರಿಗೆ ಕುಳಿತಲ್ಲಿಂದಲೇ ಒಂದು ನಿಮಿಷ ಭಾರತವನ್ನು ಸುತ್ತಿದ್ದರೆ, ನಿಜ ಸ್ಥಿತಿ ಅರ್ಥವಾಗುತ್ತಿತ್ತೇನೋ..

ನಿಜಕ್ಕೂ ಮೊನ್ನೆಯ ಆ ಘಟನೆ ಇಡೀ ಜಗತ್ತಿನ ಹೃದಯವನ್ನು ಮಿಡಿದಿದೆ. ಭಾರತದ ಪ್ರಧಾನಿಯನ್ನು ಹೊರತು. ಹೌದೆಂದರೆ ತಪ್ಪಲ್ಲ. ಆರ್ಥಿಕವಾಗಿ ಬಲಹೀನನಾದ ಆತ ತನ್ನ ಹೆಂಡತಿಯ ಶವಸಾಗಾಟಕ್ಕೆ ಅಸಹಾಯಕನಾದ ದುಸ್ಥಿತಿಯಲ್ಲಿ ಆತ ಹಿಂದೆ ಮುಂದೆ ನೋಡದೆ ತನ್ನ ಮಡಿದ ಮಡದಿಯ ಪಾರ್ಥಿವ ಶರೀರವನ್ನು ಬಟ್ಟಯೊಳಗೆ ಸುತ್ತಿಟ್ಟು, ಹೆಗಲಿನಲ್ಲಿ ಹೊತ್ತು ಹನ್ನೆರಡು ಕಿಲೋಮೀಟರ್ ದೂರ ನಡೆದು ಹೋಗುತ್ತಾನೆಂದರೆ, ಭಾರತ ಸ್ವರ್ಗವಾದ ಕಾರಣದಿಂದಲಾ? ಸತ್ಯದಲ್ಲಿ ಒಡಿಸ್ಸಾದ ಜನರ ಹೃದಯ ಕಲ್ಲಾಗಿದೆಯೇನೋ? ಆತ ಅಷ್ಟು ದೂರ ಹೆಣ ಹೊತ್ತು ಸಾಗುವಾಗ ಯಾವೊಬ್ಬ ಹೃದಯವಂತನೂ ಆತನಿಗೆ ಹೆಗಲಾಗಲಿಲ್ಲ. ಎಲ್ಲರೂ ನಿಬ್ಬೆರಗಿನಿಂದ ನೋಡುತ್ತಿದ್ದರಷ್ಟೇ.. ಕೆಲವರು ಚಿತ್ರಗಳನ್ನು ಸೆರೆಹಿಡಿಯುತ್ತಿದ್ದವರು.. ಮನಸ್ಸು ಒಂದಲ್ಪ ಮೃದುಗೊಂಡಿದ್ದರೆ ಆತ ಅಷ್ಟೊಂದು ಸಂಕಷ್ಟಪಡಬೇಕಾದ ಅಗತ್ಯ ಕಂಡುಬರುತ್ತಿರಲಿಲ್ಲ. ಅ್ಯಂಬುಲೆನ್ಸ್ ಸೌಲಭ್ಯವು ಸತ್ತು ಬದುಕಿದವರಿಗೆ ಮಾತ್ರವಾ..? ಅಗತ್ಯ ಕಂಡುಬಂದಾಗ, ತುರ್ತು ಅಗತ್ಯಗಳಿಗೆ ಸೌಲಭ್ಯಗೊಳ್ಳದ ಸೌಲಭ್ಯ ಪರಿಕರಗಳು ಇದ್ದರೆಷ್ಟು, ಬಿಟ್ಟರೆಷ್ಟು..?

ನಮ್ಮ ಈ ಭರತ ಖಂಡದ ಚರ್ಕವರ್ತಿಯವರು ತಮ್ಮದೇ ಲೋಕದೊಳಗೆ ಸುಳಿದಾಡುತ್ತಿದ್ದಾರೆ. ಹೊರ ಪ್ರಪಂಚದ ಪರಿವೆಯೇ ಇಲ್ಲದಂತೆ..! ಒಡಿಸ್ಸಾ ಘಟನೆಯು ಅತ್ತ ಅರಬ್ಬೀ ಸಮುದ್ರ ದಾಟಿರುವ ಬಹರೈನ್ ನ ನಿಷ್ಠಾವಂತ ದೊರೆಯ ಹೃದಯವನ್ನೂ ಕುಲುಕಿದೆ. ತನ್ನದಲ್ಲದ ರಾಷ್ಟ್ರದ, ತನ್ಮವರಲ್ಲದ ಅವರಿಗೆ ಸಮಾಧಾನದ ಸನ್ನುಡಿಯೊಂದಿಗೆ, ಒಂದು ಮೊತ್ತವನ್ನೂ ಪರಿಹಾರವಾಗಿ ನೀಡುವಲ್ಲಿ ಮನಸ್ಸು ಮಾಡಿದ್ದಾರಂತೆ.. ನಿಜವಾಗಿಯೂ ಅವರಿಗದರ ಅಗತ್ಯವಿಲ್ಲ. ಭಾರತಕ್ಕೆ ತನ್ನದೇ ಆದ ಪ್ರಧಾನಿಗಳಿದ್ದಾರೆ, ತನ್ನದೇ ಆದ ಆದಾಯವೂ ಇದೆ. ಹಾಗಿರುವಾಗ ಹೊರದೇಶ ಯಾಕೆ ನಮ್ಮೊಳಗಿನವರಿಗೆ ಪರಿಹಾರ ನೀಡಬೇಕು..? ಮನಸ್ಸಿನೊಳಗಿಂದ ಮತ್ತೊಬ್ಬನ ಕಷ್ಟದ ಚಿತ್ರಣ ಕಾಣುವಾಗ, ಅದನ್ನು ಅನುಭವಿಸಿರುವಾಗ ನಿಜಕ್ಕೂ ಅಂತಹ ಒಂದು ಸಾಹಸಕ್ಕೆ ಮನಸ್ಸು ತಯ್ಯಾರಾಗುತ್ತದೆ. ವಿಷಯ ಅದಲ್ಲ, ನಮ್ಮೊಲವಿನ ಪ್ರಧಾನಿಗಳು ಈಗೆಲ್ಲಿದ್ದಾರೆ? ಈ ದುರಂತದ ಕುರಿತು ಅಭಿಪ್ರಯಿಸಿದ್ದೇನು.? ಹಿಂದೆ ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಅವರನ್ನು 'ಮೌನಮೋಹನ ಸಿಂಗ್' ಎಂದು ಅವಹೇಳಿಸಿದವರು ಇಂದು ಎಲ್ಲಿದ್ದಾರೆ..? ನಿದ್ರೆಯಿಂದ ಇನ್ನೂ ಎಚ್ಚೆತ್ತಿಲ್ವಾ..? ಮೋದೀಜಿಯನ್ನು ಈಗ ಏನಂತ ಕರೀಬೇಕು..? ಅವರು ಮಾಡಿದ್ರೆ ತಪ್ಪು, ನಾವು ಮಾಡಿದ್ರೆ ಸರಿ. ಎಲ್ಲವೂ ನಮ್ಮದೇ ಮಾಪನ. ಮತ್ತೆ ದೇಶ ಹೇಗೆ ಬೆಳೆಯೋದು..? ಮೋದೀಜಿ ಈಗಲೂ ಯಾವುದೋ ಕಾವೇರಿದ ಚರ್ಚೆಯಲ್ಲಿದ್ದಾರಂತೆ. ಕೇಳಿದರೆ, ದೇಶದ ಏಳಿಗೆಯ ಕುರಿತು ವಿದೇಶದೊಳಗೆ ನಡೆಯುವ ಒಪ್ಪಂದಗಳಂತೆ. ದೇಶದೊಳಗಿನ ಜನರಿಗೇ ಸರ್ಕಾರದ ಜೊತೆಗೆ ಒಪ್ಪಂದ ಇರದೇ ಇರುವಾಗ ವಿದೇಶಗಳ ಜೊತೆ ಒಪ್ಪಂದವೇ..? ಅಧಿಕಾರದ ಮೆಟ್ಟಿಲು ಹತ್ತಿದ ಒಂದೇ ವರ್ಷದಲ್ಲಿ ಭಾರತವನ್ನು ಬದಲಾಯಿಸುತ್ತೇನೆ ಎಂದು ಬೊಬ್ಬಿಟ್ಟ ಮಾನ್ಯ ಪ್ರಧಾನಿಗಳು ಈಗೆಲ್ಲಿದ್ದಾರೆ? ಹೌದು ಭಾರತ ಬದಲಾಗುತ್ತಿದೆ. ಕೊಲೆ, ಹಲ್ಲೆ, ಅತ್ಯಾಚಾರಗಳು ವೃದ್ಧಿಸುತ್ತಲೇ ಇದೆ. ಇದರಿಂದಲೇ ಭಾರತ ಕುಗ್ಗಿಕೊಂಡಿರುವುದು. ಮೊದಲು ಅಧಿಕಾರದ ಕುರ್ಚಿ ಬಲಗೊಂಡಿರಬೇಕು. ಅದೇ ಮುರಿಯುವಲ್ಲಿದ್ದರೆ..?

ಈ ರೀತಿಯ ಗಂಭೀರ ವಿಚಾರವನ್ನು ದೇಶದ ಪ್ರಧಾನಿಯಾಗಿದ್ದುಕೊಂಡು ಅಲ್ಲಗಳೆಯುವಂತಿಲ್ಲ. ಮೌನಮುರಿದು ಮಾತನಾಡಬೇಕು. ಮಾತನ್ನಾಡುವಾಗ ಅದು ಅಸಂಬದ್ಧವೂ ಆಗಿರಬಾರದು. 'ದಲಿತರನ್ನು ಕೊಲ್ಲುವ ಬದಲು, ನನ್ನನ್ನು ಕೊಲ್ಲಿರಿ' ಎಂಬ ಮಾತು ಒಬ್ಬ ಪ್ರಧಾನಿಯಾದವನ ಬಾಯಿಯಿಂದ ಬರಬೇಕಾದುದಲ್ಲ. ಮಾನವೀಯತೆ ಕಳಚಿ ಬಿದ್ದಿರುವ ಈ ಪರಿಶುದ್ಧ ಭಾರತ ನಿಜಕ್ಕೂ ನರಕಯಾತನೆಯನ್ನು ಅನುಭವಿಸುತ್ತಲಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೂ, ದೇಶ ಅನಾಚಾರಗಳ, ಅನೈತಿಕತೆಯ ಬೀಡಾಗಿಯೂ ಬದಲಾವುಗೊಳ್ಳುತ್ತಿದೆ. ವಿದೇಶ ಟೂರ್ ಪ್ಯಾಕೇಜ್ ಗಳಲ್ಲೇ ಕಾಲಹರಣ ಮಾಡುತ್ತಿರುವ ಪ್ರಧಾನಿವರ್ಯರು ದೇಶವನ್ನು ಒಂದು ಸಾರಿ ಕಣ್ಣು ಬಿಟ್ಟು ನೋಡಿ ಪ್ರಸಕ್ತ ವಸ್ತುತೆಯನ್ನು ಅರ್ಥೈಸಿಕೊಂಡು, ಪರಿಹಾರಕ್ಕೆ ಯೋಚನಾಮಾರ್ಗ ಒದಗಿಸಿಕೊಡಬೇಕಿದೆ. ಆ ಮೂಲಕ ದೇಶ ಪ್ರಗತಿಯ ಪಥದಲ್ಲಿ ಸಂಚರಿಸಬೇಕಿದೆ. ಅದಕ್ಕಾಗಿ ಪ್ರತೊಯೊಬ್ಬ ಭಾರತೀಯನೂ ತನ್ನೊಳಗೇ ಸ್ನೇಹಭಾವ, ಸೌಹಾರ್ಧ ಸಂದೇಶ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅದರೊಂದಿಗೇ, ಅದಕ್ಕೂ ಮೊದಲು ಅಧಿಕಾರದ ಚುಕ್ಕಾಣಿ ಹಿಡಿದಿರುವ ಮಹಾನುಭಾವರು ಎಚ್ಚರಗೊಳ್ಳಬೇಕಿದೆ. ಆ ಮೂಲಕ ದೇಶವನ್ನು ಉದ್ಧಾರಗೊಳಿಸುಲ್ಲಿ ಪ್ರಯತ್ನಿಸಬೇಕಿದೆ..

★ http://suwichaar.blogspot.in

#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!