ಕಾರ್ಮಿಕನ ಪಾಡು..

ಹಸಿವ ಗೂಡೊಳಗೆ ಬದುಕಿದವನಿಗೆ
ಬಿರುಕುಬಿಟ್ಟ ಪಾದದ ನೋವು
ಅಷ್ಟೇನೂ ಕಠಿಣವಲ್ಲ
ದಿನವಿಡೀ ಹೊರುವ ಭಾರ
ದಿನ ಜಂಜಾಟದ
ಸಮಸ್ಯೆಗಳಷ್ಟು ತೂಕವಿಲ್ಲ

ಸುಡುಬಿಸಿಲಿಗೆ ಸುಕ್ಕುಗಟ್ಟಿದ
ಮುಖದ ಛಾಯೆಗೆ
ಜೋಪಡಿಯೂ ಅಣಕಿಸಿತು
ತುತ್ತು ಅನ್ನದ ಹಂಬಲಕೆ
ದಿನದ ಬೆವರೂ ಬೆವರಿತು

ಹೊಟ್ಟೆಗೆ ಕೈಯಿಟ್ಟು ಕೂಗುವ
ಕರುಳ ಕುಡಿಗಳ ನೋವಿನ ತೀವ್ರತೆ
ಕಟ್ಟು ಹೊತ್ತ ದಣಿವಿಗಿಲ್ಲ
ಸಿಗುವ ಮೂರು ಚಿಕ್ಕಾಸಿನಲಿ
ಕ್ಷಾಮ ಬದುಕಿಗೆ ತಿಲಾಂಜಲಿಯಿಲ್ಲ

ಸುಟ್ಟು ಹೋದ ಜೀವನದಲಿ
ಏಳು ಮಾಳಿಗೆಯ ಕನಸಿಲ್ಲ
ಹಸಿವು ಮಾಸಿದರೆ ಸಾಕು
ಒಳಿತು ಬಯಸುವಾಗ
ವಿಶ್ರಾಂತಿಯ ಬಯಕೆಗೆ
ಮಣ್ಣು ನೆಲವೇ ಧಾರಾಳ

ಉಸಿರು ಸಾಯುವವರೆಗೆ
ಬದುಕು ಬರೆಗಳು ಬೋಜನ
ಉಪವಾಸ ಅಭ್ಯಾಸವಾದವನಿಗೆ
ತುಂಡು ರೊಟ್ಟಿಯೂ ಪಾವನ

-ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!