ಅನಾಚಾರಗಳ ಗೋಪುರ; ಮದುವೆ ಮನೆಯ ಚಪ್ಪರ..

ಒಂಟಿ ಜೀವನಕ್ಕೆ ಬರೆಯೆಳೆದು ಅರಸಿ ಬಂದ ಸಂಗಾತಿಯೊಂದಿಗೆ ಜಂಟಿ ಬದುಕನ್ನಾರಂಭಿಸುವ ಪರಿಯನ್ನು ಸರಳವಾಗಿ 'ವಿವಾಹ' ಅನ್ನಬಹುದು. ಮದುವೆ ಎಂಬುದು   ಪ್ರತಿಯೊಬ್ಬಳ/ನ ಜೀವನದ ಅತ್ಯಂತ ಸುಮಧುರ ಹಾಗೂ ರೋಚಕ ಕ್ಷಣ. ಕನಸುಗಳೆಂಬ ದೋಣಿಯಲ್ಲಿ ಸಾಗುತ್ತಾ ಮುನ್ನಡೆಯಬೇಕಾದರೆ, ಕೆಲವೊಂದು ದೋಣಿ ನನಸೆಂಬ ದಡ ಸೇರುವುದು ಹಾಗೂ ಇನ್ನು ಕೆಲವು ಸಮುದ್ರ(ಜೀವನ)ದ ಮಧ್ಯೆಯೇ ಮುಳುಗಿ ಹೋಗುವುದು, ಇವು ದಾಂಪತ್ಯ ಜೀವನದ ಅಸುಲಭ ನಿಮಿಷಗಳು. ಮದುವೆಗೆ ಮೊದಲು ನಮ್ಮ ನಡತೆಗಳಲ್ಲಿ ಕಂಡು ಬರುವ ಕಳಂಕಗಳು ಮದುವೆಯ ಬಳಿಜ ಕಾಣಲು ಅಪರೂಪ. ಯಾಕಂದರೆ, ಮದುವೆ ನಡೆದಾಗಲೇ ನಮಗೊಂದು ಜವಾಬ್ದಾರಿಯ ಅಧಿಕಾರ ಬಂದು ಸಿಗುತ್ತದೆ. ಒಲಿದು ಬಂದ ಭಾಗ್ಯವತಿಗೆ ಪುಣ್ಯಾತ್ಮ(ಗಂಡ)ನಾಗಿ, ದಾಂಪತ್ಯ ಜೀವನದ ಸುಖ ಸನ್ನಿವೇಶಗಳಿಂದಾಗಿ, ಮಗು ಎಂಬ ವರವು ಕೈಗೆಟುಕಿದರೆ ಬಳಿಕ ತಂದೆಯಾಗಿ, ಮತ್ತೆ ಅಜ್ಜನಾಗಿ ಹೀವೆ ಪ್ರತಿಯೊಂದು ಘಟ್ಟಗಳಲ್ಲೂ ಒಂದು ಕರ್ತವ್ಯ ನಿಷ್ಠೆಯಿಂದ ಬದುಕಲೇಬೇಕು. ಸಂಗಾತಿಯೊಂದಿಗಿನ ಸುಖ ಜೀವನವು ಇಸ್ಲಾಮಿನಲ್ಲೂ ಇತರೆ ಧರ್ಮಗಳಲ್ಲೂ ಸ್ವೀಕಾರಾರ್ಹವೇ ಸೈ. ಬದುಕು ಬೇಡಿ ಬಂದ ಜೊತೆಗಾರ್ತಿಯನ್ನು ತನ್ನೊಡನೆಯೇ ಜೊತೆಯಿರಿಸಿಕೊಂಡು, ಅವಳ ಕಷ್ಟ-ಸುಖಗಳೊಡನೆ ಬೆರೆತು, ಅವಳ ಸಂತೋಷಕ್ಕೆ ಕಾರಣಕರ್ತೃ ಆಗಬೇಕೆಂಬುದನ್ನೂ ಇಸ್ಲಾಂ ಕಲ್ಪಿಸುತ್ತದೆ. ಅದರೊಡನೆಯೇ ಇಸ್ಲಾಂ ಸರಳವಾಗಿರುವ ಹಾಗೂ ದೀನೀ ಚೌಕಟ್ಟಿನೊಳಗಿನ ಮದುವೆಯನ್ನೇ ಸ್ವೀಕರಿಸುತ್ತದೆ, ಪ್ರೋತ್ಸಾಹಿಸುತ್ತದೆ.

ಕಷ್ಟ-ನಷ್ಟಗಳ ನಡುವೆಯೂ ಸಲೀಸಾಗಿ ಮದುವೆಗಳು ನಡೆಯುತ್ತಿರಲು ಕೆಲವೊಂದು ಅನಾಚರಗಳು ಮದುವೆಯ ಪ್ರಾಶಸ್ತ್ಯಕ್ಕೆ ಅಡ್ಡಬೇಲಿಯಿಟ್ಟುಕೊಂಡಿದೆ. ಆಧುನಿಕ ಕಂಪ್ಯೂಟರ್ ಯುಗವೆಂದು ಕರೆಯಲಾಗುವ ಈ ಇಪ್ಪತ್ತೊಂದರ ಶತಕಾಲದಲ್ಲಿ, ಪಾಶ್ಚಾತ್ಯ ಸಂಸ್ಕೃತಿಗಳಿಗೆ ಜಗತ್ತಿಡೀ ಒಗ್ಗಿಕೊಂಡಿರುವ ಹಿನ್ನೆಲೆಯಲ್ಲಿ 'ವಿವಾಹ' ಪುಣ್ಯ ಕಾರ್ಯವು ಇಂದು ವಿದೇಶೀ ಕರ್ಮಶೈಲಿಗಳಿಂದ ಕಲುಷಿತಗೊಂಡಿದೆ. ಮದುವೆಯು ಜೀವನದ ಮುಖ್ಯಹಾದಿಯಲ್ಲಿನ ಮಹಾ ತಿರುವು ಆಗಿರುವ ಕಾರಣ, ಆ ತಿರುವಿನಲ್ಲಿ ಇನ್ನೊಂದು ತಿರುವು ನಡೆಯಕೂಡದು. ದಾರಿ ಕ್ರಮಿಸುವ ಮುನ್ನವೇ ತಪ್ಪಿದರೆ, ಮತ್ತೆ ನಮ್ಮ ಜೀವನದ ಪಯಣವಿಡೀ ತಪ್ಪನ್ನೇ ಕೇಂದ್ರೀಕರಿಸಿರುತ್ತದೆ ಅಂದರೂ ತಪ್ಪಲ್ಲ. ಮದುವೆ ಸರಳವಾಗಿರಬೇಕು. ಇಸ್ಲಾಂ ಸರಳವಲ್ಲದ ವಿವಾಹವನ್ನು ಪ್ರೋತ್ಸಾಹಿಸುವುದಿಲ್ಲ. ಸರಳ ಹಾಗೂ ಅಚ್ಚುಕಟ್ಟಾದ ಮದುವೆಯು ದಾಂಪತ್ಯ ಜೀವನವನ್ನು ಸೋರಿಕೆಯಾಗದಂತೇ ತಡೆದು ಹಿಡಿಯುತ್ತದೆ ಎಂಬುವುದೂ ಸುಳ್ಳಲ್ಲ.

ಮದುವೆ ಮಂಟಪಕ್ಕೆ ಲಗ್ಗೆಯಿಟ್ಟಿರುವ ಪಿಶಾಚಿಗಳ ಪೈಕಿ ವರದಕ್ಷಿಣೆ ಎಂಬ ಮಾರಿ ದೇವತೆಯೂ ಒಂದು. ವಿರೋಧ, ಆಕ್ಷೇಪಗಳ ನಡುವೆಯೂ ಸರಾಗವಾಗಿ ಶತಮಾನಗಳಿಂದೀಚೆಗೆ ನಡೆದು ಬರುತ್ತಿರುವ ಕ(ಮ)ರ್ಮವಿದು ವರದಕ್ಷಿಣೆ. ಈ ಮಹಾಮಾರಿ ಕಲ್ಯಾಣ ಮಂಟಪಕ್ಕೆ ಯಾವಾಗ ಕಾಲಿಟ್ಟಿತೋ ಅಮನದಿನಿಂದ ಇಂದಿನವರೆಗೆ ವರದಕ್ಷಿಣೆ ಸಂಪ್ರದಾಯದ ಮುಖೇನ ಮದುವಯಾದ ದಂಪತಿಗಳ ದಾಂಪತ್ಯ ಜೀವನದುದ್ದಕ್ಕೂ ಈ ಮಾರಿ ಚುಚ್ಚಿಕೊಳ್ಳುತ್ತಲೇ ಇರುತ್ತದೆ. ಸುಖ, ಸಂತೋಷ, ನೆಮ್ಮದಿ ಎಂಬುವುದು ಅಲ್ಲಿ ಕ್ರಮಿಸುವುದೇ ಇಲ್ಲ. ಈ ವರದಕ್ಷಿಣೆ ಪದ್ಧತಿಯು ಇಂದು ಅದೆಷ್ಟೋ ಬಡ ಹೆಣ್ಣುಮಕ್ಕಳ ಜೀವ(ನ)ದ ಕೊರಳಿಗೆ ಹಗ್ಗ ಬಿಗಿದಿದೆ. ವಯಸ್ಸು ಮೀರಿದರೂ ಮದುವೆಭಾಗ್ಯ ಒಲಿದು ಬರದ, ಬಂದ ಸಂಬಂಧಗಳಿಗೆ ಈ ಧಕ್ಷಿಣೆಯು ತಡೆಯಾಗುವಾಗ, ಬದುಕಿಡೀ ಒಂಟಿಯಾಗಿ ಸಾಗುವುದನ್ನೇ ಸ್ವೀಕಾರ್ಹಗೊಳಿಸಿ, ಮನೆ ಮೂಲೆಯಲ್ಲಿ ಇಂದಿಗೂ ಕಣ್ಣೀರು ಹರಿಸುತ್ತಿರುವ ಎಷ್ಟು ಬಡ ಹೆಣ್ಣು ಮಕ್ಕಳಿಲ್ಲ..? ತನ್ನ ಮಗಳಿಗೆ ಸಂಬಂಧವೊಂದನ್ನು ಕಟ್ಟಿಕೊಡಲು ಪಾಡು ಪಡುವ ಅಪ್ಪ-ಅಮ್ಮಂದಿರೆಷ್ಟಿಲ್ಲ..? ಆದರೆ, ಜನರೆಲ್ಲಾ ಇಂದು ಈ ಮಾರಿಯ ಹಿಂದೆಯೇ ನಡೆದು, ಬಡವರ ಕರುಳಿಗೆ ಕತ್ತಿಯಿಂದ ತಿವಿಯುತ್ತಿದ್ದಾರೆ. ಹಣ-ಚಿನ್ನ ಎಂಬ ಎರಡಕ್ಷರದ ಶೈತಾನನಿಂದಾಗಿ ಇಂದು ಅದೆಷ್ಟೋ ಹೆಣ್ಮಕ್ಕಳ ಬಾಳು ಕತ್ತಲನ್ನೇ ತುಂಬಿಕೊಂಡಿದೆ. ಈ ವರದಕ್ಷಿಣೆಯನ್ನು ಇಸ್ಲಾಂ ಸಂಪೂರ್ಣವಾಗಿ ಖಂಡಿಸಿದರೂ, ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಸಂವಿಧಾನಾತ್ಮಕವಾಗಿ ವಿರೋಧಿಸಲ್ಪಟ್ಟಿದ್ದರೂ, ಇಂದಿಗೂ ಇದು ನಡೆಯುತ್ತಿದೆ ಎಂಬುವುದು ಅಚ್ಚರಿಯೇ ಸರಿ. ತಾನು ಬೆಳೆದ ಬೆಳೆಯನ್ನು ಇನ್ನೊಬ್ಬನಿಗೆ ನೋಡಿಕ್ಕೊಳ್ಳಲು ಬಿಟ್ಟುಕೊಡುವಾಗ, ಪಡೆದುಕೊಳ್ಳುವವನು ಒಂದು ಮೊತ್ತವನ್ನು ಈತನಿಗೆ ನೀಡಬೇಕೇ ಹೊರತು ಬಿಟ್ಟುಕೊಡುವವನೇ ಯಾಕೆ ಹಣ ನೀಡಬೇಕು..? ಅಂದರೆ, ಆ ಬೆಳೆಯಿಂದ ಬರುವ ಫಸಲುಗಳೆಲ್ಲಾ ಪಡೆದುಕೊಂಡ ಭಾಗ್ಯವಂತನಿಗೇ ಹೊರತು ಬಿಟ್ಟುಕೊಟ್ಟವನು ಅದನ್ನು ಬಯಸುವುದಿಲ್ಲ. ಅದೇರೀತಿಯಾಗಿದೆ ಇಂದಿನ ಮದುವೆಗಳೂ.. ಉಳ್ಳವರು ಕೊಟ್ಟು ಮದುವೆ ಮಾಡಿಸುತ್ತಾರೆ. ಆದರೆ ಇಲ್ಲದವರು..? ಮದುವೆ ಎಂಬ ಕನಸನ್ನೇ ಮನಸ್ಸಿನಿಂದ ಕಳಚಿ ಬಿಡುತ್ತಿದ್ದಾರೆ. ಹಾಗಾಗಿ ಇಂದು ಅಸಂಖ್ಯಾತ ಬಡ ಹೆಣ್ಣುಮಕ್ಕಳು ಮದುವೆಭಾಗ್ಯದಿಂದ ವಂಚಿತರಾಗಿದ್ದಾರೆ.

ಮದುವೆ ಮಂಟಪಕ್ಕೆ ಹಲವಾರು ರೀತಿಯ ಅನಾಚಾರಗಳು ಲಗ್ಗೆಯಿಟ್ಟಿದ್ದರೂ, ತಾಳ, ಭಫೆ ಸಿಸ್ಟಂ ಇತ್ಯಾದಿಗಳೂ ಅವುಗಳ ಪೈಕಿ ಒಂದು. ತಾಳ ಎಂಬ ಚಾಳಿಯು ಮದುವೆಯ ಚಪ್ಪರದಡಿಗೆ ಕಾಲಿಟ್ಟಿರುವುದರಿಂದ ಅದರ ಪರಿಣಾಮವಾಗಿ ಇಂದು ಹಲವಾರು ಅಮಾಚಾರಗಳು ಮದುವೆ ದಿನ ನಡೆಯುತ್ತಿದೆ. ತಾಳದ ಹೆಸರಿನಲ್ಲಿ, ತನ್ನ ಔರತ್(ಖಡ್ಡಾಯವಾಗಿ ಮುಚ್ಚಬೇಕಾದ ಅಂಗಾಂಗಗಳು)ನ್ನು ನೂರೈವತ್ತು ಜನರ ಮುಂದೆ ಪ್ರದರ್ಶನಕ್ಕಿಟ್ಟ ಹೆಣ್ಣು ತರುಣೆಯರು ವೇದಿಕೆ ಮೇಲೇರಿ ಕುಣಿಯುವ ಹಾಗೂ ಅದಕ್ಕೆ ಯುವಕರೆಲ್ಲರೂ ಸೇರಿ ಚಪ್ಪಾಳೆ ತಟ್ಟುವುದು ಇಂದು ಹಲವೆಡೆ ಕಾಣಲ್ಪಡುತ್ತಿದೆ. ಅನ್ಯಪುರುಷ/ಸ್ತ್ರೀಯ ಮುಂದೆ ಔರತ್ ಸ್ಥಾನಗಳನ್ನು ತೋರಿಸಬಾರದು ಎಂಬ ಕಟ್ಟಳೆಯು ಇಸ್ಲಾಂ ಧರ್ಮದಲ್ಲಿ ಪ್ರತಿಯೊಬ್ಬ ಗಂಡು-ಹೆಣ್ಣಿಗೂ ಇದ್ದರೂ, ಅದು ಕೇವಲ ಬಾಯಿಮಾತಾಗಿ ಕಂಡಂತಿದೆ. ಇಸ್ಲಾಮಿನ ನಿಯಮಗಳಿಗನುಸಾರವಾಗಿ ಮದುವೆ ಯಾ ಇನ್ನಿತರ ಶುಭಕಾರ್ಯಗಳನ್ನು ನಡೆಸುವವರು ಇಂದು ಅತೀ ವಿರಳ. ಮದುವೆ ಹಾಲ್ ಗಳು ಅಥವಾ ಮದುವೆ ಮನೆಯಲ್ಲಿ ಇಂದು ಪಿಶಾಚಿಗಳದ್ದೇ ಹವಾ. ಅನ್ಯ ಸ್ತ್ರೀ-ಪುರುಷರು ಬೆರೆತು ಅಟ್ಟಾಹಸವಿಡುತ್ತಾ ಮಾತನ್ನಾಡುವ ಒಂದು ಪೈಶಾಚಿಕ ವಾತಾವರಣ ಅಲ್ಲಿ ನಿರ್ಮಾಣವಾಗುತ್ತಿದೆ. 'ವಿವಾಹ' ಎಂಬುದನ್ನು ಒಂದು ಜಾತ್ರೆ ಅಂತ ತಿಳಿದಿದ್ದಾರೆ ಇಂದಿನ ಕಾಲದ ಕೆಲವು ಜನರು. ತಾಳ-ಮೇಳಗಳೊಂದಿಗೆ, ಮದುಮಗ-ಮದುಮಗಳನ್ನು ಇಂದು ಕೋಣೆಯೊಳಗೆ ಕರೆತರಲಾಗುತ್ತಿದೆ. ಹಿಂದೆ ಹೇಳಿಕೊಳ್ಳುತ್ತಿದ್ದ ತಕ್ಬೀರ್ ಧ್ವನಿಗೆ ಪರ್ಯಾಯವಾಗಿ ಇಂದು ಡಿ.ಜೆ ಮ್ಯೂಸಿಕ್ ಹಾಡುಗಳು, ಪೋಪ್ ಹಾಡುಗಳು ಕೇಳಿಸಿಕೊಳ್ಳುತ್ತಿದೆ. ನಿಖಾಹ್ ನಡೆಯುತ್ತಿರಬೇಕಾದರೆ ಅಲ್ಲಾಹುವಿನ ಮಲಕ್ ಗಳು ಅಲ್ಲಿಗೆ ಆಗಮನವಾಗುತ್ತದೆ ಎಂಬ ಕಲ್ಪನೆಯಿದ್ದರೂ ಇಂದು ಅದನ್ನು ಕೈ ಬಿಡಬೇಕಾಗುತ್ತದೆ. ಯಾಕಂದರೆ, ಮಲಕ್ ಗಳ ಆಗಮನದ ಮೊದಲೇ ಅಲ್ಲಿ ಶೈತಾನ್ ಗಳು ಬೀಡು ಬೀರಿರುತ್ತದೆ. ಶೈತಾನ್ ಇರುವ ಜಾಗಕ್ಕೆ ಮಲಕ್ ಗಳು ಪ್ರವೇಶಿಸುವುದಿಲ್ಲ ತಾನೆ..? ಹಾಗಾಗಿಯೇ ಇಂಿನ ಯುಗದಲ್ಲಿ ಮದುವೆ ಮನೆಗಳು ಅನಾಚಾರಗಳ ತವರೂರಾಗಿ ಬದಲಾವುಗೊಳ್ಳುತ್ತಿದೆ. ಮದುವೆಯು ಒಂದು ಪುಣ್ಯದಾಯಕ ಕಾರ್ಯವಾಗಿದ್ದರೂ, ಅದರ ಸುತ್ತ ಹುತ್ತ ಕಟ್ಟಿಕೊಂಡಿರುವುದು ಇಸ್ಲಾಮಿಗೆ ಬೇಡವಾದ ಕರ್ಮಗಳು..!

ಕಾಲ ಅಧೋಗತಿಗೆ ತಲುಪುತ್ತಿದೆ..! ಅಲ್ಲಲ್ಲ.. ಮನುಷ್ಯ ಅಧಃಪತನದತ್ತ ಬರುತ್ತಿದ್ದಾನೆ. ಪ್ರತೀ ಕಾರ್ಯ-ಕೆಲಸಗಳಲ್ಲಿ ಪಾಶ್ಚಾತ್ಯನ್ ಕೊಳೆಯನ್ನು ಮೆತ್ತಿಕೊಂಡಿದ್ದಾನೆ. ಆದುದರಿಂದಲೇ ಇಂದು ಭಾರತಕ್ಕೆ ತನ್ನದೇ ಆದ ಸುಸಂಕೃತಿಯನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಧರ್ಮಗಳಿಗೆ ತಮ್ಮದೇ ಆದ ಧರ್ಮೀಯತೆಯನ್ನು ಕಟ್ಟಿ ಬೆಳೆಸಲಾಗುತ್ತಿಲ್ಲ. ಎಲ್ಲರೂ ಎಲ್ಲವನ್ನು ಮೀರಿ ನಡೆಯುತ್ತಿದ್ದಾರೆ. ಮರಳಿ ಸೇರಲಾಗದ ಪರಿಸ್ಥಿತಿ..! ಶುಭಕಾರ್ಯಗಳಲ್ಲಿ ಅಶುಭತೆಗಳೇ ತುಂಬಿ ತುಳುಕುತ್ತಿದೆ. ಮದುವೆ ಮಂಟಪದ ಇನ್ನೊಂದು ಅಶುಭ ವಿಚಾರ ಅಂದರೆ, 'ಬಫೆ ಸಿಸ್ಟಂ'. ಇದು ನಮ್ಮೊಳಗೆ ಲಗ್ಗೆಯಿಟ್ಟು ಕಾಲಗಳು ಹಲವು ಮಿಂಚಿದೆ. ಈಗ ದಾರ ತುಂಡರಿಸಿದ ಕುದುರೆಯಂತೆ ಅಲಲ್ಲಿ ಓಡಾಡುತ್ತಿದೆ. 'ಅಥಿತಿ ದೇವೋಭವ' ಎಂಬ ಕ್ಪನೆ ಭಾರತೀಯರದ್ದು. ಈ ಭಾವನೆಯಂತೇ ಬದುಕುವವರಿಗೆ ಈ ಸಿಸ್ಟಮ್ ಹಿಡಿಸದು. ಯಾಕೆಂದರೆ, ಅತಿಥಿ ಸತ್ಕಾರ ಮಾಡುವುದೆಂದರೆ, ಮನೆಗೆ ಬಂದ ಅತಿಥಿಯನ್ನು ಪ್ರೀತಿಯಿಂದ ಬರಮಾಡಿಕೊಂಡು, ಕೊನೇಪಕ್ಷ ಒಂದು ಹಿಡಿ ಅನ್ನವಾದರೂ ಪ್ರೀತಿಯೊಂದಿಗೆ ಉನಬಡಿಸಬೇಕು ಎಂಬುದು. ಅದು ಅಪರಿಚಿತ ಅತಿಥಿಯಾದರೂ ಸರಿಯೇ.. ಹಾಗಿದ್ದೂ ಇಂದು ಕೆಲವೊಂದು ಮದುವೆ ಚಪ್ಪರದಲ್ಲಿ ನಡೆಯುತ್ತಿರುವುದೇನು..? ಗಂಭೀರವಾಗಿ ಆಹ್ವಾನ ನೀಡಿ, ಊರ ಮಂದಿಯರೆಲ್ಲರನ್ನೂ ಒಟ್ಟುಗೂಡಿಸಿ, ಬೇಕಿದ್ದರೆ ತೆಗೆದು, ನಿಂತು ತಿನ್ನಿ ಅನ್ನುವುದೇ..?
ಛೆ..! ಎಷ್ಟೊಂದು ನೀಚ ಕಾರ್ಯ..? ಹತ್ತಾರು ವಿಧದ ತಿನಿಸುಗಳನ್ನು ಮಾಡಿಟ್ಟರೂ, ಅದನ್ನು ತಿನ್ನಲು ನಾವು ಬಟ್ಟಲು ಹಿಡಿದು ಸಾಲಾಗಿ ಕಾದು ನಿಲ್ಲಬೇಕಲ್ಲವೇ..? ಇದ್ಯಾವ ಸೀಮೆಯ ಸತ್ಕಾರ..? ಇದು ನಮ್ಮ ಸ್ವಂತದ್ದಲ್ಲ. ಇತರ ನಾಗರೀಕರಿಂದ ನಾವು ಕೆಲವೊಂದು ವಿಚಾರಗಳನ್ನು ಕದಿಯುವಾಗ ಅದರ ಜೊತೆಗೇ ಇದೊಂದೂ ಸೇರ್ಪಡೆಗೊಂಡಿದೆ. ಮೈಗೆ ಮೆತ್ತಿಕೊಂಡಾಗಿದೆ ಕೊಳೆ. ಅದನ್ನು ವಿನಾಶಗೊಳಿಸಲು ನಾವು ಹೃದಯವನ್ನು ತೊಳೆಯಬೇಕು. ಅನಾಚಾರಗಳಿಂದ ಕಲ್ಮಶಗೊಂಡ ಮದುವೆ ಮಂಟಪದಲ್ಲಿಂದು 'ಬರಕತ್' ಎಂಬುದಿಲ್ಲ. ಹಾಗಾಗಿಯೇ ಗೆಳೆಯಾ, ಇಂದು ದಾಂಪತ್ಯ ಜೀವನದಲ್ಲಿ ಸುಖ ಕಾಣುವುದಿಲ್ಲ. ಕೊಡಲು ಬಾಕಿಯಿರುವ ಹಣ-ಚಿನ್ನದ ಹೆಸರಲ್ಲಿ ಗಂಡ-ಹೆಂಡತಿಯರಿಂದ ನಿತ್ಯವೂ ಯುದ್ಧ. ಸರಳವಾಗಿ ವಿವಾಹವಾದ ಬಡ ದಂಪತಿಗಳ ಕಡೆಗೊಮ್ಮೆ ನೋಡಿ.. ಅಲ್ಲಿ ನಿತ್ಯವು ಹಬ್ಬವೇ.. ಹಬ್ಬ.. ಗದ್ದಲಕ್ಕೆ ಅಲ್ಲಿ ಕಾರಣ ಇಲ್ಲ. ಪ್ರೀತಿಯೇ ಎಲ್ಲಾ ಕೊರತೆಗಳನ್ನು ನಾಶವಾಗಿಸುತ್ತದೆ. ಪ್ರೀತಿಯೇ ನಾಶವಾದರೆ, ಕೊರತೆಗಳು ಹುಟ್ಟದಿರದೇ..?

ಮಾನವಾ.. ಇನ್ನಾದರೂ ಒಂದೆರಡು ನಿಮಿಷ ಚಿಂತಿಸು. ಮದುವೆ ಎಂಬುದು ಹಣ ಮಾಡುವ ವ್ಯಾಪಾರ ಅಲ್ಲ. ಮದುವೆಯಲ್ಲಿ ಲಾಭ-ನಷ್ಟಗಳ ಲೆಕ್ಕವಿಲ್ಲ. ಸರಳವಾಗಿಸದ ಮದುವೆ ಬೇಕಿಲ್ಲ. ಆಡಂಭರವನ್ನು ಇಸ್ಲಾಂ ಪ್ರೋತ್ಸಾಹಿಸದ ಹೊರತು ನಾವ್ಯಾಕೆ ಪ್ರೋತ್ಸಾಹಿಸಬೇಕು..? ಖಂಡಿತಾ ಬೇಡ. ನಾವು ನಮಗೆ ನಮ್ಮ ಧರ್ಮ ಹೇಳಿಕೊಟ್ಟ ದಾರಿಯಲ್ಲೇ ಕ್ರಮಿಸೋಣ.. ಆ ಮೂಲಕವೇ ಅಲ್ಲಾಹನೆಡೆಗೆ ತಲುಪೋಣ.. ಮದುವೆ ಸಂದರ್ಭದಲ್ಲಿ ಮಾತ್ರ ಅಲ್ಲ; ಜೀವನದ ಪ್ರತಿಯೊಂದು ಕ್ಷಣ-ಕ್ಷಣಗಳಲ್ಲೂ ನಾವೂ ದೀನೀಭಾವ ಭಯದೊಂದಿಗೆ ಬಾಳೋಣ..

http://suwichaar.blogspot.in

#ಹಕೀಂ ಪದಡ್ಕ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Thankyou

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!