ಲೋಕ ಪ್ರವಾದಿ(ಸ.ಅ)

ಮಹದಿ ಆಮೀನಾರ ಹೆಮ್ಮೆಯ ಪುತ್ರನಾಗಿ,
ಮಕ್ಕಾ ದೇಶಕ್ಕೇ ರಾಜಕುಮಾರನಾಗಿ,
ಮನುಜ ಕುಲದಲ್ಲೇ ಶ್ರೇಷ್ಠ ಧ್ವನಿಯಾಗಿ
ಮಹಮ್ಮದ್ ನೆಬಿ(ಸ.ಅ)ರು ಜನಿಸಿದರಂದು..

ಮಗುವಾಗಿದ್ದಾಗಿನಿಂದಲೂ ಸತ್ಯವನ್ನು
ಮರೆಮಾಚದೇ ಬಿಚ್ಚಿಟ್ಟು, ಸುಳ್ಳನ್ನು ತ್ಯಜಿಸಿ,
ಮಕ್ಕಾ ನಿವಾಸಿಗಳಿಂದ 'ಅಲ್ ಅಮೀನ್' ಎಂಬ
ಮಹತ್ವದ ಪದವಿಯನ್ನೂ ಪಡೆದವರಿವರು..

ಮನುಜರ ನಡುವಿನ ಭಿನ್ನತೆಗಳನ್ನು,
ಮಹಿಳೆಯರ ಮೇಲಿನ ವದಂತಿಗಳನ್ನು,
ಮಣ್ಣಾಗಿಸಿದ ಸಮಾಜೋದ್ಧಾರಕರಿವರು
ಮಹಮ್ಮದ್ ಮುಸ್ತಫಾ..(ಸ.ಅ)

ಮಹದಿ ಖದೀಜಾ(ರ.ಅ) ರವರನ್ನು
ಮಡದಿಯಾಗಿ ಸ್ವೀಕರಿಸಿ,
ಮದುವೆಯೆಂಬ ಸಂಸ್ಕೃತಿಯನ್ನೂ
ಮನದಟ್ಟು ಮಾಡಿ ಕೊಟ್ಟರಿವರು..

ಮನದೊಳಗಿನ ಕಲ್ಮಶಗಳನ್ನು ತೊಳೆದು,
ಮಹಾ ಜ್ಞಾನಿಯಾಗಿ ಮೆರೆಯಬೇಕೆಂದೂ,
ಮಹಷರಾ ಲೋಕವೊಂದಿದೆಯೆಂದೂ,
ಮನಮುಟ್ಟುವಂತೆ ತಿಳಿಸಿ ಕೊಟ್ಟರು..

ಮನುಜ ಧರ್ಮಗಳಲ್ಲಿ ಇಸ್ಲಾಮೇ ಶ್ರೇಷ್ಠವೆಂದು,
ಮನುಷ್ಯ ಕುಲದೊಡನೆ ಸಾರಿ ತಿಳಿಸಿದರು..
ಮರಣಾ ನಂತರದ ಶಾಶ್ವತ ಲೋಕದಲ್ಲಿ
ಮಹಮ್ಮದ್ ಅನುಯಾಯಿಗಳಿಗೇ ಸ್ವರ್ಗ'ವೆಂದರು.

ಮಕ್ಕಳ ಲಾಲನೆ ಪಾಲನೆಗೆ ಮಹತ್ವ ಕಲ್ಪಿಸಿದ
ಮಹಮ್ಮದ್ ಮುಸ್ತಫಾ(ಸ.ಅ)ರು ಅಂದು
ಮಗು-ಮಕ್ಕಳನ್ನು ಅತ್ಯಂತ ಪ್ರೀತಿಯಿಂದ
ಮಗುವಂತಯೇ ನಡೆದು ಮುದ್ದಿಸಿದರು..

ಮಹತ್ವವೇರಿದ ಧರ್ಮ ಇಸ್ಲಾಮಿನ
ಮಹಾ ಸಂದೇಶವಾಹಕರಾಗಿ,
ಮಹಾನ್ ಪ್ರವಾದಿಯಾಗಿ, ಮುಸ್ಲಿಮರ
ಮನದೊಳಗಿನ ರಾಜಕುಮಾರನಾದರು..

ಮಹಾ ಗ್ರಂಥ ಪರಿಶುದ್ಧ ಕುರ್'ಆನನ್ನು,
ಮಸೀದಿಯ ಪಾವಿತ್ರ್ಯತೆಯ ಅರಿವನ್ನೂ,
ಮತ್ತಿತ್ತರ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನೂ,
ಮನಮೋಹಕವಾಗಿ ವಿವರಿಸಿ ಕೊಟ್ಟವರು..

ಮಕ್ಕಾದ ಪವಿತ್ರ, ಪಾವನವೇರಿದ
ಮಣ್ಣಲ್ಲಿ ಜನುಮತಾಳಿದ ನೆಬಿಯವರು,
ಮದೀನಾದ ಪರಿಶುದ್ಧ ಭೂಮಿಯಲ್ಲಿ
ಮರಣವನ್ನು ಅಪ್ಪಿಕೊಂಡರು..

ಮಗುವಾಟದ ಬಾಲ್ಯ ಜೀವನದಿಂದ
ಮರಣದ ವರೆಗೂ, ಬಳಿಕವೂ, ಇಂದಿಗೂ
ಮಹಾ ಆದರ್ಶ ಪುರುಷರಿವರು
ಮಹಮ್ಮದ್ ಮುಸ್ತಫಾ(ಸ.ಅ)ರು..

ಮಸೀದಿಯಂಗಳಗಳೆಲ್ಲವೂ
ಮದ್'ಹ್ ಗಾನದಿಂದ ತುಂಬಿದೆ..
ಮದರಸಾ ವಿದ್ಯಾರ್ಥಿಗಳ
ಮನಸ್ಸೆಲ್ಲವೂ ಅಲ್ಲೇ ನೆಟ್ಟಿದೆ..

ಮಹಮ್ಮದ್ ನೆಬಿಯವರ ಜನ್ಮದಿನವಿಂದು..
ಮಸ್ಜಿದ್-ಮದರಸಗಳಲ್ಲೂ, ಮುಸಲ್ಮಾನನ
ಮನೆಯಲ್ಲೂ, ಮಾಲೆ-ಮೌಲಿದ್ ಗಳು
ಮನಕಲಕುವಂತೆ ಕೇಳಿಸುತ್ತಿದೆ..

ಮಡಿಲಲ್ಲಿ ಮಲಗಿಸಿ ಪೋಷಿಸಿದ
ಮಹಾತಾಯಿಗಿಂತಲೂ,
ಮನ ನೊಂದಿರುವಾಗ ಸಮಾಧಾನ ಹೇಳಿದ
ಮನದನ್ನನಿಗಿಂತಲೂ ಹೆಚ್ಚಾಗಿ ಪ್ರೀತಿಸೋಣ..

ಮರೆಯದಿರೋಣ ನಾವು..
ಮರಣ ಸಂಭವಿಸುವ ವರೆಗೂ..
ಮದ್'ಹ್ ಹಾಡೋಣ..
ಮಹಮ್ಮದ್(ಸ.ಅ)ರ ಮೇಲೆ..

**************************************

ಸರ್ವ ಮುಸ್ಲಿಂ ಬಾಂಧವರಿಗೆ ಕಾರುಣ್ಯದ ಕಡಲು, ಜ್ಞಾನದ ಧ್ರುವ ತಾರೆ, ಅಂತ್ಯ ಪ್ರವಾದಿ ಮುತ್ತ್ ಮುಹಮ್ಮದ್ ಮುಸ್ತಫಾ (ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ) ರ ಜನ್ಮದಿನಾಚರಣೆಯ ಹಾರ್ದಿಕ ಶುಭಾಶಯಗಳು...

***************************************

✍ಎಲ್.ಹೆಚ್.ಪಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!