ಪ್ರತಿಭಟಿಸುವುದು ತಪ್ಪಾಗುವುದು ಹೇಗೆ..?
ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಖುರೈಷಿ ಎಂಬವನ ಮೇಲಿನ ಪೋಲಿಸ್ ದೌರ್ಜನ್ಯದ ವಿರುದ್ಧವಾಗಿ ನಡೆದ ಪ್ರತಿಭಟನೆಯಲ್ಲಿ, ಸಿಸಿಬಿ ಪೋಲೀಸರು ಲಾಠಿ ಚಾರ್ಜ್ ಮುಖಾಂತರ ಅಮಾನುಷವಾಗಿ ಹಲ್ಲೆಗೈದ ವಿಚಾರವಾಗಿ ಇಡೀ ಕರ್ನಾಟಕವು ಚರ್ಚಿಸಿತು. ವಿಚಾರಣೆಯ ನೆಪದಲ್ಲಿ ಮುಸ್ಲಿಂ ಸಹೋದರನೊಬ್ಬನನ್ನು ಬಂಧಿಸಿ ತನ್ನೆರಡು ಕಿಡ್ನಿಗಳು ವೈಫಲ್ಯವಾಗುವ ತನಕ ಹಿಂಸಿಸಿದ ತಪ್ಪನ್ನು ಹೊರುತ್ತಿರುವ ಮಂಗಳೂರು ಪೋಲಿಸರು ಅದರ ವಿರುದ್ಧವಾಗಿ ಮುಸ್ಲಿಂ ಸಹೋದರರು ಶಾಂತಿಯುತವಾಗಿ ಒಟ್ಟು ಸೇರಿದಾಗ ಲಾಠಿ ಚಾರ್ಜ್ ನಡೆಸಿ ರಕ್ತ ಹರಿಯುವ ತನಕ ಹಲ್ಲೆ ನಡೆಸಿರುವುದನ್ನು ಮಾನವೀಯತೆಯ ಮನಸ್ಸುಳ್ಳವರೆಲ್ಲರೂ ಖಂಡಿಸಿದರು. ಇನ್ನು ಕೆಲವರು ಇದಕ್ಕೆ ರಾಜಕೀಯ ಬಣ್ಣ ಬಲಿದರೂ ಸತ್ಯವು ಅನ್ಯಾಯದ ವಿಮುಖವಾಗಿ ಹೋರಾಡಿತು.
ಆದರೆ, ಈ ಕ್ರೂರ ಕೃತ್ಯದ ವಿಚಾರವಾಗಿ ಚರ್ಚೆಗಳು, ನ್ಯಾಯ ಪರ ಧ್ವನಿಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಮುಸ್ಲಿಂ ಸಹೋದರರನ್ನು ಗೊಂದಲಗೊಳಿಸುವ ಇನ್ನೊಂದು ಚರ್ಚೆಯು ತಲೆಯೆತ್ತಿ ನಿಂತಿತು. ಕೆಲವರು 'ಇಸ್ಲಾಂ ಈ ತರಹದ ಪ್ರತಿಭಟನೆಗಳಿಗೆ ಅನುಮೋದನೆ ಕೊಡುವುದಿಲ್ಲ, ರಸ್ತೆ ಬದಿ ಕುಳಿತು ಬೊಬ್ಬೆ ಹೊಡಿಯುವುದು ಹೋರಾಟವಲ್ಲ, ಅದು ದೊಂಬಿ ಅಥವಾ ಗಲಾಟೆ' ಎಂಬಿತ್ಯಾದಿ ಅಭಿಪ್ರಾಯಗಳೂ ಕೂಡ ಚರ್ಚೆಯಾಗುತ್ತಿದೆ.
ಹೋರಾಟ ಎಂಬ ಪದವನ್ನು ನಾವು ಹಲವಾರು ರೀತಿಯಲ್ಲಿ ವಿಮರ್ಶೆ ಮಾಡಬಹುದು. ಮೊದಲ ಮೂಲ 'ಯುದ್ಧ' ಎಂಬುವುದಾದರೆ., ಪ್ರತಿಭಟನೆ, ಪ್ರತಿರೋಧ ಎಂಬ ಅರ್ಥವನ್ನೂ ಹೋರಾಟ ಎಂಬ ಪದಕ್ಕೆ ನೀಡಬಹುದು. ಹೋರಾಟವನ್ನು ಇಸ್ಲಾಂ ಅನುಮತಿಸಿದೆ ಎಂಬುವುದಕ್ಕೆ ಅಂತ್ಯ ಪ್ರವಾದಿ ಮಹಮ್ಮದ್(ಸ) ರ ಜೀವನವೇ ಆಧಾರ. ಬದ್ರ್, ಉಹ್ದ್, ಖೈಬರ್, ಖಂದಕ್ ಸೇರಿದಂತೆ ಹಲವಾರು ಯುದ್ಧಗಳು ಪ್ರವಾದಿವರ್ಯರು ತನ್ನ ಸಹಚರರ ಜೊತೆ ಸೇರಿ ಇಸ್ಲಾಮಿನ ಶತ್ರುಗಳ ವಿರುದ್ಧವಾಗಿ ಮಾಡಿದ್ದಾರೆ ಎಂಬುದನ್ನು ಇಸ್ಲಾಮಿಕ್ ಚರಿತ್ರೆಗಳು ಹೇಳುತ್ತದೆ ಅದು ಸತ್ಯ ಕೂಡ. ಯುದ್ಧ ಎಂಬಿವುದೂ ಒಂದು ಪ್ರತಿರೋಧವೇ.. ನಮ್ಮ ಹಕ್ಕುಗಳಿಗೆ ಭಂಗ ತರುವ ನಮ್ಮ ಶತ್ರುಗಳ ವಿರುದ್ಧವಾಗಿ ಹೋರಾಡುವುದು ಅಥವಾ ಶತ್ರುಗಳ ಕಾರ್ಯವನ್ನು ಪ್ರತಿರೋಧಿಸುವುದು ಅಥವಾ ಅವರೊಡನೆ ಮುಖಾಮುಖಿ ಪ್ರತಿಭಟಿಸುವುದು.
"ನೀವು ಅಲ್ಲಾಹನಲ್ಲಿ ಮತ್ತು ಅವನ ದೂತರಲ್ಲಿ ನಂಬಿಕೆ ಇಡಿರಿ. ಮತ್ತು ನಿಮ್ಮ ಸಂಪತ್ತುಗಳನ್ನೂ ಜೀವಗಳನ್ನೂ ತೊಡಗಿಸಿ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ನೀವು ಅರಿಯುವವರಾಗಿದ್ದರೆ ಅದುವೇ ನಿಮ್ಮ ಪಾಲಿಗೆ ಉತ್ತಮ.(61:11)"
ಖುರಾನಿನ 61ನೇ ಅಧ್ಯಾಯ 'ಅಸ್ಸಫ್ಫ್' ನ 11 ನೇ ಸೂಕ್ತದಲ್ಲಿ ಹೋರಾಟದ ಬಗೆಯಾಗಿ ಚರ್ಚಿಸಲಾಗಿದೆ. ನಮ್ಮ ಸಂಪತ್ತು ಮತ್ತು ಜೀವ ಎರಡನ್ನೂ ಬಳಸಿ ಅಥವಾ ತೊಡಗಿಸಿಕೊಂಡು ಅಲ್ಲಾಹನ ಮಾರ್ಗದಲ್ಲಿ ಹೋರಾಡಿದರೆ ಅದು ನಮ್ಮ ಪಾಲಿಗೆ ಉತ್ತಮ ಎಂದು ಅಲ್ಲಾಹನು ಖುರಾನಿನ ಮೂಲಕ ಸತ್ಯವಿಶ್ವಾಸಿಗಳಲ್ಲಿ ಹೋರಾಟವನ್ನು ಆಜ್ಞಾಪಿಸಲಾಗಿದೆ.
"ತಾವು ಸೀಸ ಹೊಯ್ದ ಗೋಡೆಗಳೆಂಬಂತೆ ಸಾಲಾಗಿ (ಸಂಘಟಿತರಾಗಿ) ತನ್ನ ಮಾರ್ಗದಲ್ಲಿ ಹೋರಾಡುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ.(61:04)"
ಅದೇ ಅಧ್ಯಾಯದ 4 ನೇ ಸೂಕ್ತದಲ್ಲಿ ನಾವು ಸಂಘಟಿತರಾಗಿ ಹೋರಾಡಬೇಕೆಂದೂ ಸೂಚಿಸಲಾಗಿದೆ. ಹಾಗೇ ಸಂಘಟಿತರಾಗಿ ಹೋರಾಡುವವರನ್ನು ಅಲ್ಲಾಹನು ಇಷ್ಟಪಡುತ್ತಾನೆ ಎಂಬುವುನ್ನೂ ಪ್ರಸ್ತಾಪಿಸಲಾಗಿದೆ.
ಈ ಎರಡು ಖುರಾನ್ ಅಧ್ಯಾಯವು ಮುಸ್ಲಿಮರು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕೆಂದು ಸೂಚಿಸುತ್ತದೆ. ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕೆಂದಾಗ, ಅಲ್ಲಾಹನು ಯಾವ ಮಾರ್ಗವನ್ನು ಸೂಚಿಸಿದ್ದಾನೆ ಎಂಬ ಪ್ರಶ್ನೆ ಸಹಜ. ಅಲ್ಲಾಹನ ಮಾರ್ಗದಲ್ಲಿ ಹೋರಾಡಿರುವುದಕ್ಕೆ ನಮಗೆ ನೇರ ಉದಾಹರಣೆ ಪ್ರವಾದಿ (ಸ.ಅ)ರು. ಅವರು ಅಲ್ಲಾಹನು ತೋರಿಸಿಕೊಟ್ಟ ಅದೇ ದಾರಿಯಲ್ಲಿ ಇಸ್ಲಾಮಿನ ಶತ್ರುಗಳೊಡನೆ ಹೋರಾಡಿ ಜಯಿಸಿದವರು.
ಪ್ರತಿಭಟನೆ ಇಸ್ಲಾಮ್ ಅನುವದಿಸಿಲ್ಲ' ಎಂದು ವಾದಿಸುವವರು ಯುದ್ಧ ಮತ್ತು ಪ್ರತಿಭಟನೆಯನ್ನು ಬೇರೆಬೇರೆಯಾಗಿ ಕಾಣುತ್ತಾರೆ. ನೇರನೋಟಕ್ಕೆ ಬಹುಶಃ ಇವೆರಡೂ ವ್ಯತ್ಯಸ್ಥವಾಗಿದ್ದರೂ, ಒಂದಿನಿತು ಆಳವಾಗಿ ನೋಡಿದಾಗ ಪರಸ್ಪರ ಸಂಬಂಧಿಗಳಂತೆ ಕಾಣುತ್ತದೆ. ಇವತ್ತು ನಾವು ಮಾಡುವ ಪ್ರತಿಭಟನೆಯ ನೆಪದಲ್ಲಿ ರಸ್ತೆಯಲ್ಲಿ ಒಟ್ಟುಗೂಡಿ ಬೊಬ್ಬೆ ಹೊಡೆಯುತ್ತಿದ್ದಾರೆಂಬುದು ಈ ಅಭಿಪ್ರಾಯಿಗಳ ಆರೋಪ. ಆದರೆ, ಇಸ್ಲಾಮಿಕ್ ಯುದ್ಧಗಳಲ್ಲೂ ಸ್ವಹಾಬಿಗಳು ಇಸ್ಲಾಮಿನ ಶತ್ರುಗಳ ವಿರುದ್ಧವಾಗಿ ಕಾವ್ಯಗಳ ಮೂಲಕ, ಸಾಹಿತ್ಯದ ಮೂಲಕ ಧ್ವನಿಗೂಡಿಸಿದ್ದಾರೆಂದೂ, ತಕ್ಬೀರ್ ಮಂತ್ರವನ್ನು ಶಬ್ದಿಸುತ್ತಿದ್ದರೆಂದೂ ಚರಿತ್ರೆಯ ಪುಟಗಳು ತಿಳಿಯಲ್ಪಡಿಸುತ್ತದೆ. ಹಾಗಿರುವಾಗ ಇಲ್ಲಿ ನಾವು ನ್ಯಾಯವನ್ನು ಗಟ್ಟಿಸ್ವರದಲ್ಲಿ ಒಕ್ಕೊರಲಿನಿಂದ ಕೇಳಿಕೊಳ್ಳುವುದು ಹೇಗೆ ತಪ್ಪಾಗುತ್ತದೆ..?
ಯುದ್ಧ ಮತ್ತು ಈಗಿನ ಪ್ರತಿಭಟನೆಯೆಂಬ ಹೋರಾಟಕ್ಕೆ ವ್ಯತ್ಯಸ್ಥ ಪದವಿಯನ್ನೇ ಕೊಡುವಯದಾದರೂ, ಇಲ್ಲಿ ಮತ್ತಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಯುದ್ಧಕ್ಕೆ ಇಸ್ಲಾಂ ಪ್ರಾಶಸ್ತ್ಯ ನೀಡಿದೆಯೆಂಬುದರಲ್ಲಿ ಸಂಶಯವಿಲ್ಲ ತಾನೆ? ಹಾಗಿರುವಾಗ ಇಲ್ಲಿ ಅನ್ಯಾಯ ಅಥವಾ ಅಕ್ರಮ ನಡೆದಾಗ ಯುದ್ಧ ಮಾಡಬೇಕಲ್ಲವೇ? ಕಾರಣ, ಅವತ್ತು ನೆಬಿ(ಸ)ರು ಇಸ್ಲಾಮಿಗೆ ಆಕ್ರಮಣ ನಡೆದಾಗ ಅವರ ವಿರುದ್ಧವಾಗಿ ಯುದ್ಧಕ್ಕಿಳಿದ್ದಾರಲ್ಲವೇ? ಪ್ರತಿಭಟನೆಯೆಂಬುದು ದೊಂಬಿ ಅಥವಾ ಗಲಾಟೆಯಾದರೆ ಯುದ್ಧವೆಂದು ಶಾಂತಿಯ ಸ್ವರವೇ? ಇಸ್ಲಾಂ ಶಾಂತಿಯನ್ನು ಸಾರುತ್ತದೆ ಮತ್ತು ಆಕ್ರಮಣದ ವಿರುದ್ಧದ ಯುದ್ಧಕ್ಕೆ ಅನುಮತಿಯನ್ನೂ ನೀಡುತ್ತದೆ ಎಂದಾದರೆ, ಶಾಂತಿಯಿಂದ ಪ್ರತಿರೋಧಿಸುವ ಮಾರ್ಗವಾದ ಪ್ರತಿಭಟನೆಯನ್ನೂ ಉಚಿತಗೊಳಿಸದೇ? ಅಥವಾ ಅನ್ಯಾಯ ಮತ್ತು ಅಕ್ರಮ ಎದುರಾದಾಗ ಆಯುಧಗಳೊಂದಿಗೆ ಯುದ್ಧಕ್ಕಿಳಿಯಬೇಕು ಅಥವಾ ಸುಮ್ಮನಿರಬೇಕು ಎಂದು ಇಸ್ಲಾಂ ಎಲ್ಲಾದರೂ ಹೇಳಿದೆಯೇ?
ನಮ್ಮದು ಭಾರತ ದೇಶ. ಇಲ್ಲಿ ಯುದ್ಧಕ್ಕೆ ಅವಕಾಶವಿಲ್ಲ. ದೇಶದ ಸಂವಿಧಾನ ಯುದ್ಧಕ್ಕೆ ಔಚಿತ್ಯ ನೀಡಿಲ್ಲವಾದ್ದರಿಂದ, ನಾವು ಸಂವಿಧಾನದ ಮೇಲಿನ ಗೌರವದೊಂದಿಗೆ ಯುದ್ಧವನ್ನು ಕೈಬಿಡಬೇಕಾಗುತ್ತದೆ. ಆದರೆ, ನಿರಂತರವಾಗಿ ಅಮಾಯಕರ ಮೇಲೆ ಅನ್ಯಾಯ, ಅಕ್ರಮಗಳು ನಡೆಯುತ್ತಲೇ ಇರುವಾಗ ಮಾನವೀಯತೆಯ ರಕ್ತ ಹರಿಯುವ ಮನುಷ್ಯನು ಹೇಗೆ ತಾಳಿಯಾನು? ಅದನ್ನು ಪ್ರತಿರೋಧಿಸಿಯೇ ತೀರುತ್ತಾನೆ.
ಕಾರಣ, ಅದರ ನಷ್ಟ-ಸಂಕಷ್ಟಗಳ ಕುರಿತು ಅರಿವು ಅವನಿಗಿರುತ್ತದೆ. ಯಾವೊಬ್ಬನಿಗೂ ಅನ್ಯಾಯವಾಗುವುದನ್ನು ಇಸ್ಲಾಂ ಸಹಿಸುವುದಿಲ್ಲವಲ್ಲಾ? ಹಾಗಾಗಿ ನಾವು ಅನ್ಯಾಯದ ವಿರುದ್ಧವಾಗಿ ಹೋರಾಡಲೇಬೇಕಾಗುತ್ತದೆ. ಆದರೆ, ಹೋರಾಟದ ಮಾರ್ಗದಲ್ಲಿ ಸಾಂವಿಧಾನಿಕವಾಗಿ ಸ್ವಲ್ಪ ಬದಲಾವಣೆ ತರಬೇಕಿದೆಯಷ್ಟೇ.
ಆದರೆ, ಪ್ರತಿಭಟನೆಯೆಂಬುದು ಗಲಾಟೆ ಅಥವಾ ದೊಂಬಿ ಆಗುವುದು ಹೇಗೆ ಎಂಬುದಕ್ಕೆ ಸ್ಪಷ್ಟನೆ ಬೇಕಿದೆ. ಕಾರಣ, ಇವು ಪ್ರತಿರೋಧದ ಭಾಗ. ದೊಂಬಿಗೂ, ಪ್ರತಿರೋಧಕ್ಕೂ ವ್ಯತ್ಯಾಸವಿದೆ. ದೊಂಬಿಗೆ ಕಾರಣವಿರದು. ಶಾಂತಿ ಕೆಡಿಸುವುದೇ ಉದ್ದೇಶವಾಗಿರಲೂವಹುದು. ಆದರೆ ಪ್ರತಿಭಟನೆ ಕಾರಣವಿಲ್ಲದೇ ಮಾಡುವಂತಿಲ್ಲ. ಅನ್ಯಾಯ ನಡೆದಾಗ ನಾವು ಅದರ ವಿರುದ್ಧ ಪ್ರತಿಭಟಿಸದೇ ಹೋದರೆ ಮುಂದೆ ಇನ್ನಷ್ಟು ಸಂಕಷ್ಟಗಳನ್ನು ಸಹಿಸಿಕೊಳ್ಳಬೇಕಾದೀತು.
"ನಿಮ್ಮ ಪೈಕಿ, ಜನರನ್ನು ಹೋರಾಟದಿಂದ ತಡೆಯುವವರು ಮತ್ತು ತಮ್ಮ ಸಹೋದರರೊಡನೆ, ನೀವು ನಮ್ಮ ಕಡೆಗೆ ಬನ್ನಿ ಎಂದು ಹೇಳುವವರನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ಅವರು ಹೋರಾಟದಲ್ಲಿ ಭಾಗವಹಿಸುವುದು ತೀರಾ ಅಪರೂಪ.(33:18)"
ಖುರಾನ್ ಇನ್ನೊಂದು ಕಡೆ ಈ ರೀತಿ ಹೇಳುತ್ತದೆ. ಜನರನ್ನು ಹೋರಾಟದಿಂದ ತಡೆಯುವುದು ಸಲ್ಲದು ಎಂದು ಕುರ್ ಆನ್ ಸೂಚಿಸುತ್ತದೆ. ಹಾಗಿರುವಾಗ ಪ್ರತಿಭಟನೆಯನ್ನು ಯಾಕೆ ಕೆಲವರು ವಿರೋಧಿಸುತ್ತಾರೆ?
'ಹೇಳಿರಿ; ನೀವು ಪಲಾಯನ ಮಾಡುತ್ತಿರುವುದು ಮರಣದಿಂದ ಅಥವಾ ಹತ್ಯೆಯಿಂದ ಎಂದಾದರೆ, ಆ ನಿಮ್ಮ ಪಲಾಯನದಿಂದ ನಿಮಗೆ ಯಾವ ಲಾಭವೂ ಆಗದು. ಹೆಚ್ಚೆಂದರೆ ತೀರಾ ಅಲ್ಪಕಾಲ ಮಾತ್ರ ನೀವು ಸುಖಿಸಬಲ್ಲಿರಿ.(33:16)
ಖುರಾನ್ ಜನರನ್ನು ಮತ್ತಷ್ಟು ಎಚ್ಚರಿಸುತ್ತದೆ. ಮರಣ ಅಥವಾ ಹತ್ಯೆಯಿಂದ ಪಲಾಯನ ಮಾಡಲಾಗದು ಎಂದು ಖುರಾನ್ ಹೇಳುವಾಗ ಮರಣ ಅಥವಾ ಇತರತೆಗಳಿಗೆ ಕದಡದೆ ಎದೆಬಿರಿದು ನ್ಯಾಯ ಕೇಳುವ ಮಂದಿಯನ್ನು ಇವರ್ಯಾಕೆ ವಿರೋಧಿಸುತ್ತಿದ್ದಾರೆ?
ಮೊನ್ನೆ ದಿನ ಮಂಗಳೂರಿನಲ್ಲಿ ಮುಸ್ಲಿಂ ಸಹೋದರರು ಪ್ರತಿಭಟಿಸಿದ್ದು ಮುಸ್ಲಿಂ ಸಮುದಾಯದ ಸಹೋದರನೊಬ್ಬನಿಗಾದ ಅನ್ಯಾಯ ಅಥವಾ ಅಕ್ರಮದ ವಿರುದ್ಧ. ಇವತ್ತು ಮುಸ್ಲಿಂ ಶಕ್ತಿಗಳು ಕೆಡಿಸಲು ಹೊಂಚು ಹಾಕುತ್ತಿರುವ ಸಂಘ ಪರಿವಾರ ಎಂಬ ದುಷ್ಟ ಪಡೆಯ ಕ್ರೂರತೆಯ ವಿರುದ್ಧ. ಒಂದುವೇಳೆ ಈ ಪ್ರತಿಭಟನೆಯು ಧಾರ್ಮಿಕ ನೆಲೆಯಲ್ಲಿ ತಪ್ಪು ಎಂದಾಗುವುದಾದರೆ, ನನಗಿಲ್ಲಿ ಇನ್ನಷ್ಟು ಸ್ಪಷ್ಟನೆಗಳು ಬೇಕಿದೆ. ಒಂದು ವೇಳೆ ತಮ್ಮ ಮನೆಗೆ ಬೆಂಕಿ ಹಚ್ಚಲೆಂದು ಒಂದಷ್ಟು ಮಂದಿ ಪಂಜು ಹಿಡಿದು ಬಂದರೆ ತಾವು ಕೈಕಟ್ಟಿ ಕೂರುವುದೇ? ಅಥವಾ ಅವರ ಎದುರಾಗಿ ಪ್ರತಿಭಟಿಸುವಿರೇ? ಅದರ ವಿರುದ್ಧ ಪ್ರತಿಭಟಿಸಬಹುದು ಎಂದಾದರೆ ನಾವು ಇವತ್ತು ನಡೆಸುವ ಪ್ರತಿಭಟನೆಯಲ್ಲೂ ತಪ್ಪಿಲ್ಲ. ಕಾರಣ, ನಿನ್ನೆ ಅವನಿಗಾದ ಅನ್ಯಾಯ ನಾಳೆ ನನಗೆ ಅಥವಾ ನಿಮಗೆ ಆಗಲಾರದು ಎಂದಿಲ್ಲ. ಹಾಗಾಗಿ ಮುಂಚಿತವಾಗಿಯೇ ನಮ್ಮ ಸಹೋದರರೆಲ್ಲರನ್ನೂ ಅನ್ಯಾಯಗಳಿಂದ ರಕ್ಷಿಸುವ ಉಪಾಯ ಪ್ರತಿಭಟನೆ. ಕಾನೂನನ್ನು ಪ್ರತಿಭಟನೆಯಿಂದಲಷ್ಟೇ ಜಯಿಸಬಹುದು, ಕಾರಣ ಇದು ಭಾರತ ದೇಶವಾಯ್ತು. ಹಾಗಿರುವಾಗ ಶಾಂತಿಯುತ ಪ್ರತಿಭಟನೆಯನ್ನು ಗಲಾಟೆ ಅಥವಾ ದೊಂಬಿಗೆ ಹೋಲಿಸಿ 'ತಪ್ಪು' ಎಂಬ ಬರೆ ಎಳೆದು, ನಮ್ಮ ಸಹೋದದರನ್ನು, ಸಹೋದರಿಯರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವುದು, ಅನ್ಯಾಯ-ಅಕ್ರಮಗಳಿಗೆ ದಾರಿ ಮಾಡಿಕೊಡುವುದು ಔಚಿತ್ಯವಲ್ಲ.
#ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou