ನೆಂಟರು ಬರುತ್ತಿದ್ದಾರೆ..
ನೆಂಟರು ಬರುತ್ತಿದ್ದಾರೆ ಮನೆಗೆ..
ಇನ್ನಾದರೂ ನನಗೆ ಮನೆಯನ್ನು
ಗುಡಿಸಿ ಸ್ವಚ್ಛವಾಗಿರಿಸಬೇಕು..
ಮನೆಯ ಮೂಲೆಯಲ್ಲಿ ಕೂಡಿಟ್ಟ
ಕಸದ ರಾಶಿಯನ್ನು ಕೈಗೆತ್ತಿಕೊಂಡು
ದೂರ ಎಲ್ಲಾದರೂ ಎಸೆದು ಬರಬೇಕು..
ಹೌದು.. ನೆಂಟರು ಬರುತ್ತಿದ್ದಾರೆ..
ಇಂದು ನಾಳೆ ಒಡೆದು ಬೀಳಲಿರುವ
ಮನೆಯ ಮೇಲ್ಛಾವಣಿಯನ್ನೂ ನನಗೆ
ಭದ್ರಪಡಿಸಿಕೊಳ್ಳಬೇಕು..
ಮನೆಯ ಗೋಡೆ ತುಂಬೆಲ್ಲಾ
ಬಿಳಿ ಬಣ್ಣವನ್ನು ಬಳಿಯಬೇಕು..
ಮನೆಯನ್ನು ಚಂದವಾಗಿರಿಸಬೇಕು..
ಹೌದು.. ನೆಂಟರು ಬರುತ್ತಿದ್ದಾರೆ..
ಮನೆಯ ಕೋಣೆಯೊಂದರಲ್ಲಿ
ಮುಸಲ್ಲಾವೊಂದನ್ನು ಹಾಸಬೇಕು..
ಮಸೀದಿಯೆಡೆಗಿನ ದಾರಿಯಲ್ಲಿರುವ
ಗಿಡ-ಗಂಟಿಗಳನ್ನು ಕಡಿದು ಹಾಕಬೇಕು..
ಅಟ್ಟದ ಮೇಲಿಟ್ಟಿರುವ ಖುರ್-ಆನನ್ನು
ತೆಗೆದು ಕೊಡವಿ ಮೇಜಲ್ಲಿರಿಸಬೇಕು..
ಹೌದು.. ನೆಂಟರು ಬರುತ್ತಿದ್ದಾರೆ..
ತಲೆಗಿಡಲು ಟೋಪಿಯೊಂದನ್ನು
ಪಕ್ಕದಂಗಡಿಯಿಂದ ಖರೀದಿಸಬೇಕು..
ತೊಡುವ ವಸ್ತ್ರಗಳನ್ನೆಲ್ಲವನ್ನೂ
ಬಿಳಿ ಬಣ್ಣಕ್ಕೆ ಬದಲಾಯಿಸಬೇಕು..
ಚಿಲ್ಲರೆ ಕೈಯಲ್ಲಿ ಹಿಡಿದುಕೊಂಡು
ಇಲ್ಲದವರ ಕೈಗಿಷ್ಟು ಸುರಿಯಬೇಕು..
ಹೌದು.. ನೆಂಟರು ಬರುತ್ತಿದ್ದಾರೆ..
ತಸ್ಬೀಹಿನ ಮಾಲೆಯೊಂದನ್ನು
ಕೈಯೊಳಗೆ ಭದ್ರಪಡಿಸಬೇಕು..
ಇರುವ ಕೆಟ್ಟ ಚಟಗಳೆಲ್ಲವನ್ನೂ
ಸ್ವಲ್ಪ ದೂರಕ್ಕೆ ಸರಿಸಬೇಕು..
ಇನ್ನಾದರೂ ನನಗೊಂದಿಷ್ಟು
ಒಳ್ಳೆಯವನಾಗಿ ಬಾಳಬೇಕು..
ಹೌದು.. ರಮಳಾನ್ ಸಾಮೀಪ್ಯದಲ್ಲಿದೆ..
suwichaar.blogspot.in
#ಹಕೀಂ. ಪದಡ್ಕ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thankyou