ನಿದ್ದೆಯಲ್ಲಿ ಮನುಷ್ಯ ತಪ್ಪೇ ಮಾಡಲ್ವಂತೆ..!


ಸುರುಮ ಹಚ್ಚಿದಂತಿದ್ದ ಆಕೆಯ ಕಣ್ಣು ನೋಡಿ ಸಂತ 'ಯಾಕೆ ನಿದ್ದೆಯಿಲ್ಲವೇ' ಅಂತ ಕೇಳುತ್ತಾನೆ. ಆಕೆ ಅವಳದೇ ಮೌನ ಭಾಷೆಯಲ್ಲಿ ಹೌದು ಅಂದಾಗ ಸಂತ;
“ನಿದ್ರಿಸಬೇಕು, ಚೆನ್ನಾಗಿ ನಿದ್ರಿಸಬೇಕು.., ನಿದ್ದೆಯಲ್ಲಿ ಭಗವಂತ ಮಾತ್ರ ಜೊತೆಗಿರುತ್ತಾನೆ, ಅದೇ ಈ ಉಸಿರು. ಗೊರಕೆ ಹೊಡೆಯುವವರ ಮೂಗಿನ ತುದಿಯಲ್ಲಿ ಪಿಶಾಚಿ ಇರುತ್ತದೆಯಂತೆ, ಆದರೆ ಈ ಪಿಶಾಚಿ, ಜಿನ್ನ್ ಎಲ್ಲ ಮನುಷ್ಯ ಎಚ್ಚರದಲ್ಲಿರುವಾಗಲಷ್ಟೇ ನಮ್ಮ ತಲೆಗೆ ಹತ್ತಿ ಕೂರುವುದು. ನಿದ್ದೆಯಲ್ಲಿ ಜಾತಿ-ಧರ್ಮ, ದ್ವೇಷ, ದುಃಖ ಯಾವುದೂ ಇಲ್ಲ, ಬರೀ ಸೃಷ್ಟಿಕರ್ತ ಮಾತ್ರ..” ಎನ್ನುತ್ತಾನೆ. ಇದು ಸೂಫಿಯುಂ ಸುಜಾದಯುಂ ಎಂಬ ಮಲಯಾಳಂ ಸಿನೆಮಾದಲ್ಲಿನ ಒಂದು ತುಣುಕು. 

ಮನುಷ್ಯ ಮನಸ್ಸಿನ ತೃಪ್ತಿಗಾಗಿ ಅಲೆಯುತ್ತಾನೆ. ಸಂಕಟ, ದುಃಖ, ಸಂಕಷ್ಟ, ಸಮಸ್ಯೆ ಯಾವುದೂ ಇರಬಾರದೆಂದೂ ಬದಲು ಸಂತೋಷದಿಂದಲೇ ಕೂಡಿರಬೇಕೆಂಬ ವ್ಯಾಮೋಹದಲ್ಲಿರುತ್ತಾನೆ‌. ಆದರೆ, ಬಹುತೇಕ ಮನುಷ್ಯರಿಗೆ ಇದು ಸಾಧ್ಯವಾಗುವುದೇ ಇಲ್ಲ. ದಿನಕ್ಕೊಂದರಂತೆ ಸಮಸ್ಯೆಗಳು, ಕಾಡುವ ನೆನಪುಗಳು, ನೆರವೇರದ ಆಸೆಗಳು, ಕೆಲವೊಮ್ಮೆ ಸಾವಿನ ಭಯ..‌ಹೀಗೆ ನಾನಾರೀತಿಯಲ್ಲಿ ಮನುಷ್ಯನ ಮನಸ್ಸು ಚಂಚಲವಾಗುತ್ತಲೇ ಇರುತ್ತದೆ‌. ಹಗಲು ಹೊತ್ತಿನಲ್ಲಿ ತನ್ನ ಕಾಯಕದಲ್ಲಿ ಮಗ್ನನಾಗಿರುವುದರಿಂದ ಸಮಸ್ಯೆಗಳೆಲ್ಲ ಮನಸ್ಸನ್ನು ಹೊಂಚು ಹಾಕುವುದು ರಾತ್ರಿ ಪಾಳಿನಲ್ಲಿ. ನಿದ್ದೆ ಸುಳಿಯದ ರಾತ್ರಿಯಲ್ಲಿ ನಾವು ನೆನಪಿಸಬಾರದ್ದನ್ನೆಲ್ಲ ನೆನಪಿಸಿಕೊಳ್ಳುತ್ತಾ, ಚಿಂತಿಸಬಾರದ್ದನ್ನೆಲ್ಲಾ ಚಿಂತಿಸುತ್ತಾ ರಾತ್ರಿಯ ಸುಂದರ ನಿಮಿಷಗಳನ್ನು ಹಾಳು ಮಾಡುತ್ತೇವೆ.

ಕವಿಯೊಬ್ಬ ಹೀಗೆ ಹೇಳುತ್ತಾನೆ,
'ನಿದ್ದೆ ಎಷ್ಟು ಅದ್ಭುತವೆಂದರೆ,
ಬಂದರೆ ಎಲ್ಲವನ್ನೂ ಮರೆಸುತ್ತದೆ,
ಬರದಿದ್ದರೆ ಎಲ್ಲವನ್ನೂ ನೆನಪಿಸುತ್ತದೆ..'
ಒಪ್ಪಿಕೊಳ್ಳಬೇಕಾದುದೇ ತಾನೇ? ಇಡೀ ಹಗಲು ನಾವು ನೆನಪಿಸದ ಎಲ್ಲವನ್ನೂ ರಾತ್ರಿಯ ನಿದ್ರೆ ಬಾರದ ಸಣ್ಣ ಅವಧಿಯಲ್ಲಿ ನೆನಪಿಸುತ್ತೇವೆ. ಆ ನೆನಪುಗಳು, ಸಂಕಟಗಳೇ ನಮ್ಮನ್ನು ಹೆಚ್ಚಾಗಿ ಪೀಡಿಸುತ್ತದೆ. ಮನಸ್ಸಿನ ದೃಢತೆಯನ್ನು ಕಳೆದುಕೊಳ್ಳುವಂತಾಗಿಸುತ್ತದೆ. ಎಲ್ಲಕ್ಕೂ ಮಿಗಿಲಾಗಿ ಈ ಕಾಡುವಿಕೆಯ ತೀವ್ರತೆ ಹೆಚ್ಚಾಗಿ ರಾತ್ರಿಯನ್ನು ಜೀವಂತಗೊಳಿಸಿ, ನಿದ್ರೆಯನ್ನು ಓಡಿಸುತ್ತದೆ. ಆದರೆ, ಆ ಜೀವಂತ ರಾತ್ರಿ ಕುರುಡು ಹಗಲಿನಲ್ಲಿ ನಾವು ಇನ್ನಷ್ಟು ತಪ್ಪುಗಳೆಡೆಗೆ ಸಾಗುವುದಕ್ಕೆ ಕಾರಣವಾಗುತ್ತದೆ.

ನಿದ್ದೆ ಎಂದರೆ ತಾತ್ಕಾಲಿಕ ಸಾವು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಸತ್ತ ಮನುಷ್ಯನಿಗೆ ಯಾವುದೇ ಚಿಂತೆಯಿರುವುದಿಲ್ಲ. ತನ್ನ ಜೀವಿತಾವಧಿಯಲ್ಲಿ ಮಾನವ ಬದುಕುವುದಕ್ಕಾಗಿಯಷ್ಟೇ ಕಷ್ಟ ಪಡುತ್ತಾನೆ. ಸತ್ತ ನಂತರ ಏನು ಅಂತ ಕೇಳಿ ತಿಳಿದದ್ದೇ ಹೊರತು ಯಾರೂ ನೋಡಿದವರಿಲ್ಲ. ನಿಶ್ಚಲನಾಗಿ ಮಲಗಿ ಸಾವನ್ನಪ್ಪಿಕೊಂಡವ ಧನ್ಯನು. ಚಿಂತೆಯೇ ಇಲ್ಲದ ಭಾಗ್ಯದಾತು. ಬದುಕಿನ ನಾನಾ ತಿರುವುಗಳಲ್ಲೆಲ್ಲ ಚುಚ್ಚಿಕೊಂಡ ಮುಳ್ಳುಗಳು, ಕಚ್ಚಿಕೊಂಡ ಹಾವುಗಳು, ಬಿಚ್ಚಿಕೊಂಡ ಹೃದಯಗಳು.. ಎಲ್ಲವನ್ನೂ ಮರೆತು ಮನುಷ್ಯ ಒಂದು ದಿನ ತೆರಳುತ್ತಾನೆ. ಅಲ್ಲಿನ ಜೀವನದ ಬಗ್ಗೆ ಈಗ ಕಲ್ಪನೆಗಳು ಮಾತ್ರ. ಆದರೆ, ನಿದ್ದೆಯೆಂಬ ಸಾವನ್ನು ನಾವು ಪ್ರತಿದಿನ ಆಹ್ವಾನಿಸುತ್ತೇವೆ. ಶಾಶ್ವತ ಸಾವನ್ನು ಕಲ್ಪಿಸಿಕೊಳ್ಳಲು ನಿದ್ದೆಯ ಬಗ್ಗೆ ಆಳವಾಗಿ ಯೋಚಿಸಿದರೆ ಸಾಕು.

ನಿದ್ದೆಯೇನೆಂದು ಕೇಳಿದರೆ ನಾನು 'ಮನುಷ್ಯ ತಪ್ಪು ಮಾಡಲಾಗದ ಸಮಯ' ಎನ್ನುವೆ. ನಿದ್ದೆಯಲ್ಲೇನು ತಪ್ಪು ಮಾಡಬಲ್ಲದು.? ಕಣ್ಣು ತೆರೆದಿರುವಾಗಷ್ಟೇ ನಮಗೆ ಆಸೆಗಳು, ಬಯಕೆಗಳು ಹುಟ್ಟುತ್ತದೆ. ಹಾಗಂತ ಕುರುಡನಿಗೆ ಆಸೆಗಳಿಲ್ಲ ಅಂತಲ್ಲ. ವಾಸ್ತವದ ಬದುಕ‌ನ್ನು ಸ್ವೀಕರಿಸಲು ಮನಸೊಪ್ಪದೆ ನಿದ್ದೆ‌ಕೆಡಿಸಿದ ಕನಸುಗಳಿಗೆ ಸಾಕಾರತೆ ಹುಡುಕಲು ಮನುಷ್ಯ ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಾನೆ. ಬಯಕೆಗಳನ್ನು ಈಡೇರಿಸಲು ತಪ್ಪು ದಾರಿಯೇ ಯಾಕೆ ಹೆಚ್ಚಿನವರು ಆಯ್ದುಕೊಳ್ಳುವುದು? ಅವಸರ., ಸಾವು ಎಲ್ಲರ ನೆರಳಿನ ಜೊತೆಗೇ ಇದೆ. ಅದಕ್ಕೂ ಮುನ್ನ ಆಸೆಗಳನ್ನು ಕಣ್ತುಂಬಬೇಕೆಂಬ ಅತಿಮೋಹ. ಅದಕ್ಕೆ ಸುಲಭದ ದಾರಿ 'ತಪ್ಪುಗಳು'.

ನಮ್ಮೊಳಗೆ ಕಾಡಿಕೊಳ್ಳುವ ನೂರಾರು ನೆನಪುಗಳಿರುತ್ತವೆ. ಅವನ್ನೆಲ್ಲ ನಾವು ಯೋಚಿಸುವುದು ಯಾವಾಗ? ನಿದ್ರೆಗೂ ಮೊದಲು ತಾನೇ? ಯಾಕಾಗಿ ಆಗ ನಮಗೆ ಯೋಚನೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು? 
ಯಾಕೆಂದರೆ, ರಾತ್ರಿ ನಾವಂದುಕೊಂಡಂತೆ ಭಯಾನಕ ಅಲ್ಲ. ಹಗಲು ಬಲು ಕ್ರೂರಿ. ಬೆಳಕಿನಲ್ಲಿ ಕರ್ಕಶಗಳಷ್ಟೇ ಸದ್ದಾಗುತ್ತದೆ. ಯೋಚನೆಗಿಂತ ಹೆಚ್ಚು ಕಾರ್ಯಗಳೆಡೆಗೆ ಹಗಲು ಕರೆದೊಯ್ಯುತ್ತದೆ. ಇರುಳು ಹಾಗಲ್ಲ, ಇದು ಶಾಂತ ಸಮುದ್ರ. ಜೀರುಂಡೆಗಳ ನಿನಾದ, ಕಪ್ಪೆಗಳ ವಟವಟ, ಜಡಿಮಳೆಯ ಪಿರಿಪಿರಿ ಸದ್ದು, ಗುಯ್ಂ ಗುಟ್ಟುವ ಸೊಳ್ಳೆ-ಕೀಟಗಳ ಸಂಗೀತ.. ಇವೆಲ್ಲದರ ನಡುವೆ ಆವರಿಸಿದ ಕತ್ತಲಿನಲ್ಲಿ ಮನುಷ್ಯನ ಮನಸ್ಸು ಹೆಚ್ಚು ಪ್ರಭಾವಿಯಾಗುತ್ತದೆ. ಕತ್ತಲಿನಲ್ಲಿ ಕಂಡುಕೊಂಡ ನಿರ್ಧಾರಗಳಿಗೆ ಜೀವ ತುಂಬಲಷ್ಟೇ ಹಗಲು ಸಹಕರಿಸುತ್ತದೆ. 

ದ್ವೇಷ ಮಾನವನ ಅತಿದೊಡ್ಡ ಸ್ವಯಂ ಶತ್ರು. ಕೋಪವನ್ನು ಹಚ್ಚಿಕೊಂಡವನು ಬದುಕಿನ ಗುರಿ ತಲುಪಲಾರ. ಸಣ್ಣಪುಟ್ಟ ಕಾರ್ಯಗಳಿಗೂ ಅಗಾಧವಾಗಿ ಕೋಪಿಸಿಕೊಳ್ಳುವುದು ನಮ್ಮನ್ನು ಕ್ರೂರ ಕೃತ್ಯಗಳೆಡೆಗೆ ಪ್ರಚೋದಿಸುತ್ತದೆ. ಸಿಟ್ಟು ಅಭ್ಯಾಸವಾದವನಿಗೆ ಶತ್ರುಗಳು ಹೆಚ್ಚಾಗುತ್ತಿರುತ್ತಾರೆ. ಜೊತೆಗಾರರೆಲ್ಲ ಅಂತರ ಕಾಯ್ದುಕೊಂಡು, ಆತ ಒಬ್ಬಂಟಿಯಾಗುತ್ತಾನೆ. ಒಮ್ಮೊಮ್ಮೆ ನಿದ್ದೆಯೂ ದೂರ ನಿಲ್ಲುವುದುಂಟು‌. ಆಗಲೇ ಜೀವನದಲ್ಲಿ ಜಿಗುಪ್ಸೆಯ ಅರಿವಾಗುತ್ತದೆ. ಸಿಟ್ಟನ್ನು ಅಳಿಸಿ ಪ್ರೀತಿ ಹಂಚಬೇಕೆಂಬ ಜ್ಞಾನೋದಯ, ಸಮಯ ಮಾತ್ರ ಮೀರಿರುತ್ತದೆ.

ನಮಗೆ ತಪ್ಪಿನ ಅರಿವಾಗುವುದು ಸಾವು ಹತ್ತಿರವಾದಾಗ ಮತ್ತು ನಿದ್ದೆ ದೂರವಾದಾಗ. ಸಾವು ಯಾವಾಗ, ಹೇಗೆ, ಎಲ್ಲಿ ಎನ್ನುವುದು ತಿಳಿದವರಾರೂ ಇಲ್ಲ. ಎಲ್ಲರೂ ನಾಳೆಯ ಭರವಸೆಯಲ್ಲೇ ಬದುಕುತ್ತಿದ್ದಾರೆ. ಮೊನ್ನೆ ಗೆಳೆಯರೊಡನೆ 'ಸಾಯುವ ದಿನ ಮೊದಲೇ ಗೊತ್ತಾದರೆ..?' ಎನ್ನುವ ಪ್ರಶ್ನೆಯೆತ್ತಿದ್ದೆ. ಹೆಚ್ಚಿನವರು ತಮಾಷೆಯಾಗಿಯೂ, ಕೆಲವರು ಆಧ್ಯಾತ್ಮಿಕವಾಗಿಯೂ ಉತ್ತರ ಕೊಟ್ಟರು‌. ಒಂದಿಬ್ಬರು 'ನೆಮ್ಮದಿಯಿಲ್ಲದಾಗಬಹುದು' ಎಂಬ ಉತ್ತರವನ್ನಿಟ್ಟಿದ್ದರು. ವಾಸ್ತವದಲ್ಲಿ ಮನುಷ್ಯ ಈಗಲೂ ನೆಮ್ಮದಿ ಕಳೆದುಕೊಂಡಿದ್ದಾನೆ. ಒಂದು ವೇಳೆ ನನಗೇನಾದರೂ ಸಾವು ಮೊದಲೇ ತಿಳಿದರೆ, ಒಂದಿಷ್ಟು ಹೆಚ್ಚು ಪ್ರೀತಿ ಹಂಚುವೆ. ನಾ ತಿಳಿದಂತೆ ಬದುಕು ಗೆಲ್ಲಲು ಪ್ರೀತಿಯಷ್ಟೇ ಸಾಕು.. ದ್ವೇಷ, ಕ್ರೋಧ, ಆಸೂಯೆ ಎಲ್ಲಾ ಜೀವನ ಮತ್ತು ಜೀವವನ್ನೆರಡನ್ನೂ ಸುಡಬಲ್ಲದು. ನಿದ್ದೆಯೆಂಬ ಶಾಂತ ಕಡಲಲ್ಲಿ ವಿಹರಿಸಿ ನೋಡಿ, ಹಗಲಿನ ಇರುಳಲ್ಲಿ ಮನಸ್ಸಿಗೆ ಅಂಟಿಕೊಂಡ ಕಲ್ಮಶಗಳೆಲ್ಲವೂ ನಿದ್ದೆಯಿಂದೇಳುವ ಹೊತ್ತಿಗೆ ತೊಳೆದುಕೊಂಡಿರುತ್ತದೆ. ಹೊಸ ಬದುಕಿಗೆ ಮುನ್ನುಡಿ ಬರೆದು.., ನಿನ್ನೆಗಳನ್ನು ನೆನಪಿಸುತ್ತಾ ಇವತ್ತಿನ ದಿನವನ್ನು ವ್ಯರ್ಥ ಮಾಡಬಾರದು.

ನಿದ್ದೆಯಲ್ಲಿ ಕನಸುಗಳು ನಮ್ಮನ್ನಾವರಿಸುತ್ತದೆ. ನಿದ್ದೆಯನ್ನು ಕಸಿಯುವ ಕನಸು ಅದು ಬೇರೆ, ಇದು ನಿದ್ದೆಯಲ್ಲಿ ಮನರಂಜಿಸುವ ಕನಸುಗಳು. ಸೊಗಸಾಗಿರುತ್ತದೆ, ಯಾವ್ಯಾವುದೋ ಘಟನೆಗಳು ನಮಗೆ ಒಂದು ಪರದೆಯ ಮೇಲೆ ಕಾಣುವಂತೆ ಭಾಸವಾಗುವುದು, ಯೋಚಿಸುವಾಗ ಅಚ್ಚರಿಯಾಗುತ್ತದೆ‌. ಒಮ್ಮೊಮ್ಮೆ ರೊಮ್ಯಾಂಟಿಕ್, ಥ್ರಿಲ್ಲರ್, ಹಾರರ್, ಆ್ಯಕ್ಷನ್, ಡ್ರಾಮಾ... ಒಂಥರಾ ಸಿನೇಮಾಗಳಂತೆಯೇ ಕನಸು ಕೂಡ. ಆಗಿಂದೊಮ್ಮೆ ಬೋರ್, ಇಂಟ್ರೆಸ್ಟಿಂಗ್, ಸಸ್ಪೆನ್ಸ್.. ಎಲ್ಲಾ ಐದಾರು ಗಂಟೆಯ ನಿದ್ದೆಯಲ್ಲಿ ಕಂಡಿರುತ್ತೀವಿ. ಹೆಚ್ಚಿನವುಗಳು ಕಣ್ಣು ತೆರೆಯುವಷ್ಟರಲ್ಲಿ ಮರೆತು ಹೋಗಿರುತ್ತದೆ. ಯಾಕೆ ಗೊತ್ತಾ? ಅದು ನಿದ್ದೆಯಲ್ಲಿ ಕಂಡ ಕನಸಾಗಿದ್ದರಿಂದ. ನಿದ್ದೆ ನಮ್ಮನ್ನು ಕಾಲ್ಪನಿಕ ಜಗತ್ತಿಗೆ ಕರೆದೊಯ್ಯುತ್ತದೆ. ಮನಸ್ಸಿನ ಭಾರಗಳನ್ನೆಲ್ಲಾ ಇಳಿಸಿ, ಮುದ ನೀಡುವುದು. ನಿದ್ದೆ ಲಹರಿಯಾಗಿಸಿದವ ನಮಗಿಂತಲೂ ಚೆನ್ನಾಗಿ ಅದನ್ನು ಆಸ್ವಾದಿಸಬಲ್ಲ. ಅದರ ಹೊರತಾಗಿ ಯಾವ ನಶೆಯೂ ದೊಡ್ಡದಲ್ಲ.

ನಿದ್ದೆಯೆಂಬುದೇ ಇಲ್ಲದಿದ್ದರೆ ಮಾನವ ಅದೆಷ್ಟು ತಪ್ಪು ಮಾಡುತ್ತಿದ್ದನಲ್ವಾ? ನೋಡಿ, ಘೋರ ತಪ್ಪುಗಳು ಹೆಚ್ಚಿನವು ರಾತ್ರಿಯಲ್ಲೇ ನಡೆಯುತ್ತಿದೆ. ಕಳ್ಳತನ, ದರೋಢೆ, ಅತ್ಯಾಚಾರ, ಕೊಲೆ.. ಹೀಗೆ ಸರ್ವ ತಪ್ಪುಗಳೂ ಸಂಭವಿಸುವುದು ಬಹಳವಾಗಿ ಕತ್ತಲೆಯಲ್ಲಿ. ಕಾರಣ, ಇವೆಲ್ಲದರ ವಿಕೃತ ಸ್ವರೂಪಗಳು ಆತನ ನಿದ್ದೆಕೆಡಿಸಿರುತ್ತದೆ. ನಿದ್ದೆಯಿಲ್ಲದವನಷ್ಟೇ ರಾತ್ರಿಯಲ್ಲಿ ತಪ್ಪು ಮಾಡುವನು‌. ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎನ್ನುತ್ತಾರಲ್ಲ, ಹಾಗೇ ಚಿಂತೆಯಿದ್ದವನಿಗೆ ರಾತ್ರಿಯೂ ಸಂತೆಯೇ. ಚಿಂತೆ ಕಾಡುತ್ತಿರುವಾಗ ರಾತ್ರಿ ಹಗಲಿಗಿಂತ ಕರ್ಕಶವಾಗುತ್ತದೆ. ಅದನ್ನು ಮೆಟ್ಟಿ ನಿಲ್ಲಬೇಕೆಂದು ತಪ್ಪು ಮಾಡುತ್ತಾನೆ. ಆದರೆ, ನಿಜವಾಗಿ ಆತನಿಗೆ ತಪ್ಪುಗಳು ದಿನಚರಿಯಾಗುತ್ತದೆಯೇ ಹೊರತು ಚಿಂತೆ  ಕಾಡಿಸುವುದನ್ನೂ ಬಿಡುವುದಿಲ್ಲ.

ಹೀಗೆ ಹೇಳುತ್ತಿರಬೇಕಾದರೆ, ನಿದ್ದೆಗೆಟ್ಟವರೆಲ್ಲ ತಪ್ಪು ಮಾಡುತ್ತಾನೆ ಅನ್ನಲಾಗದು. ಸಿದ್ಧಾರ್ಥನನ್ನು ನಿದ್ದೆಗೆಡಿಸಿದ ಆ ಯೋಚನೆಗಳು ಬುದ್ಧನನ್ನಾಗಿಸಿತು. ನಿದ್ದೆಯಿಲ್ಲದಿದ್ದರೆ, ಕೆಲವೊಮ್ಮೆ ಮನುಷ್ಯ ಮನುಷ್ಯನಾಗಿ ಬದಲಾಗುವುದುಂಟು. ಅವೆಲ್ಲ ನಮ್ಮ ಮನಸ್ಸಿನ ಯೋಚನೆಯ ಪ್ರಭಾವವನ್ನು ಅವಲಂಬಿಸಿರುತ್ತದೆ. ಒಮ್ಮೊಮ್ಮೆ ನಿದ್ದೆಯೇ ಇಲ್ಲದ ರಾತ್ರಿಗಳಲ್ಲಿ ಶಾಶ್ವತ ನಿದ್ದೆಗೆ ಜಾರಿಕೊಳ್ಳುವುದೂ ಉಂಟು. ಹೀಗೆ, ನಿದ್ದೆ ಎನ್ನುವುದು ಒಂದು ಅದ್ಭುತ. ತಪ್ಪುಗಳಿಲ್ಲದೆ ಮುಗ್ಧನಾಗಿ ಬದುಕುವ ಒಂದಿಷ್ಟು ಗಂಟೆಗಳು. ನಾನರಿತಂತೆ ನಿದ್ದೆಯಲ್ಲಿ ತಪ್ಪು ಮಾಡಿದವರೇ ಇಲ್ಲ.
(ನಿದ್ದೆಯಿಲ್ಲದ ರಾತ್ರಿಯಲ್ಲಿ ಗೀಚಿದ್ದು..)

- ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!