ಅನಾಚಾರಗಳಿಂದ ಕಲ್ಮಶವಾಯಿತೇ ಮೀಲಾದ್ ಆಚರಣೆ...??
ದಿನಾಂಕ, ಡಿಸೆಂಬರ್ 24ರ ಗುರುವಾರ ದಿನದಂದು ವಿಶ್ವದ ಮೂಲೆ ಮೂಲೆಗಳಲ್ಲಿ ಕಾರುಣ್ಯದ ಕಡಲು, ಲೋಕದ ನೇತಾರ, ಅಂತ್ಯ ಪ್ರವಾದಿ, ಅಲ್ಲಾಹುವಿನ ರಸೂಲ್, ಸ್ವರ್ಗದ ಉದ್ಘಾಟಕ ಅಶ್ರಫುಲ್ ವರಾ ತ್ವಾಹ ರಸೂಲುಲ್ಲಾಹೀ (ಸ.ಅ) ರ 1490 ನೇ ಜನ್ಮದಿನಾಚರಣೆಯು ಅತ್ಯಂತ ಸಂಭ್ರಮ -ಸಡಗರದಿಂದ ನಡೆಯಿತು.. ಮುಹಮ್ಮದ್ ಮುಸ್ತಫಾ (ಸ.ಅ) ರ ಸಂದೇಶ ಜಾಥ, ಸ್ವಲಾತ್ ಮೆರವಣಿಗೆ ಇತ್ಯಾದಿ ಹೆಸರಲ್ಲಿ.ನೆಬಿ(ಸ ಅ)ರ ಮೇಲೆ ಸ್ವಲಾತ್, ಮದ್'ಹ್ ಗಳನ್ನು ಹಾಡುತ್ತಾ, ನೆಬಿ ಕೀರ್ತನೆಗಳನ್ನು ನುಡಿಯುತ್ತಾ ಮೆರವಣಿಗೆ ಜಾಥಾಗಳು ಶಾಂತಿಯುತವಾಗಿ ಹೆಚ್ಚಿನ ಕಡೆಗಳಲ್ಲಿ ಜರಗಿತು. ಮಸೀದಿಯಲ್ಲಿ ಮಂಕೂಸ್ ಮೌಲೂದ್ ಪಾರಾಯಣದೊಂದಿಗೆ ಅಂತ್ಯ ಪ್ರವಾದಿ (ಸ.ಅ)ರನ್ನು ನೆನೆಯುತ್ತಾ, ಅವರ ಹೆಸರಲ್ಲಿ ಚೀರಣಿ ವಿತರಣೆಯೂ ನಡೆದಿತ್ತು. ಮದ್ರಸಾ ಮಕ್ಕಳಲ್ಲಿ ಮೊಳಕೆಯೊಡೆದಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ವೇದಿಕೆ ಸಿದ್ಧಪಡಿಸಿ ಅವಕಾಶ ನೀಡಲಾಗಿತ್ತು. ೧ ರಿಂದ +೨ ವರೆಗಿನ ವಿದ್ಯಾರ್ಥಿಗಳು ಹಾಗೂ ದರ್ಸ್ ವಿದ್ಯಾರ್ಥಿಗಳು ವೈವಿಧ್ಯಮಯ ಶೈಲಿಯಲ್ಲಿ ಪ್ರವಾದಿ (ಸ.ಅ)ರ ಕೀರ್ತನೆಯನ್ನು ಹಾಡುವ ಮೂಲಕ ತನ್ನ ಸಾಧನೆಯ ಕದವನ್ನು ತೆರೆದರು. ಮೀಲಾದ್ ಸಮಾವೇಶಗಳನ್ನು ಸಂಘಟಿಸಿ, ಲೋಕ ಪ್ರವಾದಿ, ಅಂತ್ಯಧೂತ ಮುಹಮ್ಮದ್ ಮುಸ್ತಫಾ (ಸ.ಅ)ರ ಅನಂತಾನಂತ ಪಾವಾಡಗಳ ಬಗ್ಗೆ, ಅಲ್ಲಿನ ಸರಳ ಜೀವನದ ಬಗ್ಗೆ, ಅಲ್ಲಿನ ಬೋಧನೆಯ ಕುರಿತಾಗಿ ಪಂಡಿತ ವಾಗ್ಮಿಗಳು ತಮ್ಮದೇ ಆದ ವಾಕ್ಚಾತುರ್ಯ ಬಳಸಿ ಜನರೆಲ್ಲರಿಗೆ ಮನಮುಟ್ಟುವಂತೆ ಹೇಳಿ, ತಿಳಿಸಿ ಕೊಟ್ಟರು.. ಹೌದು.., ಇದೆಲ್ಲವೂ ಉತ್ತಮವಾದವುಗಳೇ..
ವಾಟ್ಸಾಪ್ ಮುಖಾಂತರ ನನಗೆ ಲಭಿಸಲ್ಪಟ್ಟ ಮೀಲಾದ್ ಸಂಭ್ರಮದ ವಿಡಿಯೋ, ಚಿತ್ರಗಳನ್ನು ಪರಿಶೀಲಿಸುವಾಗ ಆ ಒಂದು ದೃಶ್ಯ ಕಂಡು ನಾನು ಬೆವರಿ ಹೋದೆ. ಮೀಲಾದ್ ಆಚರಣೆಯನ್ನು ಸರಳವಾಗಿ ಆಚರಿಸಿ ಸಂಭ್ರಮಿಸಲು ಹಲವಾರು ದಾರಿಗಳು ನಮ್ಮ ಮುಂದೆ ತೆರೆದಿಡಲ್ಪಟ್ಟಿದ್ದರೂ ಆ ಒಂದು ಕೂಟ ಜನರು ಇಸ್ಲಾಂ ನಿಷಿದ್ಧಗೊಳಿಸಿದ ದಾರಿಯನ್ನು ಯಾಕೆ ಆಯ್ಕೆ ಮಾಡಿಕೊಂಡರು ತಿಳಿಯದು. ಹೆತ್ತ ತಾಯಿಗಿಂತಲೂ, ಬೆಳೆಸಿದ ತಂದೆಗಿಂತಲೂ, ಸಾಂತ್ವನ ನುಡಿಯುವ ಸಹೋದರ-ಸಹೋದರಿಯರಿಗಿಂತಲೂ, ಎಂದೂ ಜೊತೆಗಿರುವ ಗೆಳೆಯರಿಗಿಂತಲೂ, ಬಾಳ ಸಂಗಾತಿಯಾಗಿ ಒಲಿದ ಸಂಗಾತಿಗಿಂತಲೂ ಅಷ್ಟೇ ಯಾಕೆ, ಸ್ವಂತ ಪ್ರಾಣಕ್ಕಿಂತಲೂ ಹೆಚ್ಚಾಗಿ ನಮ್ಮ ಪ್ರವಾದಿ ಮುಹಮ್ಮದ್ (ಸ.ಅ)ರನ್ನು ಪ್ರೀತಿಸಬೇಕೆಂದು ಅಲ್ಲಾಹನು ಸ್ವತಃ ಆಜ್ಞೆ ನೀಡಿರುವಾಗ ಇಸ್ಲಾಂ ಕಲ್ಪಿಸದ ರೀತಿಯಲ್ಲಿ ಸ್ನೇಹ ಪ್ರಕಟನೆ ಮಾಡಿದರೇ ಎಂದು ಮನಸ್ಸು ಕೇಳಿತು. ಅಷ್ಟಕ್ಕೂ ಆ ದೃಶ್ಯದಲ್ಲಿ ಏನಿತ್ತೆಂದರೆ, ಹಸಿರು ಬಂಟ್ಸ್ ಗಳಿಂದ ಕಂಗೊಳಿಸಿರುವ ನಗರವೊಂದರಲ್ಲಿ ಮೀಲಾದ್ ಆಚರಣೆಗಾಗಿ ಜನ ಸಮೂಹವು ಒಟ್ಟು ಸೇರಿದ್ದರು. ಯುವಕರು, ಮಕ್ಕಳು, ವಯಸ್ಕರು ಹಾಗೂ ಕೆಲವು ಉಸ್ತಾದರೂ ಆ ದೃಶ್ಯದೊಳಗಿದ್ದರು. ನೆಬಿ (ಸ.ಅ)ರ ಮದ್'ಹ್ ಹಾಡಿ, ಸ್ವಲಾತ್ ಹೇಳಿ, ಮೌಲೂದ್ ಪಠಿಸಿ ಸಂಭ್ರಮಿಸಬೇಕಾಗಿದ್ದ ಅವರು ಲಕ್ಷಾಂತರ ಹಣ ಖರ್ಚು ಮಾಡಿ ಡಿಜೆ ಸೆಟ್ ಗಳನ್ನು ತಂದಿರಿಸಿ, ನಗರ ಮಧ್ಯದಲ್ಲಿ ಮ್ಯೂಸಿಕ್ ಹಾಕಿ ಕುಣಿಯುತ್ತಿದ್ದರು.
ಇಸ್ಲಾಮಿನಲ್ಲಿ ಹರಾಮ್ ಆಗಿರುವ ವಿಚಾರಗಳ ಪೈಕಿ ಮ್ಯೂಣಿಕ್ ಕೂಡ ಒಂದು. ಮ್ಯೂಸಿಕ್ ಹರಾಂ ಆಗಿದ್ದರೂ ಕೂಡ ಈಗಿನ ನ್ಯೂ ಜನರೇಷನ್ ಜನರು ಮ್ಯೂಸಿಕ್ ಹಿಂದೆಯೇ ಮುಗಿಬಿದ್ದಿದ್ದಾರೆ. ಆದರೆ ನೆಬಿ ದಿನದ ಮೀಲಾದ್ ಸಂಭ್ರಮದಲ್ಲಿ ಡಿಜೆ ಹಾಕಿ ಕುಣಿಯುವುದು ಎಷ್ಟು ಮಾತ್ರ ದೊಡ್ಡ ತಪ್ಪು..? ಯಾವುದೋ ಕೆಲವು ಮತಿಗೆಟ್ಟ ಪಡ್ಡೆ ಹುಡುಗರು ಈ ರೀತಿ ಮಾಡಿರುವುದಾಗಿದ್ದರೆ ಸುಮ್ಮನಿರಬಹುದಿತ್ತು. ಆದರೆ, ಆ ಕುಣಿಯುವ ದೃಶ್ಯದಲ್ಲಿ ಬಿಳಿ ಪಂಚೆ, ಬಿಳಿ ಶರ್ಟ್, ಬಿಳಿ ಮುಂಡಾಸು ಧರಿಸಿದ, ನಮ್ಮ ಭಾಷೆಯಲ್ಲಿ ಮೊಯಿಲಾರ್ ಆಗಿ ಗುರುತಿಸಲ್ಪಡುವವರೂ ಇದ್ದದ್ದು ದುರಂತ.
ಈ ರೀತಿ ಒಂದಲ್ಲ. ಅದೆಷ್ಟೋ ಘಟನೆಗಳು ನಮ್ಮೆಡೆಯಲ್ಲೇ ನಡೆಯುತ್ತಿದೆ. ವಾಹನ ರ್ಯಾಲಿ' ಎಂಬ ಹೆಸರಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಾ, ಪರಿಸರ ಮಾಲಿನ್ಯಕ್ಕೆ ಪ್ರೋತ್ಸಾಹ ನೀಡುತ್ತಾ, ಮಿತಿಮೀರಿದ ವೇಗದಲ್ಲಿ ವಾಹನಗಳನ್ನು ಚಲಾಯಿಸಿ, ಜನರಲ್ಲಿ ನಡುಕ ಹುಟ್ಟಿಸುವ ಅನಿಸ್ಲಾಮಿಕ ಪದ್ಧತಿಯೂ ಮೀಲಾದ್ ದಿನದಂದು ನಡೆದು ಬರುತ್ತಿದೆ. ಶಾಂತಿಯುತವಾದ ಸ್ವಲಾತ್/ಸಂದೇಶ ಮೆರವಣಿಗೆಗೆ ಪೂರ್ಣ ಬೆಂಬಲವಿದೆ. ಆದರೆ, ರಸ್ತೆಗಳನ್ನು ತಡೆದು, ಪ್ರಯಾಣಿಕರಿಗೆ ತೊಂದರೆ ನೀಡಿ ಗಳಿಸುವ ಪ್ರವಾದಿ ಪ್ರೇಮವಾದರೂ ಏನು?
'ರಸ್ತೆಯಲ್ಲಿ ಒಂದು ಕಲ್ಲು ಬಿದ್ದಿದ್ದರೂ ಬದಿಗೆ ಸರಿಸಿ' ಎಂದು ಕಲಿಸುವ ಧರ್ಮವಾಗಿದೆ ಇಸ್ಲಾಂ. ಹಾಗಿರುವಾಗ, ರಸ್ತೆ ಬ್ಲಾಕ್ ಮಾಡಿ ನಡೆಸುವ ಮೆರವಣಿಗೆಗಳು ಮುತ್ತ್ ನೆಬಿ (ಸ.ಅ)ರಿಗೆ ಮೆಚ್ಚುಗೆಯಾದೀತೇ..? ಖಂಡಿತವಾಗಿಯೂ ಇಲ್ಲ.
ಈರೀತಿಯಲ್ಲಿ ನೆಬಿ(ಸ.ಅ) ಮೆಚ್ಚಿಕೊಳ್ಳದ ಅನಾಚಾರಗಳನ್ನು ಎಳೆತಂದು, ಮಿಲಾದ್ ಆಚರಣೆಯ ಹೆಸರಲ್ಲಿ ಪ್ರವಾದಿ ಪ್ರೇಮ ಇದು' ಅನ್ನುವುದರಲ್ಲಿ ಅರ್ಥವೇನಿದೆ? ಪ್ರವಾದಿ (ಸ.ಅ)ರು, ಇಸ್ಲಾಂ ವಿರೋಧಿಸಿರುವ ಕಾರ್ಯಗಳ ಮುಖಾಂತರ ಪ್ರದರ್ಶಿಸಲ್ಟಡುವ ಪ್ರವಾದಿ ಪ್ರೇಮವನ್ನು ಬಯಸುವುದಿಲ್ಲ.
ದಯವಿಟ್ಟು ಇಂತಹ ಅನಿಸ್ಲಾಮಿಕ ಅನಾಚಾರಗಳಿಂದ ಪ್ರತಿ ದಿನವನ್ನೂ ಮುಕ್ತವಾಗಿಸಿರಿ.. ಅಲ್ಲದೇ, ಪ್ರವಾದಿ ಪ್ರೇಮವು ಒಂದೇ ದಿನಕ್ಕೆ ಸೀಮಿತವಾಗದೇ, ದಿನಂಪ್ರತಿ, ಪ್ರತಿ ನಿಮಿಷವೂ ನೆಬಿ (ಸ.ಅ)ರನ್ನು ಪ್ರೀತಿಸೋಣ.. ನೆಬಿ(ಸ.ಅ)ರ ಮೇಲೆ ಸ್ವಲಾತ್, ಮೌಲೂದ್ ಗಳನ್ನು ಪಠಿಸೋಣ.. ಇವುಗಳಿಂದ ಅಲ್ಲಾಹನ ಸ್ವರ್ಗದ ಅಥಿತಿಗಳಾಗೋಣ..
ಅದಕ್ಕೆ ಅಲ್ಲಾಹನು ತೌಫೀಕ್ ನೀಡೋಣ.. ಆಮೀನ್ ಯಾರಬ್ಬಲ್ ಆಲಮೀನ್..
suwichaar.blogspot.in
✍ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou