ನನ್ನ ಶತ್ರು..!!

ನಾನು ಭಾವಿಸಿದ್ದೆ...,

ನಡೆವ ದಾರಿಯಲಿ ಲೋಪ ಕಂಡಾಗ,
ಬೈದು, ಹೊಡೆದು, ಕೋಪಿಸಿಕೊಳ್ಳುವ,
ಜನರೆಲ್ಲರೂ ನನ್ನ ಶತ್ರು...!?

ಮನೆ ತಲುಪಲು ವಿಳಂಬವಾದಲ್ಲಿ,
'ಯಾಕಿಷ್ಟು ಲೇಟು?' ಯಾಮಾರಿಸುವ,
ನನ್ನವ್ವ ಕೂಡ ಶತ್ರು ಅಂತ..!!

ಜ್ವರ ಬಂದು ಆಸ್ಪತ್ರೆ ಪಾಲಾದ ನನಗೆ,
ಬೇಡ ಅಂದರೂ ಇಂಜೆಕ್ಷನ್ನು ಕೊಟ್ಟ,
ಡಾಕ್ಟರೂ ನನ್ನಯ ಶತ್ರು..!?

ಜಾರಿ ಬಿದ್ದ ನನ್ನನ್ನು ನೋಡಿ,
ಎತ್ತಲೂ ಬಾರದೆ ಬಿದ್ದು ಬಿದ್ದು ನಕ್ಕ,
ಗೆಳೆಯರೆಲ್ಲರೂ ನನ್ನ ಶತ್ರುಗಳೇ..

ಕೆಂಗಣ್ಣು ಬಿರಿದು ನನ್ನ ನೋಡುತ್ತಿರುವ,
ಅನ್ಯಧರ್ಮದ ಆಶಯವ ನಂಬುವ,
ಅವನೂ ನನ್ನ ಶತ್ರು ಎಂದು..!!

ನಾ ಮಾಡಿದ ಅನ್ಯಾಯಗಳ ಪ್ರಶ್ನಿಸಲು,
ಸತ್ಯಾಗ್ರಹ ಕುಳಿತ ಸಮಾಜಪ್ರೇಮಿ,
ಸತ್ಯವಂತರೂ ನನ್ನ ಶತ್ರು..!?

ಅಲ್ಲಲ್ಲ.. ಸತ್ಯವದಲ್ಲ..
ನನ್ನ ಭಾವನೆಯಂತೆ ಶತ್ರುಗಳು ಅವರಲ್ಲ..
ಕಂಡದ್ದೆಲ್ಲವೂ ಶತ್ರುತ್ವವೆಂದು ಅರ್ಥೈಸುವ,
ನನ್ನೊಳಗಿನ ಮನಸ್ಸೇ ನನ್ನ ನೈಜ ಶತ್ರು..

ಹೊಂದಾಣಿಕೆಯಿಲ್ಲದ ಹೃದಯದ ಒಡನಾಟ,
ಸತ್ಯವೆಂದು ನಂಬಿ, ಶತ್ರುವೆಂದು ಬಗೆದು,
ಸಂಬಂಧಗಳ ಒಡೆಯಲೆತ್ನಿಸುವ ಮನಸ್ಸೇ..
ನೀನೇ.. ನೀನೇ.. ನೀನೇ ನನ್ನ ಶತ್ರು..!

------------------
#ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!