ಕ್ಯಾಂಡಿ ಕನಸು..!

ಪ್ಯಾಂಟಿನಲ್ಲಿ ಎಂಟು ಜೇಬು..
ಶರ್ಟಿನಲ್ಲೂ ನಾಲಕ್ಕು..
ಪೇಪರ್ ತುಂಬಿದ ಪರ್ಸ್ ಬಿಟ್ಟರೆ,
ಜೇಬಿನೊಳಗಿನ್ನೇನೂ ಇಲ್ಲ..

ಐಸ್ ಕ್ಯಾಂಡಿ ಮಾರುವವನು,
ಮನೆಮುಂದೆ ಬಂದಾಗ,
ಅಮ್ಮನಲ್ಲಿ ಎರಡು ರೂಪಾಯಿ ಕೇಳಿದೆ..
ಬೀಡಿ ಸುರುಟುವ ಅವಳ ಬಳಿ,
ಎಂಟಾನೆಗೂ ಅವತ್ತು ಬರಗಾಲವಿತ್ತು..

ಮನೆ ಹಿಂಬದಿಯಲ್ಲಿ ಏನೋ,
ಮಣ್ಣು ಅಗೆಯುತಿದ್ದ ಅಪ್ಪನಲ್ಲಿ ಕೇಳಿದೆ..
'ಅಪ್ಪಾ.. ಐಸ್ ಕ್ಯಾಂಡಿಗೆ ಎರಡು ರೂಪಾಯಿ..!'
ಅಪ್ಪ ಹಾಗೆಯೇ.. ಏನಿದ್ದರೂ ಸಿಟ್ಟಾಗುವರು..
'ಹೋಗ್ತೀಯಾ.. ಅಲ್ಲ ಬೇಕಾ..?'
ಎಂಬ ಪ್ರಶ್ನೆಗೇ ನಾನಲ್ಲಿಂದ ಕಾಲ್ಕಿತ್ತೆ..

ಐಸ್ ಕ್ಯಾಂಡಿಯ ಕಿಣಿ ಕಿಣಿ ಶಬ್ದ,
ಇನ್ನೂ ಕೇಳಿಸುತ್ತಲೇ ಇದೆ..
ಬಿಟ್ಟುಕೊಡುವ ಮನಸ್ಸಿಲ್ಲ..
ಒಂದು ತಿನ್ನಲೇ ಬೇಕು..
ಪ್ಯಾಂಟಿನ ಹಿಂಬದಿಯ ಜೇಬಲ್ಲಿದ್ದ,
ಪರ್ಸ್ ತೆಗೆದು ಹುಡುಕಿದೆ..
ವಿಧವಿಧ ಕಾಗದದ ನಡುವೆಯೇನಾದರೂ,
ಎರಡು ರೂಪಾಯಿ ಇದೆಯಾ ಎಂದು..!

ಆಹಾ..! ಸಿಕ್ಕಿತು ಎರಡು ರೂಪಾಯಿ ನೋಟು..!!"
ಹಿಂದೆಂದೋ ಆ ಪರ್ಸ್ ಖರೀದಿಸಿದಾಗ,
'ಈ ಹಣ ಪರ್ಸಲ್ಲೇ ಇರಲಿ' ಅಂತ ಅಮ್ಮ ಕೊಟ್ಟಿದ್ದು..
ಈವರೆಗೆ ಅದು ಅಲ್ಲೇ ಮಲಗಿತ್ತು..
ಕ್ಯಾಂಡಿ ತಿನ್ನುವ ಹೆಬ್ಬಯಕೆಯಿಂದ,
ಆ ನೋಟನ್ನು ಕೈಗಿತ್ತು ಓಡಿದೆ..

ಅರೆ..! ಐಸ್ ಕ್ಯಾಂಡಿಯವ ಮರಳುತ್ತಿದ್ದಾನೆ..
'ಅಣ್ಣಾ.. ಒಂಜಿ ಕ್ಯಾಂಡಿ ಕೊರ್ಲೆ..' ಅಂದಾಗ,
'ಇನಿ ಮುಗೀಂಡ್.. ನನ ಎಲ್ಲೆ..' ಎಂಬ ಉತ್ತರ..!
ಕೊನೆಗೂ ಕ್ಯಾಂಡಿ ತಿನ್ನುವ ಕನಸು ಇನ್ನೂ,
ಹಾಗೆಯೇ ಹಸಿರಾಗಿಯೇ ಉಳಿಯಿತು..
ನಾಳೆಯಾದರೂ ತಿನ್ನುವೆನೆಂಬ ನಿರೀಕ್ಷೆಯನಿತ್ತು,
ಎರಡೂ ರೂ. ನೋಟನ್ನು ಅದೇ ಜಾಗದಲ್ಲಿಡುತ್ತಾ..,
ನಾನೀಗ ಮನೆಯ ಒಳಗೆ ಸೇರಿದೆ..

★ http://suwichaar.blogspot.in

#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!