ಯುವಕರೇ.. ನೀವು ಮಾದಕ ವ್ಯಸನಿಗಳಾಗುವ ಮೊದಲು..
ಯುವಕರು ನಾಳಿನ ದೇಶದ ಶಕ್ತಿ. ಯುವ ಜನಾಂಗವು ಉತ್ತಮವಾದಲ್ಲಿ ದೇಶ ಹಾಗೂ ಜಗತ್ತು ಉತ್ತಮವಾಗುವುದು. ಭಾರತದ ಭವಿಷ್ಯ ಇಂದಿನ ಯುವ ಸಮೂಹದ ಕೈಯಲ್ಲಿದೆ. ಒಂದು ಸಮಾಜವನ್ನು ಕೆಡುಕಿನಿಂದ ಒಳಿತಿನೆಡೆಗೆ ಕೊಂಡೊಯ್ಯಲೂ, ಒಳಿತಿನಿಂದ ಕೆಡುಕಿನೆಡೆಗೆ ಕೊಂಡೊಯ್ಯಲೂ ಯುವಕನಾದವನಿಗೆ ಸಾಧ್ಯ.ಹಾಗಾಗಿ ಯುವ ಜನಾಂಗವನ್ನು ಭಾರತ ದೇಶ ಗೌರವಿಸುತ್ತದೆ. ಹಾಗೆಯೇ ಪವಿತ್ರ ಇಸ್ಲಾಂ ಧರ್ಮ ಯುವಕರನ್ನು ಒಳಿತನ್ನು ಪ್ರಸ್ತಾಪಿಸಲು ಪ್ರೋತ್ಸಾಹಿಸುತ್ತಿದೆ. ಆದರೆ, ಆಧುನಿಕ ಯುಗವೆಂಬ ನಾಮಾಂಕಿತದಲ್ಲಿ ಗುರುತಿಸಲ್ಪಡುವ ಕಂಪ್ಯೂಟರ್ ಕಾಲದಲ್ಲಿ ಯುವ ಜನತೆ ಆಯ್ದುಕೊಳ್ಳುವ ದಾರಿಯೇ ಬೇರೆ.
ಸಮಾಜವನ್ನು ಮುನ್ನಡೆಸಬೇಕಾಗಿರುವ ಯುವಕರಿಂದು ಅನೈತಿಕತೆಯೆಡೆಗೆ, ಅಸಂಸ್ಕಾರದೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಫ್ಯಾಶನ್ ಲೋಕದ ವಿಸ್ಮಯಗಳಿಗೆ ಮರುಳಾಗಿ, ಪ್ರೀತಿ-ಪ್ರೇಮದಾಟದ ಬಲೆಯೊಳಗೆ ಬಂಧಿಯಾಗಿ, ಮಾದಕ ವಸ್ತುಗಳ ಸೇವನೆಯು ಹವ್ಯಾಸವಾಗಿ ತನ್ನ ಪರಿಶುದ್ಧ ಜೀವನಕ್ಕೆ ತಾನೇ ಬರೆ ಎಳೆಯುತ್ತಿದ್ದಾನೆ. ಅಂಗೈಯಲ್ಲಿ ಜಗತ್ತನ್ನೇ ಕಾಣಬಹುದಾದಂತಹ ಮೊಬೈಲ್ ಲೋಕದಲ್ಲಿ ಮಿಂದು ತನ್ನನ್ನು ತಾನು ಮರೆತು, ಅದರೊಳಗೆ ಚಿತ್ರಿತವಾಗುವ ಪ್ರತಿಯೊಂದನ್ನೂ ಅದೇ ಬದುಕೆಂಬ ಮೂಢ ಭಾವನೆಯಿಂದ ಯುವ ಜನಾಂಗ ಅಶ್ಲೀಲ, ಅನೈತಿಕ, ಅಸಂಸ್ಕಾರಿತ, ಅನಾಚಾರಗಳನ್ನು ಇಷ್ಟಪಡುತ್ತಿದ್ದಾರೆ. ಅದರಲ್ಲೇ ಬದುಕು ನಿರ್ವಹಣೆ ಸಾಧ್ಯ ಎಂದು ನಂಬಿ ಮುಂದೆ ಸಾಗುತ್ತಿದ್ದಾರೆ. ಕೈಯಲ್ಲಿ ವಾಹನವೊಂದರ ಕೀಲಿಕೈ ದೊರೆತಾಕ್ಷಣ ಜಗತ್ತನ್ನೇ ಮರೆಯುವ ಆತ ತನ್ನದೇ ಭಾವನಾ ಲೋಕದಲ್ಲಿ ಸುತ್ತುತ್ತಿರುತ್ತಾನೆ. ಅಪರಿಮಿತ ಫ್ಯಾಶನ್ ಗೆ ಮರುಳಾಗಿ ತನ್ನ ಅಮೂಲ್ಯ ಜೀವನಕ್ಕೆ ಕೊನೆ ಬಿಂದು ಇಡುತ್ತಿದ್ದಾನೆ.
ಯುವ ಸಮೂಹವು ಇಂದು ಎದುರಿಸುತ್ತಿರುವ ಸಮಸ್ಯಾಮಾಲೆಯಲ್ಲಿ ಒಂದು ಮಾದಕ ದ್ರವ್ಯಗಳು. ಸಂತೋಷ ಹಾಗೂ ಬೇಸರವನ್ನು ಒಂದೇ ತಕ್ಕಡಿಯಲ್ಲಿ ಸಮನಾಗಿ ತೂಗಲು ಮಾದಕ ದ್ರವ್ಯಗಳು ನೇರವಾಗುತ್ತಿದೆ. ಹಾಗಾಗಿ ಇಂದಿನ ಯುವ ಜನಾಂಗವು ಅವುಗಳ ಕಡೆಗೆ ವಾಲುತ್ತಿದ್ದಾರೆ. ಚಂಚಲವಾಗಿರುವ ಅಥವಾ ಒತ್ತಡ ತುಂಬಿದ ಮನಸ್ಸನ್ನು ಹತೋಟಿಗೆ ತರಲು ಮಾದಕ ದ್ರವ್ಯಗಳಾದ ಮಧ್ಯಪಾನ, ಗಾಂಜಾ, ಗುಟ್ಕಾ, ಸಿಗರೇಟು, ಪಾನ್ ಪರಾಗ್, ಡ್ರಗ್ಸ್ ಇತ್ಯಾದಿಗಳನ್ನು ಯುವಕರು ಸೇವಿಸುತ್ತಿದ್ದಾರೆ. ಇದರಿಂದ ಸಂಭವಿಸುವ ಅನಾಹುತಗಳ ಬಗ್ಗೆ ಸ್ವ ಅರಿವಿದ್ದೂ ಜನರು ಅದರೆಡೆಗೆ ಕ್ರಮಿಸುತ್ತಿರುವುದು ವಿಪರ್ಯಾಸ.
ಮತ್ತು ಅಥವಾ ಅಮಲು ಬರಿಸುವ ಪದಾರ್ಥಗಳ ಸೇವನೆಯನ್ನು ಇಸ್ಲಾಂ ಸಂಪೂರ್ಣವಾಗಿ ನಿಷೇಧಿಸಿದೆ. ಅದರಲ್ಲೂ ಮದ್ಯಪಾನವು ಮುಸ್ಲಿಮನಾದವನಿಗೆ ಯಾ ಸತ್ಯವಿಶ್ವಾಸಿಗೆ ಒಂದು ಬಿಂದು ಹೊಟ್ಟೆಗೆ ಸೇರುವುದೂ ಹರಾಮಾಗಿದೆ. ಮದ್ಯಪಾನ ಹರಾಂ ಎಂಬುದನ್ನು ಅರಿಯದ ಮುಸಲ್ಮಾನನಿಲ್ಲ. ಆದರೂ ಅದನ್ನು ಸೇವಿಸಿ ಕ್ಷಣಿಕ ಸುಖ ಅಥವಾ ಕ್ಷಣಿಕ ತೃಪ್ತಿ ಬಯಸುವವರು ಅದೆಷ್ಟೋ ಮಂದಿ ಇದ್ದಾರೆ. ಧೂಮಪಾನ, ಮದ್ಯಪಾನ ಹಾಗೂ ತಂಬಾಕುಯುಕ್ತ ಪದಾರ್ಥಗಳ ಸೇವನೆಯಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳು ಹರಡುವುದೆಂಬ ಸತ್ಯಾಂಶ ಜಗತ್ತೇ ತಿಳಿದಿದ್ದರೂ ಅವುಗಳನ್ನು ಸೇವಿಸುವವರ ಸಂಖ್ಯೆ ವೃದ್ಧಿಯಾಗುವುದಲ್ಲದೇ ಕುಂಠಿತವಾಗಿಲ್ಲ.
ಇಂದು ಮಾದಕ ದ್ರವ್ಯಗಳನ್ನು ಸೇವಿಸುವವರ ಪೈಕಿ 90% ಜನರು ಯುವಕರು. ಅದರಲ್ಲಿ ಕಾಲೇಜು ಕ್ಯಾಂಪಸ್ ಹುಡುಗರೇ ಹೆಚ್ಚಿನವರು. ಯುವತಿಯರೂ ಇಂದು ಯುವಕರಿಗೆ ಹೊರತಾಗಿಲ್ಲ. ಅಮಲು ಪದಾರ್ಥಗಳಿಗೆ ಯುವತಿಯರೂ ಮಾರು ಹೋಗಿದ್ದಾರೆ. ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ, ಇತ್ತೀಚೆಗೆ ಅಂತರಾಷ್ಟ್ರೀಯ ಆಟೋಟ ಸ್ಪರ್ಧೆಗಳಲ್ಲಿ ಮುಂದಾಳುವಾಗುವ ಉದ್ದೇಶದಿಂದ ಡ್ರಗ್ಸ್ ಸೇವನೆಗೈದು, ಸಿಕ್ಕಿಬಿದ್ದು ಆಟದಿಂದ ದೂರ ಎಸೆಯಲ್ಪಟ್ಟ ಯುವಕ-ಯುವತಿಯರ ವಿಚಾರವನ್ನೂ ಮಾಧ್ಯಮ ರಂಗದಲ್ಲಿ ಕಾಣಲ್ಪಟ್ಟಿದೆ. ಅಷ್ಟಕ್ಕೂ ಈ ಮಾದಕ ದ್ರವ್ಯಗಳು ಪರಿಣಾಮಕಾರಿಯಾಗಿದೆ. ಆರೋಗ್ಯದ ಮೇಲೆ ಸದಾ ದುಷ್ಪರಿಣಾಮ ಬೀರುವ ಈ ಅಮಲು ಪದಾರ್ಥಗಳು ಸಾಮಾಜಿಕ ಶುಭ್ರತೆಗೂ ಕಳಂಕವಾಗಿರುತ್ತದೆ. ಮದ್ಯಪಿಸಿ ಅಮಲು ನೆತ್ತಿಗೇರಿದ ಕೆಲವರು ಏರುಧ್ವನಿಯಲ್ಲಿ ಬೊಬ್ಬಿಡುತ್ತಾ, ಅಲ್ಲಲ್ಲಿ ಕುಸಿದು ಬೀಳುತ್ತಾ ಸಾರ್ವಜನಿಕವಾಗಿ ದೂಷಿಸಲ್ಪಡುತ್ತಾರೆ. ಹಾಗೆಯೇ ಬೀಡಿ-ಸಿಗರೇಟುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇದುವ ಮೂಲಕ, ಜೊತೆಗಾರರಿಗೆ ತೊಂದರೆಯ ಜೊತೆಗೆ ಆ ಪ್ರದೇಶದ ವಾಯುವನ್ನು ಕಲ್ಮಶಯುಕ್ತವಾಗಿರಿಸುತ್ತದೆ. ಅದೇರೀತಿ ಪಾನ್ ಪರಾಗ್, ಗುಟ್ಕಾ ಮುಂತಾದ ತಂಬಾಕುಯುಕ್ತ ಪದಾರ್ಥಗಳ ಸೇವನೆಗೈದು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವ ಮೂಲಕ ಸಾರ್ವಜನಿಕ ಅಶುಭ್ರತೆಯನ್ನುಂಟು ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ 'ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಹಾಗೂ ತಪ್ಪಿದವನಿಗೆ 200₹ ದಂಡ ವಿಧಿಸಲಾಗುವುದು' ಎಂಬ ಫಲಕ ಅಲ್ಲಲ್ಲಿ ತೂಗಿಸಲಾಗಿದ್ದರೂ ಧೂಮಪಾನಕ್ಕೆ ಕುತ್ತು ಉಂಟಾಗಿಲ್ಲ. ದಂಡ ವಿಧಿಸುವವರೂ ಇಲ್ಲ. ಅಲ್ಲದೇ ಒಂದೆರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರವು ತಂಬಾಕು ಪದಾರ್ಥಗಳನ್ನು ನಿಷೇಧಿಸಿದರೂ, ಆ ನಿಷೇಧ ನಿಯಮವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ಕಾರ್ಯದಲ್ಲಿ ಕೇರಳ ಸರ್ಕಾರವನ್ನು ಮೆಚ್ಚಲೇಬೇಕು. ಇಂದಿಗೂ ಅಲ್ಲಿ ತಂಬಾಕು ಮಾರಾಟ ನಿಷೇಧವಾಗಿದೆ. ಹಾಗೆಯೇ ಬಹುತೇಕ ಮದ್ಯದಂಗಡಿಗಳೂ ಮುಚ್ಚಿವೆ. ಇದೇ ಪದ್ಧತಿ ಕರ್ನಾಟಕದಲ್ಲೂ ಹಾಗೆಯೇ ದೇಶದ ಪ್ರತೀ ರಾಜ್ಯದಲ್ಲೂ ಜಾರಿಯಾದಲ್ಲಿ ಖಂಡಿತವಾಗಿಯೂ ಅದೆಷ್ಟೋ ಯುವ ಜೀವವನ್ನು ಉಳಿಸಬಹುದು. ಅದೆಷ್ಟೋ ಕುಟುಂಬವನ್ನು.ಸಂತಸಮಯವಾಗಿಸಬಹುದು.
ಇನ್ನೊಂದು ಸುಖೀ ವಿಚಾರವೆಂದರೆ, ನಮ್ಮ ಜಿಲ್ಲೆಯ ಪುತ್ತೂರಿನ ಕೂರ್ನಡ್ಕ ಎಂಬ ಜಮಾಅತ್ ಖತೀಬರ ಮಹತ್ವದ ಸಾಧನೆ. ಕೂರ್ನಡ್ಕ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಎಂಬವರು ಸ್ಥಳೀಯ ಗಾಂಜಾ ವ್ಯಸನಿಗಳನ್ನು ಮನಪರಿವರ್ತನೆಗೊಳಿಸುವ ಮೂಲಕ ಗಾಂಜಾದೊಂದಿಗಿನ ನೆಂಟನ್ನು ಬಿಡಿಸಿಕೊಡುತ್ತಿದ್ದಾರೆ. ಈಗಾಗಲೇ ಅವರು ಸುಮಾರು ಗಾಂಜಾ ವ್ಯಸನಿಗಳನ್ನು ಮನಪರಿವರ್ತನೆಯ ಮೂಲಕ ಸರಿದಾರಿಗೆ ತಂದಿದ್ದಾರೆ. ಇಂತಹ ಮಹತ್ವಪೂರ್ಣ ಮಹಾಕಾರ್ಯವನ್ನು ಪ್ರಶಂಸಿಸುವುದರೊಂದಿಗೆ.ನಾವೂ ಈ ಕಾರ್ಯ ಕೈಗೊಳ್ಳಬೇಕು. ಮಾದಕ ವ್ಯಸನದ ಚಟವನ್ನು ಹೊಂದಿರುವವರು ತಾವೇ ಸ್ವತಃ ಅವುಗಳಿಂದ ಸ್ವತಂತ್ರಗೊಂಡು ಇತರರನ್ನೂ ಮುಕ್ತಿಗೊಳಿಸಿ, ಮೌಲ್ಯಯುತ ಬದುಕಿಗೆ ಇನ್ನಷ್ಟು ಮೌಲ್ಯ ತುಂಬಬೇಕು. ಹಾಗೆಯೇ ಬೇಸರ ಅಥವಾ ದುಃಖವನ್ನು ಇಲ್ಲವಾಗಿಸಲು ಹಾಗೂ ಸಂತಸವನ್ನು ಸಂಭ್ರಮಿಸಲು ಅದೇರೀತಿ ಸಮಯವನ್ನು ಕಳೆಯಲು ನಾವೆಲ್ಲರೂ ನಮ್ಮ ಗೆಳೆಯನಾಗಿ ಪರಿಶುದ್ಧ ಖುರ್ಅನನ್ನು ಆರಿಸಬೇಕು. ಆಗ ನಮ್ಮ ದ್ವಿಲೋಕ ಜೀವನವೂ ಸಂತೃಪ್ತಗೊಳ್ಳುವುದರ ಜೊತೆಗೆ ಪರಲೋಕ ಮೋಕ್ಷವೂ ದೊರಕುತ್ತದೆ. ಅಲ್ಲದೇ ನಾವು ಈ ರೀತಿಯ ಮಾದಕಗ ಸೇವನೆಯಿಂದ ನಮ್ಮನ್ನು ನಾವು ಕೊಲ್ಲುವುದರ ಜೊತೆಗೆ ಅಲ್ಲಾಹನ ಭೀಕರ ಶಿಕ್ಷೆಗೂ ಗುರಿಯಾಗಬೇಕಾದೀತು..
ಅಲ್ಲಾಹನು ನಮ್ಮೆಲ್ಲರನ್ನು ಕಾಪಾಡಲಿ.. ಆಮೀನ್..
♦ suwichaar.blogspot.in ♦
♥ ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou