ನೀರಿಗೆ ಮಾತ್ರವಲ್ಲ; ಇಲ್ಲಿ ನ್ಯಾಯಕ್ಕೂ ಬರಗಾಲ..!

#forgive_us_Jisha..
#we_are_Helpless..

ದೇಶದಾದ್ಯಂತ ಇಂದು ಕೇಳಿಬರುತ್ತಿರುವ ಎರಡು ವಿಶುದ್ಧ ವಾಕ್ಯಗಳು;  ಒಂದು 'ನೀರು ಕೊಡಿ', ಇನ್ನೊಂದು 'ನ್ಯಾಯ ಕೊಡಿ'. ಈ ಎರಡನ್ನೂ ಕೊಡಲು ಭೂಮಿ ಮೇಲಿರುವ ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎನ್ನುವುದು ಸತ್ಯ. ಭೂಮಿಯನ್ನು ಸೃಷ್ಟಿಸಿದ ಜಗದೊಡೆಯನು ನೀರನ್ನು ಕರುಣಿಸಬಲ್ಲವನು. ಆದರೆ, ಭೂಮಿಯಲ್ಲಿ ನ್ಯಾಯ ಕೊಡಲು ನ್ಯಾಯಾಲಯ ಎಂಬ ವ್ಯವಸ್ಥೆಯನ್ನು ಅದೇ ಒಡೆಯ ಮನುಷ್ಯನ ಮೂಲಕ ಹುಟ್ಟು ಹಾಕಿದ್ದಾನೆ. ಅಲ್ಲಿ ನ್ಯಾಯ ಪ್ರಾಸ್ತಾಪಿಸಲ್ಪಡುವುದಾದರೂ ಇಂದು ನ್ಯಾಯ ಮಾರಾಟಕ್ಕೆ ಮಾತ್ರ ಸೀಮಿತಗೊಂಡಿದೆ ಎಂಬುವುದೂ ಸತ್ಯ. ಮಳೆಯೊಂದು ಸುರಿದರೆ ನೀರು ಸಿಗಬಹುದಾದರೂ, ನ್ಯಾಯ ಸಿಗಲು ಕೈಗೆ ಚಿನ್ನದ ಮಳೆ ಸುರಿಯಬೇಕಾದಂತಹ ಪರಿಸ್ಥಿತಿ ಎದುರಾಗಿದೆ ಅಂದರೂ ತಪ್ಪಲ್ಲ.

ಪೆರುಂಬಾವೂರು... ಈ ವಾರದಲ್ಲಿ ಇಡೀ ದೇಶವು ಆ ನಗರದ ಕಡೆ ಮುಖ ಮಾಡಿಕೊಂಡಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬಾವೂರು ನಗರದಲ್ಲಿ ಜಿಶಾ ಎಂಬ ದಲಿತ ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಕ್ರೂರವಾಗಿ ಕೊಂದು ಹಾಕಿದ ಘಟನೆಯನ್ನು ನೆನಪಿಸಿ ಭಾರತದ ಎದೆಯೂ ನಡುಗುತ್ತಲಿದೆ. ನಿರ್ಭಯಾ, ಸೌಜನ್ಯ ಮತ್ತಿತರರ ಬಳಿಕ ಇದೀಗ ಜಿಶಾಳ ಸರದಿ. ದಲಿತರು ಎಂದೊಡನೆ ಭಾರತದ ಪಾಲಿಗೆ ಯಾಕಿಷ್ಟು ದುರಂತ..? ದಲಿತರು ಭಾರತೀಯರೇ ಅಲ್ಲವೇ..? ಅವರಿಗೂ ಇಲ್ಲಿ ಬದುಕುವ ಹಕ್ಕಿಲ್ಲವೇ..? ಈ ರೀತಿಯಾಗಿ ಪ್ರಶ್ನೆಗಳ ಸರಮಾಲೆಗಳು ಉತ್ತರವಿಲ್ಲದ ರೀತಿಯಲ್ಲಿ ನೈಜ ಭಾರತೀಯನ ಮನದೊಳಗೆ ಮೂಡಿ ಬರುತ್ತಿದೆ. ಅದೆಷ್ಟು ಘಟನೆಗಳು..! ಒಂದರ ಹಿಂದೆ ಮತ್ತೊಂದು..!  ರೋಹಿತ್ ವೆಮುಲಾ ಘಟನೆಯ ಕಹಿ ಮಾಸಲಿಲ್ಲ.. ಕನ್ಹಯ್ಯಾ ಪರಿಣಾಮ ಇನ್ನೂ ಮುಂದುವರಿಯುತ್ತಲಿದೆ. ಸೌಜನ್ಯ, ನಿರ್ಭಯಾ ಯಾರಿಗೂ ಇಲ್ಲಿ ನ್ಯಾಯ ಸಿಗಲಿಲ್ಲ. ಇವೆಲ್ಲದರ ನಡುವೆ ಇನ್ನೊಬ್ಬಳು #ಜಿಶಾ...

ಕೇರಳದಲ್ಲಿ ಚುನಾವಣಾ ಸಿದ್ಧತೆಯು ಭರದಿಂದ ಸಾಗುತ್ತಿದೆ. ಇದರ ಮಧ್ಯೆ ಈ ಒಂದು ಘಟನೆಯು ಇಡೀ ರಾಜಕೀಯತ್ವಕ್ಕೆ ಲಾಭದಾಯಕವಲ್ಲದೆ ಮತ್ತಿನ್ನೇನು..? ಅಲ್ಲಿ ಈಗ NDA, LDF ಸೇರಿದಂತೆ ಎಲ್ಲಾ ಪಕ್ಷಗಳೂ ಜಿಶಾ ಸಾವಿಗೆ ಉಮ್ಮನ್ ಚಾಂಡಿಯ UDF ಸರ್ಕಾರವೇ ಕಾರಣ ಅಂತ ಬೆರಳು ತೋರಿಸಿಕೊಡುತ್ತಿದೆ. ಆಗಿರಲೂಬಹುದು, ಅಲ್ಲದೆಯೂ ಇರಬಹುದು. ಆದರೆ, ಇಲ್ಲಿ ದುಃಖತಪ್ತರಾಗಿರುವುದು ಜಿಶಾಳ ಬಡ ಕುಟುಂಬ. ಇಲ್ಲಿ ಬಾಳನ್ನು ಕಳೆದುಕೊಂಡಿರುವುದು ದಲಿತೆ ಜಿಶಾ. ಹಾಗಿದ್ದೂ, ಈ ಸಂಭವವನ್ನೂ ರಾಜಕೀಯದ ಕೆಸರೆರಚಾಟದೊಂದಿಗೆ ಕೊಂಡಿಯೆಳೆದು ನ್ಯಾಯ ಎಂಬ ಪದವನ್ನು ಅಳಿಸಿ ಹಾಕಿದ್ದಾರೆ.

ಹೌದು.. ಭಾರತದಲ್ಲಿ ನ್ಯಾಯವು ಅನ್ಯಾಯದೊಡನೆ ಬೆರೆತು ಮಾಯವಾಗಿದೆ. ನ್ಯಾಯ ಹಣದ ಹಿಂದೆ ಓಡುತ್ತಿದೆ. ಅನ್ಯಾಯ, ಅಕ್ರಮ, ಅನೈತಿಕತೆ, ರಾಜಕಾರಣ ಇವೆಲ್ಲದರ ಮಧ್ಯೆ ನ್ಯಾಯ ಶೂನ್ಯಗೊಂಡಿದೆ. ಇನ್ನು ಮುಂದಿನ ದಿನಗಳಲ್ಲಿ 'ನ್ಯಾಯ' ಎಂಬ ಪದವೂ ಶಬ್ಧಕುಟೀರದೆಡೆಯಿಂದ ಬಿದ್ದು ಸಾಯುವ ಸಮಯ ದೂರವಿಲ್ಲ. ನ್ಯಾಯವೇ ಸತ್ತಿರುವಾಗ ಪದ ಸಾಯಲು ಸಮಯದ ಅವಶ್ಯಕತೆ ಯಾಕಿದೆ..? ಪ್ರಜಾಪ್ರಭುತ್ವ ರಾಷ್ಟ್ರ ಅಂತ ಇಡೀ ಬೊಬ್ಬಿಟ್ಟು ನುಡಿಯುತ್ತಿರುವ ಭಾರತದಲ್ಲಿ ನ್ಯಾಯ ಯಾಕೆ ಸಿಗುತ್ತಿಲ್ಲ..? ಅಕ್ರಮಕ್ಕೊಳಗಾದವರೇ ಯಾಕೆ ಅನ್ಯಾಯಕ್ಕೊಳಗಾಗುತ್ತಿದ್ದಾರೆ..? ನ್ಯಾಯ ಯಾಕಾಗಿ ತಪ್ಪಿತಸ್ಥರ ಪಾಲಾಗುತ್ತಿದೆ..? ಉತ್ತರವಿಲ್ಲ.. ಉತ್ತರಿಸುವವರಾದರೂ ಯಾರು ನೋಡಿ.. 

ಆಡಳಿತ ಭದ್ರಪಡಿಸಬೇಕಾದ ಅವಶ್ಯಕತೆ ಸರ್ಕಾರಕ್ಮೆ ಎದುರಾದಾಗ ಬಡ, ಅನಾಥ, ದಲಿತ, ಸಂತೃಸ್ಥರ ಮೊರೆ ಹೋಗುತ್ತಾರೆ. ಪೊಳ್ಳು ಭರವಸೆಗಳ ಮೂಲಕ ಮುಗ್ಧ ಮನಸ್ಸುಗಳಿಗೆ ತಣ್ಣೀರೆರೆಚುತ್ತಾರೆ. ಅಧಿಕಾರ ಕೈಗೆ ಬಂದ ಬಳಿಕ ಇವರೆಲ್ಲರೂ ತಪ್ಪುಗಾರರು. ತಪ್ಪು ಮಾಡಿದವರೆಲ್ಲರೂ ನಿಷ್ಠಾವಂತರು. ಅನ್ಯಾಯ, ಅಕ್ರಮ, ಅನೈತಿಕತೆ ತುಂಬಿ ತುಳುಕುತ್ತಿರುವ ಭಾರತವನ್ನು ಶುಭ್ರಗೊಳಿಸಲು ಯಾವ ರೀತಿಯ ಮಳೆಯು ಸುರಿಯಬೇಕು..? ಈ ರೀತಿ ಕಲುಷಿತಗೊಂಡಿರುವ ಭಾರತವನ್ನು ಸ್ವಚ್ಛಮಾಡುವುದನ್ನು ಬಿಟ್ಟು 'ಭಾರತ್ ಮಾತಾ ಕೀ ಜೈ' ಎಂದು ನುಡಿಯದವನು ದೇಶದ್ರೋಹಿ ಎಂಬ ತೀರ್ಪು ನೀಡುತ್ತಾ ದೇಶಪ್ರೇಮ ಕಲಿಸಿ ಕೊಡುವುದರ ಅರ್ಥವೇನು..? ದೇಶದೊಳಗೆ ಸಾಕಷ್ಟು ಅಕ್ರಮ, ಅನ್ಯಾಯ ನಡೆಸಿ ಕೊನೆಗೆ 'ಭಾರತ್ ಮಾತಾ ಕೀ ಜೈ' ಅಂದಾಕ್ಷಣ ಆತ ದೇಶಪ್ರೇಮಿಯಾಗುವುದಿಲ್ಲ. ಜೈಕಾರ ಹಾಕದ ಮಾತ್ರಕ್ಕೆ ಯಾರೂ ದೇಶದ್ರೋಹಿಯಾಗುವುದೂ ಇಲ್ಲ. ದೇಶಪ್ರೇಮ ಮನಸ್ಸಿನೊಳಗೆ ಮೂಡಬೇಕು. ಮಾತಲ್ಲಿ ಜೈ ಅಂದವನೂ ದೇಶಕ್ಕೆ ಕೇಡು ಬಗೆಯುತ್ತಿರಬಹುದು. ಜೈ ಅನ್ನದವನು ಈ ವರೆಗೆ ದೇಶಕ್ಕೆ ಒಳ್ಳೆಯದನ್ನೇ ಮಾಡಿರಬಹುದು. ಆದರೆ, ಈ ಒಂದು ಕಾರಣವನ್ನಿಟ್ಟುಕೊಂಡು ಭಾರತೀಯರ ದೇಶಪ್ರೇಮವನ್ನು ಅಳೆಯುವುದಾದರೆ ಅದರಲ್ಲಿ ಅರ್ಥವಿಲ್ಲ. ಮಾತು ಬಾರದ ಮೂಗನೊಬ್ಬ 'ಭಾರತ್ ಮಾತಾ ಕೀ ಜೈ' ನುಡಿಲಿಲ್ಲ ಎಂಬ ಮಾತ್ರಕ್ಕೆ ಆತನನ್ನು ದೇಶದ್ರೋಹಿಯಾಗಿಸಬಹುದೇ..? ದೇಶವನ್ನು ಪ್ರೀತಿಸಬೇಕು. ದೇಶಕ್ಕಾಗಿ ಸರ್ವವನ್ನೂ ಅರ್ಪಿಸಲು ಸಿದ್ಧನಾಗಿರಬೇಕು. ಆದರೆ, ಜೈಕಾರ ಹಾಕುವ ಬದಲು ಇಲ್ಲಿ ನಡೆಯುತ್ತಿರುವ ಅಕ್ರಮ, ಅನ್ಯಾಯಗಳ ವಿರುದ್ಧ ಧಿಕ್ಕಾರ ಕೂಗಬೇಕು. ಆಗ ಅಕ್ರಮಿಯ ಎದೆಯು ಕೊಂಚ ನಡುಗಲೂಬಹುದು.

ಪ್ರೀತಿಯ ಭಾರತೀಯ ಜನಾಂಗವೇ...
ಹೌದು, ಭಾರತ ಅಶುಭ್ರಗೊಂಡಿದೆ ನಿಜ. ಅಶುಭ್ರಗೊಳಿಸಿದ್ದು ನಾವೇ ಆಗಿರುವುದರಿಂದ ಅದನ್ನು ನಮಗೇ ಶುಚಿಗೊಳಿಸಲೂ ಸಾಧ್ಯ. ನ್ಯಾಯ ಇಲ್ಲದ ಈ ದಟ್ಟ ಅನ್ಯಾಯದ ಗುಹೆಯಲ್ಲಿ ನಾವು ನ್ಯಾಯದ ಅರಮನೆ ಸ್ಥಾಪಿಸಲು ಪ್ರಯತ್ನಿಸಬೇಕು. ಮಾರುಕಟ್ಟೆಯಲ್ಲಿ ಮಾರಲ್ಪಡುತ್ತಿರುವ ನ್ಯಾಯವು ಪ್ರತಿಯೊಬ್ಬ ಭಾರತೀಯನಿಗೂ ದಕ್ಕುವಂತಾಗಬೇಕು. ಈ ದೇಶದಲ್ಲಿ ಇನ್ನೊಬ್ಬಳು ಜಿಶಾ ಕೊಲ್ಲಲ್ಪಡುವ ಮುಂಚೆ ದೇಶ ಎಚ್ಚೆತ್ತುಕೊಳ್ಳಬೇಕು. ಪಾರ್ಟಿ, ಪಕ್ಷ, ವರ್ಣ, ಲಿಂಗಗಳ ಹೆಸರಲ್ಲಿ ಪರಸ್ಪರ ಕಲಹಗಳಿಂದ ವಿರಮಿಸಿ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ತರಿಸಿ ಕೊಡುವಲ್ಲಿ ಒಕ್ಕೊರಲಿನಿಂದ ಸಫಲರಾಗಬೇಕು. ಈ ರೀತಿ ಭಾರತವನ್ನು 'ಸ್ವಚ್ಛ ಭಾರತ'ವನ್ನಾಗಿ ಪರಿವರ್ತಿಸಬೇಕು. ಶೋಷಿತರಿಗೂ, ಕೀಳ್ವರ್ಗದವರಿಗೂ, ಅಲ್ಪಸಂಖ್ಯಾತರಿಗೂ 'ಅಚ್ಚೇ ದಿನ್' ಬರಬೇಕು. ದಲಿತ ಹತ್ಯೆಯು ಇಲ್ಲಿಗೇ ಕೊನೆಗೊಳ್ಳಬೇಕು..

#justice_for_JISHA...

-----------------------
suwichaar.blogspot.in ★

#ಹಕೀಂ. ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!