ಅವಳು ಧ್ವನಿಯೆತ್ತಿದ್ದು ದೇಶಕ್ಕಾಗಿ..
ಜಾಮಿಆ ಮಿಲ್ಲಿಯಾ ಸಂಶೋಧನಾ ವಿದ್ಯಾರ್ಥಿ ಸಫೂರಾ ಸರ್ಗರ್ ತಿಹಾರ್ ಜೈಲಿನ ಕತ್ತಲೆ ಕೋಣೆಯಲ್ಲಿ ಕಾಲಕಳೆಯುತ್ತಿದ್ದಾಳೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸಫೂರಾಳನ್ನು ಯುಎಪಿಎ ಎಂಬ ಕರಾಳ ಕಾನೂನನ್ನು ಹೊರಿಸಿ ಜೈಲಿನಲ್ಲೇ ಕಳೆಯುವಂತೆ ಮಾಡಲಾಗಿದೆ. ನ್ಯಾಯಾಲಯದಲ್ಲಿ ಜಾಮೀನು ಕೋರಿ ಸಲ್ಲಿಸಿದ ಮೂರನೇ ಅರ್ಜಿಯೂ ತಿರಸ್ಕೃತಗೊಂಡಿದ್ದು 'ಜಾಮೀನಿಗೆ ಅರ್ಹಳಲ್ಲ' ಎಂದು ನ್ಯಾಯಾಧೀಶರಾದ ಧರ್ಮೇಂದರ್ ರಾಣಾ ಆದೇಶ ಹೊರಡಿಸಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದಾದ್ಯಂತ ದೇಶಪ್ರೇಮಿ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಅದರ ಭಾಗವಾಗಿ ದೆಹಲಿಯಲ್ಲೂ ಬೃಹತ್ ರೀತಿಯಲ್ಲಿ ಪ್ರತಿಭಟನೆಗಳು ನಡೆದಿದ್ದು, ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳು ನಡೆಸಿದ ಸಮರದಲ್ಲಿ ಸಫೂರಾ ನೇತೃತ್ವ ನೀಡಿದ್ದಳು. ಇದೇ ಕಾರಣಕ್ಕಾಗಿಯೇ ಅವಳನ್ನು ಬಂಧಿಸಿ ಮೊದಲು ಭಾರತೀಯ ಕಾನೂನು ಪ್ರಕಾರ ಆರೋಪ ಹೊರಿಸಿದ್ದ ದಿಲ್ಲಿ ಪೋಲೀಸರು ಆ ಬಳಿಕ ಭಯೋತ್ಪಾದನೆ ವಿರುದ್ಧ ಕಾನೂನು ಯುಎಪಿಎ ಹೊರಿಸಿದ್ದಾರೆ.
ಪೆಬ್ರವರಿ 23 ರಂದು ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದರು ಮತ್ತು ಅದು ಮುಂದೆ ನಡೆದ ದೆಹಲಿ ಹಿಂಸಾಚಾರಕ್ಕೆ ಕಾರಣವಾಯಿತು ಎಂಬುವುದಾಗಿದೆ ದೆಹಲಿ ಪೋಲೀಸರ ವಾದ.
ಸುಳ್ಳು ಆರೋಪ ಹೊರಿಸಿ ಗರ್ಭಿಣಿ ಸ್ತ್ರೀಯೊಬ್ಬಳನ್ನು ಏಕಾಂತ ಜೈಲಲ್ಲಿರಿಸಿ ಹಿಂಸಿಸಲಾಗುತ್ತಿದೆ. ಯಾವುದೇ ಪುರಾವೆಯಿಲ್ಲದೆ ನಕಲಿ ಕೇಸುಗಳನ್ನು ಜಡಿದು ಕರಾಳ ಕಾನೂನಿಗೆ ಹೊರೆಯಾಗಿಸಲಾಗಿದೆ. ದೆಹಲಿ ಗಲಭೆಯ ನೈಜ ಆರೋಪಿಗಳ ಮೇಲೆ ಯಾವುದೇ ಕೇಸ್ ದಾಖಲಿಸದೇ, ಪೌರತ್ವ ಕಾಯ್ದೆಯ ವಿರುದ್ಧ ಧ್ವನಿಯೆತ್ತಿದ ಕಾರಣಕ್ಕೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ದೆಹಲಿ ಪೋಲೀಸರು ಬೇಟೆ ನಡೆಸುತ್ತಿದ್ದಾರೆ.
ದೆಹಲಿ ಗಲಭೆಯ ಸಂದರ್ಭದಲ್ಲಿ ತೀವ್ರ ಭಯೋತ್ಪಾದನೆ, ಕೊಲೆ, ಹಲ್ಲೆಗಳು ಮುಂದುವರಿದಾಗ ಅದನ್ನು ತಡೆಯಲು ನೀಡಿದ್ದ ದೂರನ್ನು ಎಫ್ ಐ ಆರ್ ದಾಖಲಿಸಲು ಪೋಲೀಸರು ನಿರಾಕರಿಸಿದ್ದರು. ದೂರುದಾರ ಮುಸ್ಲಿಮನಾಗಿದ್ದು ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರ ಆಕ್ರಮಣದ ವಿರುದ್ಧ ದೂರು ನೀಡಲು ಪ್ರಯತ್ನಿಸಿದಲ್ಲಿ ಬಂಧಿಸುವುದಾಗಿಯೂ ಬೆದರಿಕೆಯಿತ್ತು. ಸಂಘಪರಿವಾರದ ತಂತ್ರದಿಂದ ಅವತ್ತು ದೆಹಲಿ ಗಲಭೆ ಪೂರ್ವನಿಯೋಜಿತವಾಗಿಯೇ ನಡೆದಿದೆ ಎಂಬುವುದನ್ನು ಗಲಭೆಯಲ್ಲಿ ಉಂಟಾದ ನಾಶ-ನಷ್ಟಗಳೇ ವ್ಯಾಖ್ಯಾನಿಸುತ್ತದೆ.
ಕೊರೋನಾದಿಂದ ತಾಂಡವಾಡುತ್ತಿರುವ ಭಾರತದಲ್ಲಿ, ಸೋಂಕು ತಡೆಗಟ್ಟುವ ಕಾರ್ಯಾಚರಣೆಗಳು ಮುಂದುವರಿಯುತ್ತಿರಬೇಕಾದರೆ, ದೆಹಲಿ ಪೋಲೀಸರು ಈ ಲಾಕ್ ಡೌನ್ ಕಾಲದಲ್ಲೇ ಎಪ್ರಿಲ್ 10ರಂದು ಸಫೂರಾ ಸರ್ಗರ್ ಳನ್ನು ಬಂಧಿಸಿದ್ದರು. ಕೊರೋನಾ ಲಾಜ್ ಡೌನ್ ಕಾರಣವಾಗಿ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಸಮರಗಳಿಗೆ ಅಲ್ಪವಿರಾಮ ನೀಡಲಾಗಿದ್ದು, ಈ ನಿಟ್ಟಿನಲ್ಲೇ ತಕ್ಕ ಸಮಯವನ್ನು ಬಳಸಿಕೊಂಡು ಪೋಲಿಸರು ಅವಳನ್ನು ಬಂಧಿಸಲಾಗಿದೆ. ಕೊರೋನಾ ನಂತರ ದೇಶದ ಯಾವುದೇ ನಾಗರಿಕರು ಪೌರತ್ವ ಕಾಯ್ದೆಯ ವಿರುದ್ಧ ಮತ್ತೊಮ್ಮೆ ದ್ವನಿಯೆತ್ತದಂತೆ ಮಾಡಲು, ಹೋರಾಟಗಾರರಲ್ಲಿ ಭಯವನ್ನು ಸೃಷ್ಟಿಸುವ ಸಲುವಾಗಿ ಸಫೂರಾಳನ್ನು ಗುರಿಯಾಗಿಸಿಕೊಂಡು ಯುಎಪಿಎ ಕಾನೂನು ಜಡಿಯಲಾಗಿದೆ.
ಸಫೂರಾಳ ಬಂಧನದಿಂದ ಒಂದು ಗುಂಪಿನ ಧ್ವನಿ ಅಡಗಿಸುವ ತಂತ್ರ ಹೊಂದಿದೆ. ಇದೇ ದೆಹಲಿಯ ಶಾಹಿನ್ ಬಾಗ್ ನಲ್ಲಿ ಫೆಬ್ರವರಿ 1 ರಂದು ಪ್ರತಿಭಟನಾಕಾರರ ಮೇಲೆ ಪೋಲೀಸರ ಎದುರಲ್ಲೇ ಗುಂಡು ಹಾರಿಸಿದ ದಲ್ಲಾಪುರಾ ನಿವಾಸಿ ಕಪಿಲ್ ಗುಜ್ಜರನ್ನು ಕೋರ್ಟ್ ಜಾಮೀನು ನೀಡಿ ಬಿಡುಗಡೆಗೊಳಿಸಿದೆ. ಈತ 3 ಗುಂಡು ಹಾರಿಸಿದ್ದಲ್ಲದೆ 'ಇಲ್ಲಿ ಹಿಂದೂಗಳೇ ಆಡಳಿತ ನಡೆಸಬೇಕು, ಬೇರ್ಯಾರೂ ಅಲ್ಲ' ಎಂಬ ಪ್ರಚೋದನಕಾರಿ ಮಾತನ್ನೂ ಮಾಧ್ಯಮದ ಮುಂದೆ ಹೇಳಿಕೊಂಡಿದ್ದ. ಹಾಗಿದ್ದೂ ಈತನ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ನಿರಾಯಾಸವಾಗಿ ಈತ ಬಿಡುಗಡೆಗೊಂಡಿದ್ದು, ಸರಕಾರ ಮತ್ತು ಪೋಲೀಸರು ನಿರ್ದಿಷ್ಟ ಸಮುದಾಯದ ಮೇಲೆ ಮಾತ್ರ ಗುರಿಯಿಟ್ಟಿರುವುದು ಸಾಬೀತಾಗಿದೆ.
ದೇಶದ ಸಂವಿಧಾನ ವಿರುದ್ಧವಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಗಳ ದಿಕ್ಕು ಬದಲಿಸಲು ಸಂಘಪರಿವಾರ ಸಂಚು ಹೂಡಿತ್ತು. ಶಾಂತಿಯುತವಾಗಿ ನಡೆಯುವ ಸಮರಗಳಿಗೆ ದಾಳಿ ನಡೆಸಿ ಹಿಂಸಾಚಾರದಿಂದ ಜನರಲ್ಲಿ ಭಯವನ್ನು ಬಿತ್ತರಿಸುವಂತಹ ಕೆಲಸವನ್ನು ನಡೆಸುತ್ತಿತ್ತು. ಇದೆ ವಿಚಾರವಾಗಿ ಮಂಗಳೂರಿನಲ್ಲಿ ನಡೆದ ಗಲಭೆಯ ಹಿಂದಿನ ಕೈಗಳು ಸಂಘಪರಿವಾರ ಮತ್ತು ಪೋಲಿಸರದ್ದು ಎಂಬುದು ವ್ಯಕ್ತವಾಗಿತ್ತು. ಯಾವುದೇ ಕಾರಣವಿಲ್ಲದೆ ಮುಸ್ಲಿಂ ಎಂಬ ನಿಲುವಿನಲ್ಲಿ ಜಲೀಲ್ ಮತ್ತು ನೌಶೀನ್ ಎರಡು ಯುವಕರನ್ನು ಪೋಲಿಸರು ಗೋಲಿಬಾರ್ ನಡೆಸಿ ಹತ್ಯೆ ಮಾಡಿದ್ದರು, ಮಾತ್ರವಲ್ಲದೆ ಬಲಿಯಾದ ಯುವಕರ ಮೇಲೆ ಭಯೋತ್ಪಾದನೆಯ ಆರೋಪ ಕೂಡ ಹೊರಿಸಲಾಗಿತ್ತು.
ಅಂದರೆ, ಸರಕಾರ ಮತ್ತು ಪೋಲೀಸರು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಅಕ್ರಮಗಳನ್ನು ನಡೆಸುತ್ತಲೇ ಇದೆ. ಇದರ ಒಂದು ಭಾಗವಾಗಿದೆ ಸಫೂರಾಳ ಬಂಧನ. ಇದನ್ನು ಮುಂದಿಟ್ಟುಕೊಂಡು ಜನರಲ್ಲಿನ ಹೋರಾಟದ ಕಿಚ್ಚನ್ನು ಕಸಿದುಕೊಳ್ಳುವ ಹುನ್ನಾರ.
“ಪೊಲೀಸರು ಪ್ರತಿಭಟನಾಕಾರರ ಬಳಿ ಇಲ್ಲದೇ ಹೋಗಿದ್ದರೆ, ನಮ್ಮ ಕಾರ್ಯಕರ್ತರು ಅಲ್ಲಿಗೆ ಹೋಗಿ ತೆರವುಗೊಳಿಸುತ್ತಿದ್ದರು; ಅಮೆರಿಕಾ ಅಧ್ಯಕ್ಷರು ಎಲ್ಲಿತನಕ ಭಾರತದಲ್ಲಿ ಇರುವರೋ ಅಲ್ಲಿ ತನಕ ನಾವು ಶಾಂತರಾಗಿರುವೆವು. ನಂತರ ನಾವು ಪೊಲೀಸರ ಮಾತನ್ನೂ ಆಲಿಸಲಾರೆವು, ಎಲ್ಲರನ್ನೂ ತೆರವುಗೊಳಿಸುವೆವು”
ಇದು ದೆಹಲಿ ಗಲಭೆಗೆ ಪ್ರತ್ಯಕ್ಷ ಕಾರಣವಾಗಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ರ ಪ್ರಚೋದನಕಾರಿ ಹೇಳಿಕೆ. ಆ ಕ್ಷಣದಲ್ಲಿಯೇ ದೆಹಲಿ ಗಲಭೆ ತಾರಕಕ್ಕೇರಿ 54 ಮಂದಿಯ ಹತ್ಯೆಯಾಗಿತ್ತು. ಹಲವಾರು ನಾಶ-ನಷ್ಟಗಳು ಸಂಭವಿಸಿತ್ತು. ಹಾಗಿದ್ದೂ ಪೋಲಿಸರು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಸರಕಾರವು ಒಂದು ಸಮುದಾಯವನ್ನು ಸಂಪೂರ್ಣವಾಗಿ ನಶಿಸುವ ಇರಾದೆಯನ್ನು ಹೊಂದಿದೆ ಎಂಬುದಕ್ಕೆ ಇಂತಹ ಹಲವು ಘಟನೆಗಳು ಸಾಕ್ಷಿ.
ಪ್ರಜಾಪ್ರಭುತ್ವ ಭಾರತದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ. ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಪೌರತ್ವ ಕಾಯ್ದೆಯ ವಿರುದ್ಧ ಶಬ್ಧವೆತ್ತಿದ ಕಾರಣಕ್ಕೆ ಪ್ರತಿಭಟನಾಕಾರರ ಮೇಲೆ ಅಮಾನವೀಯ ರೀತಿಯಲ್ಲಿ ಲಾಠಿ ಚಾರ್ಜ್ ನಡೆಸಲಾಗಿತ್ತು. ಪೋಲೀಸರಿಗೆ ಸಾಥ್ ನೀಡಿ ಸಂಘ ಪರಿವಾರ ಕಾರ್ಯಕರ್ತರೂ ಲಾಠಿ ಹಿಡಿದುಕೊಂಡಿದ್ದರು. ಕಲ್ಲುತೂರಾಟ ನಡೆಸಲಾಯಿತು, ಗುಂಡು ಹಾರಿಸಲಾಯ್ತು. ಹಾಗಿದ್ದೂ ಜನರ ಮನಸ್ಸಿನಲ್ಲಿ ಭದ್ರವಾಗಿರುವ ಹೋರಾಟದ ಕಿಡಿಯನ್ನು ನಂದಿಸಲು ಸಾಧ್ಯವಾಗಲಿಲ್ಲ. ಇದು ಒಂದು ವೇಳೆ ಲಾಕ್ ಡೌನ್ ಕಾಲವಲ್ಲದೇ ಇದ್ದರೆ, ಇಡೀ ದೇಶದ ಬೀದಿಗಳಲ್ಲಿ ಸಫೂರಾ ಸರ್ಗರ್ ಗಾಗಿ ಧ್ವನಿಸುತ್ತಿದ್ದವು. ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಈ ಹೋರಾಟ ಮುಂದುವರಿದಿದೆ. 27 ವಯಸ್ಸಿನ ಗರ್ಭಿಣಿ ಸ್ತ್ರೀಯನ್ನು ಕಳೆದ ಎರಡು ತಿಂಗಳಿನಿಂದ ತಿಹಾರ್ ಜೈಲಲ್ಲಿರಿಸಿ, ಕರಾಳ ಕಾನೂನನ್ನು ಕೊರಳಿಗೆ ತೊಡಿಸಿ, ಇದೀಗ ಮೂರನೇ ಬಾರಿಯೂ ಜಾಮೀನು ಕೋರಿದ ಅರ್ಜಿ ತಿರಸ್ಕೃತಗೊಂಡಿದೆ. ರಸ್ತೆಯಲ್ಲಿ ಪಿಸ್ತೂಲು ಹಿಡಿದು ಗುಂಡು ಹಾರಿಸಿದ ಭಯೋತ್ಪಾದಕನಿಗೆ ದೊರೆತ ಜಾಮೀನು, ಶಾಂತಿಯುತ ಪ್ರತಿಭಟನೆ ನಡೆಸಿದ ಸಫೂರಾಳಿಗೆ ಸಿಗಲಿಲ್ಲ. ಜಾತ್ಯತೀತ ಭಾರತ ಎಂಬುದು ಹೆಸರಿಗೆ ಮಾತ್ರ. ಇಲ್ಲಿ ದೇಶವನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವ ಕಾರ್ಯಗಳು ನಡೆಯುತ್ತಿದೆ. ಅಂಬೇಡ್ಕರ್ ಪ್ರತಿಪಾದಿಸಿ ಭಾರತ, ಗಾಂಧೀಜಿ ಕನಸು ಕಂಡ ಭಾರತ ನಾಶವಾಗಿ, ಗೋಡ್ಸೆ, ಸಾವರ್ಕರ್ ಗಳ ದೇಶವಾಗುತ್ತಿದೆ. ಭಯೋತ್ಪಾದನೆ, ಕೋಮುವಾದ, ಅಲ್ಪಸಂಖ್ಯಾತರು- ದಲಿತರ ಮೇಲೆ ಆಕ್ರಮಣಗಳು ನಡೆಯುತ್ತಲೇ ಇದೆ. ಇದನ್ನು ಪ್ರಶ್ನಿಸಿದವರೆಲ್ಲರೂ ಜೈಲು ಸೇರುತ್ತಾರೆ. ಒಂದು ನೋಟದಲ್ಲಿ ಸರ್ವಾಧಿಕಾರಿ ಆಡಳಿತ. ಪ್ರಶ್ನಿಸುವ, ಹೋರಾಡುವ, ಪ್ರತಿಭಟಿಸುವ, ಪ್ರತಿರೋಧಿಸುವ ಹಕ್ಕುಗಳನ್ನೆಲ್ಲ ಕಸಿದುಕೊಳ್ಳುತ್ತಿದ್ದಾರೆ.
ಸಫೂರಾ ನಮಗಾಗಿ ಶಬ್ಧವೆತ್ತಿದವಳು. ನಮ್ಮ ಸುಂದರ ಭಾರತಕ್ಕಾಗಿ, ಸಹಬಾಳ್ವೆಯ ನಾಳೆಯ ಕನಸನ್ನು ಕಂಡು, ಕರಾಳ ಕಾನೂನಿಂದಾಗಿ ದೇಶ ಇಬ್ಬಾಗವಾಗದಿರಲೆಂಬ ಕಾರಣಕ್ಕಾಗಿ ಅವಳು ಹೋರಾಡಿದ್ದಳು. ಅವಳ ಹೊಟ್ಟೆಯಲ್ಲಿ ಬೆಳೆದು ಬರುತ್ತಿರುವ ಕ್ರಾಂತಿಯ ಕಿಡಿಯೂ ಕೂಡ ಜೈಲಿನಲ್ಲೇ ಜನಿಸುತ್ತದೆಯೇನೋ..? ಅವಳು ನಮಗಾಗಿ ಮಾತನಾಡಿದ್ದರೆ, ಇವತ್ತು ನಾವು ಅವಳಿಗಾಗಿ ಹೋರಾಡಬೇಕಾದ ಅನಿವಾರ್ಯತೆಯಿದೆ. ಅವಳೂ ನಮ್ಮ ಸಹೋದರಿಯೇ..
ದೇಶದ ಸಂವಿಧಾನ ವಿರೋಧಿ ಕಾಯ್ದೆಯ ವಿರುದ್ಧ ಹೋರಾಡಿ ಕತ್ತಲೆಯಲ್ಲಿ ಬಂಧಿಯಾಗಿರುವ ಸಫೂರಾಳಿಗಾಗಿ ಧ್ವನಿಯೆತ್ತಬೇಕು.
ಯುಎಪಿಎ ಹೊರಿಸಿ ತಿಹಾರ್ ಜೈಲಿನಲ್ಲಿ ಹಿಂಸೆ ಅನುಭವಿಸುತ್ತಿರುವ ಸಫೂರಾ ಸರ್ಗರ್ ಳ ಬಿಡುಗಡೆಯಾಗಲಿ..
#ReleaseSafooraZargar
- ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou