ನನಗೆ ನಗು ಬರುತ್ತಿದೆ..
ಚುಚ್ಚುವ ಹಸಿವಿಗೆ ಮದ್ದು ಹುಡುಕಿ
ಅಲೆಯುವವನ ಮುಂದೆ
ತಟ್ಟೆ, ಚಪ್ಪಾಳೆ ತಟ್ಟಿ
ದೀಪ ಹಚ್ಚಲು ಹೇಳುವಾಗ
ನನಗೆ ನಗು ಬರುತ್ತಿದೆ
ರೋಗದ ಬೆಂಕಿಗೆ
ಸುಟ್ಟು ಹೋದ ಜನರ ಮುಂದೆ
ಆಕಾಶದಿಂದ ಹಣ ಸುರಿಸುವ
ಮಾತನ್ನಾಡುವಾಗ
ನನಗೆ ನಗು ಬರುತ್ತಿದೆ
ಸೋಂಕು ತಡೆಯಲು
ಮಾಸ್ಕ್ ಗ್ಲೌಸ್ ತೊಟ್ಟವರ ಮುಂದೆ
ಖಾಯಿಲೆಗೂ ಗಡ್ಡ ಮೀಸೆ ಬಿಡಿಸಿ
ಟೋಪಿ ಧರಿಸುವಾಗ
ನನಗೆ ನಗು ಬರುತ್ತಿದೆ
ಸೂತಕದ ಮನೆಯಲ್ಲಿ
ಕಣ್ಣೀರಿಡುವ ಕತ್ತಲೆಯ ಮುಂದೆ
ಶೋಕಿಯ ಅಳುವಿನೊಂದಿಗೆ
ಮೌನದಿ ಬೆಳಕ ನುಂಗುವಾಗ
ನನಗೆ ನಗು ಬರುತ್ತಿದೆ
ಪ್ರಭುವಿನ ಮಾತು
ಪಾಲಿಸದವರ ಮುಂದೆ
ಚಾಕು ಹಿಡಿದ ಅನುಯಾಯಿಗಳ
ರಾಜಭಕ್ತಿ ಕಂಡಾಗ
ನನಗೆ ನಗುವೇ ಬರುತ್ತಿದೆ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou