ನೆಟ್ವರ್ಕ್ ಮಾರ್ಕೆಟಿಂಗ್; ನಾವು ಮೋಸ ಹೋಗುತ್ತಿದ್ದೇವೆ..!?
ಮನುಷ್ಯ ಇವತ್ತು ಹಣದ ಹಿಂದೆ ಓಡುತ್ತಿದ್ದಾನೆ. ಸುಲಭದಲ್ಲಿ ಹಣ ಸಂಪಾದಿಸುವುದು, ಬಲುಬೇಗನೆ ಶ್ರೀಮಂತನಾಗುವ ಕನಸನ್ನು ಎಲ್ಲರೂ ಕಟ್ಟಿಕೊಂಡಿರುತ್ತಾರೆ. ಅದಕ್ಕಾಗಿ ಅಡ್ಡಾದಿಡ್ಡಿ ಓಡಾಡುತ್ತಾ, ಹಣದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮನುಷ್ಯ ತನ್ನ ಕೈಯಲ್ಲಿ ಒಂದಿಷ್ಟು ಹಣ ಬಂದಾಗ ಲೋಕವನ್ನೇ ಮರೆತು ಬೀಗುತ್ತಾನೆ. ಅಹಂಕಾರದ ದಿವಾಳಿಯಾಗಿ, ನಡೆದು ಬಂದ ದಾರಿಯನ್ನೂ ಮರೆತು ಕೆಲವೊಮ್ಮೆ ಬದುಕಿನ ಕ್ಷಣಿಕ ಸುಖಗಳಿಗೆ ಮಾರುಹೋಗುತ್ತಾನೆ. ಬದುಕಲು ಹಣ ಅಗತ್ಯ, ಆದರೆ ಹಣ ಸಂಪಾದಿಸಲೆಂದೇ ಬದುಕಬಾರದು. ಸಂಪಾದನೆಯ ಜೊತೆಗೆ ಸನ್ಮನಸ್ಸನ್ನು ಬೆಳೆಸಿಕೊಂಡು, ಕೈಲಾಗದವರಿಗೆ ನಮ್ಮಿಂದಾಗುವ ಸಹಾಯ, ಸಹಕಾರ ನೀಡುವ ಮೂಲಕ ಜೀವನ ಅರ್ಥಪೂರ್ಣವಾಗಿಸಬೇಕಾದ ಕರ್ತವ್ಯ ನಮ್ಮ ಮೇಲಿದೆ.
ಇಲ್ಲಿ ಪ್ರಸ್ತಾಪಿಸುತ್ತಿರುವ ವಿಷಯ ಅದಲ್ಲ, ಕಳೆದ ವರ್ಷ ಅಂದರೆ 2019 ರ ಸೆಪ್ಟೆಂಬರ್ ನಲ್ಲಿ ಕೇರಳದ ಮಲಪ್ಪುರ ಜಿಲ್ಲೆಯಲ್ಲಿ ಶುಕೂರ್ ಎಂಬ 35 ವರ್ಷ ಪ್ರಾಯದ ಯುವಕನೊಬ್ಬನ ಹತ್ಯೆಯಾಗುತ್ತದೆ. ಆತನನ್ನು ಕೊಲೆಗೈದಿದ್ದು ಆತನ ಸ್ನೇಹಿತರೇ ಆಗಿತ್ತು. ಪೋಲೀಸರು ಇದರ ಹಿಂದೆ ತನಿಖೆ ನಡೆಸಿದಾಗ ಬೆಳಕಿಗೆ ಬಂದ ಬೆಚ್ಚಿಬೀಳಿಸುವ ಸುದ್ದಿಯೆಂದರೆ, ಶುಕೂರ್ ಮತ್ತು ಆತನ ತಂಡ ಗೆಳೆಯರನ್ನೂ ಸೇರಿಸಿ, ಇಡೀ ಜಿಲ್ಲೆಯಿಂದ ಸುಮಾರು 450 ಕೋಟಿಯಷ್ಟು ಹಣವನ್ನು ಕಬಳಿಸಿದ್ದಾನೆ ಅನ್ನುವುದಾಗಿತ್ತು. Bitcoin ಹೆಸರಿನಲ್ಲಿ ದಂಧೆ ನಡೆಸಿ, ಜನರನ್ನು ಮೋಸದ ಜಾಲಕ್ಕೆ ಬಲಿಯಾಗಿಸಿ ಹಣ ದೋಚಿದ ಕಾರಣವಾಗಿ, ತಾವು ನಿಕ್ಷೇಪಿಸಿದ ಹಣ ಮರಳಿ ಸಿಗದೇ ಇದ್ದುದರಿಂದ ಆತನ ಗೆಳೆಯರೇ ಅತನನ್ನು ಕೊಲೆ ಮಾಡಿದ್ದರು.
ಇದು ಒಂದು ಪ್ರಕರಣ ಮಾತ್ರ ಅಲ್ಲ, ಇಂತಹ ಅದೆಷ್ಟೋ ದಂಧೆಗಳು ಜಗತ್ತಿನಾದ್ಯಂತ ನಡೆಯುತ್ತಿದೆ. ಪ್ರತಿದಿನ ಸಾವಿರಾರು ಕೋಟಿ ರೂಪಾಯಿಗಳನ್ನು ಜನಸಾಮಾನ್ಯರಿಂದ ಸಂಗ್ರಹಿಸಿ ಕಬಳಿಸಲಾಗುತ್ತಿದೆ. BITCOIN, Trading, MLM, Network Marketing,... ಹೀಗೆ ವಿವಿಧ ಆಯಾಮದಲ್ಲಿ ಮೋಸದ ಜಾಲ ವ್ಯಾಪಿಸಿಕೊಂಡಿದೆ. ಇವೆಲ್ಲದರ ಮೂಲ ಉದ್ದೇಶ ಸಾಮಾನ್ಯರಿಂದ, ಅದರಲ್ಲೂ ನಿರುದ್ಯೋಗಿ ಯುವಕ-ಯುವತಿಯರನ್ನೇ ಗುರಿಯಾಗಿಸಿಕೊಂಡು, ಐಶಾರಾಮಿ ಜೀವನದ ಕಲ್ಪನೆಯನ್ನು ಮುಂದಿಟ್ಟುಕೊಂಡು, ನಿಕ್ಷೇಪದ ಎರಡು ಪಟ್ಟು ಲಾಭದ ಆಮಿಷವೊಡ್ಡಿ ಹಣ ದೋಚುವುದಾಗಿರುತ್ತದೆ.
ಈಗ ಕೊರೋನಾ ಕಾರಣ ಲಾಕ್ಡೌನ್ ವೇಳೆಯಲ್ಲಿ ಅಣಬೆಗಳಂತೆ ಬಹಳಷ್ಟು ಈ ರೀತಿಯ ನೆಟ್ವರ್ಕ್ ಮಾರ್ಕೆಟಿಂಗ್ ಜಾಲ ಹುಟ್ಟಿಕೊಂಡಿದೆ. 10000 ಇನ್ವೆಸ್ಟ್ ಮಾಡಿದಲ್ಲಿ ಪ್ರತಿ ದಿನ 4% ದಷ್ಟು ಲಾಭ ನೀಡಲಾಗುವುದು ಎನ್ನುತ್ತಾ ಯುವ ಜನತೆಯ ಮನವೊಲಿಸಿ ಮೋಸದಾಟ ಮುಂದುವರಿದಿದೆ. ಈ ಹಿಂದೆ MLM (Multi Level Marketing) ಹೆಸರಿನಲ್ಲೂ ಇದೇ ರೀತಿ ದಂಧೆ ನಡೆದಿತ್ತು. ಈಗ ಅದನ್ನೇ ಟ್ರೇಡಿಂಗ್ ಎಂಬ ಟ್ಯಾಗ್‌ಲೈನ್ ಮೂಲಕ ಗುರುತಿಸಿಕೊಳ್ಳಲಾಗುತ್ತಿದೆ. ಎಂಎಲ್ಎಮ್ ಎನ್ನುವುದು ಚೈನ್ ಬ್ಯುಸಿನೆಸ್ ಆಗಿತ್ತು. ತಮ್ಮ ಅಡಿಯಲ್ಲಿ ಜನರನ್ನು ಸೇರಿಸಿಕೊಂಡು ಹೋದಲ್ಲಿ ಅದರ ಲಾಭಾಂಶ ದೊರೆಯುತ್ತಿತ್ತು. ಇವತ್ತು ವ್ಯಾಪಿಸಿಕೊಂಡಿರುವ ನೆಟ್ವರ್ಕ್ ಮಾರ್ಕೆಟಿಂಗ್ ಅಥವಾ ಟ್ರೇಡ್ ಮಾರ್ಕೆಟ್ ಎಂದು ಕರೆಯಲ್ಪಡುವ ಈ ಪದ್ಧತಿಯೂ MLM ಮಾದರಿಯೇ ಆಗಿದ್ದು, ಜನರನ್ನು ನಂಬಿಸುವ ಸಲುವಾಗಿ ಇದರ ಜೊತೆಗೆ ಒಂದು ವಸ್ತುವನ್ನು (products) ತಂದಿರಿಸಲಾಗಿದೆ ಮಾತ್ರ.
ಕೇರಳದ ತೃಶ್ಶೂರ್ ಜಿಲ್ಲೆಯ ಒಬ್ಬ ಶ್ರೀಮಂತನ ಒಡೆತನದ ಇದೇ ರೀತಿಯ ಒಂದು ಮಾರ್ಕೆಟಿಂಗ್ ಕಂಪೆನಿ ದೇಶದಾದ್ಯಂತ ವ್ಯಾಪಿಸಿಕೊಂಡಿದೆ. ಇಂತಹ ಅದೆಷ್ಟೋ ಕಂಪೆನಿಗಳಿವೆ. ಇದಕ್ಕೆ ಜನರನ್ನು ಸೇರಿಸಿಕೊಂಡಷ್ಟು ಲಾಭವನ್ನು ನೀಡುತ್ತದೆ. ಇವರು ಟ್ರೇಡ್ ಬ್ಯುಸಿನೆಸ್ ನಲ್ಲಿ ಹಣ ನಿಕ್ಷೇಪಿಸಿ ಅದರ ಲಾಭವನ್ನು ಹಂಚಲಾಗುತ್ತಿದೆ ಎಂದು ಹೇಳುತ್ತಾರೆ. ಆದರೆ, ಟ್ರೇಡಿಂಗ್ ಎನ್ನುವುದು ಸಮಾಂತರ ಲಾಭದಿಂದ ಮುನ್ನಡೆಯುವುದಲ್ಲ. ಲಾಭ-ನಷ್ಟ ಎರಡೂ ಈ ಟ್ರೇಡಿಂಗ್ ನಲ್ಲಿರುತ್ತದೆ. ಆದರೆ, ನೆಟ್ವರ್ಕ್ ಮಾರ್ಕೆಟಿಂಗ್ ನಲ್ಲಿ ಇವರು ನೀಡುವುದು ಸಮಾಂತರ ಲಾಭವಾಗಿದೆ. ಅಂದರೆ, ತನ್ನ ಚೈನಿನಲ್ಲಿ ಕೊನೆಯವನ ಹಣವನ್ನು ಮೇಲಿನವರಿಗೆ ಹಂಚುವ MLM ರೀತಿಯ ಪ್ರಕ್ರಿಯೆ. MLM ನ ಮೋಸದಾಟ ಜನರು ಅರ್ಥಮಾಡಿಕೊಂಡು, ಅದರಿಂದ ಹಿಂದೆಸರಿದಾಗ ಅದೇ ಪ್ರಕ್ರಿಯೆಯನ್ನು ಸ್ವಲ್ಪ ವಿಭಿನ್ನವಾಗಿಸಿ, ಅದರಲ್ಲಿ ಸೇರಿಕೊಳ್ಳುವ ವೇಳೆಗೆ ಯಾವುದಾದರೊಂದು ಪ್ರಾಡಕ್ಟ್ ನೀಡುವ ಮೂಲಕವೋ, ಪ್ರತಿದಿನ ನಿಗಧಿತ ಶತಮಾನ ಲಾಭಾಂಶ ನೀಡುವ ಮೂಲಕ ನಡೆದುಬರುತ್ತಿದೆ.
ಇದರ ಜೊತೆಗೇ ಲಕ್ಕಿ ಡ್ರಾ ಎಂಬ ಇನ್ನೊಂದು ಅವತಾರ ಹುಟ್ಟಿಕೊಂಡಿದೆ. ಇದು ಕೂಡ ಜನರಿಂದ ಹಣ ದೋಚುವ ಹುನ್ನಾರವಾಗಿದೆ. ಈ ಬಗ್ಗೆ ಈಗಾಗಲೇ ಪೋಲೀಸರೂ ಎಚ್ಚೆತ್ತುಕೊಂಡಿದ್ದು, ದಂಧೆ ನಡೆಸುವವರನ್ನು ಪತ್ತೆ ಹಚ್ಚಲು ಸುತ್ತೋಲೆ ಹೊರಡಿಸಿದೆ. ಇಂತಹ ಎಲ್ಲಾ ಮಾರ್ಕೆಟಿಂಗ್ ವಹಿವಾಟು ಶಿಕ್ಷಾರ್ಹ ಅಪರಾಧವಾಗಿದೆ.
ಇಲ್ಲಿ ಸೇರಿಕೊಂಡಿರುವವರ ವಾದವೇನೆಂದರೆ, 'ನನಗೆ ನಿಕ್ಷೇಪಕ್ಕಿಂತ ಅಧಿಕ ಹಣ ದೊರಕಿದೆ' ಎನ್ನುವುದಾಗಿರುತ್ತದೆ. ಆದರೆ, ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯವೇನೆಂದರೆ, ನಾವರಿಯದೇ ನಮ್ಮ ಗೆಳೆಯನೊಬ್ಬನ ನಷ್ಟಕ್ಕೆ ನಾವು ಕಾರಣವಾಗಬಹುದು. ಆರಂಭದಲ್ಲಿ ಸೇರಿಕೊಂಡವರಿಗೆ ಹೆಚ್ಚಿನ ಲಾಭ ದೊರಕಿರಬಹದು. ನಿಮ್ಮ ಆದಾಯ ಗಮನಿಸಿ ನಿಮ್ಮ ಗೆಳೆಯರೂ ಮಾರುಹೋಗಬಹುದು. ಆಗ ಅವರೂ ಸೇರಿಕೊಳ್ಳುತ್ತಾರೆ, ಅವರಿಗೂ ಸಣ್ಣಪುಟ್ಟ ಲಾಭ ದೊರೆತಾಗ ಅವರಡಿಯಲ್ಲೂ ಒಂದಷ್ಟು ಮಂದಿ ಸೇರಿಕೊಳ್ಳುತ್ತಾರೆ. ಈ ರೀತಿ ಚೈನ್ ನೆಟ್ವರ್ಕ್ ಬೆಳೆದಾಗ, ಕಂಪೆನಿಗೆ ಹೆಚ್ಚಿನ ಆದಾಯ ಬರತೊಡಗಿದಾಗ ಅವರು ಪಲಾಯನ ಮಾಡುತ್ತಾರೆ. ಆಗ ಕೊನೆಯದಾಗಿ ಸೇರಿಕೊಂಡವರು ಮೋಸಕ್ಕೀಡಾಗುತ್ತಾರೆ. ಒಂದರ್ಥದಲ್ಲಿ ನೀವೂ ಕೂಡ ಇದಕ್ಕೆ ಜವಾಬ್ದಾರರಾಗಿರುತ್ತೀರಿ.
ದುಡ್ಡು ಮಾಡಲು ಹಲವು ದಾರಿಗಳಿವೆ. ಏನಾದರೊಂದು ಸಣ್ಣ ಉದ್ಯೋಗ ಮಾಡಿ ದುಡಿದು ತಿನ್ನುವುದಕ್ಕೆ ಒಂದು ಅರ್ಥವಿದೆ. ಯಾರದ್ದೋ ಮೋಸದಾಟಕ್ಕೆ ಮನಸೋತು ಅದರಿಂದ ಲಾಭ ಪಡೆದು ನಮ್ಮವರ ಹಣವನ್ನೇ ನಾವು ದೋಚುವ ಈ ನೀಚ ಪ್ರಕ್ರಿಯೆಯಿಂದ ಶ್ರೀಮಂತನಾದರೂ ಪ್ರಯೋಜನವೇನಿದೆ? ವಿಪರ್ಯಾಸವೇನೆಂದರೆ, ಇಲ್ಲಿ ಸೇರಿಕೊಂಡವರು, ಮೋಸ ಹೋದವರು ಬಹುತೇಕ ವಿದ್ಯಾವಂತರು, ಪದವೀಧರರೇ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಪರಿಣಾಮಕಾರಿಯಾಗಿರುವ ಪ್ರಸಕ್ತ ಸಂಧರ್ಭದಲ್ಲಿ ಮಾತಿನ ಮೋಡಿಗೆ ಮನಸ್ಸು ವಿಚಲಿತಗೊಂಡು ವೇಗವಾಗಿ ಶ್ರೀಮಂತನಾಗುವ ಕನಸಿನಲ್ಲಿ, ಇಂತಹ ದಂಧೆಯಲ್ಲಿ ಪಾಲುದಾರರಾಗುತ್ತಾರೆ. ಒಂದು ಕ್ಷಣ ಕುಳಿತು ಯೋಚಿಸುವಲ್ಲಿಯೂ ನಮಗೆ ತಾಳ್ಮೆಯಿರುವುದಿಲ್ಲ. ಕಾರಣ, ಹಣ ಎಂಬ ಎರಡಕ್ಷರ ಅಷ್ಟಕ್ಕೂ ನಮ್ಮನ್ನು ಆಟವಾಡಿಸುತ್ತದೆ. ಆರ್ ಬಿ ಐ ನಿಯಮಾನುಸಾರ ಈ ನೆಟ್ವರ್ಕಿಂಗ್ ಮಾರ್ಕೆಟಿಂಗ್ ದಂಧೆಯೂ ಅಪರಾಧವಾಗಿದ್ದು, ಘೋರ ಶಿಕ್ಷೆಗೆ ವಿಧೇಯರಾಗಬಹುದು.
ಯುವ ಜನತೆ ಇನ್ನಾದರೂ ಎಚ್ಚೆತ್ತುಕೊಂಡು,
ಇಂತಹ ಮೋಸದ ಜಾಲಕ್ಕೆ ಬಲಿಯಾಗದೇ,
ತಮ್ಮವರನ್ನೂ ಇದರಲ್ಲಿ ನಿಸ್ಸೀಮರನ್ನಾಗಿಸದೇ,
ದಂಧೆ ನಡೆಸುವವರ ವಿರುದ್ಧ ಎಚ್ಚರಗೊಳ್ಳಬೇಕಾದ ಅನಿವಾರ್ಯತೆಯಿದೆ.
-ಹಕೀಂ ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou