ಸ್ಮೈಲ್ ಪ್ಲೀಸ್..


ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಡೀ ವಿಶ್ವದಲ್ಲಿ ಭಾರತ ಮೊದಲಿಗೆ ಬಂದು ನಿಂತಿದೆ. ಹದಗೆಟ್ಟ ದೇಶದ ಆರ್ಥಿಕತೆ, ಕಂಗೆಟ್ಟ ಜನಸಾಮಾನ್ಯರು, ಉದ್ಯೋಗವಿಲ್ಲದ ಪರಿಸ್ಥಿತಿ, ವಾಣಿಜ್ಯ ಕ್ಷೇತ್ರಗಳೆಲ್ಲ ಪಾತಾಳಕ್ಕಿಲಿಯುತ್ತಿದ್ದರೂ, ಯಜಮಾನನಿಗೆ ಫೋಟೋಶೂಟ್ ಚಿಂತೆ. ನವಿಲಿಗೆ ಕಾಳು ಹಾಕುವುದು, ಒಂದೇ ಬಾರಿ ಎರಡು ಇಂಗ್ಲಿಷ್ ಪುಸ್ತಕ, ಪತ್ರಿಕೆ ಓದುವುದರ ಜೊತೆಗೆ ಲ್ಯಾಪ್‌ಟಾಪ್‌ ಲ್ಲೂ ಕೆಲಸ ಮಾಡುವ ಭಂಗಿ, ಬಾತುಕೋಳಿಗಳ ಜೊತೆ ಮಾತುಕತೆ, ಗಿಟಾರ್ ಹಿಡಿದು ಆಕಾಶ ನೋಡುವ ಹೊಸ ಪೋಸು.... ಹೀಗೆ ವಿಧವಿಧ ಶೈಲಿಯಲ್ಲಿ ಯಜಮಾನನ ಫೋಟೋಗಳು ದಿನೇದಿನೇ ಬರುತ್ತಿರುವುದು ವಿಶೇಷ. 'ಸರ್ವಾಧಿಕಾರಿಗಳೆಲ್ಲರೂ ಶೋಕಿ ಮಾಡುವವರಂತೆ.' ಎಲ್ಲೋ ಕೇಳಿದ ನೆನಪು. ಈಗ ನಮ್ಮ ಯಜಮಾನನ ಶೋಕಿ ಕಾಣುವಾಗ ಈ ಮಾತು ಸುಳ್ಳು ಅನ್ನುವಂತೆಯೂ ಇಲ್ಲ, ನಮ್ಮ ಪ್ರಭು ಸರ್ವಾಧಿಕಾರಿಯಲ್ಲ ಅಂತ ಒಂದೇ ನೋಟಕ್ಕೆ ಹೇಳುವಂತೆಯೂ ಇಲ್ಲ. ದೇಶದ ಪರಿಸ್ಥಿತಿ ಬಿಗಡಾಯಿಸಿದ್ದರೂ ಕೂಡ, ಆ ಕಡೆಗೆ ಕಿಂಚಿತ್ತೂ ಗಮನ ಕೊಡದೇ ಆಡಂಬರ ಬದುಕಿನಲ್ಲೇ ಮಾರು ಹೋಗಿರುವ ರಾಜ ಭಾರತವನ್ನು ಎಲ್ಲಿತನಕ ಹಾಯಿಸುತ್ತಾರೆಂಬುದು ಪ್ರಶ್ನಾರ್ಥಕ..?

ಹಸಿವು, ರೋಗ, ಬಡತನ, ಪ್ರಾಕೃತಿಕ ವಿಕೋಪಗಳಿಂದೆಲ್ಲಾ ದೇಶದ ಜನತೆ ಬಹಳಷ್ಟು ನೊಂದುಕೊಂಡಿದ್ದರೂ, ಸೂರಿಲ್ಲದೆ, ಅನ್ನವಿಲ್ಲದೆ ಅಲೆದಾಡುತ್ತಿರುವ ಸನ್ನಿವೇಶವಿದ್ದರೂ, ಉದ್ಯೋಗವಿಲ್ಲದೆ ಯುವಜನತೆ ಪರದಾಡುವ ಪರಿಸ್ಥಿತಿಯಲ್ಲೂ, ಜಾತಿ-ಧರ್ಮ-ಪಕ್ಷ-ಪಂಗಡ ಅನ್ನುತ್ತಾ ಪರಸ್ಪರ ಹಲ್ಲೆ ಕೊಲೆಗಳು ನಡೆಯುತ್ತಿದ್ದರೂ ಕೂಡ ಇದನ್ನಾವುದನ್ನೂ ಗಮನಿಸಲೋ, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲೋ, ದೇಶದ ಹಿತವನ್ನು ಅಥವಾ ಪ್ರಜೆಗಳ ಬೇಡಿಕೆಗಳನ್ನು ಕನಿಷ್ಠ ಪಕ್ಷ ಆಲಿಸುವಲ್ಲಿಯೂ ಮನಸ್ಸು ಮಾಡದ ರಾಜನೊಬ್ಬನ ಅಡಿಯಲ್ಲಿ ಆಳುಗಳಾಗಿ ನಾವೆಲ್ಲಾ ಕಳೆದ ಕೆಲವು ವರ್ಷಗಳಿಂದ ತುಳಿಸಿಕೊಳ್ಳುತ್ತಿದ್ದೇವೆ ಅನ್ನುವುದು ವಾಸ್ತವ. ವಿಶ್ವಗುರುವಿನ ಕನಸನ್ನು ದೇಶದ ಜನರ ಮನಸ್ಸಲ್ಲಿ ಕಟ್ಟಿಕೊಂಡು ಮಂದಿರ, ಪ್ರತಿಮೆಯಲ್ಲೇ ಕಾಲ ಮತ್ತು ಹಣವನ್ನು ವ್ಯಯಿಸಿ, ಸ್ಮಾರ್ಟ್ ಸಿಟಿಯೆಂಬ ತಣ್ಣೀರೆರಚಿ ಜನರನ್ನು ಲಪಟಾಯಿಸುತ್ತಲೇ ಬಂದಿದ್ದಾರೆ‌. ಇವೆಲ್ಲಕ್ಕೂ ಜೈಕಾರ ಕೂಗಲು ಹಾಗೂ ವಿಮರ್ಶಿಸುವವರನ್ನು ಅತ್ಯಂತ ಸಭ್ಯ ಭಾಷೆಯಲ್ಲಿ ಸೊಂಟದ ಕೆಳಗಿನ ಮಣಿಮುತ್ತಿನ ಮಾತುಗಳನ್ನುದುರುಸಿ ಅದರಲ್ಲೂ ಎರಡು ರೂಪಾಯಿ ಸಂಪಾದನೆ ಮಾಡುವ ರಾಜ್ಯಭಟರು ಇರುವ ತನಕ ಶೋಕಿಗಳಿಗೆ ಕೊನೆಯಿರದೇನೋ..!

ದೇಶದಲ್ಲಿ ಸದಾ ಅಶಾಂತಿ ನಿರ್ಮಾಣವಾಗಬೇಕು. ಗಲಭೆಗಳು, ದೊಂಬಿಗಳು, ಸಾವು-ನೋವುಗಳು ಇವೆಲ್ಲಾ ಸರ್ವೇಸಾಮಾನ್ಯವಾಗಿ ಬೆಳೆದು ಬರಬೇಕು. ಪ್ರತಿಯೊಂದು ಹೆಣದ ಮೇಲೂ ಒಂದೊಂದು ಓಟಿನ ಮುದ್ರೆಯೊತ್ತಬೇಕು. ಎಲ್ಲವನ್ನೂ ಸ್ವಯಂ ತಾವೇ ಮಾಡಿ ಹೊಣೆಗಾರಿಕೆಯನ್ನು ಮಾತ್ರ ಶಾಂತಿಗಾಗಿ ಶ್ರಮಿಸಿದವರ ತಲೆಯಲ್ಲಿ ಹೊರಿಸಬೇಕು. ಇದರಿಂದ ಮತ್ತಷ್ಟು ಅಶಾಂತಿ ಸೃಷ್ಟಿಯಾಗಬೇಕು. ಹೀಗೆ ದೇಶದಲ್ಲಿ ರಕ್ತಪಾತವಾಗುತ್ತಿರುವುದ ಕಂಡು ಸಂತಸದಿಂದ ಕುಣಿದಾಡಬೇಕು ಎನ್ನುವಂತಿದೆ ಅವರ ನಡೆಗಳು. ಹಿಂದೆ ಗುಜರಾತ್ ನಲ್ಲಿ ನಡೆದಿದ್ದೂ ಇದೇ. ಈಗ ಇಡೀ ದೇಶವ್ಯಾಪಿ ಮುಂದುವರೆದಿದೆ ಅನ್ನಬಹುದು.

“ನವಿಲು, ಬಾತು, ಪಾರಿವಾಳ, ಮೊಸಳೆ
ಜೊತೆಗಿದ್ದಷ್ಟೇ ಪ್ರೀತಿ ಮತ್ತು ಲಾಲನೆ
ಮನುಷ್ಯರ ಮೇಲೂ ಇದ್ದಿದ್ದರೆ,
ದೇಶ ಎಂದೋ ಮುಂದೆ ಇರ್ತಿತ್ತು..”

ಹೌದು ತಾನೇ? ಶೋಕಿಗಾಗಿಯಾದರೂ ಮೂಕಪ್ರಾಣಿಗಳಿಗೆ ಕಾಳು ಹಾಕುತ್ತಿರುವಂತೆಯೇ ಇಲ್ಲಿ ಜನತೆಗೂ ಏನಾದರೊಂದಿಷ್ಟು ಅನ್ನ ನೀಡಿದ್ದಲ್ಲಿ ಒಂದಷ್ಟು ಮಂದಿಯ ಹಸಿವಿಗೂ ಮದ್ದಾಗುತ್ತಿತ್ತು. ವಾಸ್ತವದಲ್ಲಿ ಇಲ್ಲಿ ನಡೆಯುವುದೇ ಬೇರೆ. ಅನ್ನ ನೀಡುವಂತೆ ನಾಟಕವಾಡಿ ಜನರ ತಟ್ಟೆಯಲ್ಲಿದ್ದ ತುಂಡು ರೊಟ್ಟಿಯನ್ನೂ ಕಸಿಯುವ ನರಿಬುದ್ದಿ. ಥೇಟ್, ಕಾಗೆ ಮತ್ತು ನರಿ ಕಥೆಯ ಹಾಗೆಯೇ ಇದೆ. ಪ್ರಜೆಗಳೆಲ್ಲಾ ಒಂದುರೀತಿಯಲ್ಲಿ ಕಾಗೆಗಳ ತರಹವೇ. ನರಿ ಸದಾ ಹೊಂಚು ಹಾಕುತ್ತಿದೆ. ನಮ್ಮ ಕೈಯಿಂದ ಯಾವಾಗ ಏನು ಕಸಿದುಕೊಳ್ಳಬಹುದು ಎಂಬ ಭೀತಿಯಿಂದಲೇ ಬದುಕಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜಿಎಸ್ಟಿ ಯ ಪಾಲು ಕೇಳಿ ಹೋದ ರಾಜ್ಯಸರ್ಕಾರಕ್ಕೂ 'ದೇವರೇ ಗತಿ' ಅನ್ನುತ್ತಾ ಚಳ್ಳೆ ಹಣ್ಣು ತಿನ್ನಿಸಿದೆಯೆಂದರೆ, ಸಾಮಾನ್ಯ ಪ್ರಜೆಗಳು ನಿರೀಕ್ಷಿಸುವುದಾದರೂ ಏನನ್ನು? 

ದೇಶವೆನ್ನುವ ರಂಗಮಂಟಪದಲ್ಲಿ ಅವರು ನಾಟಕವಾಡುತ್ತಾರೆ. ನಾವು ಪ್ರೇಕ್ಷಕರು ಮೂಕರಾಗಿದ್ದುಕೊಂಡು ನೋಡಬೇಕು ಅಷ್ಟೇ. ಯಾವುದನ್ನೂ ಪ್ರಶ್ನಿಸಕೂಡದು, ವಿಮರ್ಶಿಸಕೂಡದು, ಟೀಕಿಸಬಾರದು, ನ್ಯಾಯವನ್ನಂತೂ ಕೇಳಲೇಬಾರದು‌. ಇವತ್ತು ದೇಶದಲ್ಲಿ ಎಲ್ಲವೂ ತದ್ವಿರುದ್ಧ. ಯಾವುದು ಬೇಕೋ ಅದಿಲ್ಲ, ಯಾವುದು ಬೇಡವೋ ಅದೇ ನಡೆಯುತ್ತಿದೆ. ಸತ್ಯ, ನ್ಯಾಯ, ಶಾಂತಿ, ಅಹಿಂಸೆ ಮರೀಚಿಕೆಯಾಗಿ ಸುಳ್ಳುಗಳೇ ದರ್ಬಾರು ನಡೆಸುತ್ತಿವೆ. ಹಿಂಸೆ ಭುಗಿಲೆದ್ದು ಶಾಂತಿ ಕದಡಿ ಅನ್ಯಾಯದ ವಾತಾವರಣ ಹುಟ್ಟಿಸುತ್ತಿದೆ. ಹಸಿವು, ನೋವು, ನಿರುದ್ಯೋಗ, ಅಭಿವೃದ್ಧಿ... ಯಾವುದೂ ಮುಗಿಯುವಂತಿಲ್ಲ. ಇವೆಲ್ಲಾ ಇದ್ದರೇನೇ ಅಲ್ಲಿ ಕುರ್ಚಿಗೆ ಬಲ ತುಂಬುವುದು.

ಹಿಂದೆ ಅಲ್ಪಸ್ವಲ್ಪವಾದರೂ ಸುಧಾರಿಸಿಕೊಂಡಿದ್ದ ಭಾರತವನ್ನು ಸಂಪೂರ್ಣ ವಿನಾಶದತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸರಕಾರದಿಂದ ಲಾಭ ಪಡೆದುಕೊಂಡವರೆಂದರೆ ಅಂಬಾನಿ, ಅದಾನಿಯಂತಹ ಭೀಮ ಉದ್ಯಮಿಗಳು ಮಾತ್ರ. ಸಾಮಾನ್ಯ ಪ್ರಜೆಗಳೆಲ್ಲಾ ಆಕಾಶ ನೋಡಿ ಕುಳಿತದ್ದಷ್ಟೇ.. ರಾಜನು 'ಸ್ಮೈಲ್ ಪ್ಲೀಸ್' ಅನ್ನುವವನ ಮುಂದೆ ವಿವಿಧ ಭಂಗಿಯ ಪೋಸ್ ಕೊಡುತ್ತಿದ್ದಾನೆ.

- ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!