ನನ್ನ ರಕ್ತ ಮತ್ತು ದಾನ..

ಅಪಘಾತವೊಂದಕೆ ಮುಖಮಾಡಿ,
ತನ್ನೊಡಲ ರಕ್ತವನೆಲ್ಲ ರಸ್ತೆಯಲಿ ಚೆಲ್ಲಿ,
ಜೀವನದ ಕೊನೆಚುಕ್ಕಿಯೆಡೆಗೆ ಪಾದವಿಡುವಾಗ,
ಮರಳಿ ಜೀವ ಕೊಟ್ಟದ್ದು,
ಅಲ್ಲ ಕೊಡಿಸಿದ್ದು ನನ್ನ ರಕ್ತ..

ಮುದಿಜೀವಕೊಂದು ಇನ್ನೂ ಬದುಕುವಾಸೆ..
ಶಿಥಿಲಗೊಂಡ ಎಲುಬುಗಳಷ್ಟೇ,
ಅವನ ದೇಹದಲ್ಲಿ ಅವಶೇಷಿಸಿರುವುದು..,
ಆಸ್ಪತ್ರೆಯ ಮಂಚದಲಿ ಮಲಗಿ,
ಬದುಕುವ ಹಂಬಲವಿಟ್ಟಾಗ ಅವನಿಗೆ,
ಒಂದಿಷ್ಟು ಆಯಸ್ಸು ಹೆಚ್ಚಿಸಿ ಕೊಟ್ಟದ್ದು,
ಅಲ್ಲ ಹೆಚ್ಚಿಸಿ ಕೊಡಿಸಿದ್ದು ನನ್ನ ರಕ್ತ..

ಹೊಟ್ಟೆಯೊಳಗೊಂದು ಕುಡಿ ಹೊತ್ತಿರುವ,
ಅವಳಿಗೆ ಭಾರ ತಾಳಲಾಗುವುದೇ..?
ಬಳಲಿದ ದೇಹಕೆ ಭಾರ ಹೊರುವ,
ಪುಷ್ಟಿಯನು ಕೊಟ್ಟದ್ದೂ,
ಅಲ್ಲ ಕೊಡಿಸಿದ್ದೂ ನನ್ನ ರಕ್ತ..

ತಾಯಿಯೊಬ್ಬಳ ಉದರದೊಳಗಿಂದ,
ಹೊರಬಂದ ಮುಗ್ಧ ಭ್ರೂಣಕೂ,
ಜಗತ್ತು ಕಾಣುವ ಭಾಗ್ಯವಿಲ್ಲವಂತೆ..
'ರಕ್ತವಿಲ್ಲದ ಮಾಂಸ ತುಂಡಿಗೆ,
ನೆತ್ತರಿನ ಗೊಬ್ಬರ ಸುರಿದರೆ ಬದುಕೀತು..'
ಎಂಬ ಡಾಕ್ಟರರ ನುಡಿಗೆ ತಲೆಯಾಡಿಸಿ,
ಮಗುವಿಗೂ ಜೀವ ಕೊಡಿಸಿದ ನನ್ನ ರಕ್ತ..

ರಕ್ತವೆಂದರೆ ಅದು ಜೀವ..
ನನ್ನ ಜೀವ ದಾನಗೈದು ನಾನು,
ನಾಲ್ಕು ಜೀವ ಉಳಿಸಿರುವೆ.. ನನಗೂ ಜೀವವಿದೆ..
ಬೆಲೆ ಕಟ್ಟಲಾಗದ ನೆತ್ತರನು,
ಧರ್ಮಗಳ ಹೆಸರಿನಲ್ಲಿ ಕತ್ತಿಗಂಟಿಸುವ ಬದಲು,
ಸತ್ತ ಜೀವಕ್ಕಾದರೂ ಬದುಕ ಕೊಡಬಾರದೇ..?
ಪುಣ್ಯ ಕಾರ್ಯವ ಮಾಡಬಾರದೇ..?

- ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!