ಇದು ಇಪ್ಪತ್ತೊಂದನೇ ಶತಮಾನ. ಇಲ್ಲಿ ಕಂಪ್ಯೂಟರ್ ಗಳದ್ದೇ ಕಾರುಬಾರು. ಹಲವು ವಿಧಗಳಲ್ಲಿ ಹುಟ್ಟಿ ಬಂದ ಸಾಮಾಜಿಕ ತಾಣಗಳೇ ಇಂದು ವಿಶ್ವವನ್ನು ಆಳುತ್ತಿರುವಂತಿದೆ. ಮಾನವನ ಜೀವನದ ಹೆಚ್ಚಿನ ಸಮಯವು ಸಾಮಾಜಿಕ ತಾಣಗಳಲ್ಲೇ ವ್ಯಯಿಸಲ್ಪಡುತ್ತಿದೆ ಎಂಬುದು ನಗ್ನ ಸತ್ಯ. ಉಪಯೋಗ-ದುರುಪಯೋಗಗಳೆರಡನ್ನೂ ಜಂಟಿಯಾಗಿ ಕೊಂಡೊಯ್ಯುತ್ತಿರುವ ಈ ಸಾಮಾಜಿಕ ತಾಣವು ಕೆಲವು ರೀತಿಯಲ್ಲಿ ಸಮಾಜಕ್ಕೆ ಉಪಕಾರಿಯಾಗಿಯೂ, ಇನ್ನು ಕೆಲವು ರೀತಿಯಲ್ಲಿ ಸಮಾಜವನ್ನೇ ನಶಿಸುವಂತಹ ಮಾರಕಾಯುಧವಾಗಿಯೂ ಪ್ರಚಲಿತಗೊಂಡಿದೆ. ಹೊಸ ವಿಶ್ವವೊಂದನ್ನು ನಿರ್ಮಿಸುವಷ್ಟರಷ್ಟು ಸಾಮರ್ಥ್ಯದ ಈ ತಾಣಗಳು ಇರುವ ಒಂದು ವಿಶ್ವವನ್ನೇ ಕೆಡಹಿ ಹಾಕುವಲ್ಲಿ ಶ್ರಮಿಸುತ್ತಿದೆ ಎಂಬ ವಿಚಾರ ಖೇದನೀಯ.. ಆದುನಿಕ ತಂತ್ರಜ್ಞಾನ ಯುಗವೆಂಬ ನಾಮದಲ್ಲಿ ಗುರುತಿಸಲ್ಪಡುವ ಈ ಶತಮಾನವು ಹಲವು ಬದಲಾವಣೆಗೆ ಸಾಕ್ಷಿಯಾಗಿದೆ. ವಿಶ್ವದ ಸರ್ವ ಕಾರ್ಯ-ಕಾರಣಗಳು ತಂತ್ರಜ್ಞಾನಗಳಿಂದಾಗಿಯೇ ಇಂದಿಲ್ಲಿ ನಡೆಯುತ್ತಿದೆ. ಆಧುನಿಕ ಸವಲತ್ತು, ಗಣತಂತ್ರ ವ್ಯವಸ್ಥೆಗಳಿಂದಾಗಿ ಪುರಾತನಗಳು ಇತಿಹಾಸವಾಗಿದೆ. ಹುಟ್ಟಿನಿಂದ ಸಾವಿನವರೆಗೂ, ಬೇಕಿದ್ದಲ್ಲಿ ಹುಟ್ಟುವ ಮೊದಲೂ, ಸಾವಿನ ಬಳಿಕವೂ ತಂತ್ರಜ್ಞಾನಗಳಿಂದಲೇ ವ್ಯವಹಾರ-ಅವ್ಯವಹಾರಗಳು ನಡೆಯುತ್ತಿದೆ. ಆಧುನಿಕತೆಗಳಿಂದ ಬದಲಾವುಗೊಂಡು ಮಿಂಚುತ್ತಿರುವ ಈ ಯುಗವೊಂದರಲ್ಲಿ ತಂತ್ರಜ್ಞಾನಗಳಿಲ್ಲದ ಜೀವನವು ಪ್ರಯಾಸದಾಯಕವೂ, ಅನಿರೀಕ್ಷಿತವೂ ಆಗಿದೆ. ಹಳ್ಳಿಯಿಂದ ದಿಲ್ಲಿಯವರೆಗೂ, ಮನೆ ಹಿತ್ತಲ...