ಪ್ರಧಾನಿಗೆ ಗೌರವ ಕೊಡಿ..

ಭಾರತದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಅಸ್ವಸ್ಥತಗೊಂಡ ಜನಜೀವನದ ಮಧ್ಯೆ ತಳ್ಳುಗಾಡಿಯಂತೆ ಮೆಲ್ಲಮೆಲ್ಲಗೆ ಮುಂದಕ್ಕೋ ಹಿಂದಕ್ಕೋ ಎಂದು ತಿಳಿಯದ ರೀತಿಯಲ್ಲಿ ಸಾಗುವ ಬದುಕಿನ ಬಂಡಿಯಲ್ಲಿ ಇವತ್ತು ಎಲ್ಲರೂ ನಿಸ್ಸಹಾಯಕರಾಗಿದ್ದಾರೆ. ಜನವಿರೋಧಿ ನೀತಿಗಳ ಮೂಲಕ ಮೊದಲೇ ಶವದಂತಾಗಿರುವ ಜನರನ್ನು ಮತ್ತೆಮತ್ತೆ ಚುಚ್ಚುವ ಸರಕಾರದ ಕ್ರೂರ ನಡೆಯು ದೇಶದವನ್ನು ಇನ್ನಷ್ಟೂ ಪಾತಾಳಕ್ಕೆ ತಳ್ಳಿದೆ ಮಾತ್ರವಲ್ಲ, ಅದೆಷ್ಟೋ ಸಾವು ನೋವುಗಳಿಗೆ ದೇಶದ ಪವಿತ್ರ ಮಣ್ಣು ಸಾಕ್ಷಿಯಾಗಿದೆ. 

ಸೆಪ್ಟೆಂಬರ್ 17 ರಂದು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಂದು ಸಾಮಾಜಿಕ ತಾಣಗಳಲ್ಲಿ ದೇಶದ ಯುವಕರು 'ರಾಷ್ಟ್ರೀಯ ನಿರುದ್ಯೋಗ ದಿನ' ಎಂದು ಆಚರಿಸಿಕೊಂಡಿದ್ದರು. #NationalUnemploymentDay ಎಂಬ ಹ್ಯಾಶ್ ಟ್ಯಾಗ್ ಸಾಮಾಜಿಕ ಮಾಧ್ಯಮಗಳಾದ್ಯಂತ ಸಂಚಲನವನ್ನೇ ಸೃಷ್ಟಿಸಿ, ಸರಕಾರದ ವೈಫಲ್ಯತೆಯನ್ನು, ಪ್ರಧಾನಿಯ ಸರ್ವಾಧಿಕಾರಿ ಮುಖವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಯಲಾಯಿತು. ಆ ಸಂಧರ್ಭದಲ್ಲಿ ಒಂದು ಗುಂಪು 'ಪ್ರಧಾನಿಯನ್ನು ಗೌರವಿಸಿ' ಎಂದು ಅಂಗಲಾಚುವ ಪರಿಸ್ಥಿತಿಯಂತೂ ತಮಾಷೆಯಾಗಿತ್ತು. ವಾಸ್ತವದಲ್ಲಿ ಈ ಹಿಂದೆ ಪ್ರಧಾನಿಯಾಗಿದ್ದಂತಹ ಡಾ‌. ಮನಮೋಹನ್ ಸಿಂಗ್ ಸೇರಿದಂತೆ ಬಿಜೆಪಿಯೇತರ ಹೆಚ್ಚಿನ ಪ್ರಧಾನಿಗಳನ್ನು ಹಾಗೂ ಇತರೆ ರಾಜಕೀಯ ನಾಯಕರನ್ನು, ಧಾರ್ಮಿಕ ಮುಖಂಡರನ್ನೆಲ್ಲಾ ಹೀನವಾಗಿ ಚಿತ್ರಿಸಿ, ಅಶ್ಲೀಲವಾಗಿ ವಿರೂಪಗೊಳಿಸಿ ಸಾಮಾಜಿಕ ತಾಣಗಳಾದ್ಯಂತ ಹರಿಯ ಬಿಟ್ಟು ವಿಕೃತ ಆನಂದ ಪಡೆಯುತ್ತಿದ್ದವರೇ ಇವತ್ತು ಪ್ರಧಾನಿಗೆ ಗೌರವದ ಭಿಕ್ಷೆ ಬೇಡುವ ದುಸ್ಥಿತಿ ನಿರ್ಮಾಣವಾಗಿದೆ ಎಂದರೆ, ದೇಶದ ನಿಷ್ಟಾವಂತ ಪ್ರಜೆಗಳ ರೋಷದ ಪ್ರಭಾವ ಏನಿದೆ ಎಂಬುದು ಮನದಟ್ಟಾಗುತ್ತದೆ. ಕೋಣದ ಮುಂದೆ ಕಿನ್ನರಿ ಬಾರಿಸಿಯೇನು.. ಎನ್ನುತ್ತಿರುವಾಗಲೇ ಸ್ವತಃ ಕೋಣವೇ ಬಂದು ಜನರ ಮುಂದೆ ಕಿನ್ನರಿ ಬಾರಿಸುತ್ತಿದೆಯೆಂದರೆ ಅಲ್ಲಿ ಕೋಣ ಏನೋ ಅಪಾಯದಲ್ಲಿದೆ ಎಂದರ್ಥವಲ್ಲವೇ..?

ಭಾರತದ ಜಿಪಿಡಿ ಕೆಳಮುಖವಾಗಿ ಚಲಿಸುತ್ತಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಜಿಡಿಪಿ 23% ದಷ್ಟು ಕುಸಿತ ಕಂಡಿದೆ. ಉದ್ಯೋಗವಿಲ್ಲದೇ ಜನರು ಪರದಾಡುತ್ತಿದ್ದಾರೆ‌. ರೈತರನ್ನು ಕಾರ್ಪೊರೇಟರ್ ಕೈಗಳಿಗೆ ಒಪ್ಪಿಸುವಂತಹ ಕೆಲಸ ನಡೆಯುತ್ತಿದೆ. ಹಲ್ಲೆ, ಕೊಲೆ, ಕೋಮುವಾದ, ಭಯೋತ್ಪಾದನೆ ಎಲ್ಲವೂ ಹಿಂದಿಗಿಂತ ತುಸು ಹೆಚ್ಚಾಗಿಯೇ ನಡೆಯುತ್ತಿದೆ. ಪ್ರಾಕೃತಿಕ ವಿಕೋಪಗಳಿಗೆ ತುತ್ತಾದ ಜನಸಮೂಹವು ಇನ್ನೂ ನೆಲೆಯಿಲ್ಲದೇ ಅಂಗಲಾಚುತ್ತಿದ್ದಾರೆ. ಆತ್ಮಹತ್ಯೆಗಳು ವೃದ್ಧಿಸುತ್ತಿದೆ. ವಾಣಿಜ್ಯ ಕ್ಷೇತ್ರಗಳು ವ್ಯಾಪಾರವಿಲ್ಲದೆ ಬರಡಾಗಿದೆ. ದಿನಬಳಕೆ ವಸ್ತುಗಳು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಬಾನೆತ್ತರಕ್ಕೇರುತ್ತಿದೆ. ಸರಕಾರಿ ಸಂಸ್ಥೆಗಳೆಲ್ಲಾ ಖಾಸಗಿ ಕಂಪೆನಿಗಳ ಪಾಲಾಗುತ್ತಿದೆ. ನ್ಯಾಯಗಳ ಮರೀಚಿಕೆಯಲ್ಲಿದ್ದು, ಅನ್ಯಾಯಕ್ಕೆ ಮೌಲ್ಯ ಕಲ್ಪಿಸಲಾಗುತ್ತಿದೆ..‌ ಹೀಗೆ ದೇಶದ ಮುಂದೆ ಅದೆಷ್ಟೋ ಸಮಸ್ಯೆಗಳ ಸಾಲು ಸಾಲು ಸವಾಲಿದ್ದರೂ ಪ್ರಧಾನಿಗಳು ಜನವಿರೋಧಿ ಆಡಳಿತದ ಮೂಲಕ ಇನ್ನೂ ಮುಂದುವರಿಯುತ್ತಿರುವುದಾದರೆ ಜನರಿಗೆ ಒಗ್ಗಟ್ಟಿನ ಹೋರಾಟವಲ್ಲದೆ ಬೇರೆ ದಾರಿಯೇನಿದೆ? 

ಅಧಿಕಾರ ಮೋಹದಿಂದ ದೇಶದ ಜನತೆಯ ಬದುಕಿಗೆ ಕೊಳ್ಳಿಯಿಟ್ಟು, ಶ್ರೀಮಂತ ಕಾರ್ಪೊರೇಟರ್ ಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಪ್ರಧಾನಿ, ಸಾಮಾನ್ಯ ಜನರ ಕಷ್ಟಗಳನ್ನು ಆಲಿಸುವುದಕ್ಕೋ, ಅದಕ್ಕೆ ಸೂಕ್ತವಾದ ಪರಿಹಾರ ಒದಗಿಸುವುದಕ್ಕೋ ಮುಂದೆ ಬರುವುದಿಲ್ಲ. ಮಾತಿನ ಮೂಲಕವೇ ಜನರ ಮನವೊಲಿಸಿ ಈತನಕ ಮುಂದುವರಿದ ಪ್ರಧಾನಿಗೆ ಇತ್ತೀಚೆಗೆ ಅದು ಕೂಡ ಸವಾಲಾಗಿದೆ. ತನ್ನ ಮೋಡಿಯ ಭಾಷಣ ಕೇಳಿ ಜನರು ಬೇಸತ್ತಿಮು ಹೋಗಿದ್ದಾರೆನ್ನುವ ವಾಸ್ತವ ಸತ್ಯವನ್ನು ಇತ್ತೀಚಿನ ಕೆಲವೊಂದು ಬೆಳವಣಿಗೆಯ ಮೂಲಕ ಮನಗಂಡಿದ್ದಾರೆ. 'ಮನ್ ಕೀ ಬಾತ್' ಎನ್ನುತ್ತಾ ಜನರ ಮನವೊಲಿಸುತ್ತಿದ್ದರೆ, ಈಗ ಜನರು ಮನ್ ಕೀ ಬಾತ್ ಬೇಡ ಕೆಲಸ ಮಾಡುವ ಮನಸ್ಸು ಮಾಡಿ ಎಂಬ ಧ್ವನಿಯನ್ನು ಮುಂದಿಟ್ಟಿದ್ದಾರೆ. ಯೂಟ್ಯೂಬ್ ನಲ್ಲಿ ದಾಖಲೆಯ ಡಿಸ್ಲೈಕ್ ಪಡೆದ ಮೋದಿಯವರ ಮನ್ ಕೀ ಬಾತ್ ನಂತರದ ಎಲ್ಲಾ ಭಾಷಣಗಳ ವಿಡಿಯೋಗಳೂ ಜನಸಾಮಾನ್ಯರಿಂದ ತಿರಸ್ಕರಿಸಲ್ಪಟ್ಟಿದೆ. ಹಿಂದೆ ಜೈಕಾರ ಕೂಗುತ್ತಿದ್ದ ಬಹುತೇಕರು ವಾಸ್ತವನ್ನರಿತು ಇವತ್ತು ಮೋದಿಯ ವಿರುದ್ಧ, ಸರಕಾರದ ಧೋರಣೆಯ ವಿರುದ್ಧ ಧ್ವನಿಯಾಗುತ್ತಿದ್ದಾರೆಂದರೆ, ಸರಕಾರ ಅಧಃಪತನದತ್ತ ಸಾಗುತ್ತಿದೆ ಎಂಬುದಕ್ಕೆ ದಿವ್ಯ ಉದಾಹರಣೆ. 

'ಮಾತನಾಡುವ ಪ್ರಧಾನಿ ಬೇಡ, ಕೆಲಸ ಮಾಡುವ ಪ್ರಧಾನಿ ಸಾಕು' ಎಂಬ ಒಕ್ಕೊರಲಿನ ಬೇಡಿಕೆ ಶುರುವಾಗಿದೆ. ಕಳೆದ ಆರು ವರ್ಷದಲ್ಲು ದೇಶ ಹಿಂದೆಂದೂ ಕಾಣದ ಸೋಲನ್ನು ಅನುಭವಿಸುತ್ತಿದ್ದರೆ ಅದಕ್ಕೆ ಪ್ರಧಾನಿಮತ್ತು ಸರ್ಕಾರವೇ ನೇರ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದಾಗ್ಯೂ ಇನ್ನೂ ಮೋದಿಜಪದಲ್ಲೇ ಕಾಲಕಳೆಯುತ್ತಿರುವವರಿಗೆ ಜ್ಞಾನೋದಯವಾಗಲು ಇನ್ನೇನು ಸವಾಲು ಎದುರಾಗಬೇಕು, ಎಂತಹ ಸಮಸ್ಯೆ ಹುಟ್ಟಿಕೊಳ್ಳಬೇಕು ಎಂಬುದು ಪ್ರಶ್ನಾತೀತ. ಸಮಸ್ಯೆಯ ಸುಲಿಯಲ್ಲಿ ಸಿಕ್ಕಿಹಾಕಿಕೊಂಡವರು ಹಿಂದಿನ ತಪ್ಪನ್ನು ಅರಿತು ತನಗಾಗಿ, ದೇಶಕ್ಕಾಗಿ, ದೇಶದ ಜನತೆಗಾಗಿ ಶಬ್ಧಗೂಡುವಲ್ಲಿ ಒಂದಾಗಿದ್ದಾರೆ‌. 

ಗೌರವವೆನ್ನುವುದು ಕೊಟ್ಟು ಮರಳಿ ಪಡೆಯಬೇಕೇ ಹೊರತು ಭಿಕ್ಷೆ ಬೇಡಿ ಪಡೆಯುವಂತದ್ದಲ್ಲ. ಈ ಹಿಂದೆಯೂ ಅದೆಷ್ಟೋ ಪ್ರಧಾನಿಗಳು ಬಂದು ಹೋಗಿದ್ದಾರೆ. ದೇಶ ಅವರಿಗೆ ಅದರದ್ದೇ ಆದ ಸ್ಥಾನಮಾನಗಳನ್ನು ಕೊಟ್ಟಿದೆಯೆಂದರೆ ಹೆಚ್ಚುಕಡಿಮೆ ಅವರೆಲ್ಲಾ ತಕ್ಕಮಟ್ಟಿಗೆ ದೇಶಕ್ಕಾಗಿ ದುಡಿದಿದ್ದಾರೆನ್ನುವ ಕಾರಣದಿಂದಲೇ. ಆದರೆ ಈ ಆರು ವರ್ಷಗಳ ಆಡಳಿತದಲ್ಲಿ ದೇಶಕ್ಕೆ ಅಪಾಯಗಳು ಹೆಚ್ಚಾಗಿದೆಯಲ್ಲದೆ, ಜನಸ್ನೇಹಿ ಕಾರ್ಯಗಳು ಯಾವುದೂ ನಡೆದಿಲ್ಲ ಎನ್ನುವುದು ನಗ್ನ ಸತ್ಯ. ಪ್ರತಿಯೊಂದು ವಿಚಾರದಲ್ಲೂ ದೇಶದ ಜನರನ್ನು ಲಪಟಾಯಿಸುತ್ತಲೇ, ಮೂರ್ಖರನ್ನಾಗಿಸಿಯೇ ಮುನ್ನಡೆದ ಸರಕಾರ ಇನ್ನು ಕಂಟಕದಲ್ಲಿದೆ. ಯುವ ಸಮೂಹವೇ ಒಗ್ಗಟ್ಟಾಗಿ ಮೋದಿಯ ವಿರುದ್ಧ ಕೂಗೆತ್ತುತ್ತಿರುವಾಗ ಈ ಆಡಳಿತದ ಆಯಸ್ಸು ಕಡಿಮೆಯಾಗುತ್ತಿದೆಯೋ ಎಂಬ ಸಂದೇಹವೂ ಮನದೊಳಗಿದೆ. ಏನಿದ್ದರೂ ದೇಶದಲ್ಲಿ ಜನವಿರೋಧಿ ಧೋರಣೆಗಳ ವಿರುದ್ಧ ಶಬ್ದಗಳು ಹಿಂದಿಗಿಂದ ಜೋರಾಗಿದೆ. ಅದರಂತೇ ಸಮಸ್ಯೆಗಳೂ ಹೆಚ್ಚುತ್ತಿದೆ. ಯುವ ಜನತೆಯ ರೋಷದ ಮುಂದೆ ಸರಕಾರ ಮಂಡಿಯೂರುವುದೋ ಕಾದು ನೋಡಬೇಕಿದೆ.

- ಹಕೀಂ ಪದಡ್ಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!