ಪರೀಕ್ಷೆ; ಅದು ಶಿಕ್ಷೆಯಲ್ಲ, ಸವಾಲು..

ಕಾಲವು ಮಿಂಚಿನ ವೇಗದಲ್ಲಿ ಚಲಿಸುತ್ತಿದೆ. ನಿನ್ನೆಗಳು ಗಂಟೆಯ ವೇಗದಲ್ಲಿ ಇತಿಹಾಸವಾಗುತ್ತಿದೆ. ಮೊನ್ನೆಮೊನ್ನೆ ತೆರೆಯಲ್ಪಟ್ಟ ಶಾಲಾ-ಕಾಲೇಜುಗಳು ಮತ್ತೆ ರಜೆಯ ನಿಮಿತ್ತ ಮುಚ್ಚಿಕೊಳ್ಳಲಿದೆ. ಆದರೆ, ಶಾಲೆ-ಕಾಲೇಜುಗಳು ಮುಚ್ಚಲ್ಪಡುವ ಮೊದಲು ವಿದ್ಯಾರ್ಥಿಗಳೆಲ್ಲರೂ ಎದುರಿಸಬೇಕಾದ ಪರೀಕ್ಷೆಯ ಬಗ್ಗೆಯೇ ಈಗ ಎಲ್ಲರಿಗೂ ಚಿಂತೆ.

ಇದೀಗ ಹೆಚ್ಚಿನ ಶಾಲೆಗಳಲ್ಲಿ ಪರೀಕ್ಷೆಗಳಿಗೆ ಕ್ಷಣಗಣನೆ ಆರಂಭವಾದರೆ, ಕೆಲವೆಡೆ ಪರೀಕ್ಷೆಗಳು ಮುಗಿದು ಹೋಗಿವೆ. ನಮ್ಮೆಲ್ಲರ ಭವಿಷ್ಯವನ್ನುರೂಪಿಸುವಂತಹ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಇನ್ನು ಆರಂಭವಾಗಲಿದೆ. ಪರೀಕ್ಷೆ ಹತ್ತಿರವಾದಂತೆ ವಿದ್ಯಾರ್ಥಿಗಳಿಗೆ ಟೆನ್ಷನ್ ಜಾಸ್ತಿ. ಒತ್ತಡಗಳು ಬಹಳ. ಗೊಂದಲಗಳು ಹೆಚ್ಚು ಹೆಚ್ಚು ಉಂಟಾಗುತ್ತದೆ. ಯಾವುದನ್ನು ಕಲಿಯಬೇಕು ಯಾವುದನ್ನು ಬಿಡಬೇಕು ಎಂಬುದರ ಬಗ್ಗೆ ಚಿಂತಿತರಾಗುತ್ತಾರೆ. ಅದರೊಂದಿಗೆ ಮನಸ್ಸು ಚಂಚಲಗೊಳ್ಳುತ್ತದೆ. ಒಟ್ಟಾರೆ ಪರೀಕ್ಷೆ ಎದುರಿಸಲು ಹೊರಟವರು ಕೆಲವು ಕ್ಷಣ ಹುಚ್ಚರಂತೆ ಆಗುತ್ತಿದ್ದಾರೆ.

ಈ ರೀತಿ ಆಗಲು ಕಾರಣವೊಂದೇ. ನಾವು ಪರೀಕ್ಷೆಯನ್ನು 'ಶಿಕ್ಷೆ' ಅಂತ ಭಾವಿಸಿರುವುದು. ಪರೀಕ್ಷೆ ಶಿಕ್ಷೆಯಲ್ಲ. ಅದು ಸವಾಲಾಗಿದೆ. ಸವಾಲನ್ನು ಎದುರಿಸಬಲ್ಲವನು ಮುಂದೆ ಸಾಗುತ್ತಾನೆ. ಎದುರಿಸಲು ಅಸಾಧ್ಯವಾದವನೂ ಮುಂದೆ ಸಾಗುತ್ತಾನೆ, ಆದರೆ ಬೇರೆ ದಾರಿಯಲ್ಲಿ. ಹಾಗಾಗಿ ಪರೀಕ್ಷೆಯನ್ನು ಒಂದು ದೊಡ್ಡ ಶಿಕ್ಷೆಯಂತೆ ಭಾವಿಸಿ, ಮನಸ್ಸಿಗೆ ಒತ್ತಡ ಹೇರಿ ತನ್ನನ್ನು ತಾನೇ ಕುಗ್ಗಿಸಕೂಡದು. ಬದಲಾಗಿ, ಇದು ಸಿಂಪಲ್ ಎಂಬ ಭಾವನೆಯೊಂದಿಗೆ, ಸ್ವಲ್ಪ ಸೀರಿಯಸ್ ಆಗಿ ಪರೀಕ್ಷೆ ಎದುರಿಸಿದರೆ ಆತ ಯಶಸ್ವಿಯಾಗುತ್ತಾನೆ. ಹೊರತು ಪರೀಕ್ಷೆ ಅಂತ ತಲೆ ಹುಣ್ಣಾಗಿಸಿಕೊಂಡವನು ತಲೆ ತುರಿಸುತ್ತಲೇ ಇರುತ್ತಾನಲ್ಲದೇ ಯಶಸ್ಸು ಸಾಧ್ಯವಿಲ್ಲ. ಹಾಗಾಗಿ ನಾವು ಪರೀಕ್ಷೆಯನ್ನು ನಮ್ಮ ದಾರಿಗೆ ಅಡ್ಡವಾಗಿರುವ ಒಂದು ಸಣ್ಣ ತಡೆ ಅಂತ ಭಾವಿಸಬೇಕು. ಆ ತಡೆಯನ್ನು ಒಂದು ಸಣ್ಣ ಪ್ರಯತ್ನದ ಮೂಲಕ ಸರಿಸಿಕೊಳ್ಳಬಹುದು. ಪರೀಕ್ಷೆಯೂ ಅಷ್ಟೇ..

ಜೀವನವೇ ಒಂದು ಪರೀಕ್ಷೆ. ಆದ್ದರಿಂದ ಆ ಜೀವನವೆಂಬ ಪರೀಕ್ಷೆಯಲ್ಲಿ ಎದುರಿಸಬೇಕಾದ ಸಣ್ಣ ಸಣ್ಣ ಪರೀಕ್ಷೆಗಳು ಅದೇನೂ ದೊಡ್ಡ ಪರ್ವತಾರೋಹಣ ಮಾಡುವಷ್ಟು ಕಷ್ಟಕರವೇನಲ್ಲ. ನಾವು ಮೊದಲು ನಮ್ಮ ಮನಸ್ಸನ್ನು ದೃಢವಾಗಿಟ್ಟುಕೊಳ್ಳಬೇಕು. 'ಸಾಧ್ಯವಿಲ್ಲ' ಎಂಬ ಪದವನ್ನು ನಮ್ಮ ದಿನಚರಿಯಿಂದ ಕಿತ್ತೆಸೆಯಬೇಕು. ಆಗ ಎಲ್ಲವೂ ಸಾಧ್ಯವಾಗುತ್ತದೆ. ಅಲ್ಲದೇ 'ಸಾಧ್ಯವಿಲ್ಲ' ಅಂತ ತಲೆಕೆಡಿಸಿಕೊಳ್ಳುತ್ತಾ ಕುಳಿತುಕೊಂಡರೆ ಏನೂ ಸಾಧ್ಯವಾಗದು. ಪರೀಕ್ಷೆ ಸಂದರ್ಭಗಳಲ್ಲಿ ನಿದ್ದೆ, ಊಟ ಬಿಟ್ಟು ಕಲಿಯುವುದು ಬಾರದು. ಎಂದಿನಂತೆಯೇ ಇರಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಊಟವನ್ನೂ ಚೆನ್ನಾಗಿ ಹೊಟ್ಟೆಗೆ ಸೇರಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಗ ನಮ್ಮ ಸವಾಲು ಇನ್ನೂ ಸುಗಮವಾಗುತ್ತದೆ.

ಪರೀಕ್ಷೆ ಸಂದರ್ಭಗಳಲ್ಲಿ ನಾವು ಮಾಡಬೇಕಾದುದು ಇಷ್ಟೇ..
* ಕಲಿಕೆಯನ್ನು ಎಂದಿಗಿಂತ ಸ್ವಲ್ಪ ಹೆಚ್ಚು ನಡೆಸಬೇಕು.
* ಟಿ.ವಿ, ಮೊಬೈಲ್ ಗಳಿಂದ ದೂರ ಇರಬೇಕ.
* ಆಹಾರ, ನೀರು ಚೆನ್ನಾಗಿ ಸೇವಿಸಿ, ಆರೋಗ್ಯ ಕಾಯ್ದುಕೊಳ್ಳಬೇಕು.
* ಎಂದಿನಂತೇ ನಿದ್ರಿಸಬೇಕು.
* ಅಂಕಗಳನ್ನುನಮ್ಮ ಗುರಿಗಿಂತ ಸ್ವಲ್ಪ ಹೆಚ್ಚನ್ನೇ ನಿರೀಕ್ಷಿಸಿರಬೇಕು.
* ಅನಗತ್ಯ ಯಾ ಕೆಟ್ಟವುಗಳಿಂದ ದೂರ ಉಳಿಯಬೇಕು.
* ಆತ್ಮವಿಶ್ವಾಸದೊಂದಿಗೆ ಇರಬೇಕು.
* ಮನಸ್ಸನ್ನು ಗಟ್ಟಿಯಾಗಿಟ್ಟುಕೊಳ್ಳಬೇಕು.
* ಉತ್ತಮ ಗುರಿಯನ್ನೇ ಇಟ್ಟುಕೊಳ್ಳಬೇಕು.
ಈ ರೀತಿಯ ಕೆಲವೊಂದು ಸಲಹೆಗಳನ್ನು ನೀವು ಪಾಲಿಸಿದ್ದಲ್ಲಿ ಗೆಲುವು ನಿಮ್ಮ ಪಾಲಿಗೆ ಖಡ್ಡಾಯವಾಗುತ್ತದೆ.

ಮೇಲೆ ತಿಳಿಸಿದಂತೆ, ನಮಗೆ ಒಂದಿಷ್ಟು ಅಂಕಗಳನ್ನು ಗಳಿಸಬೇಕೆಂಬ ಗುರಿ ಅಥವಾ ಆಸೆ ಇದ್ದರೆ ನಾವು ಅದಕ್ಕಿಂತಲೂ ಒಂದಷ್ಟು ಹೆಚ್ಚನ್ನು ನಿರೀಕ್ಷಿಸಬೇಕು. ಯಾಕಂದರೆ, ಸಾಮಾನ್ಯವಾಗಿ ನನ್ನ ಅನುಭವದಲ್ಲಿ ನನಗೆ ತಿಳಿಯಲ್ಪಟ್ಟಿದ್ದು, ಡಿಸ್ಟಿಂಕ್ಷನ್ ಬಯಸಿದವರು 1st ಕ್ಲಾಸಲ್ಲಿ ಪಾಸಾಗುತ್ತಾರೆ ಹಾಗೇ ಜಸ್ಟ್ ಪಾಸ್ ನಿರೀಕ್ಷಿಸಿದವನು ಫೇಲಾಗಿ ಹೋಗುತ್ತಾನೆ. ಹಾಗಾಗಿ ನಾವು ಹೆಚ್ಚು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬೇಕು.

ಅದೇರೀತಿ,  ಒಂದುವೇಳೆ ನಮ್ಮ ಈ ಪರೀಕ್ಷೆಯಲ್ಲಿ ಉತ್ತೀರ್ಣನಾದರೆ ನಮ್ಮ ಗುರಿ ತಲುಪದೇ ಇತುವುದು ಎಂಬುದಾಗಿದ್ದರೆ, ನಾವು ಅಲ್ಲಿ ಸ್ವಯಂ ಅನುತ್ತೀರ್ಣನಾಗಲು ಪ್ರಯತ್ನಿಸಬೇಕು. ಯಾಕಂದರೆ, ಪರೀಕ್ಷೆ ಇನ್ನಷ್ಟು ಎದುರಿಸಬಹುದು. ಆದರೆ, ಬದುಕು ಒಂದೇ ಇರುವುದು. ಪರೀಕ್ಷೆ ಅನಿವಾರ್ಯವಾಗಿದ್ದು ಪಾಸಾದಲ್ಲಿ ಭವಿಷ್ಯ ಬಯಕೆಂತೆ ರೂಪಿಸಲು ಸಾಧ್ಯವಾಗದೇ ಇರುವ ಪರಿಸ್ಥಿತಿ ನಿರ್ಮಾಣವಾಗುವುದಿದ್ದಲ್ಲಿ ನಾವು ಆಗ ಸೋಲನ್ನು ಬಯಸಬೇಕು. ಪರೀಕ್ಷೆ ಕೇವಲ ಒಂದು ಸವಾಲಷ್ಟೇ. ಬದುಕು ಒಂದು ಮಹಾ ಪರೀಕ್ಷೆ. ಪರೀಕ್ಷೆಯಲ್ಲಿ ಹೇಗೂ ಜಯಿಸಬಹುದು. ಜೀವನವನ್ನು ಜಯಿಸಲು ನಾವು ಸಾಹಸಿಗನಾಗಲೇಬೇಕು..

ಪರೀಕ್ಷೆ ಎದುರಿಸಲು ಸಿದ್ಧವಾಗಿರುವ ಸರ್ವ ವಿದ್ಯಾರ್ಥಿಗಳ ಸಮೂಹಕ್ಕೆ ಶುಭಹಾರೈಕೆಗಳು..

suwichaar.blogspot.in

#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!