ಕೆಂಪು ಹಾಸು..!
ಅಲ್ಲಿ ಯುದ್ಧ ನಡೆದುದಕ್ಕೆ ಎರಡೇ ಕುರುಹು
ಎರಡು ಗೋರಿ ಮತ್ತು ಕೆಂಪು ಹಾಸು
ದಟ್ಟ ಮೈದಾನದ ತುದಿಯೊಂದರಲಿ
ಉತ್ತರಕ್ಕೆ ಮುಖ ಮಾಡಿ ಅಂಗಾತ ಮಲಗಿರುವ
ಅಪ್ಪ-ಮಗನ ಗೋರಿಗಳು
ರಕ್ತ ಒಣಗಿ ಹೆಪ್ಪುಗಟ್ಟಿ ಹೋಗಿದೆ
ನೆಲದ ಮೇಲೆ ಕೆಂಪು ಹಾಸಿಗೆ ಬಿಚ್ಚಿಟ್ಟಂತೆ
ಅದು ರಣರಂಗವಂತೆ
ಎರಡು ಮುಗ್ಧ ಜೀವಗಳಿಗೆ ವಿರಾಮವಿತ್ತ
ಭೀಕರ ಯುದ್ಧಭೂಮಿ
ಗೋರಿಯ ಬಳಿ ಕುಳಿತು ಅವಳು
ಈಗಲೂ ಅಳುತಿದ್ದಾಳೆ
ಯುದ್ಧದಿಂದ ಹತನಾದ ತಂದೆಯ
ರುಂಡ ಕೈಯಲಿ ಹಿಡಿದು ರೋಧಿಸುತಿದ್ದ
ಮಗುವಿನ ನೆತ್ತಿಗೂ ಅವರು
ಬೆಂಕಿಯುಂಡೆ ಎಸೆದು ಬಿಟ್ಟರು
ಮಗನ ಗೋರಿಯ ಹಣೆಯಲಿ
ರಕ್ತದ ಕಳೆಯಿದೆ, ತಾಯಿ ಅದಕೇ ಮುತ್ತಿಕ್ಕುತಿದ್ದಾಳೆ
ದೇಹ ಕಳಚಿದ ತಂದೆಯ ಶಿರವನು
ಗೋರಿಯೊಳಗೆ ಜೋಡಿಸಿಡಲಾಗಿತ್ತು
ಕತ್ತಿನ ಭಾಗದಲಿ ಗೋರಿಯು ಬಿರುಕು ಬಿಟ್ಟಿದೆ
ರಕುತದ ಮಡುವಿನ ಮಧ್ಯೆ ಚಿಗುರುವ
ಎಲೆಗಳೂ ಕೆಂಬಣ್ಣದಿ ಕಂದಿದೆ
ಮಗನಿಲ್ಲದ ತಾಯಿಯಾಗಿ
ಗಂಡನಿಲ್ಲದ ಮಡದಿಯಾಗಿ
ಕಲ್ಲಾದ ಎರಡು ದೇಹಗಳ ಪಕ್ಕ ಕುಳಿತು
ಗೋಳಿಡುವ ಅವಳು ಇವತ್ತು
ದಾರಿಹೋಕರ ಕಣ್ಣಿಗೆ ಹುಚ್ಚಿ..!
ಇಂದು ಅವರಿಬ್ಬರೂ ಹುತಾತ್ಮರಂತೆ
ವರುಷಕೊಮ್ಮೆ ಗೂಟದ ಕಾರಲಿ ಬಂದವರು
ಹೂವಿಟ್ಟು ಚಪ್ಪಾಳೆ ತಟ್ಟಿ ಮೌನವಾಗಿ ಮರಳುತ್ತಾರೆ
ನೆತ್ತರಿನ ವಾಸನೆಗೆ ಬಾಡಿದ ಹೂವಿನಂತೆ
ತಾಯಿ ಮತ್ತೆ ಮತ್ತೆ ಮತ್ತೆ ಹುಚ್ಚಿಯಾಗುತಿದ್ದಾಳೆ
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou